'ಪುಷ್ಪ 2' 4 ಗಂಟೆ ಶೋಗೆ ನಿರ್ಮಾಪಕರ ಸಂಘ ವಿರೋಧ; ಚಿತ್ರಮಂದಿರಗಳು ಬುಕ್ ಮೈ ಶೋ ವಿರುದ್ಧ ಕ್ರಮಕ್ಕೆ ಸೂಚನೆ
2024ರ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ ಅಲ್ಲು ಅರ್ಜುನ್ ನಟನೆಯ 'ಪುಷ್ಪ 2' ಬಿಡುಗಡೆಗೆ ಇನ್ನೇನು ಕ್ಷಣಗಣನೆ ಶುರುವಾಗಿದೆ. ಡಿಸೆಂಬರ್ 5ರಂದು ವಿಶ್ವದಾದ್ಯಂತ ಈ ಸಿನಿಮಾ ರಿಲೀಸ್ ಆಗುತ್ತಿದೆ. ಬಹು ನಿರೀಕ್ಷೆಯ ಸಿನಿಮಾ ಆಗಿರುವುದರಿಂದ ಕರ್ನಾಟಕದಲ್ಲಿ 'ಪುಷ್ಪ 2' ಸಿನಿಮಾದ ಹವಾ ಜೋರಾಗಿಯೇ ಇದೆ. ಹೀಗಾಗಿ ಕೆಲವು ಚಿತ್ರಮಂದಿರಗಳು ಮಿಡ್‌ನೈಟ್ ಶೋಗಳನ್ನು ಹಾಕಿವೆ. ಇದಕ್ಕೆ ನಿರ್ಮಾಪಕರ ಸಂಘ ವಿರೋಧವನ್ನು ವ್ಯಕ್ತಪಡಿಸಿದೆ.
ಬೆಂಗಳೂರು ಹಾಗೂ ಸುತ್ತಮುತ್ತಲಿನ ಕೆಲವು ಚಿತ್ರಮಂದಿರಗಳಲ್ಲಿ ಅಲ್ಲು ಅರ್ಜುನ್ ಅಭಿಮಾನಿಗಳಿಗಾಗಿ ಬೆಳಗ್ಗೆ ನಾಲ್ಕು ಗಂಟೆಗೆ ವಿಶೇಷ ಪ್ರದರ್ಶನವನ್ನು ಮಾಡುತ್ತಿವೆ. ಈಗಾಗಲೇ ಆನ್‌ಲೈನ್ ಮೂಲಕ ಟಿಕೆಟ್‌ಗಳನ್ನು ಸೇಲ್ ಮಾಡಲಾಗಿದೆ. ಸಿನಿಮಾ ಪ್ರದರ್ಶನಕ್ಕೆ ಇನ್ನೇನು ಕೆಲವೇ ಗಂಟೆಗಳು ಬಾಕಿ ಇರುವಾಗ ಕನ್ನಡದ ನಿರ್ಮಾಪಕ ಸಂಘ ಬೆಂಗಳೂರಿನ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಕಮಿಷನರ್‌ಗೆ ಲಿಖಿತ ರೂಪದಲ್ಲಿ ದೂರನ್ನು ನೀಡಿದೆ.

ಕನ್ನಡ ಚಲನ ಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷರಾದ ಉಮೇಶ್ ಬಣಗಾರ್ ಬೆಂಗಳೂರಿನ ಜಿಲ್ಲಾಧಿಕಾರಿಗಳಿ ದೂರನ್ನು ನೀಡಿದ್ದಾರೆ. ಈ ದೂರನಲ್ಲಿ ಕೆಲವು ಚಿತ್ರಮಂದಿರಗಳು ನಿಗಧಿ ಪಡಿಸಿದ ಅವಧಿಗೂ ಮುನ್ನ 'ಪುಷ್ಪ 2' ಸಿನಿಮಾವನ್ನು ಪ್ರದರ್ಶನ ಮಾಡುತ್ತಿದೆ. ಹಾಗೇ ಸಿನಿಮಾದ ಟಿಕೆಟ್ ದರವನ್ನು ಮನಸ್ಸೋ ಇಚ್ಛೆ ಏರಿಕೆ ಮಾಡಿದ್ದರ ಬಗ್ಗೆ ಕ್ರಮ ಕೈಗೊಳ್ಳುವಂತೆ ಪತ್ರದ ಮೂಲಕ ದೂರನ್ನು ನೀಡಿದ್ದಾರೆ.
ಕರ್ನಾಟಕದಲ್ಲಿ ಯಾವುದೇ ಸಿನಿಮಾವನ್ನು ಬೆಳಗ್ಗೆ 6ಗಂಟೆಗೂ ಮುನ್ನ ಪ್ರದರ್ಶನ ಮಾಡಬಾರದೆಂಬ ರಾಜ್ಯ ಸರ್ಕಾರದ ನಿಯಮವಿದೆ. ಹೀಗಿದ್ದರೂ 'ಪುಷ್ಪ 2' ಚಿತ್ರ ಪ್ರದರ್ಶನ ಮಾಡುತ್ತಿರುವ ಚಿತ್ರಮಂದಿರದ ಮಾಲೀಕರು ಬೆಳ್ಳಂಬೆಳಗೆ 3.45ರಿಂದ ಅಭಿಮಾನಿಗಳಿಗಾಗಿ ವಿಶೇಷ ಪ್ರದರ್ಶನವನ್ನು ಏರ್ಪಡಿಸಿದೆ. ಇದನ್ನು ಕನ್ನಡದ ನಿರ್ಮಾಪಕರು ಹಾಗೂ ನಿರ್ಮಾಪಕರ ಸಂಘ ವಿರೋಧಿಸಿದೆ.
ನಿರ್ಮಾಪಕರ ಸಂಘದ ಅಧ್ಯಕ ಉಮೇಶ್ ಬಣಗಾರ್ ಬೆಂಗಳೂರು ಜಿಲ್ಲಾಧಿಕಾರಿಗಳಿಗೆ ನೀಡಿರುವ ದೂರು ಹೀಗಿದೆ.
"ಚಲನ ಚಿತ್ರ ಪ್ರದರ್ಶನ ನಿಯಮದ ಪ್ರಕಾರ ಕರ್ನಾಟಕ ರಾಜ್ಯದ ಚಿತ್ರಮಂದಿರಗಳಲ್ಲಿ ಮುಂಜಾನೆ ಆರು ಗಂಟೆಯ ಒಳಗೆ ಯಾವುದೇ ಚಿತ್ರಮಂದಿರಗಳಲ್ಲಿ ಚಿತ್ರಗಳನ್ನು ಪ್ರದರ್ಶನ ಮಾಡುವಂತೆ ಇಲ್ಲ ಎಂಬ ರಾಜ್ಯ ಸರ್ಕಾರದ ಆದೇಶವಿದ್ದರೂ ಕರ್ನಾಟಕದ ಕೆಲವು ಚಿತ್ರಮಂದಿರಗಳಲ್ಲಿ ಅವಧಿಗೂ ಮುನ್ನ ಚಿತ್ರ ಪ್ರದರ್ಶನಗೊಳ್ಳುತ್ತಿರುವುದು ಕಾನೂನು ಬಾಹಿರವಾಗಿರುತ್ತದೆ. ದಯಮಾಡಿ ಯಾವ ಚಿತ್ರಮಂದಿರಗಳು ಕಾನೂನು ಉಲ್ಲಂಘನೆ ಮಾಡುತ್ತಿವೆಯೋ ಅಂತಹ ಚಿತ್ರಮಂದಿರಗಳ ವಿರುದ್ಧ ಹಾಗೆಯೇ ಚಿತ್ರಮಂದಿರಗಳಲ್ಲಿ ಟಿಕೆಟ್ ದರವನ್ನು ಮನಸ್ಸೋ ಇಚ್ಛೆ (500ರೂ, 1000 ರೂ, 1500 ರೂ.ಗಳನ್ನು) ಸಾರ್ವಜನಿಕರಿಂದ ಪಡೆಯುತ್ತಿರುವಂತಹ ಚಿತ್ರಮಂದಿರಗಳ ವಿರುದ್ಧ ತತ್‌ಕ್ಷಣ ಕಾನೂನು ರೀತಿಯ ಕ್ರಮ ಕೈಗೊಂಡು ಮುಂಬರುವ ಪ್ರಾದೇಶಿಕ ಭಾಷೆಯ ಚಿತ್ರಗಳಿಗೆ ಅನುಕೂಲ ಮಾಡಿ, ಕನ್ನಡ ಚಿತ್ರರಂಗದ ಬೆಳವಣಿಗೆಗೆ ಸಹಕಾರಿಯಾಗಿ ಇರುತ್ತದೆ ಎಂದು ಚಿತ್ರೋದ್ಯಮ ನಂಬಿರುತ್ತದೆ." ಕನ್ನಡ ಸಿನಿಮಾ ನಿರ್ಮಾಪಕ ಸಂಘದ ಅಧ್ಯಕ್ಷರಾಗಿರುವ ಉಮೇಶ್ ಬಣಕಾರ್ ಬೆಂಗಳೂರು ಜಿಲ್ಲಾಧಿಕಾರಿಗಳಿಗೆ ದೂರನ್ನು ನೀಡಿದ್ದಾರೆ.

ಈ ದೂರನ್ನು ನೀಡಿದ ಬೆನ್ನಲ್ಲೇ ಬೆಂಗಳೂರಿನ ಜಿಲ್ಲಾಧಿಕಾರಿಗಳು ಕ್ರಮ ತೆಗೆದುಕೊಳ್ಳುವಂತೆ ಬೆಂಗಳೂರು ಪೊಲೀಸ್ ಆಯುಕ್ತರು ಹಾಗೂ ವರಿಷ್ಠಾಧಿಕಾರಿಗಳಿಗೆ ತಿಳಿಸಿದ್ದಾರೆ. ಬೆಂಗಳೂರಿನ ಚಿತ್ರಮಂದಿರಗಳು ಹಾಗೂ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ ನಿಗದಿ ಪಡಿಸಿದ ಸಮಯಕ್ಕಿಂತ ಮುನ್ನ ಚಿತ್ರ ಪ್ರದರ್ಶನ ಮಾಡುತ್ತಿರುವ ಬಗ್ಗೆ ಕ್ರಮ ಕೈಗೊಳ್ಳುವಂತೆ ಬೆಂಗಳೂರು ಜಿಲ್ಲಾಧಿಕಾರಿಗಳು ಆದೇಶ ಜಾರಿ ಮಾಡಿದ್ದಾರೆ.
ಇದರೊಂದಿಗೆ ಬೆಂಗಳೂರಿನ ಸುಮಾರು 37ಕ್ಕೂ ಅಧಿಕ ಸಿಂಗಲ್ ಸ್ಕ್ರೀನ್ ಹಾಗೂ ಮಲ್ಟಿಪ್ಲೆಕ್ಸ್ ಕ್ರಮಕ್ಕೆ ಆದೇಶಿಸಲಾಗಿದೆ. ಕರ್ನಾಟಕ ಸಿನಿಮಾ ರೆಗ್ಯೂಲೆಷನ್ ಆಕ್ಟ್ ಅನ್ವಯ ಬೆಳಗ್ಗೆ 6.30ರ ಒಳಗೆ ಸಿನಿಮಾ ಪ್ರದರ್ಶನ ಮಾಡುವಂತೆ ಇಲ್ಲ. ಬುಕ್ ಮೈ ಶೋನಲ್ಲಿ ಟಿಕೆಟ್ ಮಾರಾಟವನ್ನು ಆಧರಿಸಿ ಈ ಕ್ರಮವನ್ನು ಕೈಗೊಳ್ಳಲಾಗಿದೆ. ಹೀಗಾಗಿ ನಾಳೆ ಬೆಳ್ಳಂಬೆಳಗ್ಗೆ 4 ಗಂಟೆಯಿಂದ ಸಿನಿಮಾ ಆರಂಭ ಆಗುವುದು ಅನುಮಾನ.


Click it and Unblock the Notifications











