ದಿಗ್ಗಜ ದ್ವಾರಕೀಶ್ ಸೊಸೆಯಿಂದ ವಂಚನೆ; ಹಲವು ಪ್ರಕರಣ ದಾಖಲು.. ಏನಿದು ಕೇಸ್?
ಕನ್ನಡ ಚಿತ್ರರಂಗದ ದಿಗ್ಗಜ ದಿವಂಗತ ದ್ವಾರಕೀಶ್ ಸೊಸೆ ವಂಚನೆ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದಾರೆ. ದ್ವಾರಕೀಶ್ ಅಗಲಿದ ಬಳಿಕವೂ ಅವರ ಹೆಸರಿಗೆ ಮಸಿ ಬಳಿಯುವ ಕೆಲಸ ಆಗಿದೆ. ದಿಗ್ಗಜ ದ್ವಾರಕೀಶ್ ಅವರ ಸೊಸೆ ವಿರುದ್ಧ ಹಲವು ಮಂದಿ ವಂಚನೆ ಪ್ರಕರಣವನ್ನು ದಾಖಲಿಸಿದ್ದಾರೆ.
ಅಂದ್ಹಾಗೆ ದ್ವಾರಕೀಶ್ ಅವರ ಸೊಸೆ ಅಂದರೆ, ಅವರ ಎರಡನೇ ಪತ್ನಿ ಶೈಲಜಾ ಕುಮಾರಿ ಅವರ ಪುತ್ರ ಸಮರ್ಥ್ ಪತ್ನಿಯೇ ವರ್ಷಾ ರೈ. ಇವರೇ ಈ ವಂಚನೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಹಲವು ಮಂದಿ ವರ್ಷಾ ರೈ ಅವರೊಂದಿಗೆ ಹಣಕಾಸಿನ ವ್ಯವಹಾರವನ್ನು ನಡೆಸಿದ್ದರು. ಅವರಿಗೆ ಹಣವನ್ನು ನೀಡದೆ ವಂಚನೆ ಮಾಡಿದ್ದಾರೆ. ಹಣ ಕೇಳಲು ಹೋದವರಿಗೆ ಹಲ್ಲೆ ಮಾಡಿದ್ದಾರೆ ಅನ್ನೋ ಆರೋಪ ಇವರ ಮೇಲಿದೆ.

ಸುವರ್ಣ ನ್ಯೂಸ್ ವರದಿಯ ಪ್ರಕಾರ, ದ್ವಾರಕೀಶ್ ಸೊಸೆ ವರ್ಷಾ ರೈ ಹಣಕಾಸಿನ ವ್ಯವಹಾರ ನಡೆಸುತ್ತಿದ್ದರು. ರಮಣ ರೆಡ್ಡಿ ಅನ್ನೋರು ವರ್ಷಾ ರೈ ಅವರಿಗೆ ಸುಮಾರು 6 ಲಕ್ಷ ರೂಪಾಯಿ ಹಣವನ್ನು ನೀಡಿದ್ದರು. ಆ ಹಣವನ್ನು ಕೇಳುವುದಕ್ಕೆ ಹೋಗಿದ್ದಾಗ ಅವರ ಮೇಲೆ ಬೀದಿಯಲ್ಲೇ ಪೊರಕೆಯಿಂದ ಹಲ್ಲೆ ನಡೆಸಿದ್ದಾರೆ ಎಂದು ವರದಿಯಾಗಿದೆ. ಇವರಿಬ್ಬರ ಕಿತ್ತಾಟದ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ದ್ವಾರಕೀಶ್ ಅವರ ಸೊಸೆ ಮೇಲೆ ಆರೋಪ ಬರುತ್ತಿರೋದು ಇದೇ ಮೊದಲೇನು ಅಲ್ಲ. ಕಳೆದ ಕೆಲವು ವರ್ಷಗಳಿಂದ ಬೇರೆ ಬೇರೆ ರೀತಿಯಲ್ಲಿ ವಂಚನೆ ಮಾಡಿದ್ದಾರೆ ಎಂಬ ಆರೋಪವೂ ಇವರ ಮೇಲಿದೆ. ವರ್ಷಾ ರೈ ಚೀಟಿ ವ್ಯವಹಾರವನ್ನು ನಡೆಸುತ್ತಿದ್ದರು ಎಂದು ಹೇಳಲಾಗುತ್ತಿದೆ. ಚೀಟಿಗೆ ಹಾಕುವುದಾಗಿ ನಂಬಿಸಿ ಹಣ ಪಡೆದು ವಂಚನೆ ಮಾಡಿರುವ ಆರೋಪ ಇವರ ಮೇಲಿದೆ.
ಈಗಾಗಲೇ ವರದಿಯಾಗಿರುವಂತೆ ಸುಮಾರು 110 ಗ್ರಾಂ ಚಿನ್ನದ ಆಭರಣವನ್ನು ತೆಗೆದುಕೊಂಡು ಸಂಬಂಧ ಪಟ್ಟವರಿಗೆ ನೀಡದ ವಂಚನೆ ಮಾಡಿದ್ದಾರೆ ಅನ್ನೋ ಆರೋಪವೂ ಇವರ ಮೇಲಿದೆ. ಸುಮಾರು ಹತ್ತಕ್ಕೂ ಅಧಿಕ ಮಂದಿಯಿಂದ ದ್ವಾರಕೀಶ್ ಅವರ ಸೊಸೆ ಹಣ ಹಾಗೂ ಚಿನ್ನವನ್ನು ಪಡೆದು ಹಿಂತಿರುಗಿಸಿಲ್ಲ. ಕೇಳುವುದಕ್ಕೆ ಹೋದವರ ಮೇಲೆ ಹಲ್ಲೆ ಮಾಡುತ್ತಿದ್ದಾರೆಂಬ ಆರೋಪ ಇವರ ಮೇಲೆ ಹೊರಿಸಿ, ದೂರ ದಾಖಲು ಮಾಡಲಾಗಿದೆ.

ಇಷ್ಟೇ ಅಲ್ಲದೇ ವರ್ಷಾ ರೈ ಅವರ ಮೇಲೆ ಬೆದರಿಕೆ ಆರೋಪ ಕೂಡ ಇದೆ. ತಾವು ಕೊಟ್ಟಿರುವ ಹಣ ಕೇಳುವುದಕ್ಕೆ ಹೋದವರ ಮೇಲೆ ರೌಡಿಸಂ ತೋರಿಸುತ್ತಾರೆ. ಅಲ್ಲದೇ ಪೊಲೀಸರಿಗೆ ಸುಳ್ಳು ದೂರು ನೀಡುವ ಬಗ್ಗೆ ಬೆದರಿಕೆ ಹಾಕುತ್ತಾರೆಂದು ವಂಚನೆಗೆ ಒಳಗಾದವರು ಆರೋಪ ಮಾಡಿದ್ದಾರೆ. ವರ್ಷಾ ರೈ ಮೇಲೆ ಆರ್.ಆರ್. ನಗರ ಹಾಗೂ ಕೆಂಗೇರಿ ಪೊಲೀಸ್ ಠಾಣೆಗಳಲ್ಲಿ ಹತ್ತಕ್ಕೂ ಅಧಿಕ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಕನ್ನಡ ಚಿತ್ರರಂಗದ ದಿಗ್ಗಜ ದ್ವಾರಕೀಶ್ ಸೊಸೆ ಇಂತಹ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಅವರ ಹೆಸರನ್ನು ಬೀದಿಗೆ ತಂದಂತಾಗಿದೆ. ದ್ವಾರಕೀಶ್ ಅಗಲಿದ ಬಳಿಕವೂ ಅವರ ಹೆಸರು ಇಂತಹ ಪ್ರಕರಣಗಳಲ್ಲಿ ಅನಾವಶ್ಯಕವಾಗಿ ತಳುಕು ಹಾಕಿಕೊಳ್ಳುತ್ತಿದ್ದು, ಕಳಂಕ ತಂದಂತೆ ಆಗಿದೆ. ಹೀಗಾಗಿ ವರ್ಷಾ ರೈ ವಿರುದ್ಧ ದ್ವಾರಕೀಶ್ ಅಭಿಮಾನಿಗಳು ಸೇರಿದಂತೆ ನೆಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ಹೊರ ಹಾಕುತ್ತಿದ್ದಾರೆ.


Click it and Unblock the Notifications











