SIIMA Awards 2025: ಕನ್ನಡಿಗರಿಗೆ ಬೇಕಾಬಿಟ್ಟು ಅವಾರ್ಡ್ಸ್ ಕೊಟ್ಟರೇ? ವೇದಿಕೆ ಮೇಲೆ ಗುಡುಗಿದ ದುನಿಯಾ ವಿಜಯ್
2025ನೇ ಸಾಲಿನ ಪ್ರತಿಷ್ಠಿತ ಸೈಮಾ ಪ್ರಶಸ್ತಿ ಸಮಾರಂಭ ದುಬೈನಲ್ಲಿ ನಡೆಯುತ್ತಿದೆ. ದಕ್ಷಿಣ ಭಾರತದ ಚಿತ್ರರಂಗದಲ್ಲಿ ಸಾಧನೆ ಮಾಡಿದ ಅತ್ಯುತ್ತಮ ಸಿನಿಮಾಗಳಿಗೆ ಪ್ರಶಸ್ತಿಯನ್ನು ನೀಡಲಾಗಿದೆ. ಎರಡು ದಿನಗಳ ಕಾಲ ನಡೆಯುವ ಈ ಪ್ರಶಸ್ತಿ ಸಮಾರಂಭದಲ್ಲಿ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯ ಸಿನಿಮಾಗಳಿಗೆ ಪ್ರಶಸ್ತಿಯನ್ನು ನೀಡಲಾಗುತ್ತೆ.
ನಿನ್ನೆ (ಸೆಪ್ಟೆಂಬರ್ 05)ರಂದು ತೆಲುಗು ಮತ್ತು ಕನ್ನಡ ಭಾಷೆಯ ಅತ್ಯುತ್ತಮ ಸಿನಿಮಾ ಮತ್ತು ತಂತ್ರಜ್ಞರುಗಳಿಗೆ ಪ್ರಶಸ್ತಿಯನ್ನು ನೀಡಲಾಗಿತ್ತು. ಈ ಪ್ರಶಸ್ತಿ ಸಮಾರಂಭದಲ್ಲಿ ಕನ್ನಡ ಚಿತ್ರರಂಗದಿಂದ ಕಿಚ್ಚ ಸುದೀಪ್, ದುನಿಯಾ ವಿಜಯ್, ಡಾ. ವಿ.ನಾಗೇಂದ್ರ ಪ್ರಸಾದ್ ಸೇರಿದಂತೆ ಸಾಕಷ್ಟು ಗಣ್ಯರಿಗೆ ಪ್ರಶಸ್ತಿಯನ್ನು ನೀಡಲಾಗಿದೆ. ಆದರೆ, ಈ ವೇಳೆ ಕಳೆದ ವರ್ಷ ಮಾಡಿಕೊಂಡದಂತೆ ಎಡವಟ್ಟುಗಳನ್ನು ಪುನಾರಾವರ್ತನೆ ಮಾಡಲಾಗಿದೆ.

ಸೈಮಾ ಆಯೋಜಕರಿಂದ ಕನ್ನಡದ ಸೆಲೆಬ್ರೆಟಿಗಳಿಗೆ ಮಾಡಿದ ಅವಮಾನದಿಂದ ದುನಿಯಾ ವಿಜಯ್ ರೊಚ್ಚಿಗೆದ್ದಿದ್ದಾರೆ. ಪ್ರಶಸ್ತಿ ಸ್ವೀಕರಿಸಲು ವೇದಿಕೆ ಮೇಲೆ ಏರಿದ್ದ ವಿಜಯ್ ಸೈಮಾದ ಆಯೋಜಕರಿಗೆ ಅಲ್ಲಿಯೇ ಖಡಕ್ ಎಚ್ಚರಿಕೆಯನ್ನು ಕೊಟ್ಟು ಬಂದಿದ್ದಾರೆ. ದುನಿಯಾ ವಿಜಯ್ ಅಸಮಧಾನ ಹೊರ ಹಾಕಿರುವ ಸಂಗತಿಯೀಗ ಚಿತ್ರರಂಗದಲ್ಲಿ ಭಾರೀ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.
ಸೈಮಾ ಸಮಾರಂಭದಲ್ಲಿ ಏನಾಯ್ತು?
ಸೈಮಾ 2025 ಪ್ರಶಸ್ತಿ ಸಮಾರಂಭದಲ್ಲಿ ಮೊದಲ ಎರಡು ಚಿತ್ರರಂಗಗಳಿಗೆ ಪ್ರಶಸ್ತಿಯನ್ನು ನೀಡಲಾಯಿತು. ಮೊದಲು ತೆಲುಗು ಚಿತ್ರರಂಗದ ನಟರು ಹಾಗೂ ತಂತ್ರಜ್ಞರಿಗೆ ಪ್ರಶಸ್ತಿಯನ್ನು ನೀಡಲಾಗಿತ್ತು. ಬಳಿಕ ಕನ್ನಡ ಚಿತ್ರರಂಗಕ್ಕೆ ಪ್ರಶಸ್ತಿಯನ್ನು ನೀಡಲಾಯಿತು. ಆದರೆ, ತೆಲುಗು ಚಿತ್ರರಂಗಕ್ಕೆ ಪ್ರಶಸ್ತಿಗಳನ್ನು ನೀಡುವ ವೇಳೆಗೆ ಸಮಯ ಮೀರಿತ್ತು. ಹೀಗಾಗಿ ತೆಲುಗು ಸೆಲೆಬ್ರೆಟಿಗಳು ಸಮಾರಂಭದಿಂದ ನಿರ್ಗಮಿಸಿದ್ದರು. ಜೊತೆಗೆ ಜನರು ಕೂಡ ಹಿಂತಿರುಗುತ್ತಿದ್ದರು. ಹೀಗಾಗಿ ವೇದಿಕೆ ಮುಂಭಾಗ ಖಾಲಿ ಖಾಲಿಯಾಗಿತ್ತು. ಇಂತಹ ಸಮಯದಲ್ಲಿ ಕನ್ನಡದ ಸೆಲೆಬ್ರೆಟಿಗಳಿಗೆ ಬೇಕಾಬಿಟ್ಟಿ ಪ್ರಶಸ್ತಿ ನೀಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ದುನಿಯಾ ವಿಜಯ್ ಆಕ್ರೋಶ
ಕನ್ನಡದ ಸೆಲೆಬ್ರೆಟಿಗಳಿಗೆ ಪ್ರಶಸ್ತಿಯನ್ನು ನೀಡುವ ವೇಳೆ ಬಹುತೇಕ ವೇದಿಕೆಯ ಮುಂಭಾಗದಲ್ಲಿ ಯಾರೂ ಇರಲಿಲ್ಲ. ಇದು ದುನಿಯಾ ವಿಜಯ್ ಕಣ್ಣುಗಳನ್ನು ಕೆಂಪಗೆ ಮಾಡುವಂತೆ ಮಾಡಿತ್ತು. ವಿಜಯ್‌ಗೆ 'ಭೀಮ' ಸಿನಿಮಾದ ನಿರ್ದೇಶನಕ್ಕಾಗಿ ಅತ್ಯುತ್ತಮ ನಿರ್ದೇಶಕ ಕ್ರಿಟಿಕ್ಸ್ ಅವಾರ್ಡ್ ಪ್ರಶಸ್ತಿ ಲಭಿಸಿತ್ತು. ಈ ಪ್ರಶಸ್ತಿಯನ್ನು ಪಡೆದುಕೊಳ್ಳುವುದಕ್ಕೆ ವೇದಿಕೆ ಮೇಲೆ ಹೋದಾಗ ಮುಂಭಾಗದಲ್ಲಿ ತೆಲುಗು ಚಿತ್ರರಂಗದ ಗಣ್ಯರು, ಜನರು ಯಾರೂ ಇರಲಿಲ್ಲ. ಹೀಗಾಗಿ ದುನಿಯಾ ವಿಜಯ್ ವೇದಿಕೆ ಮೇಲೆನೇ ಸೈಮಾದ ಆಯೋಜಕರಿಗೆ ಎಚ್ಚರಿಕೆ ಕೊಟ್ಟಿದ್ದಾರೆ.
ದುನಿಯಾ ವಿಜಯ್ ಎಚ್ಚರಿಕೆ ಏನು?
ಸೈಮಾ ಪ್ರಶಸ್ತಿ ಸ್ವೀಕರಿಸುತ್ತಾ ದುನಿಯಾ ವಿಜಯ್ ವೇದಿಕೆ ಮೇಲೆಯೇ ಆಯೋಜಕರಿಗೆ ಎಚ್ಚರಿಕೆ ಕೊಟ್ಟಿದ್ದಾರೆ. ಯಾರೂ ಇರದ ವೇಳೆ ವೇದಿಕೆ ಮೇಲೆ ಕರೆದು ಕನ್ನಡರಿಗೆ ಪ್ರಶಸ್ತಿ ಕೊಡುವುದು ಸರಿಯಲ್ಲ. ಕನ್ನಡ ಭಾಷೆ ಉನ್ನತ ಸ್ಥಾನದಲ್ಲಿದೆ. ಅದನ್ನು ಕೆಳಗಿಳಿಸುವ ಪ್ರಯತ್ನ ಮಾಡಬೇಡಿ. ಮುಂದೆನೂ ಹೀಗಾದರೆ, ನಾವ್ಯಾರೂ ಈ ಕಾರ್ಯಕ್ರಮಕ್ಕೆ ಬರೋದಿಲ್ಲ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.
ಹಿಂದೆನೂ ಹೀಗೆ ಆಗಿತ್ತು!
ಸೈಮಾ ಪ್ರಶಸ್ತಿ ಸಮಾರಂಭದಲ್ಲಿ ತಾರತಮ್ಯ ನಡೆಯುತ್ತಿದೆ ಅನ್ನೋ ಆರೋಪ ಹಲವು ದಿನಗಳಿಂದ ಕೇಳಿ ಬರುತ್ತಲೇ ಇದೆ. ಈ ಹಿಂದೆ ಕೂಡ ಈ ಆರೋಪಗಳು ಕೇಳಿ ಬಂದಿದ್ದವು. ಕಳೆದ ಬಾರಿ ಕೂಡ ಸೈಮಾದಿಂದ ಕನ್ನಡದ ತಾರೆಯರಿಗೆ ಅವಮಾನವಾಗಿತ್ತು. ವಸತಿ ಹಾಗೂ ಪ್ರಯಾಣ ಸೌಲಭ್ಯ ನೀಡದೆ ಸಂಕಷ್ಟಕ್ಕೆ ಸಿಲುಕಿಸಿದ್ದರೆಂದು ಆರೋಪಿಸಲಾಗಿತ್ತು. ಅಷ್ಟೇ ಅಲ್ಲದೆ ದರ್ಶನ್ ಸೇರಿದಂತೆ ಹಲವು ತಾರೆಯರು ಆಕ್ರೋಶ ಹೊರ ಹಾಕಿದ್ದರು.


Click it and Unblock the Notifications











