ಲೀಗಲ್– ಥ್ರಿಲ್ಲರ್ ಸಿನಿಮಾಗೆ ಕ್ರೇಜಿಸ್ಟಾರ್ ರವಿಚಂದ್ರನ್ ಗ್ರೀನ್ ಸಿಗ್ನಲ್!
ಕ್ರೇಜಿಸ್ಟಾರ್ ರವಿಚಂದ್ರನ್ ಹೊಸ ಸಿನಿಮಾವೊಂದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಈ ಸಿನಿಮಾ ಕಥೆ ಕೇಳಿನೇ ಕ್ರೇಜಿಸ್ಟಾರ್ ಥ್ರಿಲ್ ಆಗಿದ್ದಾರಂತೆ. ಈಗಾಗಲೇ ಈ ಸಿನಿಮಾ ಬಗ್ಗೆ ಮಾತುಕಥೆ ನಡೆದಿದ್ದು, ಓಕೆ ಅಂತಾನೂ ಹೇಳಿದ್ದಾರಂತೆ.
ಜಿ9 ಕಮ್ಮ್ಯುನಿಕೇಶನ್ ಮೀಡಿಯ & ಎಂಟರ್ಟೈಂಮೆಂಟ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದು, ರವಿಚಂದ್ರನ್ ಜೊತೆ ಸಿನಿಮಾ ಮಾಡುವ ತರಾತುರಿಯಲ್ಲಿದೆ. ಈಗಾಗಲೇ ಈ ಸಂಸ್ಥೆ 'ಆಕ್ಟಿಡೆಂಟ್', 'ಲಾಸ್ಟ್ ಬಸ್' ಹಾಗೂ 'ಅಮೃತ್ ಅಪಾರ್ಟ್‌ಮೆಂಟ್ಸ್' ವಿಶಿಷ್ಟ ಸಿನಿಮಾಗಳನ್ನು ನಿರ್ಮಾಣ ಮಾಡಿ ಸಿನಿಪ್ರೇಮಿಗಳ ಮನಸ್ಸನ್ನು ಗೆದ್ದಿದ್ದು, ಈಗ ಹೊಸ ಸಿನಿಮಾಗೆ ಕೈ ಹಾಕಿದೆ.

ಕ್ರೇಜಿ ಸ್ಟಾರ್ ರವಿಚಂದ್ರನ್ ಒಪ್ಪಿಕೊಂಡಿರೊ ಈ ಹೊಸ ಸಿನಿಮಾದ ಕಥೆ ಲೀಗಲ್-ಥ್ರಿಲ್ಲರ್ ಶೈಲಿಯಲ್ಲಿದೆ. ಗುರುರಾಜ ಕುಲಕರ್ಣಿ ಈ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಮೊಟ್ಟ ಮೊದಲ ಬಾರಿಗೆ ನಿರ್ದೇಶನ ಮಾಡಿದ್ದ ಕೌಟುಂಬಿಕ-ಥ್ರಿಲ್ಲರ್ ಸಿನಿಮಾ 'ಅಮೃತ್ ಅಪಾರ್ಟ್‌ಮೆಂಟ್ಸ್' ಸಿನಿಮಾಗೆ ಅವರೇ ಸ್ವತಃ ಕಥೆ-ಚಿತ್ರಕಥೆಯನ್ನು ಬರೆದು ಪ್ರಶಂಸೆ ಗಳಿಸಿದ್ದರು.
ಈಗ ಗುರುರಾಜ್ ಸ್ಯಾಂಡಲ್‌ವುಡ್‌ನ ಕ್ರೇಜಿಸ್ಟಾರ್ ರವಿಚಂದ್ರನ್ ಆಕ್ಷನ್ ಕಟ್ ಹೇಳುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ. ಗುರುರಾಜ್ ನಿರೂಪಣೆ ಮಾಡಿದ ಕಥೆಯನ್ನು ಕೇಳಿ ಕ್ರೇಜಿಸ್ಟಾರ್ ರವಿಚಂದ್ರನ್ ಮೆಚ್ಚುಗೆ ನೀಡಿದ್ದಾರೆ. ಸದ್ಯ ಈ ಸಿನಿಮಾ ಪ್ರೀ ಪ್ರೊಡಕ್ಷನ್ ಹಂತದಲ್ಲಿದೆ.
"ಗುರುರಾಜ್ ಹೇಳಿರುವ ಕಥೆ ಇಂದಿನ ತಲೆಮಾರುಗಳಿಗೆ ಇಷ್ಟ ಆಗುತ್ತೆ. ವಿವಿಧ ಬಗೆಯನ್ನು ಕಥೆಗಳನ್ನು ಇಷ್ಟಪಡುವ ಯುವ ಸಮುದಾಯದ ಆಸಕ್ತಿಯನ್ನು ಇಟ್ಟುಕೊಂಡು, ಜೊತೆ ಫ್ಯಾಮಿಲಿ ಆಡಿಯನ್ಸ್ ಅನ್ನೂ ಗಮನದಲ್ಲಿಟ್ಟುಕೊಂಡು ಕಥೆ ಹೆಣೆಯಲಾಗಿದೆ. ಹೀಗಾಗಿ ಈ ಸಿನಿಮಾ ಮೂಲಕ ಯುವಪೀಳಿಗೆಗೆ ಹತ್ತಿರವಾಗುತ್ತೇವೆ" ಎಂದು ಕ್ರೇಜಿಸ್ಟಾರ್ ರವಿಚಂದ್ರನ್ ಹೇಳಿದ್ದಾರೆ.
ವಿಶ್ವದಾದ್ಯಂತ ಕನ್ನಡ ಸಿನಿಮಾಗಳು ಪ್ರೇಕ್ಷಕರನ್ನು ಸೆಳೆಯುತ್ತಿವೆ. ಈ ಬೆನ್ನಲ್ಲೇ ಈ ಸಿನಿಮಾ ಕೂಡ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುವ ಅವಕಾಶವಿದೆ ಎಂದು ಕ್ರೇಜಿಸ್ಟಾರ್ ನಂಬಿದ್ದಾರೆ. ಹೊಸ ಆಯಾಮದ ಸಿನಿಮಾ ಸ್ಯಾಂಡಲ್‌ವುಡ್‌ಗೆ ಮತ್ತಷ್ಟು ಮೆರುಗು ನೀಡಬಹುದೆಂದ ಆಶಾಭಾವನೆಯಲ್ಲಿದ್ದಾರೆ.
ಸ್ವತಃ ಗುರುರಾಜ್ ಈ ಸಿನಿಮಾ ಕಥೆ ಬರೆದಿದ್ದಾರೆ. ಸಿನಿಮಾ ಟೈಟಲ್, ಉಳಿದ ಸ್ಟಾರ್ ಕಾಸ್ಟ್ ಇನ್ನಷ್ಟೇ ರಿವೀಲ್ ಆಗಬೇಕಾಗಿದೆ. ಸದ್ಯಕ್ಕೀಗ ಸಂಗೀತ ನಿರ್ದೇಶಕರಾಗಿ ಅನೂಪ್ ಸೀಳಿನ್, ಛಾಯಾಗ್ರಾಹಕರಾಗಿ ಶಿವ ಬಿಕೆ ಕುಮಾರ್, ಸಂಕಲನಕಾರರಾಗಿ ಬಿ.ಎಸ್.ಕೆಂಪರಾಜು ಹಾಗೂ ಎಂ.ಎಸ್.ರಮೇಶ್ ಡೈಲಾಗ್ ಬರೆಯುತ್ತಿದ್ದಾರೆ. ಸದ್ಯ ಏಪ್ರಿಲ್ ತಿಂಗಳಿನಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ.


Click it and Unblock the Notifications











