"ಬೌನ್ಸರ್ ಹಾಕಿಕೊಂಡು ಬಂದ ಕೂಡಲೇ ನೀನು ದೊಡ್ಡ ನಟನಾಗಿಬಿಟ್ಯಾ?" ಹಿರಿಯ ನಟ ದೊಡ್ಡಣ್ಣ
ಇತ್ತೀಚೆಗೆ ಹಿರಿಯ ನಟ ದೊಡ್ಡಣ್ಣ ಸುದ್ದಿಯಲ್ಲಿದ್ದರು. ಕಿಡಿಗೇಡಿಗಳು ಹಬ್ಬಿಸಿದ ಕೆಟ್ಟ ಸುದ್ದಿಯೊಂದು ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಹೀಗಾಗಿ ಒಂದು ಕ್ಷಣ ಇಡೀ ಚಿತ್ರರಂಗವೇ ಆತಂಕಕ್ಕೆ ಒಳಗಾಗಿತ್ತು. ಆದರೆ, ಕೂಡಲೇ ದೊಡ್ಡಣ್ಣ ಕಿಡಿಗೇಡಿಗಳು ಹಬ್ಬಿಸಿದ ವದಂತಿಗಳಿಗೆ ಸ್ಪಷ್ಟನೆ ಕೊಟ್ಟು ವಿಡಿಯೋವೊಂದನ್ನು ಶೇರ್ ಮಾಡಿದ್ದರು. ಇಂತಹ ವಿಚಾರಕ್ಕೆ ದೊಡ್ಡಣ್ಣ ಸುದ್ದಿಯಾಗಿದ್ದರು.
ದೊಡ್ಡಣ್ಣ ಅವರ ನಿಧನದ ಸುದ್ದಿಯನ್ನು ಹಬ್ಬಿಸಿದ್ದಕ್ಕೆ ಕಿಡಿಗೇಡಿಗಳ ವಿರುದ್ಧ ಹಿರಿಯ ನಟ ದೂರನ್ನು ದಾಖಲಿಸಿದ್ದಾರೆ. ಆದ್ರೀಗ ಹಿರಿಯ ನಟ ಕಿರಿಕ್ ಕೀರ್ತಿ ಯೂಟ್ಯೂಬ್ ಚಾನೆಲ್‌ಗೆ ಸಂದರ್ಶನ ನೀಡಿದ್ದು, ಇದರಲ್ಲಿ ತಮ್ಮ ಬದುಕಿನ ಬಗ್ಗೆ ಮಾತಾಡಿದ್ದಾರೆ. ಕನ್ನಡ ಚಿತ್ರರಂಗದ ಸದ್ಯದ ಪರಿಸ್ಥಿತಿಯನ್ನು ಅವಲೋಕನ ಮಾಡಿದ್ದಾರೆ. ಅದರ ಝಲಕ್ ಇಲ್ಲಿದೆ.

ದೇವರು ಕೊಟ್ಟಿದ್ದರಲ್ಲೇ ತೃಪ್ತಿ
ಹಿರಿಯ ನಟ ದೊಡ್ಡಣ್ಣ ಮಾತುಗಳು ಪ್ರಬುದ್ಧವಾಗಿ ಇರುತ್ತವೆ. ತಮ್ಮ ಜೀವನದ ಅನುಭವಗಳನ್ನು ಆಗಾಗ ಹಂಚಿಕೊಳ್ಳುತ್ತಲೇ ಇರುತ್ತಾರೆ. ಇತ್ತೀಚೆಗೆ ಕಿಡಿಗೇಡಿಗಳು ಸುಳ್ಳು ಸುದ್ದಿ ಹಬ್ಬಿಸಿದಾಗಲೂ ತಾಳ್ಮೆಯಿಂದಲೇ ಪ್ರತಿಕ್ರಿಯಿಸಿದ್ದರು. ಈಗ ಕಿರಿಕ್ ಕೀರ್ತಿ ಜೊತೆಗಿನ ಸಂದರ್ಶನದಲ್ಲಿ ತಮ್ಮ ಬದುಕಿನ ಅನುಭವನ್ನು ಹಂಚಿಕೊಂಡಿದ್ದಾರೆ.
"ಎಷ್ಟು ಬೇಕೋ ಅಷ್ಟು ಸಿಕ್ಕಿದೆ. ದೇವರು ಎಷ್ಟು ಕೊಡುತ್ತಾನೋ ಅಷ್ಟರಲ್ಲಿ ತೃಪ್ತನಾಗಬೇಕು. ನನಗೆ ವಾಸಕ್ಕೆ ಮನೆ ಕೊಟ್ಟಿದ್ದಾನೆ. ಓಡಾಡುವುದಕ್ಕೆ ಒಂದು ವಾಹನ ಕೊಟ್ಟಿದ್ದಾನೆ. ಊಟ ಮಾಡುವುದಕ್ಕೆ ಹೊಟ್ಟೆ ತುಂಬಾ ಕೊಟ್ಟಿದ್ದಾನೆ. ಓದುವುದಕ್ಕೆ ಪುಸ್ತಕ ಕೊಟ್ಟಿದ್ದಾನೆ. ಒಳ್ಳೊಳ್ಳೆ ಗೆಳೆಯರನ್ನು ಕೊಟ್ಟಿದ್ದಾನೆ. ಅಂಬರೀಶ್ ಅಂತಹ ಪುಣ್ಯಾತ್ಮನಿಗಿಂತ ಗೆಳೆಯ ಬೇಕಾ ನಿಮಗೆ? ಒಬ್ಬ ರಾಜ್‌ಕುಮಾರ್‌ಗಿಂತಲೂ ಅಣ್ಣ ಬೇಕಾ? ನನ್ನ ಒಡ ಹುಟ್ಟಿದ ಅಣ್ಣ ಬಸವರಾಜನಿಗಿಂತ ಬೇಕಾ? ಎಲ್ಲಾ ಸಿಕ್ಕಾಗಿದೆ. ಇನ್ನೇನು ಬೇಕು ನಿನಗೆ. ಒಳ್ಳೆಯ ಮಕ್ಕಳು, ಒಳ್ಳೆಯ ಅಳಿಯಂದಿರು, ಒಳ್ಳೆಯ ಮೊಮ್ಮಕ್ಕಳನ್ನು ಕೊಟ್ಟಿದ್ದಾನೆ" ಎಂದು ದೊಡ್ಡಣ್ಣ ಹೇಳಿದ್ದಾರೆ.
ನೆಮ್ಮದಿ, ಆರೋಗ್ಯ ಕೊಟ್ಟಿದ್ದಾನೆ
"ದೇವರು ಎಲ್ಲಾ ಕೊಟ್ಟಿದ್ದಾನೆ. ನೆಮ್ಮದಿ ಕೊಟ್ಟಿದ್ದಾನೆ, ಆರೋಗ್ಯ ಕೊಟ್ಟಿದ್ದಾನೆ. ಯಾಕಂದ್ರೆ ದೇವರು ಎಲ್ಲ ಕೊಟ್ಟು ಯಾವುದಾದರೂ ಒಂದು ಪೀಸ್ ಕಿತ್ತಾಕಿ ಬಿಡುತ್ತಾನೆ. ಅಹಂಕಾರ ಮಾಡಿದರೆ, ಫೀಸ್ ಕಿತ್ತಾಕಿ ಬಿಡುತ್ತಾನೆ" ಎಂದು ಅಹಂಕಾರ ತೋರುವವರಿಗೆ ಹಿರಿಯ ನಟ ದೊಡ್ಡ ಬುದ್ಧಿವಾದ ಹೇಳಿದ್ದಾರೆ.
ಸಿನಿಮಾ ಯಾಕೆ ಮಾಡುತ್ತಿಲ್ಲ?
ಇನ್ನು ದೊಡ್ಡ ಸಿನಿಮಾದಲ್ಲಿ ನಟಿಸುವುದನ್ನು ಕಡಿಮೆ ಮಾಡಿದ್ದಾರೆ. ಅದೇನಕ್ಕೆ ಅನ್ನೋದನ್ನು ಹೇಳಿದ್ದಾರೆ. "ಸಿನಿಮಾ ಸಾಕು ಅಂತೇನು ಇಲ್ಲ. ಸಾಕು ಅನ್ನೋದೇ ಸಾವು. ಬೇಕು ಅನ್ನೋದು ದುರಾಸೆ ಆಗುತ್ತೆ. ಸಮಯ ಬಂದಾಗ ಬಿಡಬೇಡ. ಕೊನೆಯವರೆಗೂ ಯಾರ ಮೇಲೂ ಡಿಪೆಂಡ್ ಆಗಬೇಡ. ಅಷ್ಟೇ ಜೀವನ." ಎನ್ನುತ್ತಾರೆ ಹಿರಿಯ ನಟ ದೊಡ್ಡಣ್ಣ
ಒಂದು ಸಿನಿಮಾ ಮಾಡಿದವರಿಗೂ ಬೌನ್ಸರ್
"ಚಿತ್ರರಂಗ ಅವತ್ತಿಗೂ ಇವತ್ತಿಗೂ ಸಿಕ್ಕಾಪಟ್ಟೆ ಬದಲಾಗಿದೆ. ಒಳ್ಳೆಯ ರೀತಿಯಲ್ಲಿ ಅಂತ ಹೇಗೆ ಹೇಳೋದು. ಕೈ ಹುಣ್ಣಿಗೆ ಕನ್ನಡಿ ಬೇಕಾ ಅಂತ. ಅವತ್ತಿನ ಕಾಲದಲ್ಲಿ ಅಣ್ಣಾವ್ರ ಪಿಕ್ಚರ್, ವಿಷ್ಣು ಪಿಕ್ಚರ್ ಅಂದರೆ, ಮನೆ ಮಂದಿ ಎಲ್ಲಾ ಕೂತು ನೋಡುತ್ತಿದ್ದರು. ಇವತ್ತು ನೋಡುವ ಹಾಗೆ ಇದೆಯಾ? ಮನುಷ್ಯ ಮಟ್ಟಿಗೆ ಹೋಗಿದ್ದಾನೆ. ಅತೀ ವೇಗ ಒಳ್ಳೆಯದಲ್ಲ. ಒಂದು ಸಿನಿಮಾ ಮಾಡಿರಲ್ಲ. ಆಗಲೇ ಬೌನ್ಸರ್‌ಗಳನ್ನು ಹಾಕಿಕೊಂಡು ಬಂದ್ರೆ, ಇಂಡಸ್ಟ್ರಿಗೆ ಏನು ಮಾಡಿದ್ದೀಯಾ? ವಾವ್ಹ್ ಏನು ಚೆನ್ನಾಗಿ ಮಾಡಿದ್ದೀಯ ಅಂತ ಯಾರು ಚಪ್ಪಾಳೆ ತಟ್ಟಿದ್ದಾರೆ. ಆಗಲೇ ಬೌನ್ಸರ್ ಹಾಕಿಕೊಂಡು ಬಂದ ಕೂಡಲೇ ನೀನು ದೊಡ್ಡ ನಟನಾಗಿಬಿಟ್ಯಾ? ಇದನ್ನೆಲ್ಲ ನೋಡಿದ್ದೀವಿ ನಾವು ಯಾಕೆ ಮಾತಾಡೋಣ" ಎಂದು ಹಿರಿಯ ನಟ ದೊಡ್ಡಣ್ಣ ಈ ಸಂದರ್ಶನದಲ್ಲಿ ಹೇಳಿದ್ದಾರೆ.


Click it and Unblock the Notifications
