'ಕಾಂತಾರ ಚಾಪ್ಟರ್ 1'ನಲ್ಲಿ ಕಾಸ್ಟ್ಯೂಮ್ ಡಿಸೈನರ್ ಆಗಿದ್ದ ರಿಷಬ್ ಪತ್ನಿ ಪ್ರಗತಿ ಶೆಟ್ಟಿ ವಿದ್ಯಾರ್ಹತೆ ಏನು?
ರಿಷಬ್ ಶೆಟ್ಟಿ ನಟನೆಯ 'ಕಾಂತಾರ ಚಾಪ್ಟರ್ 1' ವಿಶ್ವದಾದ್ಯಂತ ಅಬ್ಬರಿಸುತ್ತಿದೆ. ಬಾಕ್ಸಾಫೀಸ್‌ನಲ್ಲಿ ₹700 ಕೋಟಿ ಕಲೆ ಹಾಕುವತ್ತ ಮುನ್ನುಗ್ಗುತ್ತಿದೆ. ಕನ್ನಡ ಚಿತ್ರರಂಗದಿಂದ ಮತ್ತೊಂದು ಮೆಗಾ ಸಿನಿಮಾಗಳ ಪಟ್ಟಿ ಸೇರಿದೆ. ಸಿನಿಮಾ ಆಕ್ಟಿಂಗ್, ಮೇಕಿಂಗ್‌ನಿಂದ ಹಿಡಿದು ಕಾಸ್ಯೂಮ್‌ವರೆಗೂ ಪ್ರೇಕ್ಷಕರು ಮೆಚ್ಚಿ ಕೊಂಡಾಡುತ್ತಿದ್ದಾರೆ. ರಿಷಬ್ ಶೆಟ್ಟಿಯ ಸಕ್ಸಸ್‌ನ ಹಿಂದೆ ಪತ್ನಿ ಪ್ರಗತಿ ಶೆಟ್ಟಿಯ ಕೈ ಚಳಕ ಕೂಡ ಇದೆ.
ಪ್ರತಿಯೊಂದು ಸಿನಿಮಾಗೂ ಕಾಸ್ಟ್ಯೂಮ್ ಡಿಸೈನರ್ ಪಾತ್ರ ಬಹಳ ದೊಡ್ಡದು. ಸಿನಿಮಾದಲ್ಲಿ ನಟಿಸುವ ಕಲಾವಿದರು ಸುಂದರವಾಗಿ ಕಾಣುವುದಕ್ಕೆ, ಪಾತ್ರಕ್ಕೆ ತಕ್ಕಂತೆ ಸಹಜವಾಗಿ ತೆರೆಮೇಲೆ ಬರುವುದಕ್ಕೆ ಪ್ರಮುಖ ಕಾರಣವೇ ಕಾಸ್ಟ್ಯೂಮ್ ಡಿಸೈನರ್. ಅದರಲ್ಲೂ 'ಕಾಂತಾರ ಚಾಪ್ಟರ್ 1' ನಂತಹ ನೂರಾರು ಕಲಾವಿದರು ಇರುವ ಸಿನಿಮಾಗೆ ವಸ್ತ್ರ ವಿನ್ಯಾಸ ಮಾಡುವುದೇ ದೊಡ್ಡ ಸವಾಲು. ಆ ಚಾಲೆಂಜ್ ಅನ್ನು ಸ್ವೀಕರಿಸಿ, ಗೆದ್ದಿದ್ದು ರಿಷಬ್ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ.

ಪ್ರಗತಿ ಶೆಟ್ಟಿ ಸಿನಿಮಾಗಳಿಗೆ ವಸ್ತ್ರ ವಿನ್ಯಾಸ ಮಾಡಿದ್ದು ಇದೇ ಮೊದಲೇನಲ್ಲ. ಈ ಹಿಂದೆ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿದ ಕೆಲವು ಸಿನಿಮಾಗಳಿಗೆ ಪ್ರಗತಿ ವಸ್ತ್ರ ವಿನ್ಯಾಸ ಮಾಡಿದ್ದಾರೆ. 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು', 'ಹರಿಕಥೆ ಅಲ್ಲ ಗಿರಿಕಥೆ', 'ಬೆಲ್ ಬಾಟಮ್' ಹಾಗೂ 'ಕಾಂತಾರ'(2022) ಸಿನಿಮಾಗಳಿಗೆ ಇವರದ್ದೇ ವಸ್ತ್ರ ವಿನ್ಯಾಸ. ಹಾಗಿದ್ದರೆ, ಪ್ರಗತಿ ವಿದ್ಯಾರ್ಹತೆ ಏನು? ಸಿನಿಮಾಗೆ ಬರುವುದಕ್ಕೂ ಮುನ್ನ ಎಲ್ಲೆಲ್ಲಿ ಕೆಲಸ ಮಾಡಿದ್ದರು? ತಿಳಿಯುವುದಕ್ಕೆ ಮುಂದೆ ಓದಿ?
ಪ್ರಗತಿ ಶೆಟ್ಟಿ ಮೂಲತ: ಎಲ್ಲಿಯವರು?
ರಿಷಬ್ ಶೆಟ್ಟಿ ಪತ್ನಿ ಪ್ರಗತಿ ಮೂಲತ: ಉಡುಪಿ ಸಮೀಪವಿರುವ ಮಂದಾರ್ತಿಯವರು. ಆದರೆ, ಶಿಕ್ಷಣ ಎಲ್ಲಾ ಮುಗಿಸಿದ್ದು, ಶಿವಮೊಗ್ಗದಲ್ಲಿ. ಓದಿನಲ್ಲಿ ಚುರುಕಿದ್ದ ಪ್ರಗತಿ ಉನ್ನತ ಶಿಕ್ಷಣವನ್ನು ಶಿವಮೊಗ್ಗದಲ್ಲಿಯೇ ಪಡೆದುಕೊಂಡರು. ಶಿಕ್ಷಣ ಮುಗಿದ ಬಳಿಕ ಪ್ರಗತಿ ಶೆಟ್ಟಿ ಬೆಂಗಳೂರಿಗೆ ಶಿಫ್ಟ್ ಆಗಿದ್ದರು. ಬೆಂಗಳೂರಲ್ಲಿ ಅವರ ಬದುಕು ಹೀಗೆಲ್ಲ ಬದಲಾಗುತ್ತೆ ಅನ್ನೋದು ಅವರು ಊಹಿಸಿರಲೇ ಇಲ್ಲ ಅನಿಸುತ್ತೆ. ಇಂದು ಕನ್ನಡ ಚಿತ್ರರಂಗದಲ್ಲಿ ಕಾಸ್ಯೂಮ್ ಡಿಸೈನರ್ ಆಗಿ ಗುರುತಿಸಿಕೊಂಡಿದ್ದಾರೆ.
ಪ್ರಗತಿ ಶೆಟ್ಟಿ ಶಿಕ್ಷಣವೇನು?
ಪ್ರಗತಿ ಶೆಟ್ಟಿ ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಪ್ರಗತಿ ಶೆಟ್ಟಿ ಬಿಎಸ್‌ಸಿ ಮುಗಿಸಿದ್ದರು. ಈಗಾಗಲೇ ನೀಡಿರುವ ಸಂದರ್ಶನದಲ್ಲಿ ಅವರೇ ಹೇಳಿಕೊಂಡಂತೆ ಅವರು ಬಿಎಸ್‌ಸಿ ಮಾಡುವ ವೇಳೆಯೇ ಅವರಿಗೆ ಕ್ಯಾಂಪಸ್ ಇಂಟರ್‌ವ್ಯೂನಲ್ಲಿ ಸೆಲೆಕ್ಷನ್ ಆಗಿತ್ತು. ಮೊದಲು ಪ್ರತಿಷ್ಠಿತ ಸಾಪ್ಟ್‌ವೇರ್ ಕಂಪನಿ ವಿಪ್ರೋದಲ್ಲಿ ಕೆಲಸ ಮಾಡಿದರು. ಇಲ್ಲಿಂದ ಇನ್ನೊಂದು ಸಾಪ್ಟ್‌ವೇರ್ ಕಂಪನಿ ಐಬಿಎಂಗೆ ಸೇರಿಕೊಂಡರು. ಅಲ್ಲಿ ಸುಮಾರು ಎರಡೂವರೆ ವರ್ಷಗಳ ಕಾಲ ಕೆಲಸ ಮಾಡಿದ್ದಾರೆ.

ರಿಷಬ್ ಶೆಟ್ಟಿ ಪರಿಚಯ
ಪ್ರಗತಿ ಶೆಟ್ಟಿಗೆ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವಾಗ ಒಮ್ಮೆ ರಕ್ಷಿತ್ ಶೆಟ್ಟಿಯ 'ರಿಕ್ಕಿ' ಸಿನಿಮಾ ನೋಡುವುದಕ್ಕೆ ಬಂದಿದ್ದರು. ರಕ್ಷಿತ್ ಶೆಟ್ಟಿ ನಟಿಸಿ, ನಿರ್ದೇಶಿಸಿದ್ದ 'ಉಳಿದವರಿ ಕಂಡಂತೆ' ಸಿನಿಮಾವನ್ನು ನೋಡಿ ಫ್ಯಾನ್ಸ್ ಆಗಿದ್ದ ಪ್ರಗತಿ 'ರಿಕ್ಕಿ' ನೋಡುವುದಕ್ಕೆ ಬಂದಿದ್ದರು. ಆ ಸಿನಿಮಾವನ್ನು ನಿರ್ದೇಶಿಸಿದ್ದ ರಿಷಬ್ ಶೆಟ್ಟಿಯನ್ನು ಥಿಯೇಟರ್‌ನಲ್ಲಿ ಭೇಟಿಯಾಗಿದ್ದರು. ಅಲ್ಲಿಂದ ಇಬ್ಬರ ಮಧ್ಯೆ ಪರಿಚಯ ಬೆಳೆದು, ಅದು ಪ್ರೀತಿಗೆ ತಿರುಗಿ, ಮದುವೆ ಆಗಿ ಉತ್ತಮ ರೀತಿ ಸಂಸಾರ ನಡೆಸಿಕೊಂಡು ಹೋಗುತ್ತಿದ್ದಾರೆ.
ಕಾಸ್ಯೂಮ್ ಡಿಸೈನರ್ ಆಗಿದ್ದೇಗೆ?
ರಿಷಬ್ ಶೆಟ್ಟಿಯನ್ನು ವಿವಾಹವಾದ ಬಳಿಕ ಪ್ರಗತಿ ವಸ್ತ್ರ ವಿನ್ಯಾಸ ಮಾಡುವ ಕಡೆ ಗಮನ ಹರಿಸಿದ್ದರು. ಮೊದಲಿನಿಂದಲೂ ಕಾಸ್ಟ್ಯೂಮ್ ಡಿಸೈನ್ ಮಾಡುವ ಕಡೆ ಆಸಕ್ತಿ ಇತ್ತು. ಹೀಗಾಗಿ ರಿಷಬ್ ಶೆಟ್ಟಿ ನಿರ್ದೇಶಿಸಿದ ಸಿನಿಮಾಗಳಿಗೆ ವಸ್ತ್ರ ವಿನ್ಯಾಸ ಮಾಡುವತ್ತ ಗಮನ ಹರಿಸಿದರು. ಈಗ 'ಕಾಂತಾರ ಚಾಪ್ಟರ್ 1'ದಂತಹ ಬಿಗ್ ಬಜೆಟ್ ಸಿನಿಮಾಗೆ ಪ್ರಗತಿ ಶೆಟ್ಟಿ ಕಾಸ್ಟ್ಯೂಮ್ ಡಿಸೈನರ್ ಆಗಿ ಪ್ರೇಕ್ಷಕರ ಮನ ಗೆದ್ದಿದ್ದಾರೆ.


Click it and Unblock the Notifications











