"ದರ್ಶನ್ ಹೊರ ಬಂದ್ಮೇಲೆ ಡಬಲ್ ಕ್ರೇಜ್ ಇರುತ್ತೆ, ಒಂದೂವರೆ ಪಟ್ಟು ವ್ಯಾಪಾರ ಆಗುತ್ತೆ"; ನಿರ್ಮಾಪಕ ಕೆ. ಮಂಜು
ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿದ್ದ ಕನ್ನಡ ಚಿತ್ರರಂಗ ಮತ್ತೆ ಚರ್ಚೆಯಲ್ಲಿದೆ. ಆದರೆ, ಈ ಬಾರಿ ಸಿನಿಮಾ ವಿಚಾರಕ್ಕೆ ಅಲ್ಲ. ಬದಲಾಗಿ, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ದರ್ಶನ್ ವಿಚಾರಕ್ಕೆ. ಕನ್ನಡದ ಸೂಪರ್‌ಸ್ಟಾರ್ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವುದೇ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ.
ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಕಳುಹಿಸುತ್ತಿದ್ದ ರೇಣುಕಾಸ್ವಾಮಿ ಅನ್ನುವ ಕಾರಣಕ್ಕೆ ಕೊಲೆ ನಡೆದಿದೆ. ಆದರೆ, ಈ ಪ್ರಕರಣದಲ್ಲಿ ದರ್ಶನ್ ಎರಡನೇ ಆರೋಪಿಯನ್ನಾಗಿ ಮಾಡಲಾಗಿದೆ. ಪೊಲೀಸರು ತನಿಖೆ ನಡೆಸಿ, ದರ್ಶನ್‌ರನ್ನು ನ್ಯಾಯಾಲಯಕ್ಕೆ ಒಪ್ಪಿಸಿದ್ದರು. ಪೊಲೀಸ್ ಕಸ್ಟಡಿಗೆ ನೀಡಿದ ಬಳಿಕ ದರ್ಶನ್ ಈಗ ನ್ಯಾಯಂಗ ಬಂಧನದಲ್ಲಿ ಇದ್ದಾರೆ. ನಾಳೆ (ಜುಲೈ 4) ರಂದು ಮತ್ತೆ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗುತ್ತೆ.

ದರ್ಶನ್ ಜೈಲು ಸೇರಿದ ಬಳಿಕ ಅವರ ಆಪ್ತರು ಭೇಟಿ ನೀಡುತ್ತಿದ್ದಾರೆ. ದರ್ಶನ್‌ಗೆ ಸಮಾಧಾನದ ಮಾತುಗಳನ್ನು ಹೇಳಿ ಬರುತ್ತಿದ್ದಾರೆ. ಇನ್ನೊಂದು ಕಡೆ ದರ್ಶನ್‌ರನ್ನು ಜೈಲಿನಿಂದ ಬಿಡುಗಡೆ ಮಾಡುವುದಕ್ಕೆ ಶತಪ್ರಯತ್ನ ನಡೆಯುತ್ತಿದೆ. ಇದೇ ವೇಳೆ ದರ್ಶನ್ ಪರವಾಗಿ ನಿರ್ಮಾಪಕ ಕೆ. ಮಂಜು ಬ್ಯಾಟ್ ಬೀಸಿದ್ದಾರೆ. ದರ್ಶನ್ ಒಳ್ಳೆಯ ವ್ಯಕ್ತಿ. ನೀವು ಅಂದ್ಕೊಂಡಿರೋ ಹಾಗೇ ಕೆಟ್ಟವರಲ್ಲ ಎಂದಿದ್ದಾರೆ.
"ನಾವು ಕಣ್ಣಾರೆ ನೋಡಿಲ್ಲ"
ದರ್ಶನ್ ಬಗ್ಗೆ ಕೊಲೆ ಆರೋಪಗಳು ಬಂದಿರಬಹುದು. ಆದರೆ, ಅದನ್ನು ಯಾರೂ ನೋಡಿಲ್ಲ. ಈ ಪ್ರಕರಣದಲ್ಲಿ ದರ್ಶನ್ ಭಾಗಿ ಆಗಿದ್ದಾರೆ ಅನ್ನೋ ಸುದ್ದಿ ಬಂದಾಗಿನಿಂದ ಸಾಕಷ್ಟು ಊಹಾ ಪೋಹಗಳು ಬರುತ್ತಿವೆ ನಂಬುವುದಕ್ಕೆ ಆಗಲ್ಲ ಎಂದಿದ್ದಾರೆ. "ಕೆಲವರು ಹೇಳುತ್ತಾರೆ. ದರ್ಶನ್ ಅವರ ಎ 7ನಲ್ಲಿ ಇದ್ದರಂತೆ, ಎ2 ಗೆ ಹಾಕಿದ್ದಾರಂತೆ. ಬೇಕು ಅಂತ ಹೀಗೆ ಮಾಡಿದ್ದಾರಂತೆ ಹೀಗೆಲ್ಲ ಹೇಳುತ್ತಿದ್ದಾರೆ. ನಾವು ಯಾವುದೂ ಕಣ್ಣಾರೆ ನೋಡಿಲ್ವಲ್ಲ. ಅವತ್ತು ಅವನು ಬಂದಾಗ ದರ್ಶನ್ ಅವರು ಬೈದು ಕಳಿಸಿದ್ದರಂತೆ ಅಂತಾನೂ ಹೇಳುತ್ತಾರೆ. ಏನಾಗಿದೆ ಅನ್ನೋದು ಗೊತ್ತಿಲ್ಲ" ಎನ್ನುತ್ತಾರೆ ಕೆ. ಮಂಜು.
ಸಾಕ್ಷಿ ಇದೆಯಾ?
ದರ್ಶನ್ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನುವುದಕ್ಕೆ ಸಾಕ್ಷಿ ಇದೆಯಾ? ಎಂದು ನಿರ್ಮಾಪಕ ಕೆ. ಮಂಜು ಕೇಳಿದ್ದಾರೆ. "ದರ್ಶನ್ ಹೀಗೆ ಮಾಡಿದ್ದಾರೆ ಅನ್ನೋದಕ್ಕೆ ಸಾಕ್ಷಿ ಇದೆಯಾ? ಅವರು ಹಾಗೆ ಮಾಡಿದ್ದಾರೆ ಅನ್ನೋದಕ್ಕೆ ಸಾಕ್ಷಿ ಇದ್ದರೆ ಒಪ್ಪಿಕೊಳ್ಳೋಣ. ಗ್ರೂಪ್‌ನಲ್ಲಿ 10 ಜನ ಹೊಡೆದಾಡಿದರೂ ಕರೆದುಕೊಂಡು ಹೋಗುತ್ತಾರೆ. ಬಿ ರಿಪೋರ್ಟ್ ಹಾಕಿದ್ಮೇಲೆ, ನ್ಯಾಯಾಲಯ ತೀರ್ಮಾನ ಮಾಡುತ್ತೆ. ನಾವ್ಯಾರು ತೀರ್ಮಾನ ಮಾಡುವುದಕ್ಕೆ" ಎಂದು ಕೆ. ಮಂಜು ಗುಡುಗಿದ್ದಾರೆ.

"ಹೊರಗೆ ಬಂದ್ಮೇಲೆ ಡಬಲ್ ಕ್ರೇಜ್"
ಚಾಲೆಂಜಿಂಗ್‌ಸ್ಟಾರ್ ದರ್ಶನ್ ಜೈಲಿನಿಂದ ಹೊರಗೆ ಬಂದ್ಮೇಲೆ ಡಬಲ್ ಕ್ರೇಜ್ ಇರುತ್ತೆ. ನಿರ್ಮಾಪಕರಿಗೆ ಈಗಿರುವುದಕ್ಕಿಂತ ಒಂದೂವರೆ ಪಟ್ಟು ಹೆಚ್ಚು ಲಾಭ ಬರುತ್ತೆ ಎಂದಿದ್ದಾರೆ. "ಈತರ ಘಟನೆ ನಡೆಯಬಾರದಿತ್ತು. ನಡೆದು ಹೋಗಿದೆ. ಅತೀ ಶೀಘ್ರದಲ್ಲಿ ಹೊರಬರುತ್ತಾರೆ. ಈಗೇನು ಕ್ರೇಜ್ ಇರುತ್ತೋ ಅದರ ಡಬಲ್ ಇರುತ್ತೆ. ನಾನು ಹೇಳ್ತೀನಿ. ದರ್ಶನ್‌ಗೆ ಈಗೇನು ವ್ಯಾಪಾರವಿದೆ. ಅದರ ಒಂದೂವರೆ ಪಟ್ಟು ಅವರ ನಿರ್ಮಾಪಕ ಪ್ರಕಾಶ್ ವ್ಯಾಪಾರ ಮಾಡುತ್ತಾರೆ ಅಂತ ಹೇಳುತ್ತೇನೆ." ಎಂದು ಕೆ. ಮಂಜು ಹೇಳಿಕೊಂಡಿದ್ದಾರೆ.
"ದರ್ಶನ್ ಕೆಟ್ಟವರಲ್ಲ"
ಹಾಗೇ ದರ್ಶನ್ ಚಿತ್ರರಂಗಕ್ಕೆ ಒಳ್ಳೆಯದನ್ನು ಮಾಡಿದ್ದಾರೆಂದಿದ್ದಾರೆ. "ದರ್ಶನ್ ನೀವು ಅಂದ್ಕೊಂಡಿರೋ ಹಾಗೆ ಕೆಟ್ಟವರಲ್ಲ. ಅವರು ಒಳ್ಳೆಯದು ಮಾಡಿದ್ದಾರೆ. ನಾವು ನೋಡಿದ ಹಾಗೇ ಅವರು ಒಳ್ಳೆಯ ವ್ಯಕ್ತಿ. ಕೆಲವರೊಂದಿಗೆ ಭಿನ್ನಾಭಿಪ್ರಾಯಗಳಿವೆ. ಅದು ಬಿಟ್ಟರೆ ಬೇರೆ ಏನೂ ಇಲ್ಲ. ಚಿತ್ರರಂಗಕ್ಕೆ ಒಳ್ಳೆಯದಾಗುತ್ತೆ ಅಂತ ಹೇಳುವುದಕ್ಕೆ ಇಷ್ಟ ಪಡುತ್ತೇನೆ" ಎಂದಿದ್ದಾರೆ.


Click it and Unblock the Notifications











