ಅಯೋಧ್ಯೆಯಲ್ಲಿ ರಿಷಬ್ ಶೆಟ್ಟಿ ದಂಪತಿ; ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಗೂ ಮುನ್ನ ಹನುಮನ ದರ್ಶನ!
ನಾಳೆ (ಜನವರಿ 22) ಅಯೋಧ್ಯೆ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗುತ್ತಿದೆ. ಕೋಟ್ಯಾಂತರ ಜನರ ಕನಸು ಶ್ರೀರಾಮ ಮಂದಿರ ನಿರ್ಮಾಣ ನಾಳೆ ಸಾಕಾರಗೊಳ್ಳಲಿದೆ. ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ನಡೆಯಲಿದ್ದು, ಈಗಾಗಲೇ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ಬಾಲರಾಮನ ಪ್ರಾಣ ಪ್ರತಿಷ್ಠಾಪನೆಗೆ ಶ್ರೀ ರಾಮತೀರ್ಥ ಟ್ರಸ್ಟ್ ಈಗಾಗಲೇ ದೇಶದ ಪ್ರಮುಖ ಗಣ್ಯರಿಗೆ ಆಹ್ವಾನವನ್ನು ನೀಡಿತ್ತು. ಸಿನಿಮಾ, ಉದ್ಯಮ, ರಾಜಕೀಯ ಹಾಗೂ ಕ್ರೀಡಾ ಕ್ಷೇತ್ರದಿಂದ ಆಯ್ದ ಸೆಲೆಬ್ರೆಟಿಗಳಿಗೆ ಆಮಂತ್ರಣ ನೀಡಲಾಗಿದೆ. ಆ ಆಹ್ವಾನದ ಮೇರೆಗೆ ಕನ್ನಡದ ನಟ ರಿಷಬ್ ಶೆಟ್ಟಿ ಹಾಗೂ ಪತ್ನಿ ಪ್ರಗತಿ ಶೆಟ್ಟಿ ಆಯೋಧ್ಯೆ ತಲುಪಿದ್ದಾರೆ.

ಈಗಾಗಲೇ ರಿಷಬ್ ಶೆಟ್ಟಿ ದಂಪತಿ ಅಯೋಧ್ಯೆ ತಲುಪಿದ್ದು, ಶ್ರೀರಾಮ ಮಂದಿರ ಉದ್ಘಾಟನೆಗೂ ಮುನ್ನ ಹನುಮನ ದರ್ಶನ ಪಡೆದಿದ್ದಾರೆ. ಈ ವಿಷಯನ್ನು ರಿಷಬ್ ಶೆಟ್ಟಿ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಫೋಟೊ ಸಮೇತ ಶೇರ್ ಮಾಡಿಕೊಂಡಿದ್ದಾರೆ.
ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿದ 'ಕಾಂತಾರ' ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿದ್ದು ಗೊತ್ತೇ ಇದೆ. ಇಲ್ಲಿಂದ ಪ್ಯಾನ್ ಮಟ್ಟದಲ್ಲಿ ರಿಷಬ್ ಶೆಟ್ಟಿಗೆ ಬೇಡಿಕೆ ಇದೆ. ಅವರ ಜನಪ್ರಿಯತೆಯನ್ನು ಗಮನಿಸಿ ಅಯೋಧ್ಯೆಗೆ ಆಹ್ವಾನವನ್ನು ನೀಡಲಾಗಿತ್ತು. ಹೀಗಾಗಿ ರಿಷಬ್ ಸಿನಿಮಾ ಕೆಲಸಗಳಿಂದ ಬಿಡುವು ಮಾಡಿಕೊಂಡು ಅಯೋಧ್ಯೆಗೆ ತೆರಳಿದ್ದಾರೆ.
ಶ್ರೀರಾಮ ಜನ್ಮಭೂಮಿ ಟ್ರಸ್ಟ್ ವತಿಯಿಂದ ರಿಷಬ್ ಶೆಟ್ಟಿಗೆ ಆಹ್ವಾನ ನೀಡಲಾಗಿತ್ತು. ಕನ್ನಡದ ಕೆಲವೇ ಕೆಲವು ಕಲಾವಿದರಿಗೆ ಇಂತಹದ್ದೊಂದು ಅವಕಾಶವನ್ನು ನೀಡಲಾಗಿದೆ. ಹೀಗಾಗಿ ರಿಷಬ್ ಶೆಟ್ಟಿ ಆಹ್ವಾನ ಸಿಗುತ್ತಿದ್ದಂತೆ ಹರ್ಷವನ್ನು ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತಪಡಿಸಿದ್ದರು.
"ಶ್ರೀರಾಮ ಜಯ ರಾಮ ಜಯ ಜಯ ರಾಮ ಎಂದು ಬರೆದು, ಬಾಲ್ಯದಿಂದಲೂ ನಮ್ಮ ಮನೆಗಳಲ್ಲಿ ರಾಮನಾಮವ ಭಜಿಸುತ್ತಾ, ರಾಮ ಪ್ರೇಮವ ಭಜಿಸುತ್ತಾ ಆತನ ಆದರ್ಶಪ್ರಾಯ ಜೀವನದ ಕಥೆಗಳನ್ನು ಗುರು ಹಿರಿಯರಿಂದ ಕೇಳುತ್ತಾ ಬೆಳೆದವರು ನಾವು. ಇಂದು ಶ್ರೀ ರಾಮ ಮಗುವಾಗಿ ಆಡಿದ, ಪ್ರಭುವಾಗಿ ಆಳಿದ ಆ ಅಯೋಧ್ಯೆಗೆ ಬರುವಂತೆ ಕರೆ ಕಳಿಸಿದ್ದಾನೆ. ಇದು ನನ್ನ ಪೂರ್ವ ಜನ್ಮದ ಪುಣ್ಯವೇ ಸರಿ. ಶ್ರೀರಾಮನಿಗೆ ಜಯವಾಗಲಿ. ಅಯೋಧ್ಯೆಗೆ ಜಯವಾಗಲಿ" ಎಂದು ಪೋಸ್ಟ್ ಮಾಡಿದ್ದರು.
'ಕಾಂತಾರ' ಭರ್ಜರಿ ಯಶಸ್ಸಿನ ಬಳಿಕ ರಿಷಬ್ ಶೆಟ್ಟಿ ಪ್ರೀಕ್ವೆಲ್‌ಗೆ ಕೈ ಹಾಕಿದ್ದಾರೆ. ಕೆಲವು ತಿಂಗಳುಗಳಿಂದ ಈ ಸಿನಿಮಾ ತೆರೆಮರೆಯಲ್ಲಿ ಕೆಲಸ ನಡೆಯುತ್ತಿದೆ. ಇತ್ತೀಚೆಗಷ್ಟೇ ಸಿನಿಮಾಗೆ ಮುಹೂರ್ತ ಕೂಡ ಮಾಡಲಾಗಿತ್ತು. ಆ ಬಳಿಕ ಸಿನಿಮಾ ಬಗ್ಗೆ ಸಸ್ಪೆನ್ಸ್ ಆಗಿಯೇ ಇಟ್ಟಿರೋ ರಿಷಬ್ 'ಕಾಂತಾರ: ಅಧ್ಯಾಯ 1'ಕ್ಕಾಗಿ ಶ್ರಮ ಪಡುತ್ತಿದ್ದಾರೆ. ಇಂತಹ ಬ್ಯುಸಿಯಲ್ಲೂ ಶ್ರೀರಾಮ ದರ್ಶನ ಪಡೆಯಲು ಅಯೋಧ್ಯೆಗೆ ತೆರಳಿದ್ದಾರೆ.
ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆಗೆ ಸಿನಿಮಾ ತಾರೆಯರಿಗೆ ಆಹ್ವಾನ ನೀಡಲಾಗಿದೆ. ಸ್ಯಾಂಡಲ್‌ವುಡ್‌ನಿಂದ ರಿಷಬ್ ಶೆಟ್ಟಿ, ನಿಖಿಲ್ ಕುಮಾರ್ ಈಗಾಗಲೇ ಅಯೋಧ್ಯೆ ತಲುಪಿದ್ದಾರೆ. ಇವರೊಂದಿಗೆ ಬಾಲಿವುಡ್ ನಟ ಅಮಿತಾಭ್ ಬಚ್ಚನ್, ರಜನಿಕಾಂತ್, ಅಕ್ಷಯ್ ಕುಮಾರ್, ಆಲಿಯಾ ಭಟ್, ರಣಬೀರ್ ಕಪೂರ್, ಪ್ರಭಾಸ್, ರಾಮ್ ಚರಣ್, ಕಂಗನಾ ರನೌತ್, ಆಯುಷ್ಮಾನ್ ಖುರಾನಾ, ರಣದೀಪ್ ಹೂಡಾ, ಅನುಷ್ಕಾ ಶರ್ಮಾ, ವಿರಾಟ್ ಕೊಹ್ಲಿ ಸೇರಿದಂತೆ ಹಲವರು ಭಾಗಿಯಾಗುವ ಸಾಧ್ಯತೆಯಿದೆ. ಜನವರಿ 22ರಂದು ಅಯೋಧ್ಯೆಯಲ್ಲಿ ಸಿನಿಮಾ ತಾರೆಯರ ಸಮಾಗಮವೇ ನಡೆಯಲಿದೆ.


Click it and Unblock the Notifications











