"ನಮಸ್ಕಾರ.. ನಮಸ್ಕಾರ.. ನಮಸ್ಕಾರ.. ನಾನು ದ್ವಾರಕೀಶ್.. ನಾನು ಆರಾಮಾಗಿದ್ದೇನೆ"
ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಹಾಗೂ ನಟ ದ್ವಾರಕೀಶ್ ಬಗ್ಗೆ ಕಿಡಿಗೇಡಿಗಳು ಕೆಟ್ಟ ಸುದ್ದಿಯನ್ನು ಹಬ್ಬಿಸಿದ್ದರು. ಹೀಗಾಗಿ ಕೆಲ ಕಾಲ ಚಿತ್ರರಂಗದಲ್ಲಿ ಆತಂಕದ ವಾತಾರಣ ಸೃಷ್ಟಿಯಾಗಿತ್ತು. ಕಿಡಿಗೇಡಿಗಳ ಈ ಕೃತಕ್ಕೆ ಕನ್ನಡದ ಕುಳ್ಳ ಪ್ರತಿಕ್ರಿಯೆ ನೀಡಿದ್ದಾರೆ.
ಕನ್ನಡದ ಚಿತ್ರರಂಗದ ಕೆಲ ಸೆಲೆಬ್ರೆಟಿಗಳಿಗೆ ಇಂತಹ ಮುಜುಗರದ ಪ್ರಸಂಗ ಆಗಾಗ ಎದುರಾಗುತ್ತಲೇ ಇರುತ್ತೆ. ಹಲವು ನಟರಿಗೆ ಆರೋಗ್ಯದ ಬಗ್ಗೆ ಆಗಾಗ ಕಿಡಿಗೇಡಿಗಳು ಕೆಟ್ಟ ಸುದ್ದಿಯನ್ನು ಹಬ್ಬಿಸುತ್ತಲೇ ಇರುತ್ತಾರೆ. ಇಂದು ದ್ವಾರಕೀಶ್ ಅವರ ಬಗ್ಗೆನೂ ಸುಳ್ಳು ಸುದ್ದಿಯನ್ನು ಹಬ್ಬಿಸಿದ್ದರು. ಇದಕ್ಕೆ ಸ್ವತ: ದ್ವಾರಕೀಶ್ ವಿಡಿಯೋ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.

'ನಾನು ಆರಾಮಾಗಿದ್ದೇನೆ'
ಕನ್ನಡ ಹಿರಿಯ ನಟ ದ್ವಾರಕೀಶ್ ಆರೋಗ್ಯದ ಬಗ್ಗೆ ಇಲ್ಲ ಸಲ್ಲದ ಸುದ್ದಿಯನ್ನು ಹಬ್ಬಿಸಲಾಗಿತ್ತು. ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಸಿನಿಮಾ ಪ್ರೇಮಿಗಳಿಗೆ ಈ ವಿಷಯ ಆತಂಕ ಸೃಷ್ಟಿಸುವಂತೆ ಮಾಡಿತ್ತು. ಇದು ದ್ವಾರಕೀಶ್ ಅವರ ಗಮನಕ್ಕೆ ಬರುತ್ತಿದ್ದಂತೆ ತಮ್ಮ ಅಭಿಮಾನಿಗಳಿಗಾಗಿ ವಿಡಿಯೋ ಮಾಡಿ ಸ್ಪಷ್ಟನೆ ನೀಡಿದ್ದಾರೆ.
"ಎಲ್ಲರಿಗೂ ನಮಸ್ಕಾರ.. ನಮಸ್ಕಾರ.. ನಮಸ್ಕಾರ.. ನಾನು ದ್ವಾರಕೀಶ್. ನೀವು ಸಾಕಿದ ದ್ವಾರಕೀಶ್. ನೀವು ಬೆಳೆಸಿದ ದ್ವಾರಕೀಶ್. ಚೆನ್ನಾಗಿದ್ದೀನಿ. ನಿಮ್ಮಗಳೆಲ್ಲ ಆಶೀರ್ವಾದ ಇರಬೇಕು. ಗಟ್ಟಿಮುಟ್ಟಾಗಿದ್ದೀನಿ. ಯಾವುದು ಚಿಂತೆ ಇಲ್ಲ. ನಗು ನಗುತ್ತಾ ಇದ್ದೀನಿ. ನಿಮ್ಮ ವಿಶ್ವಾಸ ಮತ್ತು ಪ್ರೀತಿ ಇದೇ ರೀತಿ ಇರಲಿ. ನಿಮ್ಮ ಆಶೀರ್ವಾದ ಇರೋವರೆಗೂ ನನಗೆ ಏನೂ ಇರಲ್ಲ. ನಾನು ಆರಾಗಿದ್ದೇನೆ." ದ್ವಾರಕೀಶ್ ವಿಡಿಯೋ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.

ಇತ್ತೀಚೆಗೆ ಆರೋಗ್ಯದಲ್ಲಿ ಏರು ಪೇರಾಗಿತ್ತು
80 ವಯಸ್ಸಿನ ನಿರ್ಮಾಪಕ, ನಿರ್ದೇಶಕ, ನಟ ದ್ವಾರಕೀಶ್ ಅವರ ಆರೋಗ್ಯದಲ್ಲಿ ಇತ್ತೀಚೆಗೆ ಏರು ಪೇರಾಗಿತ್ತು. ಆ ಬಳಿಕ ಈ ಹಿರಿಯ ಜೀವ ಚೇತರಿಸಿಕೊಂಡಿದ್ದು, ಈಗ ಆರಾಮಾಗಿದ್ದಾರೆ. ಇದೇ ಸುದ್ದಿಯನ್ನು ಇಟ್ಟುಕೊಂಡು ದ್ವಾರಕೀಶ್ ಬಗ್ಗೆ ಕಿಡಿಗೇಡಿಗಳು ಸುಳ್ಳು ಸುದ್ದಿಯನ್ನು ಹಬ್ಬಿಸಿದ್ದರು.
ಅದಕ್ಕೆ ದ್ವಾರಕೀಶ್ ಅವರೇ ಸ್ವತ: ವಿಡಿಯೋವನ್ನು ಹೊರಬಿಟ್ಟಿದ್ದು, ಪ್ರತಿಕ್ರಿಯೆ ನೀಡಿದ್ದಾರೆ. ತಾನು ಆರೋಗ್ಯವಾಗಿದ್ದು, ನಿಮ್ಮ ಅಶೀರ್ವಾದದಿಂದ ಚೆನ್ನಾಗಿದ್ದೀನಿ, ಆರಾಮಾಗಿದ್ದೀನಿ ಎಂದು ಹಿರಿಯ ನಟ ದ್ವಾರಕೀಶ್ ಹೇಳಿದ್ದಾರೆ.
ದ್ವಾರಕೀಶ್ ಸಾಧನೆಗೆ ಡಾಕ್ಟರೇಟ್
ಕರ್ನಾಟಕದ ಕುಳ್ಳ ಎಂದೇ ಜನಪ್ರಿಯರಾಗಿರೋ ದ್ವಾರಕೀಶ್ ಕನ್ನಡ ಚಿತ್ರರಂಗದಲ್ಲಿ ವಿಶಿಷ್ಟ ಸಾಧನೆಗಳನ್ನು ಮಾಡಿದ್ದಾರೆ. 1966ರಿಂದ ಚಿತ್ರರಂಗದಲ್ಲಿ ಆಕ್ಟಿವ್ ಆಗಿರೋ ಹಿರಿಯ ಜೀವ ಹೊಸ ಹೊಸ ಪ್ರಯೋಗಗಳನ್ನು ಮಾಡಿ ಗೆದ್ದಿದ್ದಾರೆ. ಡಾ.ರಾಜ್‌ಕುಮಾರ್, ಡಾ.ವಿಷ್ಣುವರ್ಧನ್ ಸೇರಿದಂತೆ ಕನ್ನಡ ಚಿತ್ರರಂಗದ ದಿಗ್ಗಜರ ಸಿನಿಮಾಗಳನ್ನು ನಿರ್ಮಾಣ ಮಾಡಿ ನಿರ್ದೇಶಿಸಿದ್ದಾರೆ.
ಇವರ ಸಾಧನೆಗೆ ಬೆಂಗಳೂರು ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ಪ್ರದಾನ ಮಾಡಿದೆ. 80 ವರ್ಷದ ದ್ವಾರಕೀಶ್ ಅವರಿಗೆ ಹಲವು ವೇದಿಕೆಗಳಲ್ಲಿ ಸನ್ಮಾನ ಮಾಡಲಾಗಿದೆ. ಕನ್ನಡ ಚಿತ್ರರಂಗಕ್ಕೆ ಕರ್ನಾಟಕದ ಕುಳ್ಳನ ಸಾಧನೆ ಮರೆಯುವಂತೆ ಇಲ್ಲ.


Click it and Unblock the Notifications











