'ಕಿಚ್ಚ' ಅನ್ನೋ ಬದಲು ಬಾಯ್ತಪ್ಪಿ 'ಹುಚ್ಚ' ಎಂದ ಕೆ.ಮಂಜು: ಸ್ಟೇಜ್ ಮೇಲೆ ಸುದೀಪ್ ಪ್ರತಿಕ್ರಿಯೆ ಹೇಗಿತ್ತು?
ಕನ್ನಡದ ಗಂಡುಗಲಿ ನಿರ್ಮಾಪಕ ಕೆ. ಮಂಜು. ಕನ್ನಡದಲ್ಲಿ ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಿ ಗೆದ್ದಿರುವ ಕೆ. ಮಂಜು ಕನ್ನಡ ಸಿನಿಪ್ರಿಯರಿಗೆ ಚಿರಪರಿಚಿತ. ಈಗ ತಮ್ಮ ಪುತ್ರನನ್ನು ಚಿತ್ರರಂಗಕ್ಕೆ ಪರಿಚಯ ಮಾಡಿಕೊಟ್ಟಿದ್ದಾರೆ. ಶ್ರೇಯಸ್ ಮಂಜು ಕನ್ನಡದಲ್ಲಿ ನೆಲೆಯೂರುವುದಕ್ಕೆ ಶತ ಪ್ರಯತ್ನಗಳನ್ನು ನಡೆಸಿದ್ದಾರೆ. ಈಗ ಕೆ.ಮಂಜು ಅವರೇ ನಿರ್ಮಿಸಿದ 'ವಿಷ್ಣು ಪ್ರಿಯ' ಸಿನಿಮಾ ರಿಲೀಸ್‌ಗೆ ರೆಡಿಯಾಗುತ್ತಿದೆ.
ಹೀಗಾಗಿ ಇತ್ತೀಚೆಗೆ 'ವಿಷ್ಣು ಪ್ರಿಯ' ಸಿನಿಮಾದ ಟ್ರೈಲರ್ ಲಾಂಚ್ ಕಾರ್ಯಕ್ರಮವನ್ನು ಇಟ್ಟಿಕೊಳ್ಳಲಾಗಿತ್ತು. ಈ ವೇಳೆ ನಿರ್ಮಾಪಕ ಕೆ. ಮಂಜು ವೇದಿಕೆ ಮೇಲೆ ಒಂದು ಯಡವಟ್ಟು ಮಾಡಿದ್ದರು. ಕಿಚ್ಚ ಸುದೀಪ್ ಬಗ್ಗೆ ಬಾಯ್ತಿಪ್ಪಿ ಆಡಿದ ಮಾತನ್ನು ಹಾಗೇ ಸಿನಿಮಾ ಕಡೆ ತಿರುಗಿಸಿಬಿಟ್ಟಿದ್ದರು. ಅದಕ್ಕೆ ಸುದೀಪ್ ಕೊಟ್ಟ ಪ್ರತಿಕ್ರಿಯೆ ಕೂಡ ಅಷ್ಟೇ ಮಜವಾಗಿತ್ತು. ಆ ವಿಡಿಯೋ ಈ ವೈರಲ್ ಆಗುತ್ತಿದೆ.

ನಿರ್ಮಾಪಕ ಕೆ.ಮಂಜು ಪುತ್ರ ಶ್ರೇಯಸ್ ಮಂಜು ಸಿನಿಮಾ 'ವಿಷ್ಣುಪ್ರಿಯ' ಟ್ರೈಲರ್ ಲಾಂಚ್‌ಗೆ ಕಿಚ್ಚ ಸುದೀಪ್ ಅತಿಥಿಯಾಗಿ ಬಂದಿದ್ದರು. ಅವರನ್ನು ವೆಲ್ ಕಮ್ ಮಾಡುವ ಸಂದರ್ಭದಲ್ಲಿ ಕೆ.ಮಂಜು 'ಕಿಚ್ಚ' ಅನ್ನುವ 'ಹುಚ್ಚ' ಎಂದರು. ತಕ್ಷಣವೇ ಎಚ್ಚೆತ್ತುಕೊಂಡ ಮಂಜು ಅದನ್ನು ಸಿನಿಮಾ ಕಡೆಗೆ ತಿರುಗಿಸಿದ್ದರು. ಇದು ನೆರೆದಿದ್ದವರನ್ನು ನಗೆಕಡಲ್ಲಿ ತೇಲಿಸಿತ್ತು. ಆದರೆ, ಕಿಚ್ಚ ಸುದೀಪ್ ಪ್ರತಿಕ್ರಿಯೆ ಹೇಗಿತ್ತು? ವೇದಿಕೆ ಮೇಲೆ ಕೆ. ಮಂಜುಗೆ ಕೊಟ್ಟ ಕೌಂಟರ್ ಡೈಲಾಗ್ ಹೇಗಿತ್ತು? ಅಂತ ನೋಡುವುದಾರೆ.
ತಮ್ಮ ಸುಪುತ್ರ ನಟಿಸಿದ ಸಿನಿಮಾದ ಟ್ರೈಲರ್ ಲಾಂಚ್ ಮಾಡುವುದಕ್ಕೆ ಕಿಚ್ಚ ಸುದೀಪ್ ಬಂದಿದ್ದಕ್ಕೆ ಕೆ.ಮಂಜು ಖುಷಿಯಲ್ಲಿ ಇದ್ದರು. ಅದಕ್ಕಾಗಿ ವೇದಿಕೆ ಮೇಲೆ ಬಂದಿದ್ದ ಕೆ.ಮಂಜು ಮೈಕ್ ಹಿಡಿದು "ನಿಜಕ್ಕೂ ಥ್ಯಾಂಕ್ಸ್ ನಮ್ಮ ಹುಚ್ಚ ಸುದೀಪ್ ಅವರಿಗೆ" ಎಂದು ಹೇಳಿ ಬಿಟ್ಟಿದರು. ಇದೊಂದು ವಾಕ್ಯ ಹೇಳುತ್ತಿದ್ದಂತೆ ಕೆ.ಮಂಜುಗೆ ಬಾಯ್ತಿದ್ದು ಗೊತ್ತಾಗಿ ಹೋಗಿತ್ತು. ತಕ್ಷಣವೇ ಪ್ಯಾಚಪ್ ಮಾಡಿದ್ದು ಹೇಗಿತ್ತು? ಅಂತ ನೋಡಿ.
"ನಿಜಕ್ಕೂ ಥ್ಯಾಂಕ್ಸ್ ನಮ್ಮ ಹುಚ್ಚ ಸುದೀಪ್ ಅವರಿಗೆ. ಕಿಚ್ಚ ಸುದೀಪ್ ಅವರು. ಯಾಕೆ ಹುಚ್ಚ ಅಂದೆ ಅಂದರೆ, ಈ ಸಿನಿಮಾ ನೋಡಿದಾಗ ಹುಚ್ಚ ಸಿನಿಮಾ ನೆನೆಪಿಗೆ ಬರುತ್ತೆ. ನಾವೇ ರೈಟ್ಸ್ ತಂದು ಮಾಡುವುದಕ್ಕೆ ಹೋಗಿದ್ವಿ. ಆ ಸಿನಿಮಾದ ಉಸಿರೇ ಉಸಿರೇ ಆ ಹಾಡಿನ ಫೀಲಿಂಗ್ ಈ ಸಿನಿಮಾ ಹಾಡು ನೋಡಿದಾಗ ಬಂತು. ಹುಚ್ಚ ಸಿನಿಮಾ ತರ ಯಶಸ್ವಿ ಆಗಲಿ ಅಂತ ಕೇಳಿಕೊಂಡೆ. ಬೇರೆ ಏನೂ ಇಲ್ಲ." ಎಂದು ನಗುತ್ತಲೇ ತೇಲಿಸಿಬಿಟ್ಟರು.

ಮುಂದಿನ ಸರದಿ ಕಿಚ್ಚ ಸುದೀಪ್ ಅವರದ್ದಾಗಿತ್ತು. ವೇದಿಕೆ ಮೇಲೇರಿದ ಕಿಚ್ಚ ಸುದೀಪ್ ನಿರ್ಮಾಪಕ ಕೆ.ಮಂಜು ಪುತ್ರನಿಗೆ ಶುಭ ಕೋರಿದರು. ವಿಷ್ಣು ಪ್ರಿಯ ಹಾಡುಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಹಾಗೇ ಕೆ.ಮಂಜು ಹೇಳಿದ ಮಾತಿನ ಕಡೆಗೆ ಹೊರಳಿತು. "ಕೆ.ಮಂಜು ಕಡೆಯಿಂದ ಏನೋ ಒಂದು ಮಿಸ್ಟೇಕ್ ಆಯ್ತು. ಸ್ಟೇಜ್ ಮೇಲೆ ಚೆನ್ನಾಗಿ ಪ್ಯಾಚಪ್ ಮಾಡಿಬಿಟ್ಟರು. ಅದರ ಮೇಲೆ ಸ್ವಲ್ಪ ಹೊಗಳಿ ಹುಚ್ಚ ಯಾಕೆ ಅಂತ ಹೇಳಿ ಚೆನ್ನಾಗಿ ಪ್ಯಾಚಪ್ ಮಾಡಿದ್ರಿ." ಎಂದು ನಗುತ್ತಲೇ ಕೆ.ಮಂಜು ಕಾಲೆಳೆದರು.
ಹಾಗೇ ಕಿಚ್ಚ ಸುದೀಪ್ ನಿರ್ಮಾಪಕ ಕೆ.ಮಂಜು ನಿರ್ಮಾಣ ಸಂಸ್ಥೆಯ ಬಗ್ಗೆನೂ ಮೆಚ್ಚುಗೆ ವ್ಯಕ್ತಪಡಿಸಿದ್ದರು. "50 ಸಿನಿಮಾ ಒಂದು ಸಂಸ್ಥೆಯಿಂದ ಬಂದಿರೋದು ಜೋಕ್ ಅಲ್ಲ. ಚಿಕ್ಕ ಸಿನಿಮಾ ಆಗಿರಬಹುದು. ದೊಡ್ಡ ಸಿನಿಮಾ ಆಗಿರಬಹುದು. ಅತೀ ದೊಡ್ಡದಾಗಿರಬಹುದು. ಟೋಟಲ್ ಆಗಿ ಒಂದು 50 ಸಿನಿಮಾಗಳು ಒಂದು ಸಂಸ್ಥೆಯಿಂದ ಬರುತ್ತಿದೆ ಅಂದರೆ ಅದು ನಿಜಕ್ಕೂ ಗ್ರೇಟ್. ನನಗೆ ನಿಜಕ್ಕೂ ಗೊತ್ತಿರಲಿಲ್ಲ. ನನಗೆ ಖುಷಿಯಾಗುತ್ತೆ. ನಿಮ್ಮ ಮೇಲೆ ಹೆಮ್ಮೆ ಅನಿಸುತ್ತೆ. ಇದು ಚಿಕ್ಕ ಕೊಡುಗೆ ಅಲ್ಲವೇ ಅಲ್ಲ." ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.


Click it and Unblock the Notifications










