ಮೂರು ತಿಂಗಳಿಂದ ನೋವುಣ್ಣುತ್ತಿರುವ ಹಿರಿಯ ನಟ ದೊಡ್ಡಣ್ಣ; ಹಿರಿಯ ಜೀವಕ್ಕೆ ಅಂತಹದ್ದೇನಾಯ್ತು?
ಕನ್ನಡ ಚಿತ್ರರಂಗದ ಹಿರಿಯ ನಟ ದೊಡ್ಡಣ್ಣ ಕಳೆದ ಕೆಲವು ದಿನಗಳಿಂದ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಸಾಮಾನ್ಯವಾಗಿ ಸಿನಿಮಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದ ದೊಡ್ಡ ಯಾರ ಕಣ್ಣಿಗೂ ಬಿದ್ದಿರಲಿಲ್ಲ. ಅದಕ್ಕೆ ಕಾರಣ ಈಗ ಹೊರಬಿದ್ದಿದೆ. ಮೂರು ತಿಂಗಳ ಹಿಂದೆ ದೊಡ್ಡಣ್ಣ ಜಾರಿ ಬಿದ್ದು ಸೊಂಟ ಮುರಿದುಕೊಂಡಿದ್ದಾರೆ. ಈಗ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ.
ದೊಡ್ಡಣ್ಣ ಸದಾ ಲವಲವಿಕೆಯಿಂದ ಇರುವ ನಟ. ಇತ್ತೀಚೆಗೆ ಕುಟುಂಬದ ಪೂಜಾ ಕಾರ್ಯಕ್ರಮದ ವೇಳೆ ಕಾಲು ಜಾರಿ ಬಿದ್ದಿದ್ದರು. ಇದರಿಂದ ಅವರ ಸೊಂಟು ಮೂಳೆ ಮೂರು ಪೀಸ್ ಆಗಿತ್ತು. ಕೂಡಲೇ ಅವರಿಗೆ ನಾಲ್ಕು ಗಂಟೆಗಳ ಶಸ್ತ್ರ ಚಿಕಿತ್ಸೆ ಕೂಡ ಮಾಡಲಾಗಿದೆ. ಈಗ ನಿಧಾನವಾಗಿ ಎದ್ದು ಓಡಾಡುವುದಕ್ಕೆ ದೊಡ್ಡಣ್ಣ ಪ್ರಯತ್ನ ಪಡುತ್ತಿದ್ದಾರೆ.

ಈ ಘಟನೆಯ ಬಳಿಕ ದೊಡ್ಡಣ್ಣ 'ನ್ಯೂಸೋ ನ್ಯುಸು' ಯೂಟ್ಯೂಬ್ ಚಾನೆಲ್‌ಗೆ ಸಂದರ್ಶನ ನೀಡಿದ್ದು, ಸೊಂಟಕ್ಕೆ ಪೆಟ್ಟಿ ಮಾಡಿಕೊಂಡ ಘಟನೆಯನ್ನು ಇಂಚಿಂಚಾಗಿ ವಿವರಿಸಿದ್ದಾರೆ. ಜಾರಿದ್ದ ಘಟನೆಯಿಂದ ಹಿಡಿದು ಶಸ್ತ್ರ ಚಿಕಿತ್ಸೆಯ ಬಳಿಕ ಹೇಗಿದ್ದಾರೆ ಅನ್ನೋದನ್ನು ವಿವರವಾಗಿ ಹೇಳಿಕೊಂಡಿದ್ದಾರೆ. ಅದರ ಝಲಕ್ ಇಲ್ಲಿದೆ.
ದೊಡ್ಡಣ್ಣಗೆ ಪೆಟ್ಟು ಆಗಿದ್ದೇಗೆ?
"ಜುಲೈ 9ನೇ ತಾರೀಕು ಏನಾಯ್ತು ಅಂದ್ರೆ, ಶಿವಮೊಗ್ಗದ ಹತ್ತಿರ ಹೊಳಲೂರು ಅಂತ ಅಲ್ಲಿ ನಮ್ಮ ಗುರುಗಳ ಮಠ ಇದೆ. ಜುಲೈ 10ನೇ ತಾರೀಕು ಗುರು ಪೂರ್ಣಿಮ ಇತ್ತು. ಅಲ್ಲಿ ಮಹಾಮೃತ್ಯುಂಜಯ ಹೋಮ ಇಟ್ಟುಕೊಂಡಿದ್ವಿ. ಮನೆಯವರೆಲ್ಲರೂ ಬರುವವರಿದ್ದರು. ಮಠವನ್ನೆಲ್ಲೂ ಕ್ಲೀನ್ ಮಾಡಿಸಿಕೊಂಡು ಬಂದಿದ್ದೆ. 9ನೇ ತಾರೀಕು ಮನೆಯವರು ಬರುವವರಿದ್ದರು. ಅದೇನಾಯ್ತು ಅಂದರೆ, ಸ್ನಾನ ಮಾಡಿ ಬಂದೆ. ಸಿಕ್ಕಾಪಟ್ಟೆ ಮಳೆಯಿತ್ತು. ಶೂ ತೊಳೆದಿರಲಿಲ್ಲ. ಹೀಗಾಗಿ ಅದನ್ನು ಶೂ ತೊಳೆದು ಕೈ ತೊಳ್ಕೊಂಡು ಬಂದೆ. ಅಷ್ಟರಲ್ಲಿ ಏನಾಗಿತ್ತು ಅಂದರೆ, ಆ ಶೂನಿಂದ ಸೋಪಿನ ನೀರು ಬಿದ್ದಿತ್ತು. ಗೊತ್ತಾಗಿಲ್ಲ, ಬಲಗಾಲಿಟ್ಟೆ, ಎಡಗಾಲು ಈ ಕಡೆ ಜಾರಿತು. ಬಿದ್ದ ಕೂಡಲೇ ಹಿಪ್‌ನಲ್ಲಿ ಮೂರು ಪೀಸ್ ಆಯ್ತು. ಅಷ್ಟೊತ್ತಿಗಾಗಲೇ 9.45 ಆಗಿತ್ತು. ಯಾವ ವೈದ್ಯರೂ ತೆಗೆಯಲಿಲ್ಲ. ರಾತ್ರಿಯೆಲ್ಲ ನೋವು ಅನುಭವಿಸಿದೆ" ಎಂದು ಹಿರಿಯ ನಟ ದೊಡ್ಡಣ್ಣ ಘಟನೆಯನ್ನು ವಿವರಿಸಿದ್ದಾರೆ.
ನಾಲ್ಕು ಗಂಟೆ ಶಸ್ತ್ರ ಚಿಕಿತ್ಸೆ
ಹಿಪ್ ಮಲ್ಟಿ ಫ್ರಾಕ್ಚರ್ ಆಗಿದೆಯೆಂದು ವೈದ್ಯರು ತಿಳಿಸಿದ ಬಳಿಕ ನಾಲ್ಕು ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ನಡೆದಿತ್ತು. ಸೊಂಟಕ್ಕೆ ಅಷ್ಟು ಗಂಭೀರ ಪೆಟ್ಟಾಗಿತ್ತು ಎಂದಿದ್ದಾರೆ. "ವೈದ್ಯರು ಬಂದರು. ಬಲಗಾಲು ಊದಿತ್ತು. ಕಾಲನ್ನು ಫೋಲ್ಡ್ ಮಾಡುವುದಕ್ಕೆ ಟ್ರೈ ಮಾಡಿದರು ಆಗಲಿಲ್ಲ. ಸರ್ ಮಲ್ಟಿ ಫ್ರಾಕ್ಚರ್ ಆಗಿದೆ. ದಯವಿಟ್ಟು ಬೇಜಾರು ಆಗ್ಬೇಡಿ. ಬೆಂಗಳೂರಿಗೆ ಕಳಿಸಿಕೊಡುತ್ತೇನೆ. ಅಲ್ಲಿ ಚಿಕಿತ್ಸೆ ಸುಲಭ ಅಂದು ಬೆಂಗಳೂರಿಗೆ ಕಳುಹಿಸಿಕೊಟ್ಟರು. ಇಲ್ಲಿ ಎಕ್ಸರೆ ತೆಗೆದು, ಹೀಗೆಲ್ಲ ಆಗಿದೆ ಅಂದರು. ಬೆಳಗ್ಗೆನೇ ನಾಲ್ಕು ಗಂಟೆಗಳ ಕಾಲ ಆಪರೇಷನ್ ಮಾಡಿದರು. ನನಗೆ ಏನೂ ಗೊತ್ತಿಲ್ಲ." ಎಂದು ದೊಡ್ಡಣ್ಣ ಹೇಳಿದ್ದಾರೆ.
ಮೂರು ತಿಂಗಳಲ್ಲಿ ಸತ್ಯ ದರ್ಶನ
"ಈಗ ನನಗೆ 76 ವರ್ಷ ನಡೆಯುತ್ತಿದೆ. ಈ ನವೆಂಬರ್ 12ನೇ ತಾರೀಕಿಗೆ 76 ತುಂಬಿ 77ಕ್ಕೆ ಬೀಳುತ್ತೆ. ಈ 76 ವರ್ಷದಲ್ಲಿ ಆಗದ ಅನುಭವ ಕೇವಲ ಈ ಮೂರು ತಿಂಗಳಲ್ಲಿ ಆಯ್ತು. ಸತ್ಯ ದರ್ಶನ ಆಯ್ತು. ಯಾವುದೋ ಭ್ರಯಲ್ಲಿ ಬದುಕುತ್ತಿರುತ್ತೇವೆ ಅನಿಸಿತ್ತು. ನಾನು ಬಿದ್ದರೆ ಯಾರು ಎಷ್ಟು ದಿನ ನೋಡುತ್ತಾರೆ. ನನ್ನ ಹೆಂಡ್ತಿ ಬಿಡಿ ಚೆನ್ನಾಗಿ ನೋಡಿ ಕೊಳ್ಳುತ್ತಾಳೆ. ಆ ಸಮಯದಲ್ಲಿ ನಾವು ಬೇರೆಯವರಿಗೆ ಹೊರೆಯಾಗುತ್ತೇವೆ ಅಂತ ಅನಿಸಬಾರದು. ಹಾಗೆ ಬದುಕಿ ತೋರಿಸಬೇಕು. ಅದಕ್ಕೆ ಧೈರ್ಯ ಬೇಕು." ಎಂದಿದ್ದಾರೆ.
ರಾಕ್‌ಲೈನ್ ವೆಂಕಟೇಶ್‌ಗೆ ಫೋನ್
"ನನ್ನನ್ನು ಅತ್ಯಂತ ಪ್ರೀತಿ ಮಾಡುವ ಒಂದು ಜೀವವಿದೆ. ನನಗೆ ಏಟಾಗಿದೆ ಅಂತಾಗ ನನ್ನ ಮಗಳಿಗೆ ಮೊದಲು ಫೋನ್ ಹೋಗಿಲ್ಲ. ನನ್ನ ಮನೆಯವರು ಅವರಿಗೆ ಫೋನ್ ಮಾಡುತ್ತಾರೆ. ನಮ್ಮ ಮನೆಯವರಿಗೆ ಸ್ವಂತ ಮಗನಿಗಿಂತ ಹೆಚ್ಚು. ಅದ್ಯಾರು ಅಂತ ಹೇಳಿದರೆ ರಾಕ್‌ಲೈನ್ ವೆಂಕಟೇಶ್. ಅಂತಹ ಒಬ್ಬ ಸ್ನೇಹಿತನನ್ನು ಪಡೆದಿರೋದು ನನ್ನ ಪುಣ್ಯ" ಎಂದು ರಾಕ್‌ಲೈನ್ ವೆಂಕಟೇಶ್ ಬಗ್ಗೆ ದೊಡ್ಡಣ್ಣ ಹೇಳಿದ್ದಾರೆ.


Click it and Unblock the Notifications











