ಹೊಸ ವರ್ಷದ ಸಂಭ್ರಮದಲ್ಲಿರುವ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಎಳೆಯುತ್ತಾ ಕನ್ನಡದ ಮೂರು ಸಿನಿಮಾ?
ಇಂದು (ಡಿಸೆಂಬರ್ 31) 2021 ಕ್ಕೆ ಗುಡ್ ಬೈ ಹೇಳುವ ಸಮಯ. 2022 ಹೊಸ ವರ್ಷವನ್ನು ಅದ್ಧೂರಿಯಾಗಿ ಸ್ವಾಗತ ಮಾಡುವ ಕಾಲ. ಇವೆರಡರ ಮಧ್ಯೆ ಕನ್ನಡ ಚಿತ್ರರಂಗ ಕೂಡ ಸಂಭ್ರಮಿಸುತ್ತಿದೆ. ಕನ್ನಡ ಮೂರು ಸಿನಿಮಾಗಳು ಈ ವರ್ಷದ ಕೊನೆಯ ದಿನ ಥಿಯೇಟರ್‌ಗೆ ಲಗ್ಗೆ ಇಟ್ಟಿದೆ. ಆದರೆ, ಹೊಸ ವರ್ಷದ ಸಂಭ್ರಮದಲ್ಲಿರುವ ಪ್ರೇಕ್ಷಕರು ಚಿತ್ರಮಂದಿರಕ್ಕೆ ಭೇಟಿ ನೀಡುತ್ತಾರಾ? ಮೂರು ಸಿನಿಮಾಗಳಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತಾರೆ? ಅನ್ನುವುದೇ ಈಗ ಯಕ್ಷ ಪ್ರಶ್ನೆಯಾಗಿದೆ.
ಡಿಸೆಂಬರ್ 31ರಂದು ಬಿಡುಗಡೆಯಾಗಿರುವ ಮೂರು ಸಿನಿಮಾಗಳಿಗೂ ಕರ್ನಾಟಕ ಬಂದ್ ಸಮಸ್ಯೆ ಕಾಡುತ್ತಿತ್ತು. ಕನ್ನಡ ಪರ ಸಂಘಟನೆಗಳು ಎಂಇಎಸ್ ಹಾಗೂ ಶಿವಸೇನೆಯನ್ನು ಬ್ಯಾನ್ ಮಾಡುವಂತೆ ಸರ್ಕಾರದ ಮೇಲೆ ಒತ್ತಡ ಹಾಕಿದ್ದರು. ಎಂಇಎಸ್ ಪುಂಡರ ಸದ್ದಡಗಿಸಲು ಕನ್ನಡ ಪರ ಸಂಘಟನೆಗಳು ಕರ್ನಾಟಕ ಬಂದ್‌ಗೆ ಕರೆ ನೀಡಿದ್ದವು. ಆದರೆ, ಬಂದ್ ಹಿಂಪಡೆದಿರುವುದರಿಂದ ಕನ್ನಡದ ಮೂರು ಸಿನಿಮಾಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿವೆ. ಆದರೂ ಹೊಸ ವರ್ಷದ ಸಂಭ್ರಮದಲ್ಲಿರುವ ಪ್ರೇಕ್ಷಕರನ್ನು ಯಾವ ಸಿನಿಮಾ ಚಿತ್ರಮಂದಿರಕ್ಕೆ ಕರೆತರುತ್ತೆ ಅನ್ನುವುದು ಕುತೂಹಲದ ಪ್ರಶ್ನೆಯಾಗಿದೆ.

ಬಂದ್ ಕ್ಯಾನ್ಸಲ್ ನಿಟ್ಟುಸಿರು ಬಿಟ್ಟ ನಿರ್ಮಾಪಕರು
ರಚಿತಾ ರಾಮ್ ಹಾಗೂ ಅಜಯ್ ರಾವ್ ನಟಿಸಿದ 'ಲವ್ ಯು ರಚ್ಚು' , ಪ್ರಜ್ವಲ್ ದೇವರಾಜ್ ನಟಿಸಿದ ಅರ್ಜುನ್ ಗೌಡ, ದಿಗಂತ್ ನಟನೆಯ ಹುಟ್ಟುಹಬ್ಬದ ಶುಭಾಶಯಗಳು ಈ ಮೂರು ಸಿನಿಮಾಗಳು ಚಿತ್ರಮಂದಿರಕ್ಕೆ ಲಗ್ಗೆ ಇಟ್ಟಿವೆ. ಕರ್ನಾಟಕ ಬಂದ್ ಕ್ಯಾನ್ಸಲ್ ಆಗಿದ್ದರಿಂದ ಇಷ್ಟು ದಿನ ಇದ್ದ ಒಂದು ಆತಂಕ ದೂರವಾಗಿದೆ. ಚಿತ್ರಮಂದಿರಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ಹೇಳಿದ್ದ ಕನ್ನಡಪರ ಸಂಘಟನೆಗಳು ಚಿತ್ರರಂಗದ ವಿರುದ್ಧ ಕಿಡಿಕಾರಿದ್ದರು. ಹೀಗಾಗಿ ಜನರು ಚಿತ್ರಮಂದಿರಕ್ಕೆ ಬರಲು ಹಿಂದೇಟು ಹಾಕಬಹುದು ಎಂಬ ಆತಂಕದಲ್ಲಿದ್ದ ಈ ಮೂರು ಚಿತ್ರದ ನಿರ್ಮಾಪಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಬಿಡುಗಡೆಯಾದ ಮೂರು ಸಿನಿಮಾ ಭವಿಷ್ಯವೇನು?
ಕರ್ನಾಟಕ ಬಂದ್ ಕ್ಯಾನ್ಸಲ್ ಆದರೂ, ಕನ್ನಡ ಸಿನಿಮಾಗಳಿಗೆ ಎದುರಾಗಿರುವ ಸಮಸ್ಯೆಯೇನು ಕಮ್ಮಿಯಾಗಿಲ್ಲ. ಹೊಸ ಸಂಭ್ರಮದಲ್ಲಿರುವ ಜನರನ್ನು ಚಿತ್ರಮಂದಿರಕ್ಕೆ ಸೆಳಯುವ ದೊಡ್ಡ ಸವಾಲು ಈ ಮೂರೂ ಸಿನಿಮಾಗಳ ಮುಂದಿದೆ. ಹೊಸ ವರ್ಷಕ್ಕೆ ಪಾರ್ಟಿ ಮೂಡಿನಲ್ಲಿರುವ ಜನರು ಡಿಸೆಂಬರ್ 31 ಹಾಗೂ ಜನವರಿ 01 ರಂದು ಸಿನಿಮಾ ನೋಡುವ ಮೂಡನಲ್ಲಿ ಇರುತ್ತಾರಾ? ಅನ್ನುವ ಪ್ರಶ್ನೆ ಕೂಡ ಇದೆ. ಹೀಗಾಗಿ ಈ ಮೂರು ಸಿನಿಮಾಗಳ ಮೊದಲ ದಿನದ ಗಳಿಕೆ ತುಂಬಾನೇ ಮುಖ್ಯ ಆಗಿದೆ.

ಸಿನಿಮಾಗಳಿಗೆ ನೈಟ್ ಕರ್ಫ್ಯೂ ಎಫೆಕ್ಟ್
ಹೊಸ ವರ್ಷಕ್ಕೆ ಜನರು ಗುಂಪು ಸೇರಬಹುದು. ಇದರಿಂದ ಕೊರೊನಾ ಸೋಂಕು ಹೆಚ್ಚಾಗಬಹುದು ಎಂಬ ಕಾರಣಕ್ಕೆ ಸರ್ಕಾರ ಡಿಸೆಂಬರ್ 28 ರಿಂದ 10 ದಿನಗಳ ಕಾಲ ನೈಟ್ ಕರ್ಫ್ಯೂ ಜಾರಿಗೆ ತಂದಿದೆ. ಹೀಗಾಗಿ ಸೆಕೆಂಡ್ ಶೋಗಳ ಮೇಲೆ ಪರಿಣಾಮ ಬೀರಲಿದೆ. ಕೆಲಸ ಮುಗಿಸಿ, ಸೆಕೆಂಡ್ ಶೋಗೆ ಸಿನಿಮಾ ನೋಡಲು ಬರುವುದು ವಾಡಿಕೆ. ಆದರೆ, ಮೊದಲ ವಾರ 'ಲವ್ ಯು ರಚ್ಚು', 'ಅರ್ಜುನ್ ಗೌಡ', 'ಹುಟ್ಟುಹಬ್ಬದ ಶುಭಾಶಯಗಳು' ಸಿನಿಮಾಗಳಿಗೆ ನೈಟ್ ಶೋದಿಂದ ಹಣ ಬರುವುದಿಲ್ಲ.

ಸಿನಿಮಾಗಳಿಗೆ ಡಿಸೆಂಬರ್ ಎಫೆಕ್ಟ್
ಡಿಸೆಂಬರ್ ತಿಂಗಳು ಸ್ಯಾಂಡಲ್‌ವುಡ್‌ಗೆ ಅದೃಷ್ಟದ ತಿಂಗಳು. ಈ ತಿಂಗಳಲ್ಲಿ ಬಿಡುಗಡೆಯಾದ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಬೇಜಾನ್ ಸದ್ದು ಮಾಡಿವೆ. ಬಾಕ್ಸಾಫೀಸ್‌ನಲ್ಲಿ ದಾಖಲೆ ಮಾಡಿದೆ. ಹೀಗಾಗಿ 'ಲವ್ ಯು ರಚ್ಚು', 'ಅರ್ಜುನ್ ಗೌಡ', 'ಹುಟ್ಟುಹಬ್ಬದ ಶುಭಾಶಯಗಳು' ಈ ಮೂರು ಸಿನಿಮಾಗಳೂ ಡಿಸೆಂಬರ್‌ನಲ್ಲಿಯೇ ತೆರೆಕಂಡಿವೆ. ಎಲ್ಲಾ ಅಡೆತಡೆಗಳ ಹೊರತಾಗಿಯೂ ಬಿಡುಗಡೆಯಾಗಿರುವ ಹೊಸ ಮೂರು ಸಿನಿಮಾಗಳಿಗೆ ಡಿಸೆಂಬರ್ ಅದೃಷ್ಟ ಕೈ ಹಿಡಿಯುತ್ತಾ ಅನ್ನುವುದು ನೋಡಬೇಕಿದೆ.


Click it and Unblock the Notifications











