'ಕಾಂತಾರ' ತಂಡದಲ್ಲಿ ಸಾಲು ಸಾಲು ಸಾವು ಯಾಕೆ? ತಪ್ಪು ನಡೆದಿದ್ದು ಯಾರಿಂದ? ಸಂಶೋಧಕಿ ಲಕ್ಷ್ಮಿ ಪ್ರಸಾದ್ ಏನಂತಾರೆ?
ರಿಷಬ್ ಶೆಟ್ಟಿ 'ಕಾಂತಾರ' ಚಾಪ್ಟರ್ 1 ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಈ ಸಿನಿಮಾ ಶೂಟಿಂಗ್ ನಡೆಯುತ್ತಲೇ ಇದೆ. ಆದರೆ, ಆಗಾಗ ಈ ತಂಡದಿಂದ ಒಂದೊಂದು ಬ್ಯಾಡ್ ನ್ಯೂಸ್ ಬರುತ್ತಲೇ ಇವೆ. ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದ ಕಲಾವಿದರು, ತಂತ್ರಜ್ಞರು ಹೃದಯಾಘಾತದಿಂದ ಸಾವನ್ನಪ್ಪುತ್ತಿದ್ದಾರೆ. ಇದು ಒಂದ್ಕಡೆ ಆತಂಕಕ್ಕೆ ಎಡೆ ಮಾಡಿಕೊಟ್ಟಿದ್ದರೆ, ಇನ್ನೊಂದು ಕಡೆ ಚರ್ಚೆಯ ವಿಷಯವಾಗಿದೆ.
'ಕಾಂತಾರ' ಚಾಪ್ಷರ್ 1 ಅನ್ನು ಆರಂಭಿಸುವ ಮುನ್ನ ರಿಷಬ್ ಶೆಟ್ಟಿ ಹಾಗೂ ಅವರ ತಂಡ ಏನೋ ಎಡವಟ್ಟು ಮಾಡಿಕೊಂಡಿದ್ದಾರೆ? ಎಲ್ಲೋ ತಪ್ಪು ನಡೆದಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಮೊದಲು 'ಕಾಂತಾರ' ಮಾಡಿದಾಗ ಇಂತಹ ಯಾವುದೇ ಘಟನೆಗಳು ನಡೆದಿರಲಿಲ್ಲ. ಎಲ್ಲವೂ ಆರಾಮಾಗಿ ಶೂಟಿಂಗ್ ನಡೆದಿತ್ತು. ಆದರೆ, 'ಕಾಂತಾರ' ಚಾಪ್ಟರ್ 1 ನಡೆಯುವಾಗ ಸಾಲು ಸಾಲು ಸಾವುಗಳು ಯಾಕಾಗುತ್ತಿದೆ? ಎನ್ನುವುದು ಸದ್ಯಕ್ಕೆ ಹುಟ್ಟಿಕೊಂಡಿರುವ ಪ್ರಶ್ನೆ.

ರಿಷಬ್ ಶೆಟ್ಟಿಗೆ ದೈವ ಕೂಡ ಎಚ್ಚರಿಕೆಯನ್ನು ಕೊಟ್ಟಿತ್ತು. ಮುಂದಿನ ದಿನಗಳಲ್ಲಿ ಅಪಾಯವಿದೆ ಎಂದು ರಿಷಬ್ ಶೆಟ್ಟಿಗೆ ದೈವ ಹೇಳಿದ್ದು ಸುದ್ದಿಯಾಗಿತ್ತು. ಅಲ್ಲಿಂದ ಸಾಲು ಸಾಲು ಸಾವುಗಳು ಸಂಭವಿಸುತ್ತಲೇ ಇವೆ. ಎಲ್ಲರೂ ಹೃದಯಾಘಾತದಿಂದ ಸಂಭವಿಸಿರುವುದೇ ಹೆಚ್ಚು. ಈ ಬಗ್ಗೆ ದೈವಗಳ ಬಗ್ಗೆ ಸಂಶೋಧನೆ ಮಾಡಿರುವ ಡಾ. ಲಕ್ಷ್ಮಿ ಪ್ರಸಾದ್ ಫಿಲ್ಮಿಬೀಟ್‌ಗೆ ಸ್ಪಷ್ಟನೆಯನ್ನು ಕೊಟ್ಟಿದ್ದಾರೆ. ಸಾಲು ಸಾಲು ಸಾವಿಗೆ ಕಾರಣಗಳೇನು? ಎನ್ನುವುದನ್ನು ಹೇಳಿದ್ದಾರೆ.
"ಕಾಂತಾರ ಮಾಡುವಾಗ ಏನಾಗಿತ್ತು ಎನ್ನುವುದು ನಮಗೆ ಗೊತ್ತಿಲ್ಲ. ಸಣ್ಣ ಪುಟ್ಟದ್ದು ಏನಾದರೂ ತಪ್ಪುಗಳು ಆಗಿರಬಹುದು. ಆರಂಭದಲ್ಲಿ ಹೆಸರು ಕೂಡ ಆಕರ್ಷಕವಾಗಿರಲಿಲ್ಲ. ಅದು ಆ ಮಟ್ಟಿಗೆ ಹಿಟ್ ಆಗಬಹುದು ಅಂತ ಯಾರೂ ಆಲೋಚನೆ ಕೂಡ ಮಾಡಿರಲಿಲ್ಲ. ನಾನೂ ಮೊದಲು ನೋಡಿರಲಿಲ್ಲ. ಆ ಮೇಲೆ ವಾಟ್ಸಾಪ್‌ಗೆ ಮೆಸೇಜ್ ಬಂತು. ಶಿವ ಎಂದರೆ ಏನು? ಮಾಯ ಆಗುವುದು ಎಂದರೇನು? ಮಾಯ ಆದವರು ಎಲ್ಲಿಗೆ ಹೋಗುತ್ತಾರೆ ಇತ್ಯಾದಿ. ನನಗೆ 200 ರಿಂದ 300 ಜನ ಕೇಳಿದರು. ಆಗ ಆತಂಕ ಆಯ್ತು. ಆ ಮೇಲೆ ಬೆಂಗಳೂರಿನಲ್ಲಿ ಬಂತು ಸಿನಿಮಾ ನೋಡಿದೆ. ಆ ಮೇಲೆ ಮಾಯ ಆಗುವುದರ ಬಗ್ಗೆ ಉತ್ತರ ಕೊಡಲು ಶುರು ಮಾಡಿದೆ." ಎಂದು ದೈವ ಬಗ್ಗೆ ಜನರಲ್ಲಿ ಮೂಡಿದ ಆಸಕ್ತಿ ಬಗ್ಗೆ ಲಕ್ಷ್ಮಿ ಪ್ರಸಾದ್ ಹೀಗಂತಾರೆ.
ಕೆಲವು ದಿನಗಳ ಹಿಂದೆ ಕಟೀಲ ಬಳಿಕ ಹೋದಾಗ ದೈವ ಮುಂದೆ ಅಪಾಯ ಆಗುತ್ತದೆ ಎಂದು ಮುನ್ಸೂಚನೆ ಕೊಟ್ಟಿತ್ತು. ದೈವ ಕಟ್ಟಿದವರಿಗೆ ಏನೋ ಒಂದು ಸೂಚನೆ ಇತ್ತಾ? ಈ ಮೂಲಕ ಸಂದೇಶವನ್ನು ಕೊಡುತ್ತಿದೆಯಾ ಗೊತ್ತಿಲ್ಲ. ಕಾಂತಾರ ತಂಡದ ಸದಸ್ಯರಿಗೆ ಹೃದಯಾಘಾತಗಳು ಸಂಭವಿಸುತ್ತಿವೆ. ಹಾಗಂತ ಇದು ದೈವದಿಂದಲೇ ಎಂದು ಹೇಳುವುದಕ್ಕೆ ಅಸಾಧ್ಯ. ಅಷ್ಟಕ್ಕೂ ದೈವ ಯಾಕೆ ಕೋಪವನ್ನು ಮಾಡಿಕೊಳ್ಳಬೇಕು? ಕಾಂತಾರ ಮೊದಲ ಭಾಗದಲ್ಲಿ ದೈವಕ್ಕೆ ಅಪಚಾರ ಆಗುವಂತಹ ಒಂದೇ ಒಂದು ದೃಶ್ಯವಿರಲಿಲ್ಲ. ಅಲ್ಲಿ ದೈವಕ್ಕೆ ಗೌರವವನ್ನು ಕೊಟ್ಟಿದ್ದಾರೆ. ಈ ಬಗ್ಗೆ ಲಕ್ಷ್ಮಿ ಪ್ರಸಾದ್ ಅವರು ಆಕ್ಷೇಪ ವ್ಯಕ್ತಪಡಿಸಿಲ್ಲ.

"ಇನ್ನು ಕೆಲವರು ಸಿನಿಮಾದಲ್ಲಿ ತೋರಿಸಿದ್ದೇ ತಪ್ಪು ಎಂಬ ವಾದವಿದೆ. ಕಾಂತಾರ ಬರುವುದಕ್ಕೂ ಮುನ್ನ ದೈವವನ್ನು ತೋರಿಸಲಾಗಿದೆ. ಅದು ರಾಷ್ಟ್ರ ಪ್ರಶಸ್ತಿ ಪಡೆದ ಸಿನಿಮಾ ಗಗ್ಗರ. ಅದರಲ್ಲಿ ಶಿವಧ್ವಜ ದೈವವನ್ನು ಕಟ್ಟಿದ್ದನ್ನೇ ನೋಡಿದ್ದೇನೆ. ಹಾಗಾಗಿ ಒಂದು ಕಲಾಮಾಧ್ಯಮದಲ್ಲಿ ದೈವವನ್ನು ತೋರಿಸಿದರೆ ತಪ್ಪಾಗುವುದಿಲ್ಲ. ಅಲ್ಲಿ ಧಕ್ಕೆ ಆಗಿದ್ದರೆ ಆಗಲೇ ಕೋಪ ಬರುತ್ತಿತ್ತು." ಎನ್ನುತ್ತಾರೆ.
"ದೈವಕ್ಕೆ ಅಪಪ್ರಚಾರ ಆಗಿರುವ ಸಾಧ್ಯತೆಯಿದೆ. ಇಲ್ಲ ಹರಕೆ ಹೇಳಿಕೊಂಡಿದ್ದು ಬಾಕಿಯಾಗಿದ್ದರೂ ಸಾಧ್ಯತೆಯಿದೆ. ತಂಡದಿಂದಲೋ, ನಿರ್ದೇಶಕರಿಂದಲೋ ಗೊತ್ತಿಲ್ಲ. ಅವರೇ ಆತ್ಮಾವಲೋಕನ ಮಾಡಿ ಕಂಡುಕೊಳ್ಳಬೇಕಾಗುತ್ತೆ. ಇದು ಆಕಸ್ಮಿಕವೂ, ಕಾಕತಾಳೀಯವೂ ಇರಬಹುದು. ಆದರೆ ಒಂದು ಸಾರಿ, ಎರಡು ಸಾರಿ ಕಾಕತಾಳೀಯ ಎನ್ನಬಹುದು. ಆದರೆ, ನಾಲ್ಕೈದು ಸಲವೂ ಅದನ್ನು ಕಾಕತಾಳೀಯ ಎಂದು ಹೇಳುವುದಕ್ಕೆ ಆಗುವುದಿಲ್ಲ." ಎಂದಿದ್ದಾರೆ.


Click it and Unblock the Notifications











