RCB- Hombale Deal: RCBಯನ್ನು ಖರೀದಿ ಮಾಡಿದೆಯೇ ಹೊಂಬಾಳೆ ಫಿಲ್ಮ್ಸ್? ಕನ್ನಡಿಗರ ಪಾಲಾಗುತ್ತಾ ಬೆಂಗಳೂರು ತಂಡ?
ಇನ್ನೇನು 2026ರ ಐಪಿಎಲ್ ಪಂದ್ಯಗಳು ಆರಂಭ ಆಗುತ್ತಿವೆ. ಅದಕ್ಕೂ ಮುನ್ನ ಆರ್‌ಸಿಬಿ ತಂಡವನ್ನು ಖರೀದಿ ಮಾಡುತ್ತಿರುವವರ ಯಾರೆಂಬ ಚರ್ಚೆ ಶುರುವಾಗಿದೆ. 2025 ಐಪಿಎಲ್ ಟೂರ್ನಿಯನ್ನು ಆರ್‌ಸಿಬಿ ಗೆಲ್ಲುತ್ತಿದ್ದಂತೆ ಮಾಲೀಕರಾದ ಯುನೈಟೆಡ್ ಸ್ಪಿರಿಟ್ಸ್ ಡಿಯಾಜಿಯೊ ತಂಡವನ್ನು ಮಾರಾಟಕ್ಕೆ ಇಟ್ಟಿದ್ದಾರೆ. ಹೀಗಾಗಿ ಐಪಿಎಲ್‌ನ ಅತ್ಯಂತ ಜನಪ್ರಿಯ ತಂಡವನ್ನು ಯಾರು ಖರೀದಿ ಮಾಡುತ್ತಾರೆಂಬ ಕುತೂಹಲ ಕ್ರೀಡಾ ಪ್ರೇಮಿಗಳನ್ನು ಕಾಡುತ್ತಿದೆ.
ಸೋಶಿಯಲ್ ಮೀಡಿಯಾದಲ್ಲಿ ಆರ್‌ಸಿಬಿ ಅಭಿಮಾನಿಗಳು ತಮ್ಮ ನೆಚ್ಚಿನ ತಂಡವನ್ನು ಯಾರು ಖರೀದಿ ಮಾಡಬಹುದೆಂದು ಲೆಕ್ಕಾಚಾರ ಹಾಕುತ್ತಾ ಕುಳಿತಿದ್ದಾರೆ. ಇದೇ ಸಂದರ್ಭದಲ್ಲಿ ಆರ್‌ಸಿಬಿಯನ್ನು ಖರೀದಿ ಮಾಡಲು ಆಸಕ್ತಿ ತೋರಿರುವ ಕೆಲವು ಹೆಸರುಗಳು ಮುನ್ನೆಲೆಗೆ ಬಂದಿವೆ. ಅದರಲ್ಲೊಂದು 'ಕಾಂತಾರ ಚಾಪ್ಟರ್ 1' ಸಿನಿಮಾ ನಿರ್ಮಿಸಿರುವ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್.

ಆರ್‌ಸಿಬಿ ತಂಡವನ್ನು ಹೊಂಬಾಳೆ ಫಿಲ್ಮ್ಸ್ ಖರೀದಿ ಮಾಡುತ್ತಿದೆಯೆಂಬ ಸುದ್ದಿ ಕೆಲವು ದಿನಗಳಿಂದ ಓಡಾಡುತ್ತಲೇ ಇದೆ. ನಿಜಕ್ಕೂ ಆರ್‌ಸಿಬಿ ತಂಡವನ್ನು ಖರೀದಿ ಮಾಡುವುದಕ್ಕೆ ಹೊಂಬಾಳೆ ಫಿಲ್ಮ್ಸ್ ಮುಂದಾಗಿದೆಯೇ? ಇಲ್ಲವೇ ಇದು ಕೇವಲ ಗಾಳಿ ಸುದ್ದಿ ಅಷ್ಟೇನಾ? ಈಗಾಗಲೇ ಕುತೂಹಲ ಕೆರಳಿಸಿರುವ ಆರ್‌ಸಿಬಿ ತಂಡ ಖರೀದಿ ವಿಚಾರದ ಬಗ್ಗೆ ಇನ್ನೊಂದು ಇಂಟ್ರೆಸ್ಟಿಂಗ್ ಸುದ್ದಿಯೊಂದು ಓಡಾಡುತ್ತಿದೆ. ಅದೇನು ಅಂತ ತಿಳಿಯುವುದಕ್ಕೆ ಮುಂದೆ ಓದಿ.
ಹೊಂಬಾಳೆ ಆರ್‌ಸಿಬಿ ಡಿಜಿಟಲ್ ಪಾರ್ಟ್ನರ್
ಸೋಶಿಯಲ್ ಮೀಡಿಯಾದಲ್ಲಿ ಆರ್‌ಸಿಬಿ ತಂಡವನ್ನು ಹೊಂಬಾಳೆ ಫಿಲ್ಮ್ಸ್ ಖರೀದಿ ಮಾಡುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ, ಇದೂವರೆಗೂ ಹೊಂಬಾಳೆ ಫಿಲ್ಮ್ಸ್ ಅಧಿಕೃತವಾಗಿ ಎಲ್ಲೂ ಹೇಳಿಕೊಂಡಿಲ್ಲ. ಹೊಂಬಾಳೆ ಫಿಲ್ಮ್ಸ್ ಹಾಗೂ ಆರ್‌ಸಿಬಿ ತಂಡದ ನಡುವೆ ಒಂದು ಒಡಂಬಡಿಕೆಯಿದೆ. ಆರ್‌ಸಿಬಿ ಹಾಗೂ ಹೊಂಬಾಳೆ ಫಿಲ್ಮ್ಸ್ ಇಬ್ಬರೂ ಡಿಜಿಟಲ್ ಪಾರ್ಟ್ನರ್ಸ್. ಆರ್‌ಸಿಬಿ ಪ್ರೊಡಕ್ಟ್‌ಗಳನ್ನು ಹೊಂಬಾಳೆ ಫಿಲ್ಮ್ಸ್, ಹಾಗೇ ಹೊಂಬಾಳೆ ಫಿಲ್ಮ್ಸ್ ಸಿನಿಮಾವನ್ನು ಆರ್‌ಸಿಬಿ ಪ್ರಮೋಟ್ ಮಾಡುತ್ತೆ. ಕಳೆದ ಕೆಲವು ವರ್ಷಗಳಿಂದ ಒಡಂಬಡಿಕೆ ಮುಂದುವರೆದುಕೊಂಡು ಬಂದಿದೆ.
ಕನ್ನಡಾಭಿಮಾನಿಗಳ ಆಸೆ
ಆರ್‌ಸಿಬಿ ತಂಡ ಯುನೈಟೆಡ್ ಸ್ಪಿರಿಟ್ಸ್ ಡಿಯಾಜಿಯೊ ಮಾಲಿಕತ್ವದಲ್ಲಿದೆ. ಈ ಸಂಸ್ಥೆ ಆರ್‌ಸಿಬಿ ತಂಡವನ್ನು ಸುಮಾರು 17 ಸಾವಿರ ಕೋಟಿ ಮೊತ್ತಕ್ಕೆ ಮಾರಾಟಕ್ಕೆ ಇಟ್ಟಿದೆ. ಈ ತಂಡವನ್ನು ಖರೀದಿ ಮಾಡುವುದಕ್ಕೆ ಮುಂದೆ ಬಂದಿರುವ ಒಂದಿಷ್ಟು ಉದ್ಯಮಿಗಳ ಹೆಸರು ಕೂಡ ಹರಿದಾಡುತ್ತಿದೆ. ಅದರಲ್ಲಿ ಕನ್ನಡಿಗರ ಹೆಸರುಗಳು ಕೂಡ ಇವೆ. ಜೆರೋದಾ ಸಂಸ್ಥೆಯ ನಿಖಿಲ್ ಕಾಮತ್, ಮಣಿಪಾಲ್ ಎಜೆಕೇಷನ್ ಗ್ರೂಪ್‌ನ ರಂಜನ್ ಪೈ ಹಾಗೂ ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯ ಹೆಸರು ಕೇಳಿ ಬರುತ್ತಿದೆ. ಇವರಲ್ಲಿ ಯಾರಾದರೂ ತಂಡವನ್ನು ಖರೀದಿ ಮಾಡಲಿ ಎಂಬುವುದು ಕನ್ನಡಿಗರ ಆಸೆ.

ಹೊಂಬಾಳೆ ಖರೀದಿ ಮಾಡುತ್ತಾ?
ಹೊಂಬಾಳೆ ಫಿಲ್ಮ್ಸ್ ಬೇರೆ ಸಂಸ್ಥೆಗಳ ಜೊತೆ ಸೇರಿ ಜಂಟಿಯಾಗಿ ಆರ್‌ಸಿಬಿ ತಂಡವನ್ನು ಖರೀದಿ ಮಾಡಬಹುದೆಂಬ ಸುದ್ದಿ ಹರಿದಾಡಿತ್ತು. ಆದರೆ, ಆರ್‌ಸಿಬಿ ತಂಡವನ್ನು ಖರೀದಿ ಮಾಡುವುದಕ್ಕೆ ಹೊಂಬಾಳೆ ನಿಜಕ್ಕೂ ಆಸಕ್ತಿ ಹೊಂದಿದೆಯೇ? ಇಲ್ಲವೇ? ಎಂಬುವ ಬಗ್ಗೆ ನಿಖರ ಮಾಹಿತಿಯಿಲ್ಲ. ಕೆಲವು ಮೂಲಗಳ ಪ್ರಕಾರ, ಹೊಂಬಾಳೆ ಫಿಲ್ಮ್ಸ್ ಆರ್‌ಸಿಬಿ ಖರೀದಿ ಬಗ್ಗೆ ಆಲೋಚನೆ ಮಾಡಿಲ್ಲ. ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿರುವ ಸುದ್ದಿ ಕೇವಲ ಕಾಲ್ಪನಿಕ ಅಷ್ಟೇ ಎಂದು ಮೂಲಗಳು ಹೇಳುತ್ತಿವೆ. ಈಗಾಗಲೇ ಹರಿದಾಡುತ್ತಿರುವ ಸುದ್ದಿಯ ಬಗ್ಗೆ ಹೊಂಬಾಳೆ ಫಿಲ್ಮ್ಸ್ ಅಧಿಕೃತವಾಗಿ ಯಾವುದೇ ರೀತಿಯ ಹೇಳಿಕೆಯನ್ನು ನೀಡಿಲ್ಲ.
ಆರ್‌ಸಿಬಿ ಮೇಲೆ ಯಾರ ಕಣ್ಣಿದೆ?
ಈಗಾಗಲೇ ವರದಿಗಳಾಗಿರುವ ಪ್ರಕಾರ, ಆರ್‌ಸಿಬಿ ತಂಡವನ್ನು ಖರೀದಿ ಮಾಡುವ ಸಂಭಾವನೀಯರ ಪಟ್ಟಿಯಲ್ಲಿ ಆದಾರ್ ಪೂನಾವಾಲ, ನಿಖಿಲ್ ಕಾಮತ್, ರಂಜನ್ ಪೈ ಹೆಸರುಗಳು ಓಡಾಡುತ್ತಿವೆ. ಈ ಮೂವರು ಸೇರಿಕೊಂಡು ಜಂಟಿಯಾಗಿ ಆರ್‌ಸಿಬಿ ತಂಡವನ್ನು ಖರೀದಿ ಮಾಡಬಹುದೆಂದು ವರದಿಗಳಾಗಿವೆ. ಆದರೆ, ಅಧಿಕೃತವಾಗಿ ಈ ಮೂವರು ಉದ್ಯಮಿಗಳು ಕೂಡ ಎಲ್ಲೂ ಹೇಳಿಕೆಗಳನ್ನು ಕೊಟ್ಟಿಲ್ಲ. ಒಂದು ವೇಳೆ ಮನಸ್ಸು ಬದಲಿಸಿ ಆರ್‌ಸಿಬಿ ತಂಡವನ್ನು ಹೊಂಬಾಳೆ ಫಿಲ್ಮ್ಸ್ ಖರೀದಿಸಿದರೆ, ಕನ್ನಡಗರ ತಂಡವಾಗುವುದರಲ್ಲಿ ಎರಡು ಮಾತಿಲ್ಲ.


Click it and Unblock the Notifications











