'ಕಾಂತಾರ ಚಾಪ್ಟರ್ 1'ನ ಕುಲಶೇಖರ'ಲೂಸಿಯಾ'ದಲ್ಲಿ ನಟಿಸಬೇಕಿತ್ತು; ಪ್ರಾಜೆಕ್ಟ್ ಕೈ ಬಿಟ್ಟಿದ್ದೇಕೆ?
ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿದ 'ಕಾಂತಾರ ಚಾಪ್ಟರ್ 1' ಬಾಕ್ಸಾಫೀಸ್‌ನಲ್ಲಿ ಹೊಸ ಹೊಸ ದಾಖಲೆಗಳನ್ನು ಬರೆದು ಮುನ್ನುಗ್ಗುತ್ತಿದೆ. ಕನ್ನಡ ಸೇರಿದಂತೆ ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಅಬ್ಬರಿಸುತ್ತಿದೆ. ಈ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಹೈಲೈಟ್ ಆದಂತೆ, ಖಳನಾಯಕನಾಗಿ ಕಾಣಿಸಿಕೊಂಡಿರುವ ಗುಲ್ಶನ್ ದೇವಯ್ಯ ಅಭಿನಯವನ್ನು ಮೆಚ್ಚಿಕೊಂಡಿದ್ದಾರೆ. ಕುಲಶೇಖರ ಪಾತ್ರದ ಮೂಲಕ ಪ್ರೇಕ್ಷಕರನ್ನು ತನ್ನತ್ತ ಸೆಳೆಯುತ್ತಿದ್ದಾರೆ.
ಈಗಾಗಲೇ ಬಾಲಿವುಡ್‌ನಲ್ಲಿ ಒಳ್ಳೊಳ್ಳೆ ಪಾತ್ರಗಳಲ್ಲಿ ನಟಿಸಿರುವ ಗುಲ್ಶನ್ ದೇವಯ್ಯ ಕರ್ನಾಟಕದವರು. ಅದರಲ್ಲೂ ಕೊಡಗು ಮೂಲದವರು. ಬಾಲಿವುಡ್‌ನಲ್ಲಿ ಬದುಕು ಕಟ್ಟಿಕೊಂಡಿರುವ ಗುಲ್ಶನ್ ದೇವಯ್ಯ 'ಕಾಂತಾರ ಚಾಪ್ಟರ್ 1' ಸಿನಿಮಾದ ಮೂಲಕ ಇನ್ನಷ್ಟು ಕನ್ನಡಿಗರಿಗೆ ಹತ್ತಿರವಾಗಿದ್ದಾರೆ. ಕನ್ನಡಿಗರು ಈಗ ಗುಲ್ಶನ್ ದೇವಯ್ಯರನ್ನು ಕುಲಶೇಖರನಾಗಿ ಗುರುತಿಸುವುದಕ್ಕೆ ಶುರುವಿಟ್ಟುಕೊಂಡಿದ್ದಾರೆ.

'ಕಾಂತಾರ ಚಾಪ್ಟರ್ 1' ಗುಲ್ಶನ್ ದೇವಯ್ಯ ನಟಿಸಿರುವ ಮೊದಲ ಕನ್ನಡ ಸಿನಿಮಾ. ಬಾಲಿವುಡ್ ಸಿನಿಮಾ ಹಾಗೂ ವೆಬ್ ಸೀರಿಸ್‌ನಲ್ಲಿ ಮಿಂಚುತ್ತಿದ್ದರೂ, ಕನ್ನಡಿಗನಾಗಿ ಕನ್ನಡ ಸಿನಿಮಾ ಮಾಡುವುದಕ್ಕೆ ಯಾಕಿಷ್ಟು ವಿಳಂಬ ಆಯ್ತು? ಕನ್ನಡ ಸಿನಿಮಾದಲ್ಲಿ ನಟಿಸುವುದಕ್ಕೆ ಯಾಕಿಷ್ಟು ಸಮಯ ತೆಗೆದುಕೊಂಡರು? ಎನ್ನುವ ಪ್ರಶ್ನೆಗಳಿಗೆ ವಿಜಯವಾಣಿಗೆ ನೀಡಿದ ಸಂದರ್ಶನದಲ್ಲಿ ಉತ್ತರ ಕೊಟ್ಟಿದ್ದಾರೆ.
ಗುಲ್ಶನ್ ದೇವಯ್ಯ ಸಿನಿಮಾರಂಗಕ್ಕೆ ಎಂಟ್ರಿ ಕೊಡುವುದಕ್ಕೂ ಮುನ್ನ ನಾಟಕಗಳಲ್ಲಿ ಸಕ್ರಿಯರಾಗಿದ್ದರು. ನಾಟಕಗಳು ನಟನೆಯನ್ನು ಕಲಿಸಿತ್ತು. ಇಂಗ್ಲಿಷ್ ನಾಟಕಗಳಲ್ಲಿ ನಟಿಸಿದ್ದರಿಂದ ಬಾಲಿವುಡ್ ಸಿನಿಮಾಗಳಲ್ಲಿ ನಟಿಸುವುದಕ್ಕೆ ಮುಂಬೈಗೆ ಹೋದರು. ಅಲ್ಲಿಂದ ಬಾಲಿವುಡ್‌ನಲ್ಲಿ ನೆಲೆ ಕಂಡುಕೊಂಡಿದ್ದಾರೆ. ಒಮ್ಮೆ ಬಾಲಿವುಡ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವುದಕ್ಕೆ ಶುರು ಮಾಡಿದ ಬಳಿಕ ಕನ್ನಡದಲ್ಲಿ ನಟಿಸುವುದಕ್ಕೆ ಆಹ್ವಾನ ಬಂದಿತ್ತು. ಆದರೆ, ಗುಲ್ಶನ್ ದೇವಯ್ಯ ಆ ಸಿನಿಮಾಗಳನ್ನು ಬೇರೆ ಬೇರೆ ಕಾರಣಕ್ಕೆ ಕೈ ಬಿಟ್ಟಿದ್ದರು. ಅದರಲ್ಲೊಂದು 'ಲೂಸಿಯಾ'.
ಪವನ್ ಕುಮಾರ್ ಕೂಡ ಇಂಗ್ಲಿಷ್ ಡ್ರಾಮಗಳಲ್ಲಿ ನಟಿಸುತ್ತಿದ್ದರು. ಅಲ್ಲಿ ಗುಲ್ಶನ್ ಹಾಗೂ ಪವನ್ ಇಬ್ಬರ ಪರಿಚಯ ಆಗಿತ್ತು. ಇಬ್ಬರೂ ಬೇರೆ ಬೇರೆ ಹಾದಿಯಲ್ಲಿ ಸಾಗಿದ್ದರು. ಗುಲ್ಶನ್ ಆಗ ತಾನೇ ಬಾಲಿವುಡ್ ಸಿನಿಮಾಗಳಲ್ಲಿ ನಟಿಸುವುದಕ್ಕೆ ಶುರು ಮಾಡಿದ್ದರು. ಆಗ ಪವನ್ 'ಲೂಸಿಯಾ' ಸಿನಿಮಾ ಮಾಡುತ್ತಿದ್ದರು. ಆಗ ಗುಲ್ಶನ್ ದೇವಯ್ಯಗೆ ಆಫರ್ ಕೊಟ್ಟಿದ್ದರು. ಆದರೆ, ಪ್ರಾಜೆಕ್ಟ್ ಅನ್ನು ಕೈ ಬಿಟ್ಟಿದ್ದರು. ಅದಕ್ಕೆ ಏನು ಕಾರಣ ಅನ್ನೋದನ್ನು ಈ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ.

'ಲೂಸಿಯಾ' ಸಿನಿಮಾಗೆ ಆಫರ್ ಬಂದಾಗ ಗುಲ್ಶನ್ ದೇವಯ್ಯ ಬಾಲಿವುಡ್ ಸಿನಿಮಾಗಳಲ್ಲಿ ನಟಿಸುವುದಕ್ಕೆ ಶುರು ಮಾಡಿದ್ದರಂತೆ. ಇತ್ತ ಪವನ್ ಕುಮಾರ್ ಒಂದು ವರ್ಷ ಕಾಲ್‌ಶೀಟ್ ಕೇಳಿದ್ದರು. ಆದರೆ, ಒಂದು ವರ್ಷ ಬಾಲಿವುಡ್‌ನಿಂದ ದೂರ ಇರುವುದಕ್ಕೆ ಗುಲ್ಶನ್ ಒಪ್ಪಲಿಲ್ಲ. ಹೀಗಾಗಿ ಪವನ್ ಕುಮಾರ್‌ಗೆ 'ಲೂಸಿಯಾ' ಸಿನಿಮಾದಲ್ಲಿ ನಟಿಸೋದಕ್ಕೆ ಸಾಧ್ಯವಿಲ್ಲವೆಂದು ಹೇಳಿದ್ದರು. ಹೀಗಾಗಿ 'ಕಾಂತಾರ ಚಾಪ್ಟರ್ 1' ಸಿನಿಮಾಗೂ ಮುನ್ನ 'ಲೂಸಿಯಾ'ದಲ್ಲಿ ನಟಿಸಬೇಕಿತ್ತು.
ಹಾಗೇ ಕನ್ನಡದ ಸೀರಿಯಲ್ ಒಂದರಲ್ಲಿ ನಟಿಸಿದ್ದರು. ಅದನ್ನೂ ರಿವೀಲ್ ಮಾಡಿದ್ದಾರೆ. ಸಿಹಿ ಕಹಿ ಚಂದ್ರು ಅವರ 'ಯಾಕಿಂಗ್ ಆಡ್ತಿರೋ' ಸೀರಿಯಲ್‌ನಲ್ಲಿ ಮೂರು ದಿನಗಳು ಕೆಲಸ ಮಾಡಿದ್ದರು. ಅದರಲ್ಲೂ ಹಿಂದಿ ಮಾತಾಡುವ ವ್ಯಕ್ತಿಯ ಪಾತ್ರವನ್ನು ಸಿಹಿ ಕಹಿ ಚಂದ್ರು ಹುಡುಕುತ್ತಿದ್ದರು. ಅದರಲ್ಲೂ ಗುಲ್ಡನ್ ಹಿಂದಿಯಲ್ಲಿಯೇ ಮಾತಾಡಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ಆ ಸೀರಿಯಲ್‌ನಲ್ಲಿ ನಟಿಸಿದ ₹500 ಸಂಭಾವನೆ ಸಿಕ್ಕಿತ್ತು. ಅದರನ್ನು ಗಾಡಿಗೆ ಪೆಟ್ರೋಲ್ ಹಾಕುವುದಕ್ಕೆ ಬಳಸಿದ್ದೆ ಎಂದು ಹೇಳಿಕೊಂಡಿದ್ದಾರೆ.


Click it and Unblock the Notifications











