Karnataka Bandh: "ತಮಿಳುನಾಡಿನವ್ರು ಹೋರಾಟ ಮಾಡ್ಬೇಕು, ನಾವು ಮಾಡ್ತಿದ್ದೀವಿ" ಉಪ್ಪಿ.."ನೆಲ, ಜಲಕ್ಕೆ ರಾಜಿ ಆಗಲ್ಲ" ಶೀಮುರಳಿ
ಕಾವೇರಿ ಕಾವು ದಿನ ದಿನಕ್ಕೆ ಹೆಚ್ಚಾಗುತ್ತಿದೆ. ಒಂದೇ ವಾರದಲ್ಲಿ ಎರಡು ಬಂದ್‌ಗಳು ನಡೆದಿವೆ. ರೈತರು ಹಾಗೂ ಕನ್ನಡ ಪರ ಸಂಘಟನೆಗಳು ಹೋರಾಟ ಮಾಡುತ್ತಿವೆ. ಈ ಸಂಬಂಧ ಇಂದು (ಸೆಪ್ಟೆಂಬರ್ 29) ಕರ್ನಾಟಕ ಬಂದ್‌ಗೂ ಕರೆ ನೀಡಲಾಗಿದೆ. ಈ ಬಂದ್‌ಗೆ ಕನ್ನಡ ಚಿತ್ರರಂಗ ಕೂಡ ಬೆಂಬಲವನ್ನು ವ್ಯಕ್ತ ಪಡಿಸಿದೆ.
ಕರ್ನಾಟಕ ಬಂದ್‌ಗೆ ಬೆಂಬಲ ನೀಡಲು ಚಿತ್ರರಂಗದ ಗಣ್ಯರು ಹಾಗೂ ನಟ-ನಟಿಯರು ಮುಂದಾಗಿದ್ದರು. ಕನ್ನಡದ ಸ್ಟಾರ್ ನಟರು ಎಂದಿನಂತೆ ಕಾವೇರಿ ವಿಷಯಕ್ಕೆ ಬಂದಾಗ ರೈತರ ಪರವಾಗಿ ನಿಂತಿದ್ದಾರೆ. ಅವರೂ ಹೋರಾಟದಲ್ಲಿ ಭಾಗಿಯಾಗಿದ್ದಾರೆ.

ಈ ಬಾರಿ ಕರ್ನಾಟಕ ಬಂದ್‌ಗೆ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್, ದರ್ಶನ್, ಉಪೇಂದ್ರ, ಶ್ರೀಮುರಳಿ ಸೇರಿದಂತೆ ಸ್ಟಾರ್ ನಟರೇ ಆಗಮಿಸಿದ್ದರು. ಈ ವೇಳೆ ಉಪೇಂದ್ರ ಹಾಗೂ ಶ್ರೀಮುರಳಿ ಕಾವೇರಿ ಸಮಸ್ಯೆ ಬಗ್ಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬೇಕು ಎಂದು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
"ಇದರ ಹಿಂದಿನ ಗುಟ್ಟೇನು?" ಉಪೇಂದ್ರ
"ನಾನು ಇಂಡಸ್ಟ್ರಿಗೆ ಬಂದ್ಮೇಲೆ 20ನೆಯದ್ದೋ.. 25ನೆಯದ್ದೋ ಗೊತ್ತಿಲ್ಲ. ಪ್ರತಿ ಬಾರಿ ಕಾವೇರಿ ಸಮಸ್ಯೆ ಬಂದಾಗ ಇದೇ ರೀತಿ ಸೇರುತ್ತಿರುತ್ತೇವೆ. ಇದೇ ರೀತಿ ಮಾತಾಡುತ್ತೇವೆ. ಪರಿಹಾರನೇ ಆಗದೇ ಇರುವ ಸಮಸ್ಯೆ ಅಂದರೆ, ಇದೊಂದೇ ಇರಬಹುದು. ನಾವೆಲ್ಲ ಸ್ವಲ್ಪ ವಿಚಾರವಂತರಾಗಬೇಕು. ಸ್ವಲ್ಪ ವಿಚಾರ ಮಾಡಿದರೆ ಗೊತ್ತಾಗುತ್ತೆ ಇದರ ಹಿಂದಿನ ರಹಸ್ಯವೇನು ಅಂತ." ಎಂದು ಉಪೇಂದ್ರ ಗುಡುಗಿದ್ದಾರೆ.

ಅವರು ಹೋರಾಟ ಮಾಡ್ಬೇಕು.. ನಾವು ಮಾಡ್ತಿದ್ದೀವಿ"
"ತಮಿಳುನಾಡಿನಲ್ಲಿ ಅವರು ಹೋರಾಟ ಮಾಡಬೇಕು. ನಮಗೆ ನೀರು ಬಿಡಿ ಅಂತ. ನಾವು ಬಿಡಬೇಡಿ ಅಂತ ಹೋರಾಟ ಮಾಡುತ್ತಿದ್ದೇವೆ. ಇದು ಬಹಳ ಆಶ್ಚರ್ಯ ಅಂತ ಅನಿಸುತ್ತಿದೆ. ಆ ದೇವರು ಎಲ್ಲರಿಗೂ ವೈಚಾರಿಕತೆ ಕೊಡಲಿ. ಎಲ್ಲರೂ ಬುದ್ದಿವಂತರಾಗೋಣ. ನಮ್ಮ ಸಮಸ್ಯೆಗೆ ನಾವೇ ಪರಿಹಾರ ಕಂಡುಕೊಳ್ಳೋಣ." ಎಂದು ರಿಯಲ್ ಸ್ಟಾರ್ ಉಪೇಂದ್ರ ಕನ್ನಡದ ಜನತೆಗೆ ಹಾಗೂ ರೈತರಿಗೆ ಕಿವಿ ಮಾತನ್ನು ಹೇಳಿದ್ದಾರೆ.
"ಮೊದಲು ನಮ್ಮ ನಾಡು, ನಮ್ಮ ರೈತರು" ಶ್ರೀಮುರಳಿ
"ಕಾವೇರಿ ನಮ್ಮ ಹಕ್ಕು. ಮೊದಲು ನಮ್ಮ ನಾಡು, ನಮ್ಮ ರೈತರು. ಅನ್ಯ ಭಾಷೆಯ ಬಗ್ಗೆ ಅನ್ಯ ಭಾಷಿಗರ ಬಗ್ಗೆ ಪ್ರೀತಿಯಿದೆ. ಆದರೆ, ನಮ್ಮ ಜಲ, ನಮ್ಮ ನೆಲ, ನಮ್ಮ ಗಡಿ ಭಾಷೆ ಅಂತ ಬಂದಾಗ ನಾವು ಸುಮ್ಮನೆ ಕೂರುವುದಿಲ್ಲ. ಕನ್ನಡಿಗರ ಧ್ವನಿಯಾಗಿರುತ್ತೇವೆ. ಎರಡು ರಾಜ್ಯಗಳ ನಡುವೆ ಇದೇ ವಿಚಾರಕ್ಕೆ ವಿವಾದ ಹುಟ್ಟಿಕೊಳ್ಳುತ್ತೆ. ಆದರೆ, ರಾಜಕಾರಣಿಗಳು ಸಮಸ್ಯೆ ಬಗೆ ಹರಿಸಲು ವಿಫಲರಾಗುತ್ತಿದ್ದಾರೆ. ಇದು ಕನ್ನಡಿಗೆ ಬೇಸರದ ವಿಷಯ." ಎಂದು ಶ್ರೀ ಮುರಳಿ ಹೇಳಿದ್ದಾರೆ.
"ನೀರಿನ ವಿಷಯದಲ್ಲಿ ರಾಜಕೀಯ ಮಾಡ್ಬೇಡಿ"
"ಈ ಬಾರಿ ಮಳೆಯ ಅಭಾವದಿಂದ ಹೆಚ್ಚಿದೆ. ಇದರಿಂದ ನಮ್ಮ ರೈತರಿಗೆ ಬೆಳೆಗಳನ್ನು ಬೆಳೆಯುವುದಕ್ಕೆ ನೀರಿಲ್ಲ. ಮುಂದಕ್ಕೆ ಕುಡಿಯೋ ನೀರು ಇರೋದಿಲ್ಲ. ಅಂತಹದ್ದರಲ್ಲಿ ಕುಡಿಯೋಕೆ ನೀರು ಹರಿಸಿದರೆ ಅಂತಹವರ ಗತಿ ಏನಾಗಬೇಕು. ನೀರಿನ ವಿಷಯದಲ್ಲಿ ರಾಜಕೀಯ ಮಾಡಬೇಡಿ. ಇದು ಕನ್ನಡಿಗರ ಸಹನೆಯ ಪ್ರಶ್ನೆ. ಸಹನೆ ಹೆಚ್ಚಾದಂತೆ ಕನ್ನಡಿಗರ ಕಿಚ್ಚು ಕೂಡ ಹೆಚ್ಚಾಗುತ್ತೆ. ಇದಕ್ಕೆ ಅವಕಾಶ ಮಾಡಿಕೊಡಬೇಡಿ. ನಾಡು, ನುಡಿ, ನೆಲ, ಜಲ ವಿಚಾರದಲ್ಲಿ ನಾವೆಂದಿಗೂ ರಾಜಿಯಾಗುವುದಿಲ್ಲ." ಎಂದೂ ಶ್ರೀಮುರಳಿ ಕಿಡಿ ಕಾರಿದ್ದಾರೆ.


Click it and Unblock the Notifications











