Karavali Controversy:ನಿರ್ದೇಶಕನಿಂದ ನಿಲ್ಲದ ಆರೋಪ.. ಪ್ರಜ್ವಲ್ ಬೆಂಬಲಕ್ಕೆ ಬಂದ ನಟಿಯರು.. ಏನಾಗ್ತಿದೆ ಒಳಗೊಳಗೆ?
ಕನ್ನಡ ಚಿತ್ರರಂಗ ಈ ವರ್ಷ ಸೋತು ಸೋತು ಸೊರಗಿ ಹೋಗಿದೆ. ಒಂದೇ ಒಂದು ಸಿನಿಮಾ ಸರಿಯಾಗಿ ಹಿಟ್ ಅಂತ ಸಿಕ್ಕಿಲ್ಲ. ಹಿಟ್ ಆದ ಒಂದೇ ಸಿನಿಮಾ ಚಿತ್ರರಂಗದ ಗತಿಯನ್ನೇನು ಬದಲಿಸಲಿಲ್ಲ. ಸತತ ಸೋಲುಗಳ ಕಹಿಯನ್ನು ಉಣ್ಣುತ್ತಲೇ ಅರ್ಧ ವರ್ಷ ಕಳೆದಿದ್ದು ಆಗಿದೆ. ಹೀಗಿರುವಾಗ ಇನ್ನರ್ಧ ವರ್ಷದಲ್ಲಿ ರಿಲೀಸ್ ಆಗಲಿರುವ ಸಿನಿಮಾಗಳಾದ್ರೂ ಗೆಲ್ಲಲಿ ಅಂತ ದೇವರಲ್ಲಿ ಬೇಡಿಕೊಳ್ಳುವ ಪರಿಸ್ಥಿತಿ. ಪರಿಸ್ಥಿತಿ ಹೀಗಿರುವಾಗ 'ಕರಾವಳಿ' ವಿವಾದ ಬೇಕಿತ್ತಾ? ಅನ್ನೋದು ಸದ್ಯದ ಪ್ರಶ್ನೆ.
'ಕರಾವಳಿ' ಟ್ರೈಲರ್ ಬಿಡುಗಡೆ ವೇಳೆ ನಡೆದ ಗಲಾಟೆ ನಿರ್ದೇಶಕ ಕಮ್ ನಿರ್ಮಾಪಕ ಗುರುದತ್ ಗಾಣಿಗ ಮನಸ್ಸಿಗೆ ಬೇಸರವಾದಂತೆ ಇದೆ. ಇತ್ತ ಸಂಭಾವನೆ ವಿಚಾರದಲ್ಲಿ ಪ್ರಜ್ವಲ್ ದೇವರಾಜ್‌ಗೆ ನೋವಾಗಿದೆ. ಒಂದೇ ಸಿನಿಮಾದ ಇಬ್ಬರು ಪಿಲ್ಲರ್‌ಗಳು ವಿವಾದದ ಬಳಿಕ ನಾನೊಂದು ತೀರ.. ನೀನೊಂದು ತೀರ ಅನ್ನೋತರ ಆಗಿದ್ದಾರೆ. ಇತ್ತ ಚಿತ್ರರಂಗದ ಸೈಲೆಂಟ್ ಆಗಿದೆಯಲ್ಲ ಅಂದುಕೊಳ್ಳುವಾಗಲೇ ನಟಿಯರು ಅಖಾಡಕ್ಕೆ ಇಳಿದಿದ್ದಾರೆ. ಅತ್ತ ಗುರುದತ್ ಗಾಣಿಗ ಪೊಲೀಸ್ ಠಾಣೆ ಮೆಟ್ಟಿಲೇರಿ ದೂರು ದಾಖಲಿಸಿದ್ದಾರೆ.

ಇಷ್ಟೆಲ್ಲ ಘಟನೆ ಮಧ್ಯೆ ನಿರ್ದೇಶಕರಿಗೆ ಆರೋಪಗಳು ಹಾಗೂ ಸ್ಪಷ್ಟನೆ ಕೊಟ್ಟ ಪಟ್ಟಿ ಸಲ್ಲಿಕೆಯಾಗಿದೆ. ಅತ್ತ ರಕ್ಷಿತಾ ಪ್ರೇಮ್, ಮೇಘನಾ ರಾಜ್, ಪನ್ನಗಾ ಭರಣ ಅಖಾಡಕ್ಕೆ ಇಳಿದು ಪ್ರಜ್ವಲ್ ಬೆಂಬಲಕ್ಕೆ ನಿಂತಿದ್ದಾರೆ. ಅಲ್ಲಿಗೆ ಈ ವಿವಾದ ಮೇಲ್ನೋಟಕ್ಕೆ ಸದ್ಯಕ್ಕಂತೂ ಸರಿ ಹೋಗುವ ಹಾಗೆ ಕಾಣಿಸುತ್ತಿಲ್ಲ. ಗುರುದತ್ ಗಾಣಿಗ ಆರೋಪಗಳ ಪಟ್ಟಿ ಮಾಡಿ ಮಾಧ್ಯಮಗಳಲ್ಲಿ ರಿಲೀಸ್ ಮಾಡಿದ್ದೇನೋ ಸರಿ. ಆದರೆ, ಪ್ರಜ್ವಲ್‌ಗೆ 25 ಲಕ್ಷ ರೂ. ಬಾಕಿ ಕೊಟ್ಟ ಬಳಿಕ ಏನು ನಡೀತು ಅನ್ನೋದನ್ನು ಸ್ಯಾಂಡಲ್‌ವುಡ್ ಮಂದಿ ಗಾಂಧಿನಗರದಲ್ಲಿ ಮಾತಾಡಿಕೊಂಡು ಓಡಾಡುತ್ತಿದ್ದಾರೆ.
ಪ್ರಜ್ವಲ್‌ಗೆ ₹25 ಲಕ್ಷ ಪಾವತಿ
'ಕರಾವಳಿ' ಟ್ರೈಲರ್ ಲಾಂಚ್ ವೇಳೆ ಘಟನೆ ನಡೆದ ಬಳಿಕ ಪ್ರಜ್ವಲ್‌ಗೆ 25 ಲಕ್ಷ ರೂಪಾಯಿ ಪಾವತಿಸಲಾಗಿದೆ ಎಂದು ಗುರುದತ್ ಗಾಣಿಗ ಬಹಿರಂಗ ಪತ್ರದಲ್ಲಿ ಹೇಳಿದ್ದಾರೆ. ಅಷ್ಟೇ ಅಲ್ಲದೇ ಈ ಸಿನಿಮಾ ಮಾಡುವಾಗ ಪ್ರಜ್ವಲ್ 'ಕರಾವಳಿ' ಸಿನಿಮಾಗಾಗಿ ಸಿಕ್ಸ್ ಪ್ಯಾಕ್ ಮಾಡುವುದಾಗಿ ಒಪ್ಪಿಕೊಂಡಿದ್ದರು. ಹೀಗಾಗಿ ದೊಡ್ಡ ಮೊತ್ತವನ್ನು ಕೊಡಲು ನಿರ್ಧರಿಸಿದ್ದು, ಅದು ಅವರಿಂದ ಸಾಧ್ಯವಾಗದೇ ಇದ್ದಿದ್ದರಿಂದ ಬಾಕಿ ಹಣವನ್ನು ಉಳಿಸಿಕೊಳ್ಳಲಾಗಿತ್ತು ಎಂದೂ ಹೇಳಿದ್ದಾರೆ.
ಪೊಲೀಸ್ ಠಾಣೆ ದೂರು ಯಾಕೆ?
ಟ್ರೈಲರ್ ಲಾಂಚ್ ವೇಳೆ ಗಲಾಟೆ ಮಾಡಿದ ಅಪರಿಚಿತರ ವಿರುದ್ಧ ನಿರ್ದೇಶಕ ಗುರುದತ್ ಗಾಣಿಗ ದೂರು ದಾಖಲಿಸಿದ್ದಾರೆ. ಆದರೆ, ಈ ದೂರಿನಲ್ಲಿ ಇಷ್ಟೇ ಇಲ್ಲ. "ಬಾಕಿ ಇರುವ ಹಣ ತಲುಪಿದ ಮೇಲೂ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಅಪರಿಚಿತ ಖಾತೆಗಳಿಂದ ಇಲ್ಲ-ಸಲ್ಲದನ್ನೆಲ್ಲಾ ಆರೋಪ ಮಾಡುತ್ತ ಕರಾವಳಿ ಸಿನಿಮಾ, ನಿರ್ದೇಶಕರು ಮತ್ತು ನಿರ್ಮಾಣ ಸಂಸ್ಥೆಯ ಮೇಲೆ ಅಪಪ್ರಚಾರ ಮಾಡುತ್ತಿರುವವರ ಮೇಲೆ ತನಿಖೆ ನಡೆಸುವಂತೆ ಮೇಲ್ಕಂಡ ದೂರಿನಲ್ಲಿ ಉಲ್ಲೇಖಿಸಲಾಗಿದೆ." ಎಂದೂ ಪತ್ರದಲ್ಲಿ ಹೇಳಲಾಗಿದೆ.

ಹಣ ಕೊಟ್ಮೇಲೆ ಯಾಕೆ ಸರಿ ಹೋಗಿಲ್ಲ?
ಪ್ರಜ್ವಲ್‌ಗೆ ಬಾಕಿ ಉಳಿಸಿಕೊಂಡ ಹಣ ಸಂದಾಯವಾದ ಮೇಲೂ ಯಾಕೆ ವಿವಾದ ನಿಂತಿಲ್ಲ? ಅನ್ನೋದು ಪ್ರಶ್ನೆ. ಪ್ರಜ್ವಲ್ ದೇವರಾಜ್ ಮಾಡಿರುವ ಆರೋಪಗಳಿಗೆ ಗುರುದತ್ ಗಾಣಿಗ ಪತ್ರದಲ್ಲಿ ಕೌಂಟರ್ ಕೊಟ್ಟಾಗಿದೆ. ಆದರೆ, ಗಾಂಧಿನಗರದ ಮಂದಿ ಇನ್ನೊಂದಿಷ್ಟು ಹೊಸ ವಿಷಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಗುರುದತ್ ಗಾಣಿಗ ಹಾಗೂ ಪ್ರಜ್ವಲ್ ದೇವರಾಜ್ ಮಧ್ಯೆ ವೈಮನಸ್ಸು ಮೂಡುವುದಕ್ಕೆ ಎರಡು ಕಾರಣ ಎನ್ನುತ್ತಾರೆ. ಈ ಎರಡು ಕಾರಣಗಳಿಂದಲೇ ಪ್ರಜ್ವಲ್ ಸಿಕ್ಕಿಪಟ್ಟೆ ಬೇಸರ ಪಟ್ಟುಕೊಂಡಿದ್ದಾರೆ ಎನ್ನಲಾಗಿದೆ.
ಆ ಎರಡು ಕಾರಣಗಳೇನು?
'ಕರಾವಳಿ' ಭಾಗದ ಜನರ ಭಾಷೆ ಪ್ರಜ್ವಲ್ ದೇವರಾಜ್‌ಗೆ ಸೂಟ್ ಆಗುತ್ತಿಲ್ಲ. ಹೀಗಾಗಿ ಪ್ರಜ್ವಲ್ ಕೈಯಲ್ಲಿ ಡಬ್ಬಿಂಗ್ ಮಾಡಿಸದೇ ಇರುವುದಕ್ಕೆ ನಿರ್ಧರಿಸಿದ್ದರು. ಆದರೆ, ಪ್ರಜ್ವಲ್‌ಗೆ ತಾನೇ ಡಬ್ ಮಾಡಬೇಕು ಅನ್ನೋ ಆಸೆಯಿತ್ತು. ಎಕ್ಸ್‌ಪರ್ಟ್ ಅನ್ನು ಕರೆಸಿ ಅವರು ಹೇಳಿದ ಹಾಗೇ ಡಬ್ ಮಾಡುತ್ತೇನೆ ಎಂದರೂ ಗುರುದತ್ ಗಾಣಿಗಗೆ ಯಾರೋ ಸಮಾಧಾನ ಆಗಲಿಲ್ಲ. ಹೀಗಾಗಿ ಮುಂದೂಡುತ್ತಲೇ ಬಂದಿದ್ದರು. ಅಲ್ಲದೆ ಮೂಲಗಳ ಪ್ರಕಾರ ಬೇರೆಯವರೊಂದಿಗೆ ಡಬ್ ಕೂಡ ಮಾಡಿಸಿಬಿಟ್ಟಿದ್ದಾರೆ. ಇತ್ತ ಟ್ರೈಲರ್ ರಿಲೀಸ್‌ವರೆಗೂ ಪ್ರಜ್ವಲ್‌ಗೆ ಹೋಪ್ ಇತ್ತು. ಆದ್ಯಾವಾಗ ಟ್ರೈಲರ್‌ನಲ್ಲಿ ತನ್ನ ಧ್ವನಿ ಇಲ್ಲ ಅನ್ನೋದು ಕನ್ಫರ್ಮ್ ಆಯ್ತೋ, ಆಗ ಉಲ್ಟಾ ಹೊಡೆದರು ಅನ್ನೋ ಬಲ್ಲ ಮೂಲಗಳು ಕೊಟ್ಟ ವಿಷಯ. ಇನ್ನೊಂದು ರಾಜ್ ಬಿ ಶೆಟ್ಟಿ ಈ ಸಿನಿಮಾದಲ್ಲಿ ಹೆಚ್ಚು ತೊಡಗಿಸಿಕೊಳ್ಳುತ್ತಿದ್ದು, ಇದು ಯಾಕೋ ಪ್ರಜ್ವಲ್‌ಗೆ ಇರಿಸು-ಮುರಿಸು ಆಗಿತ್ತು. ಇದೆಲ್ಲ ಸೇರಿ ಇಷ್ಟೆಲ್ಲ ಆಗಿದೆ ಎನ್ನಲಾಗಿದೆ. ಏನೋ ಕೇಸ್ ಅದು-ಇದು ಅಂತ ಇನ್ನು ಗಬ್ಬೆದ್ದಿದೆ. ರಿಲೀಸ್‌ವರೆಗೂ ಇನ್ನೇನು ಆಗುತ್ತೋ ನೋಡೋಣ.


Click it and Unblock the Notifications