"ಕಿತನಾ ಹೋತೋ ಹಮ್ ಕರೆಂಗೆ ಮಂಜು ಬಯ್ಯಾ" ಅಂತ ಕೆ.ಮಂಜು ಹಿಂದೆ ಬಿದ್ದಿದ್ರಂತೆ; ಏನಿದು ಮುಂಬೈ ಮ್ಯಾಟರ್?
ಇದೇ ಒಂದಿಷ್ಟು ದಿನಗಳ ಹಿಂದೆ ಪ್ಯಾನ್ ಇಂಡಿಯಾ ಸಿನಿಮಾ ಬಗ್ಗೆ ನಿರ್ಮಾಪಕ ಗಂಡುಗಲಿ ಕೆ. ಮಂಜು ಅಸಮಾಧಾನ ಹೊರಹಾಕುತ್ತಿದ್ದರು. ಆದರೆ, ಮುಂಬೈಗೆ ಹೋಗಿ ರಾಕಿಂಗ್ ಸ್ಟಾರ್ ಭೇಟಿ ಮಾಡಿ ಬಂದರೋ ಅಲ್ಲಿಂದ ಇವರ ವರಸೆಯೇ ಬದಲಾಗಿಬಿಟ್ಟಿದೆ. ಯಶ್ ನಟಿಸುತ್ತಿರುವ 'ರಾಮಾಯಣ' ಹಾಗೂ 'ಟಾಕ್ಸಿಕ್' ಸಿನಿಮಾದ ಬಗ್ಗೆ ಮನಸ್ಸು ಸಾಕು ಅನ್ನುವಷ್ಟು ಹೊಗಳಿದ್ದಾರೆ. ಮುಂಬೈನಲ್ಲಿ ಅಂತಹದ್ದೇನಾಯ್ತೋ? ಯಶ್ ಮನಪರಿವರ್ತನೆ ಮಾಡಿದರೋ ಖಂಡಿತಾ ಗೊತ್ತಿಲ್ಲ.
ಕೆ.ಮಂಜು ಫಿಲ್ಟರ್ ಇಲ್ಲದೆ ಮಾತಾಡೋ ನಿರ್ಮಾಪಕ. ತನಗೆ ಅನಿಸಿದ್ದನ್ನು ನೇರಾ ಹೇಳಿಬಿಡುತ್ತಾರೆ. ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ ಆಗುತ್ತಿರುವ ಬೆಳವಣಿಗೆ ಬಗ್ಗೆ ಇವರು ಅಸಮಾಧಾನ ಹೊರ ಹಾಕುತ್ತಲೇ ಬಂದಿದ್ದರು. ಅದರಲ್ಲೂ ಎಲ್ಲೂ ಪ್ಯಾನ್ ಇಂಡಿಯಾ ಸಿನಿಮಾ ಮಾಡುತ್ತಾರೆ. ನಮ್ಮ ಹೀರೋಗಳು ವರ್ಷಕ್ಕೆ ಒಂದು ಸಿನಿಮಾವನ್ನಾದರೂ ಮಾಡಬೇಕು. ಸಂಭಾವನೆ ಕಡಿಮೆ ಮಾಡಿಕೊಳ್ಳಬೇಕು ಅಂತೆಲ್ಲ ದೂರು ಹೊರ ಹಾಕಿದ್ದರು.

ಆದ್ರೀಗ ಒಂದೇ ಒಂದು ಮುಂಬೈ ವಿಸಿಟ್‌ಗೆ ಸಂಪೂರ್ಣ ಬದಲಾಗಿಬಿಟ್ಟಿದ್ದಾರೆ. ಹಾಗಂತ ಕೆ.ಮಂಜು ಏನು ಯಶ್ ಅನ್ನು ಭೇಟಿ ಮಾಡಬೇಕು ಅಂತ ಹೋಗಿದ್ದಲ್ಲ. ಬಾಲಿವುಡ್ ಸಿನಿಮಾ ಮಾಡುವುದಕ್ಕೆ ಕೆ.ಮಂಜು ಸ್ಕೆಚ್ ಹಾಕಿದ್ದಾರೆ. ಆ ಬಗ್ಗೆ ಮಾತಾಡುವುದಕ್ಕೆ ಮುಂಬೈಗೆ ಹೋಗಿದ್ದರು. ಹೇಗೂ ಮುಂಬೈಗೆ ಬಂದಿದ್ದೀನಿ ಅಂತ ರಾಕಿ ಭಾಯ್ ಯಶ್‌ಗೆ ಒಂದು ಫೋನ್ ಹಾಕಿದ್ದಾರೆ. ಅವರು ಕರೆದು ಒಂದು ಗಂಟೆ ಮಾತಾಡಿದ್ರಂತೆ. ಅಲ್ಲಿಂದ ಕೆ.ಮಂಜು 'ಟಾಕ್ಸಿಕ್', 'ರಾಮಾಯಣ' ಅಂತ ಮಾತಾಡುವುದಕ್ಕೆ ಶುರು ಮಾಡಿದ್ದಾರೆ.
ಯಶ್ ಭೇಟಿಯಾದ ಕೆ.ಮಂಜು
ಕೆ.ಮಂಜು ಯಾಕೋ ಕನ್ನಡ ಬಿಟ್ಟು ಮುಂಬೈ ಕಡೆ ಮುಖ ಮಾಡಿದಂತಿದೆ. ಕನ್ನಡ ಸಿನಿಮಾಗೆ ಹಣ್ಣ ಹಾಕಿದ್ರೆ, ವಾಪಾಸ್ ಬರೋದಿಲ್ಲ ಅಂತಾನೋ ಏನು ಬಾಲಿವುಡ್ ಕಡೆ ಮುಖ ಮಾಡಿದ್ದಾರೆ. ಈ ಸಂಬಂಧ ಮುಂಬೈಗೆ ಹೋಗಿದ್ದಾಗ ಹಾಗೇ ಯಶ್ ಭೇಟಿ ಮಾಡಿದ್ದಾರೆ. ಒಂದು ಏನು ಮಾತುಕತೆ ನಡೀತು ಅನ್ನೋದನ್ನು ಕೆ.ಮಂಜು ಟಿವಿ9 ಜೊತೆ ಹಂಚಿಕೊಂಡಿದ್ದಾರೆ.
ಬಾಲಿವುಡ್‌ಗೆ ಕೆ.ಮಂಜು
"ನಾನು ಹಿಂದಿ ಸಿನಿಮಾ ಪ್ಲ್ಯಾನ್ ಮಾಡುತ್ತಿದ್ದೆ. ಅಲ್ಲಿಗೆ ಹೋದಾಗ ಯಶ್ ಅಲ್ಲೇ ಇದ್ದಾರೆ ಅಂತ ಗೊತ್ತಿತ್ತು. ರಾಮಾಯಣ ಶೂಟಿಂಗ್ ನಡೆಯುತ್ತಿತ್ತು. ಸುಮ್ಮನೆ ಒಂದು ಮೆಸೇಜ್ ಮಾಡಿದೆ. ಬಾ ಅಂತ ಹೇಳಿದರು. 9 ಗಂಟೆಗೆ ಅವರು ಶೂಟಿಂಗ್‌ಗೆ ಹೋಗಬೇಕಿತ್ತು. ಆದರೂ ಒಂದು ಗಂಟೆ ನನ್ನ ಜೊತೆ ಕೂತು ಮಾತಾಡಿ, ತಿಂಡಿ ತಿನ್ನಿಸಿ, ಕಾಫಿ ಕುಡಿಸಿ, ಚಿತ್ರರಂಗದ ಬಗ್ಗೆ, ಟಾಕ್ಸಿಕ್ ಬಗ್ಗೆ, ರಾವಣನ ಬಗ್ಗೆ ಮಾತಾಡಿದ್ವಿ." ಎಂದು ಕೆ.ಮಂಜು ಹೇಳಿದ್ದಾರೆ.

ಮಂಜು ಬಯ್ಯನ ಕಥೆಯೇನು?
ಕೆ.ಮಂಜುಗೆ ಯಶ್ ಪರಿಚಯ ಇರೋದು ಗೊತ್ತಾಗಿ ದೊಡ್ಡ ಫೈನಾನ್ಷಿಯರ್ ಒಬ್ಬರು ಪರಿಚಯ ಮಾಡಿಕೊಡಿ ಅಂತ ದುಂಬಾಲು ಬಿದ್ದಿದ್ದರಂತೆ. ಆ ಸಂಗತಿಯನ್ನು ಹೇಳಿಕೊಂಡಿದ್ದಾರೆ. "ಮುಂಬೈನಲ್ಲಿರುವ ದೊಡ್ಡ ವ್ಯಕ್ತಿಯೊಬ್ಬರು ಸರ್ ನಿಮಗೆ ಯಶ್ ಭಾಯ್ ಪರಿಚಯ ಇದ್ದಾರಲ್ಲ. ನನಗೆ ದಯವಿಟ್ಟು ಪರಿಚಯ ಮಾಡಿಕೊಡಿ. ನನಗೆ ಹಿಂದಿ ಸಿನಿಮಾ ಮಾಡಬೇಕು. ಕಿತನಾ ಹೋತೋ ಹಮ್ ಕರೆಂಗೆ ಮಂಜು ಬಯ್ಯಾ ಅಂದರು. ಆಗ ನಾನು ಹೇಳಿದೆ. ಅವರು ದುಡ್ಡಿಗೋಸ್ಕರ ಎಲ್ಲಾ ಸಿನಿಮಾ ಮಾಡಲ್ಲ. ಬೇರೆ ರೀತಿ ಇದೆ. ಆಗ ಅಲ್ಲೊಬ್ಬ ಪ್ರಡ್ಯೂಸರ್ ಹೇಳುತ್ತಾನೆ. ಜಪಾನ್‌ನಲ್ಲಿ ಫ್ಯಾನ್ಸ್ ಇದ್ದಾರೆ. ಈ ಸಿನಿಮಾ 40 ರಿಂದ 50 ಭಾಷೆಗೆ ಡಬ್ ಆಗುತ್ತಿದೆ. ಕನ್ನಡ ಹೀರೋ ಬಂದು ಬಾಲಿವುಡ್‌ಗೆ ಈ ರೇಂಜ್‌ಗೆ ಸಿನಿಮಾ ಮಾಡುತ್ತಾರೆ" ಅಂತ ಕೆ.ಮಂಜುಗೆ ಹೇಳಿದ್ರಂತೆ.
ಯಶ್ ಹೇಳಿದ್ದೇನು?
"ಯಶ್ ಅವರು ನಮ್ಮಲ್ಲಿ ಟೆಕ್ನಿಶಿಯನ್ ಕೊರತೆ ಇದೆ ಅಂತ ಹೇಳಿದರು. ನಮ್ಮಲ್ಲಿ ಕಥೆಗಾರರಿಲ್ಲ. ಒಳ್ಳೊಳ್ಳೆ ಸ್ಕ್ರಿಪ್ಟ್ ಬರೆಸಿ, ಒಳ್ಳೊಳ್ಳೆ ಕಲಾವಿದರು ಇದ್ದಾರೆ. ಕೆಜಿಎಫ್ ಆದ್ಮೇಲೆ ಒಳ್ಳೆ ಮಾರ್ಕೆಟ್ ಇದೆ. ಒಳ್ಳೆಯ ಸಿನಿಮಾಗಳನ್ನು ಮಾಡಿ ಜನರು ಮೆಚ್ಚುತ್ತಾರೆ ಅಂದರು. ನಾನು ಬಾಲಿವುಡ್ ಸಿನಿಮಾ ಮಾಡುತ್ತಿದ್ದೇನೆ ಎಂದಾಗ ಏನಾದರೂ ಸಹಾಯ ಬೇಕಿದ್ದರೆ ಹೇಳಿ ನಾನು ಮಾಡುತ್ತೇನೆ ಎಂದರು" ಎಂದು ಕೆ.ಮಂಜು ಹೇಳಿದ್ದಾರೆ.


Click it and Unblock the Notifications











