Karavali Controversy: "ಇನ್ಮೆಂದೆ ಈ ವಿವಾದದ ಕುರಿತು ನಾನು ಯಾವುದೇ ಸಾರ್ವಜನಿಕ ಪ್ರತಿಕ್ರಿಯೆ ನೀಡಲ್ಲ"- ಪ್ರಜ್ವಲ್
ಕಳೆದ ಕೆಲವು ದಿನಗಳಿಂದ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಹಾಗೂ 'ಕರಾವಳಿ' ಚಿತ್ರದ ನಿರ್ದೇಶಕ ಗುರುದತ್ ಗಾಣಿಗ ನಡುವಿನ ಕಿತ್ತಾಟ ದೊಡ್ಡ ಸುದ್ದಿಯಾಗಿತ್ತು. ಇಬ್ಬರೂ ನಡುವಿನ ವೈಮನಸ್ಸು ಸಿನಿಮಾ ಟ್ರೈಲರ್ ಲಾಂಚ್ ವೇಳೆ ಬಹಿರಂಗಗೊಂಡಿತ್ತು. ಇಬ್ಬರು ಪರಸ್ಪರ ಆರೋಪ-ಪ್ರತ್ಯಾರೋಪಗಳನ್ನು ಮಾಡಿದ್ದರು. ಸಾರ್ವಜನಿಕವಾಗಿ ಬಹಿರಂಗ ಪತ್ರದ ಮೂಲಕ ಹೇಳಿ ನೀಡಿದ್ದರು.
ನಿನ್ನೆ ಗುರುದತ್ ಗಾಣಿಗ ಸಾರ್ವಜನಿಕವಾಗಿ ಬಹಿರಂಗ ಪತ್ರ ಬರೆದು ನಡೆದಿದ್ದನ್ನು ವಿವರಿಸಿದ್ದರು. ಇದಾದ ಒಂದು ದಿನದ ಬಳಿಕ ಅಂದರೆ, ಇಂದು (ಜುಲೈ 11) ಪ್ರಜ್ವಲ್ ದೇವರಾಜ್ ಸಾರ್ವಜನಿಕವಾಗಿ ಪತ್ರದ ಮೂಲಕ ಅಧಿಕೃತ ಹೇಳಿಕೆ ದಾಖಲಿಸಿದ್ದಾರೆ. ಇದರಲ್ಲಿ ಪ್ರಜ್ವಲ್ ದೇವರಾಜ್ ಕೂಡ ತಮ್ಮ ಕಡೆಯಿಂದ ಈಗಾಗಲೇ ಚರ್ಚೆಯಾಗುತ್ತಿರುವ ಕೆಲವು ವಿಷಯಗಳ ಬಗ್ಗೆ ಕ್ಲಾರಿಟಿ ಕೊಟ್ಟಿದ್ದಾರೆ. ಅಲ್ಲದೇ ಇಲ್ಲಿದೆ ಈ ವಿಷಯದ ಬಗ್ಗೆ ಚರ್ಚೆ ಮಾಡುವುದಿಲ್ಲ ಎಂದು ಹೇಳಿಕೆ ನೀಡಿ, ವಿವಾದಕ್ಕೆ ಫುಲ್‌ಸ್ಟಾಪ್ ಹಾಕಿದ್ದಾರೆ.

ಪ್ರಜ್ವಲ್ ದೇವರಾಜ್ ಅಧಿಕೃತ ಹೇಳಿಕೆ
ಇತ್ತೀಚಿನ ದಿನಗಳಲ್ಲಿ 'ಕರಾವಳಿ' ಚಿತ್ರದ ನಿರ್ಮಾಣ ಸಂಸ್ಥೆ ಗುರುದತ್ ಗಣಿಗ ಫಿಲ್ಮ್ಸ್ ಹಾಗೂ ನಿರ್ದೇಶಕ ಗುರುದತ್ ಗಣಿಗ ಅವರಿಂದ ಸಾರ್ವಜನಿಕವಾಗಿ ನೀಡಲಾಗುತ್ತಿರುವ ಹೇಳಿಕೆಗಳ ಹಿನ್ನೆಲೆಯಲ್ಲಿ, ನನ್ನ ಅಭಿಮಾನಿಗಳು, ಮಾಧ್ಯಮ ಮಿತ್ರರು ಹಾಗೂ ಕನ್ನಡ ಚಿತ್ರರಂಗದ ಬಂಧುಗಳ ಮುಂದೆ ಕೆಲವು ವಾಸ್ತವಾಂಶಗಳನ್ನು ಸ್ಪಷ್ಟಪಡಿಸುವುದು ಅಗತ್ಯವೆಂದು ನಾನು ಭಾವಿಸುತ್ತೇನೆ.
'ಕರಾವಳಿ' ಚಿತ್ರದ ಟೀಸರ್ ಬಿಡುಗಡೆಯಾದ ಸಂದರ್ಭದಲ್ಲಿ, ನನ್ನ ಯಾವುದೇ ಪೂರ್ವ ಮಾಹಿತಿ, ಅನುಮತಿ ಅಥವಾ ಒಪ್ಪಿಗೆಯಿಲ್ಲದೆ ನನ್ನ ಪಾತ್ರಕ್ಕೆ ಮತ್ತೊಬ್ಬರಿಂದ ಡಬ್ಬಿಂಗ್ ಮಾಡಿಸಿರುವ ವಿಚಾರ ನನಗೆ ತಿಳಿಯಿತು. ಅದೇ ಸಮಯದಲ್ಲಿ, ನನಗೆ ಒಪ್ಪಿಗೆಯಾದ ಸಂಭಾವನೆಯೂ ಸಂಪೂರ್ಣವಾಗಿ ಪಾವತಿಯಾಗಿರಲಿಲ್ಲ. ಈ ಎರಡೂ ಕಾರಣಗಳಿಂದಲೇ ನಾನು ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿರಲಿಲ್ಲ.
ಇದರ ನಂತರ, ಗುರುದತ್ ಗಣಿಗ ಫಿಲ್ಮ್ಸ್ ಹಾಗೂ ನಿರ್ದೇಶಕ ಗುರುದತ್ ಗಣಿಗ ಅವರು ಈ ವಿವಾದಕ್ಕೆ ನನ್ನ ದೈಹಿಕ ರೂಪಾಂತರ ಅಥವಾ ಸಿಕ್ಸ್-ಪ್ಯಾಕ್ ಲುಕ್ ಕಾರಣ ಎಂಬ ರೀತಿಯಲ್ಲಿ ಸಾರ್ವಜನಿಕವಾಗಿ ನೀಡಿರುವ ಹೇಳಿಕೆಗಳು ನನ್ನ ಗಮನಕ್ಕೆ ಬಂದಿವೆ. ಈ ಕುರಿತು ನಾನು ಸ್ಪಷ್ಟಪಡಿಸಲು ಬಯಸುವುದು ಏನೆಂದರೆ, ಈ ವಿಷಯಕ್ಕೂ ನನ್ನ ದೈಹಿಕ ರೂಪಾಂತರದೊಂದಿಗೆ ಯಾವುದೇ ಸಂಬಂಧವಿಲ್ಲ. ನನ್ನ ಯಾವುದೇ ಅನುಮತಿಯಿಲ್ಲದೆ ನನ್ನ ಪಾತ್ರಕ್ಕೆ ಮತ್ತೊಬ್ಬರಿಂದ ಡಬ್ಬಿಂಗ್ ಮಾಡಿಸಿರುವುದು ಹಾಗೂ ಆ ಸಂದರ್ಭದಲ್ಲಿ ನನ್ನ ಸಂಭಾವನೆ ಸಂಪೂರ್ಣವಾಗಿ ಪಾವತಿಯಾಗದಿರುವುದೇ ಈ ವಿಷಯದ ಮೂಲ ಕಾರಣಗಳಾಗಿವೆ.
ಮೊದಲ ದಿನದಿಂದಲೂ ನನ್ನ ನಿಲುವು ಒಂದೇ ಆಗಿತ್ತು. ನನಗೆ ಬಾಕಿ ಇದ್ದ ಸಂಭಾವನೆಯನ್ನು ಸಂಪೂರ್ಣವಾಗಿ ಪಾವತಿಸಿದ ತಕ್ಷಣ, ಚಿತ್ರದ ಡಬ್ಬಿಂಗ್ ಪೂರ್ಣಗೊಳಿಸಲು ಹಾಗೂ ಚಿತ್ರದ ಪ್ರಚಾರ ಚಟುವಟಿಕೆಗಳಲ್ಲಿ ಸಂಪೂರ್ಣವಾಗಿ ಭಾಗವಹಿಸಲು ನಾನು ಸಿದ್ಧನಿದ್ದೇನೆ ಎಂದು ಸಂಬಂಧಪಟ್ಟವರಿಗೆ ಸ್ಪಷ್ಟವಾಗಿ ತಿಳಿಸಿದ್ದೆ.
ಟೀಸರ್ ಬಿಡುಗಡೆಯಾದ ಮರುದಿನ, ಜಿಎಸ್‌ಟಿ ಮೊತ್ತವನ್ನು ಹೊರತುಪಡಿಸಿ ನನ್ನ ಬಾಕಿ ಸಂಭಾವನೆಯನ್ನು ಪಾವತಿಸಲಾಯಿತು. ಅದರ ನಂತರ, ಗುರುದತ್ ಗಣಿಗ ಫಿಲ್ಮ್ಸ್ ವತಿಯಿಂದ ನನ್ನ ವ್ಯವಸ್ಥಾಪಕರಿಗೆ ನನ್ನ ಡಬ್ಬಿಂಗ್ ಸೇವೆ ಹಾಗೂ ಚಿತ್ರದ ಪ್ರಚಾರದಲ್ಲಿ ನನ್ನ ಭಾಗವಹಿಸುವಿಕೆ ಇನ್ನು ಮುಂದೆ ಅಗತ್ಯವಿಲ್ಲ ಎಂದು ತಿಳಿಸಲಾಯಿತು. ಹೀಗಾಗಿ, ಚಿತ್ರದ ಡಬ್ಬಿಂಗ್ ಹಾಗೂ ಪ್ರಚಾರದಲ್ಲಿ ನಾನು ಭಾಗವಹಿಸದಿರುವುದು ನನ್ನ ನಿರ್ಧಾರವಲ್ಲ ಎಂಬುದನ್ನು ಸ್ಪಷ್ಟಪಡಿಸಲು ಬಯಸುತ್ತೇನೆ.
ಇದರ ಜೊತೆಗೆ, ನನ್ನ ಧ್ವನಿ ಈ ಪಾತ್ರಕ್ಕೆ ಸೂಕ್ತವಲ್ಲ ಎಂಬ ರೀತಿಯ ಸಾರ್ವಜನಿಕ ಹೇಳಿಕೆಗಳೂ ನನ್ನ ಗಮನಕ್ಕೆ ಬಂದಿವೆ. ಆದರೆ, ನನ್ನ ಪಾತ್ರಕ್ಕೆ ಡಬ್ಬಿಂಗ್ ಮಾಡುವ ಅವಕಾಶವನ್ನು ನನಗೆ ನೀಡದೆ, ಅಂತಹ ಅಭಿಪ್ರಾಯವನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸಿರುವುದು ನನಗೆ ಸಹಜವಾಗಿಯೇ ನೋವುಂಟು ಮಾಡಿದೆ. ಎರಡು ದಶಕಗಳಿಗೂ ಹೆಚ್ಚು ಕಾಲ ಕನ್ನಡ ಚಿತ್ರರಂಗದಲ್ಲಿ ನಾನು ಗಳಿಸಿರುವ ವೃತ್ತಿಪರ ಗೌರವ, ವಿಶ್ವಾಸ ಮತ್ತು ಪ್ರೇಕ್ಷಕರ ಪ್ರೀತಿಯನ್ನು ನಾನು ಅತ್ಯಂತ ಅಮೂಲ್ಯವಾಗಿ ಪರಿಗಣಿಸುತ್ತೇನೆ. ಆದ್ದರಿಂದ ಈ ಬೆಳವಣಿಗೆಗಳು ನನಗೆ ವೈಯಕ್ತಿಕವಾಗಿಯೂ ಹಾಗೂ ವೃತ್ತಿಪರವಾಗಿಯೂ ಬೇಸರವನ್ನುಂಟು ಮಾಡಿವೆ.
ಈ ಹೇಳಿಕೆಯ ಮೂಲಕ ನನ್ನ ನಿಲುವನ್ನು ಸಾರ್ವಜನಿಕರ ಮುಂದೆ ಸ್ಪಷ್ಟಪಡಿಸುವ ಉದ್ದೇಶ ಮಾತ್ರ ನನ್ನದು. ಈ ವಿಚಾರಕ್ಕೆ ಸಂಬಂಧಿಸಿದಂತೆ ನನ್ನಿಂದ ಸಾರ್ವಜನಿಕವಾಗಿ ನಡೆಯುವ ಯಾವುದೇ ಚರ್ಚೆ, ಪ್ರತಿಕ್ರಿಯೆ ಅಥವಾ ವಾಗ್ವಾದಕ್ಕೆ ಇಲ್ಲಿಗೇ ಪೂರ್ಣ ವಿರಾಮ ಹಾಕುತ್ತಿದ್ದೇನೆ. ಇನ್ನು ಮುಂದೆ ಈ ವಿಷಯದ ಕುರಿತು ನಾನು ಯಾವುದೇ ಸಾರ್ವಜನಿಕ ಪ್ರತಿಕ್ರಿಯೆ ನೀಡುವುದಿಲ್ಲ.
ಒಬ್ಬ ಕಲಾವಿದನಾಗಿ ನನ್ನ ಮೊದಲ ಆದ್ಯತೆ ಯಾವಾಗಲೂ ಕನ್ನಡ ಸಿನಿಮಾ. ವೈಯಕ್ತಿಕ ಭಿನ್ನಾಭಿಪ್ರಾಯಗಳು ಇಡೀ ಚಿತ್ರತಂಡದ ಪರಿಶ್ರಮವನ್ನು ಮರೆಮಾಚಬಾರದು ಎಂಬುದು ನನ್ನ ದೃಢ ನಂಬಿಕೆ.
ಆದ್ದರಿಂದ, "ಕರಾವಳಿ" ಚಿತ್ರದ ಸಂಪೂರ್ಣ ತಂಡಕ್ಕೆ ನನ್ನ ಹೃತ್ಪೂರ್ವಕ ಶುಭ ಹಾರೈಕೆಗಳನ್ನು ತಿಳಿಸುತ್ತೇನೆ. ನನ್ನ ಅಭಿಮಾನಿಗಳು ಹಾಗೂ ಕನ್ನಡ ಸಿನೆಪ್ರೇಕ್ಷಕರು ಚಿತ್ರಮಂದಿರಗಳಿಗೆ ತೆರಳಿ ಚಿತ್ರವನ್ನು ವೀಕ್ಷಿಸಿ, ಈ ಚಿತ್ರಕ್ಕಾಗಿ ಶ್ರಮಿಸಿದ ಪ್ರತಿಯೊಬ್ಬ ಕಲಾವಿದ, ತಂತ್ರಜ್ಞ ಹಾಗೂ ಸಿಬ್ಬಂದಿಯನ್ನು ಪ್ರೋತ್ಸಾಹಿಸುವಂತೆ ಹೃತ್ಪೂರ್ವಕವಾಗಿ ವಿನಂತಿಸುತ್ತೇನೆ.
ಈ ಕಷ್ಟದ ಸಮಯದಲ್ಲಿಯೂ ನನ್ನೊಂದಿಗೆ ನಿಂತು ಪ್ರೀತಿ, ವಿಶ್ವಾಸ ಮತ್ತು ಬೆಂಬಲ ವ್ಯಕ್ತಪಡಿಸಿದ ನನ್ನ ಅಭಿಮಾನಿಗಳು, ಮಾಧ್ಯಮ ಮಿತ್ರರು ಹಾಗೂ ಕನ್ನಡ ಚಿತ್ರರಂಗದ ಬಂಧುಗಳಿಗೆ ನನ್ನ ಹೃದಯಪೂರ್ವಕ ಕೃತಜ್ಞತೆಗಳು. ನಿಮ್ಮ ಪ್ರೀತಿ ಮತ್ತು ಆಶೀರ್ವಾದವೇ ನನ್ನ ದೊಡ್ಡ ಶಕ್ತಿ.- ಪ್ರಜ್ವಲ್ ದೇವರಾಜ್


Click it and Unblock the Notifications