'ಕನ್ನಡತಿ' ಧಾರಾವಾಹಿ ಮುಗಿದ ಬೆನ್ನಲ್ಲೇ ವಿಮಾನದಿಂದ ಹಾರಿದ ಕಿರಣ್ ರಾಜ್: ಇದೆಲ್ಲಾ 'Ronny'ಗಾಗಿ!
ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗಿದ್ದ ಜನಪ್ರಿಯ ಧಾರಾವಾಹಿ 'ಕನ್ನಡತಿ'. ಇದೇ ಸೀರಿಯಲ್ ಮೂಲಕ ಫೇಮಸ್ ಆದ ನಟ ಕಿರಣ್ ರಾಜ್. ಇತ್ತೀಚೆಗೆ ಸಿನಿಮಾಗಳಲ್ಲೂ ನಟಿಸಿದ್ದಾರೆ. ಆದ್ರೀಗ 'ಕನ್ನಡತಿ' ಮುಗಿಯುತ್ತಿದ್ದಂತೆ ವಿಮಾನದಿಂದ ಹಾರಿದ್ದಾರೆ.ಹಾಗಂತ ಗಾಬರಿಯಾಗೋ ಅಗತ್ಯವಿಲ್ಲ. 13 ಸಾವಿರದಷ್ಟು ಎತ್ತರದಿಂದ ಕಿರಣ್ ರಾಜ್ ಸ್ಕೈ ಡೈವ್ ಮಾಡಿದ್ದಾರೆ. ಅದೂ ತಮ್ಮ ಹೊಸ ಸಿನಿಮಾದ ಟೈಟಲ್ ಲಾಂಚ್ ಮಾಡುವ ಸಲುವಾಗಿ ಜಂಪ್ ಮಾಡಿದ್ದಾರೆ.
ಈಗ 'ಕನ್ನಡತಿ' ಮುಗಿದಿದೆ. ಕಿರಣ್ ರಾಜ್ ಮುಂದಿನ ಹಾದಿ ಏನು? ಅನ್ನೋ ಪ್ರಶ್ನೆಗೆ ನಟನಿಂದಲೇ ಉತ್ತರ ಸಿಕ್ಕಿದೆ. ಗುರುತೇಜ್ ಶೆಟ್ಟಿ ನಿರ್ದೇಶಿಸುತ್ತಿರುವ ಹೊಸ ಸಿನಿಮಾದಲ್ಲಿ ಕಿರಣ್ ರಾಜ್ ನಾಯಕನಾಗಿ ನಟಿಸುತ್ತಿದ್ದಾರೆ. ಇದೇ ಸಿನಿಮಾದ ಟೈಟಲ್ ಲಾಂಚ್‌ಗಾಗಿ ಕಿರಣ್ ರಾಜ್ ರಿಸ್ಕ್ ತೆಗೆದುಕೊಂಡಿದ್ದಾರೆ. ಟೈಟಲ್ ಬಿಡುಗಡೆಗಾಗಿ ಭಾರೀ ಸಾಹಸ ಮಾಡಿದ್ದು, ದುಬೈಗೆ ಹೋಗಿ ಅಲ್ಲಿ ವಿಮಾನದಿಂದ ಹದಿಮೂರು ಸಾವಿರ ಅಡಿಗಳಷ್ಟು ಮೇಲಿಂದ ಸ್ಕೈ ಡ್ರೈವ್ ಮಾಡಿ ಟೈಟಲ್ ಅನ್ನು ಅನಾವರಣ ಮಾಡಿದ್ದಾರೆ. ಅಂದ್ಹಾಗೆ ಅವರ ಮುಂದಿನ ಸಿನಿಮಾದ ಹೆಸರು 'Ronny'.

"ನನಗೆ ಸಿನಿಮಾ ಎಂದರೆ ಕನಸು. ಹಾಗಾಗಿ ಸಿನಿಮಾ ಆರಂಭ ಆದಲ್ಲಿಂದಲೂ ಏನಾದರೂ ಸ್ಪೆಷಲ್ ಇರಬೇಕು ಎಂದು ಬಯಸುತ್ತೇನೆ. ಸಾಮಾನ್ಯವಾಗಿ ಸೆಲೆಬ್ರೆಟಿಗಳ ಎದುರು ಸಮ್ಮುಖದಲ್ಲಿ ಶೀರ್ಷಿಕೆ ಅನಾವರಣ ಆಗುತ್ತೆ. ಆದರೆ, ನಾನು ಸ್ವಲ್ಪ ಭಿನ್ನವಾಗಿರಲಿ ಎಂದು ಯೋಚನೆ ಮಾಡಿ ಸ್ಕೈಡೈವ್ ಮಾಡಿ ಶೀರ್ಷಿಕೆಯನ್ನು ಅನಾವರಣ ಮಾಡಿದ್ದೇನೆ. ಅಂದ್ಹಾಗೆ ಈ ಸಿನಿಮಾದ ಹೆಸರು 'ರಾನಿ'." ಎಂದು ಹೇಳಿದ್ದಾರೆ. ಕಿರಣ್ ರಾಜ್ ಮಾಡಿದ ಈ ಸಾಹಸಕ್ಕೆ ಅವರ ಮನೆಯವರು ಹಾಗೂ ಸ್ನೇಹಿತರಿಂದಲೇ ವಿರೋಧ ವ್ಯಕ್ತವಾಗಿತ್ತು. ಆದರೂ, ದುಬೈನ ಪರಿಣಿತರಿಂದ ತರಬೇತಿ ಪಡೆದು ಈ ಸಾಹಸ ಮಾಡಿದ್ದಾರೆ. ಇನ್ನು'Ronny' ಕೂಡ ಆಕ್ಷನ್ ಸಿನಿಮಾ ಆಗಿರುವುದರಿಂದ ಮೈನವಿರೇಳಿಸುವ ಸಾಹಸ ದೃಶ್ಯಗಳಿರುತ್ತೆ.

ಈ ಹಿಂದೆ ಕಿರಣ್ ರಾಜ್ ಹಾಗೂ ಗುರುತೇಜ್ ಶೆಟ್ಟಿ ಕಾಂಬಿನೇಷನ್ 'ಬಡ್ಡೀಸ್' ಅನ್ನೋ ಸಿನಿಮಾ ಬಂದಿತ್ತು. ಈಗ ಅದೇ ಕಾಂಬಿನೇಷನ್ 'Ronny'ಗಾಗಿ ಒಂದಾಗಿದೆ. ಈ ಸಿನಿಮಾ ಪಕ್ಕಾ ಆಕ್ಷನ್ ಸಿನಿಮಾ ಅನ್ನೋದನ್ನು ಚಿತ್ರತಂಡ ಆರಂಭದಲ್ಲಿಯೇ ತೋರಿಸಿಕೊಟ್ಟಿದೆ. "ಡಾ||ರಾಜಕುಮಾರ್, ವಿಷ್ಣುವರ್ಧನ್ ಅವರ ಚಿತ್ರಗಳನ್ನು ನೋಡಿ ಬೆಳೆದವರು ನಾವು. ಮೂಲತಃ ಉದ್ಯಮಿಗಳು. ಚಿತ್ರ ಮಾಡುವ ಆಸೆಯಿತ್ತು. ಗುರುತೇಜ್ ಶೆಟ್ಟಿ ಹೇಳಿದ ಕಥೆ ಇಷ್ಟವಾಯಿತು. ನಿರ್ಮಾಣಕ್ಕೆ ಮುಂದಾಗಿದ್ದೇವೆ" ಎನ್ನುತ್ತಾರೆ ನಿರ್ಮಾಪಕರಾದ ಚಂದ್ರಕಾಂತ್ ಪೂಜಾರಿ ಹಾಗೂ ಉಮೇಶ್ ಹೆಗಡೆ.


Click it and Unblock the Notifications











