ಕ್ಯಾನ್ಸರ್ ಕುರಿತು ಸ್ಪಷ್ಟನೆ ಕೊಟ್ಟ ಕನ್ನಡದ ಗಾಯಕಿ ಅರ್ಚನಾ ಉಡುಪ: Video
ಕನ್ನಡದ ಜನಪ್ರಿಯ ಗಾಯಕಿ ಹಾಗೂ ನಿರೂಪಕಿ ಅರ್ಚನಾ ಉಡುಪ ಸೋಶಿಯಲ್ ಮೀಡಿಯದಲ್ಲಿ ಪ್ರತ್ಯಕ್ಷ ಆಗಿ ಎರಡು ವಿಷಯಗಳ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. ಇತ್ತೀಚೆಗೆ ಅರ್ಚನಾ ಉಡುಪ ಆರೋಗ್ಯದ ಬಗ್ಗೆ ಹಾಗೂ ಅವರು ಹಾಡುವುದನ್ನು ನಿಲ್ಲಿಸಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಈ ಬಗ್ಗೆ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡು ಸ್ಪಷ್ಟನೆ ನೀಡಿದ್ದಾರೆ.
ಅರ್ಚುನಾ ಉಡುಪ ತಮ್ಮ ಗಾಯನದ ಮೂಲಕ ಸಂಗೀತ ಪ್ರೇಮಿಗಳನ್ನು ರಂಜಿಸುತ್ತಾ ಬಂದಿದ್ದಾರೆ. ಗಾಯನ ಅಷ್ಟೇ ಅಲ್ಲ ಅವರ ನಿರೂಪಣೆ ಕೂಡ ಅಷ್ಟೇ ಸೊಗಸಾಗಿ ಮಾಡುತ್ತಾರೆ. ಇವರಿಗೆ ಅವರದ್ದೇ ಆದ ಅಭಿಮಾನಿ ಬಳಗವಿದೆ. ಸಾಮಾನ್ಯವಾಗಿ ವಿವಾದ ಹಾಗೂ ಗಾಳಿ ಸುದ್ದಿಗಳಿಂದ ದೂರವಿರುವ ಗಾಯಕಿ ಇವರು. ಇಂತಹ ಬಗ್ಗೆ ಕಳೆದ ಕೆಲವು ದಿನಗಳಿಂದ ಎರಡು ಸುದ್ದಿಗಳನ್ನು ಕೆಲವರು ಹಬ್ಬಿಸುತ್ತಿದ್ದರು. ಈ ಬಗ್ಗೆ ಬೇಸರದಿಂದ ಅರ್ಚನಾ ಉಡುಪ ಅವರು ಪ್ರತಿಕ್ರಿಯಿಸಿದ್ದಾರೆ.

ಅರ್ಚನಾ ಅವರು ಕ್ಯಾನ್ಸರ್ ಸಮಸ್ಯೆಯಿಂದ ಬಳಲುತ್ತಿದ್ದಾರೆಂದು ವದಂತಿಗಳನ್ನು ಹಬ್ಬಿಸಲಾಗಿತ್ತು. ಇನ್ನು ಕೆಲವರು ಅರ್ಚನಾ ಉಡುಪ ಗಂಟನಿಗೆ ಸಮಸ್ಯೆಯಿಂದ ಹಾಡುವುದನ್ನೇ ನಿಲ್ಲಿಸಿದ್ದಾರೆ ಎಂದು ಹಬ್ಬಿಸಿದ್ದರು. ಈ ಎರಡು ವಿಷಯಗಳ ಬಗ್ಗೆ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ಕ್ಲಾರಿಟಿ ಕೊಟ್ಟಿದ್ದಾರೆ. ಆ ವಿಡಿಯೋದ ಸಾರಾಂಶ ಹೀಗಿದೆ.
ಎರಡು ವಿಷಯ ನನ್ನನ್ನು ಕಾಡುತ್ತಿದೆ
"ಬಹಳ ದಿನಗಳಿಂದ ನನ್ನ ಕಾಡುತ್ತಿದ್ದ ಎರಡು ಮುಖ್ಯ ವಿಷಯಗಳನ್ನು ಹಂಚಿಕೊಳ್ಳಬೇಕು ಅಂತ ಈ ವಿಡಿಯೋವನ್ನು ಮಾಡುತ್ತಿದ್ದೇನೆ. ಈ ವಿಡಿಯೋ ಮಾಡಬೇಕೋ ಬೇಡವೋ. ಇದರಿಂದ ಉಪಯೋಗ ಆಗುತ್ತೋ ಇಲ್ಲವೋ ಎನ್ನುವ ಡೌಟ್ ಇತ್ತು ಮನಸ್ಸಿನಲ್ಲಿ. ಅದರ ಕಿರಿ ಕಿರಿ ತುಂಬಾನೇ ಜಾಸ್ತಿ ಆಗುತ್ತಿರುವುದರಿಂದ ಇದನ್ನು ನಿಮ್ಮ ಜೊತೆ ಹಂಚಿಕೊಳ್ಳಬೇಕು ಅಂತ ಅಂದುಕೊಂಡೆ." ಎಂದು ವಿಡಿಯೋ ಆರಂಭಿಸಿದ್ದಾರೆ.
ಗಂಟಲು ಸಮಸ್ಯೆ
"ಮೊದಲನೆಯದ್ದು ಏನಂದರೆ, ಮೂರು ನಾಲ್ಕು ವರ್ಷಗಳ ಹಿಂದೆ ಒಂದು ಸಂದರ್ಶನ ಕೊಟ್ಟಿದೆ. ಆ ಸಂದರ್ಶನವೇ ಹಳೆಯದ್ದು. ಅದರಲ್ಲಿ ನನಗೆ 20 ವರ್ಷಗಳ ಹಿಂದೆ ಸಣ್ಣದಾಗಿ ಗಂಟಲಿನಲ್ಲಿ ಕಿರಿ ಕಿರಿ ಸಮಸ್ಯೆ ಉಂಟಾಗಿ, ಕೆಲವು ತಿಂಗಳುಗಳ ಕಾಲ ನನಗೆ ಹಾಡುವುದಕ್ಕೆ ಆಗುತ್ತಿರಲಿಲ್ಲ ಎನ್ನುವ ವಿಷಯವನ್ನು ಹಂಚಿಕೊಂಡಿದ್ದೆ. ಹಾಗೇ ನಾನು ಆ ತೊಂದರೆಯಿಂದ ಹೇಗೆ ಹೊರ ಬಂದೆ, ಹೇಗೆ ಮತ್ತೆ ಹಾಡುವುದಕ್ಕೆ ಪ್ರಾರಂಭ ಮಾಡಿದೆ ಎನ್ನುವ ವಿಷಯವನ್ನು ನಾಲ್ಕು ಜನಕ್ಕೆ ಉಪಯೋಗ ಆಗಲಿ ಅಂತ ಹಂಚಿಕೊಂಡಿದ್ದೆ. ಅವರು ಪ್ರಮೋಷನ್‌ಗೆ ಅಂತ ಒಂದು ಕ್ಲಿಪ್ ಅನ್ನು ಅಷ್ಟೇ ಹಾಕಿದ್ದಾರೆ. ನೀವು ಪೂರ್ತಿ ಸಂದರ್ಶನವನ್ನು ನೋಡದೇ, ಕೇವಲ ಆ ಕ್ಲಿಪ್ ಅನ್ನು ನೋಡ್ಕೊಂಡು ನನಗೆ ಹಾಡುವುದಕ್ಕೆ ಆಗುತ್ತಿಲ್ಲ. ಹಾಡುವುದನ್ನು ನಿಲ್ಲಿಸಿಬಿಟ್ಟಿದ್ದೀನಿ. ನನ್ನ ಗಂಟಲು ಹೊರಟು ಹೋಗಿದೆ ಅಂತೆಲ್ಲ ತುಂಬಾ ಜನ ಹಬ್ಬಿಸುತ್ತಿದ್ದಾರೆ. ಇದು ತುಂಬಾ ಮನಸ್ಸಿಗೆ ನೋವು ಕೊಡುತ್ತಿದೆ. ಎಲ್ಲಿ ಹೋದರೂ ನೀವು ಆರೋಗ್ಯವಾಗಿದ್ದೀರಾ? ನೀವು ಹಾಡುತ್ತಿದ್ದೀರಾ ಅಂತಾರೆ. ನಾನು ಮೊದಲಿಗಿಂತ ಹೆಚ್ಚು ಬ್ಯುಸಿಯಾಗಿದ್ದೀನಿ. ಮೊದಲಿಗಿಂತ ಹೆಚ್ಚು ಹಾಡುತ್ತಿದ್ದೇನೆ." ಎಂದು ಗಾಯಕಿ ಅರ್ಚನಾ ಉಡುಪ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.
ಕ್ಯಾನ್ಸರ್ ಸಮಸ್ಯೆಗೆ ಸ್ಪಷ್ಟನೆ
"ಇನ್ನೊಂದು ವಿಷಯ, ಈ ಶಾರ್ಟ್ ಹೇರ್ ಕಟ್. ಇದನ್ನು ಯಾಕೆ ಮಾಡಿಸಿದ್ದೀನಿ ಅಂದರೆ, ನಾನು ಹೊಸ ಸೀರಿಯಲ್‌ನಲ್ಲಿ ಒಂದು ಪಾತ್ರ ಒಪ್ಪಿಕೊಂಡಿದ್ದೆ. ಆ ಚಾನೆಲ್‌ನವರು ಆ ಪಾತ್ರಕ್ಕೆ ಇದೇ ರೀತಿ ಹೇರ್ ಕಟ್ ಬೇಕು ಅಂತ ಕೇಳಿದ್ದರಿಂದ ನಾನು ಮಾಡಿಸಿಕೊಳ್ಳಬೇಕಾಯ್ತು. ಅದು ಬಿಟ್ಟು ನನಗೆ ಯಾವುದೇ ಆರೋಗ್ಯದ ಸಮಸ್ಯೆನೂ ಇಲ್ಲ. ಬಹಳಷ್ಟು ಜನ ಅವರೇ ಏನೇನೂ ಊಹಾಪೋಹ ಕಲ್ಪನೆಗಳನ್ನು ಮಾಡಿಕೊಂಡು, ನನಗೆ ಕ್ಯಾನ್ಸರ್ ಬಂದಿದೆ ಎನ್ನುವ ಲೆವೆಲ್‌ಗೆ ಮಾತಾಡಿಬಿಟ್ಟಿದ್ದಾರೆ. ಇದರಿಂದ ನನಗಿಂತ ಹೆಚ್ಚಾಗಿ ನನ್ನ ತಂದೆ ತಾಯಿಗಳಿಗೆ, ನನ್ನ ಪರಿವಾರಕ್ಕೆ, ನನ್ನ ಸಂಬಂಧಿಕರಿಗೆ, ಫ್ರೆಂಡ್ಸ್‌ಗೆ ತುಂಬಾನೇ ನೋವಾಗಿದೆ. ದಯವಿಟ್ಟು ಪೂರ್ತಿ ವಿಷಯವನ್ನು ತಿಳಿದುಕೊಳ್ಳದೆ, ಸಣ್ಣ ಸಣ್ಣ ಕ್ಲಿಪ್‌ಗಳನ್ನು ನೋಡಿ ಏನೂ ಊಹೆಗಳನ್ನು ಮಾಡಿಕೊಳ್ಳಬೇಡಿ. ದಯವಿಟ್ಟು ಪೂರ್ತಿ ವಿಷಯವನ್ನು ತಿಳಿದುಕೊಳ್ಳಿ. ಇದರಿಂದ ಯಾರದ್ದೋ ವೃತ್ತಿ ಜೀವನ, ವೈಯಕ್ತಿಕ ಜೀವನಕ್ಕೆ ಘಾಸಿಯಾಗುವುದು ತಪ್ಪುತ್ತೆ." ಎಂದಿದ್ದಾರೆ.


Click it and Unblock the Notifications











