ಈ ಘಟನೆ ಆ ವ್ಯಕ್ತಿಯಿಂದ ಆಗಿದ್ದಕ್ಕೆ ಪ್ರಚಾರ ಆಗ್ತಿದೆ: ದರ್ಶನ್ ಕೇಸ್ ಬಗ್ಗೆ ಅನಂತ್ ನಾಗ್ ಹೇಳಿದ್ದೇನು?
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ದರ್ಶನ್ ಬಗ್ಗೆ ಹಿರಿಯ ನಟ ಅನಂತ್ ನಾಗ್ ಇದೇ ಮೊದಲ ಬಾರಿ ಪ್ರತಿಕ್ರಿಯೆ ನೀಡಿದ್ದಾರೆ. ಸಿನಿಮಾ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅನಂತ್ ನಾಗ್ ಅವರಿಗೆ ದರ್ಶನ್ ಜೈಲು ವಾಸ್ ಬಗ್ಗೆ ಪ್ರಶ್ನೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಅನಂತ್ ನಾಗ್ ಕೊಟ್ಟ ಉತ್ತರದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.
ದರ್ಶನ್ ಆರೋಪಿ ಅಂತ ಗೊತ್ತಾಗುತ್ತಿದ್ದಂತೆ ಮಾಧ್ಯಮಗಳಲ್ಲಿ ಈ ವಿಷಯವನ್ನೇ ಹೆಚ್ಚು ಹೈಲೈಟ್ ಮಾಡಲಾಗಿತ್ತು. ದರ್ಶನ್ ಸೆಲೆಬ್ರಿಟಿಯಾಗಿದ್ದು, ಅವರನ್ನು ಹಿಂಬಾಲಿಸುವ ಸಾಕಷ್ಟು ಮಂದಿ ಅಭಿಮಾನಿಗಳು ಇದ್ದಾರೆ. ಈ ಕೇಸ್ ಅವರ ಮೇಲೆ ಹೆಚ್ಚು ಪರಿಣಾಮ ಬೀರುತ್ತೆ ಅನ್ನೋ ಮಾತು ಹಿಂದಿನಿಂದಲೂ ಕೇಳಿ ಬರುತ್ತಲೇ ಇದೆ. ಇದೇ ವೇಳೆ ಅನಂತ್ ನಾಗ್ ಇಂತಹ ಘಟನೆಗಳು ಸಮಾಜದಲ್ಲಿ ಪ್ರತಿ ನಿತ್ಯ ನಡೆಯುತ್ತಲೇ ಇರುತ್ತೆ ಎಂದು ಹೇಳಿದ್ದಾರೆ.

ದರ್ಶನ್ ಒಬ್ಬರ ಸೆಲೆಬ್ರಿಟಿಯಾಗಿದ್ದರಿಂದ ಈ ಘಟನೆಗೆ ಹೆಚ್ಚು ಪ್ರಾಮುಖ್ಯತೆ ಬಂದಿದೆ. ಆದರೆ, ಪ್ರತಿ ದಿನ ಅದನ್ನೇ ತೋರಿಸುವುದರಿಂದ ಜನರು ಬೇಸತ್ತು ಹೋಗಬಹುದು ಎಂಬ ಅಭಿಪ್ರಾಯವನ್ನು ವ್ಯಕ್ತಿಪಡಿಸಿದ್ದಾರೆ. ಅಷ್ಟಕ್ಕೂ ಹಿರಿಯ ನಟ ಅನಂತ್ ನಾಗ್ ಅವರ ಹೇಳಿಕೆಯ ಝಲಕ್ ಇಲ್ಲಿದೆ.
ರೇಣುಕಾಸ್ವಾಮಿ ಘಟನೆಯಂತಹ ಘಟನೆಗಳು ಹೊಸದೇನಲ್ಲ. ಎಲ್ಲಾ ಕಡೆಗಳಲ್ಲಿಯೂ ಇಂತಹ ಘಟನೆಗಳು ಆಗುತ್ತಿವೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. "ಆ ಘಟನೆಗಳು ಎಲ್ಲಾ ಕಡೆ ಆಗುತ್ತಿವೆ. ಇದು ಒಬ್ಬ ಸಿನಿಮಾದವನ ಜೀವನದಲ್ಲಿ ಮಾತ್ರ ಆಗಿದ್ದಲ್ಲ. ಇದಕ್ಕಿಂತ ಸಾವಿರ ಪಟ್ಟು ದೊಡ್ಡದು ಆಗುತ್ತಿದೆ. ದೇಶ ದೇಶಗಳ ಮಧ್ಯೆ, ರಾಜ್ಯ ರಾಜ್ಯಗಳ ಮಧ್ಯೆ ಹಿಂಸೆ ನಡೆಯುತ್ತಿದೆ. ಇಲ್ಲಿ ಒಂದು ಘಟನೆಯಾಗಿದ್ದೆಯಷ್ಟೇ. ಇದು ಆತನಿಗೆ ಸಂಬಂಧ ಪಟ್ಟಿದ್ದು. ಆ ವ್ಯಕ್ತಿಯಿಂದ ಅದು ಹೆಚ್ಚು ಪ್ರಚಾರ ಸಿಗಬಹುದು. ಕೆಲವು ಘಟನೆಗಳು ಆಗುತ್ತಲೇ ಇರುತ್ತವೆ. ಅದನ್ನೇ ಹೈಲೈಟ್ ಮಾಡುತ್ತಿದ್ದಾರೆ. ಜಗತ್ತಿನಲ್ಲಿ ಬೇರೆ ಸುದ್ದಿನೇ ಇಲ್ಲವೇನೋ ಅಂತೆ ಬಿಂಬಿಸಲಾಗುತ್ತಿದೆ" ಎಂದು ಹಿರಿಯ ನಟ ಅನಂತ್‌ನಾಗ್ ಹೇಳಿದ್ದಾರೆ.
ದರ್ಶನ್ ಜನಪ್ರಿಯ ವ್ಯಕ್ತಿಯಾಗಿದ್ದರಿಂದ ಹೆಚ್ಚು ಪ್ರಚಾರ ಸಿಗುತ್ತಿದೆ. ಇದರಿಂದ ಸಮಾಜದ ಮೇಲೆ ಅಂತಹ ಪರಿಣಾಮವೇನು ಬೀರುವುದಿಲ್ಲ. ಇಂತಹ ಘಟನೆಗಳಿಂದ ಯಾರೋ ಪ್ರೇರಣೆ ಹೊಂದಿ ಕೃತ್ಯಕ್ಕೆ ಮುಂದಾಗುವುದೆಲ್ಲ ಸುಳ್ಳು ಎಂಬ ಅರ್ಥದಲ್ಲಿ ಅನಂತ್ ನಾಗ್ ಮಾತಾಡಿದ್ದಾರೆ. ಈ ಮೂಲಕ ದರ್ಶನ್ ಅವರ ಕೇಸ್ ಪತಿನಿತ್ಯ ಎಲ್ಲೋ ಒಂದು ಕಡೆ ನಡೆಯುತ್ತಿರುತ್ತೆ. ಅದಕ್ಕೆ ಹೆಚ್ಚು ಪ್ರಚಾರ ಕೊಡುವ ಅಗತ್ಯವಿಲ್ಲ ಅಂತ ಹೇಳಿದಂತಿದೆ.
"ಆ ಘಟನೆ ಒಬ್ಬ ವ್ಯಕ್ತಿಯಿಂದ ಆಗಿದೆ. ಅವರಿಗೆ ಹೆಚ್ಚು ಪ್ರಚಾರ ಸಿಗಬಹುದು ಅಷ್ಟೇ. ಇದರಿಂದ ಸಮಾಜದ ಮೇಲೆ ಏನೋ ಪರಿಣಾಮ ಬೀರುತ್ತೆ ಅಂತಲ್ಲ. ಈಗ ನಾವು ಎಷ್ಟೊ ಹತ್ಯೆಗಳು ಆಗಿದ್ದನ್ನು ನೋಡುತ್ತಿರುತ್ತೇವೆ. ಹಾಗಾಗಿ ಈ ಘಟನೆಯಿಂದ ಪ್ರೇರಣೆ ಹೊಂದಿ ಏನೋ ಮಾಡುತ್ತಾರೆ ಅನ್ನೋದು ಖಂಡಿತಾ ಇಲ್ಲ." ಎಂದು ಅನಂತ್ ನಾಗ್ ಅಭಿಪ್ರಾಯ ಪಟ್ಟಿದ್ದಾರೆ.
ಹಿರಿಯ ನಟ ಅನಂತ್ ನಾಗ್ ಅವರು ದರ್ಶನ್‌ಗೆ ಆಡಿದ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ನೋಡಿದ ದರ್ಶನ್ ಅಭಿಮಾನಿಗಳಿಗೆ ಖುಷಿ ಆಗಿದೆ. ಅನಂತ್ ನಾಗ್ ಅವರ ಮಾತುಗಳಿಗೆ ಹರ್ಷ ವ್ಯಕ್ತಪಡಿಸಿದ್ದಾರೆ. ಹಾಗಂತ ಕೃತ್ಯವನ್ನು ಅನಂತ್ ನಾಗ್ ಅವರು ಸಮರ್ಥಿಸಿಕೊಂಡಿಲ್ಲ. ಬದಲಾಗಿ ಇದನ್ನು ಹೆಚ್ಚು ಪ್ರಚಾರ ಮಾಡಬಾರದು ಎಂದು ಸಾಮಾನ್ಯ ವ್ಯಕ್ತಿ ಇಂತಹ ಘಟನೆಯಲ್ಲಿ ಭಾಗಿಯಾಗಿದ್ದರೆ ಹೇಗೆ ನೋಡುತ್ತಿತ್ತೋ ಹಾಗೇ ದರ್ಶನ್ ಪ್ರಕರಣವನ್ನು ಪರಿಣಿಸಬೇಕು ಎಂಬುವುದಾಗಿದೆ.


Click it and Unblock the Notifications











