Upendra Ban: ಜಾತಿ ನಿಂದನೆ ಆರೋಪ.. 5 ವರ್ಷ ಉಪೇಂದ್ರ ಬ್ಯಾನ್? ಏನು ಹೇಳುತ್ತೆ ಫಿಲ್ಮ್ ಚೇಂಬರ್!
ಉಪೇಂದ್ರ ಇತ್ತೀಚೆಗೆ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿ ವಿವಾದಕ್ಕೆ ಸಿಲುಕಿದ್ದಾರೆ. ರಾಜ್ಯದಲ್ಲಿನ ವಿವಿಧ ಸಂಘಟನೆಗಳು ಉಪೇಂದ್ರ ವಿರುದ್ಧ ಕಿಡಿಕಾರುತ್ತಿದ್ದಾರೆ. ರಾಜ್ಯದ ಮೂಲೆ ಮೂಲೆಯಲ್ಲಿ ರಿಯಲ್ ಸ್ಟಾರ್ ಉಪೇಂದ್ರ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿವೆ.
ಉಪೇಂದ್ರ ಅವರೇ ಕಟ್ಟಿರುವ ಪ್ರಜಾಕೀಯ ಪಕ್ಷ 6ನೇ ವರ್ಷಾಚರಣೆ ಮಾಡಿ ಸಂಭ್ರಮಿಸಿತ್ತು. ಈ ಸಂದರ್ಭದಲ್ಲಿ ಉಪ್ಪಿ ಲೈವ್ ಬಂದಿದ್ದರು. ಆ ವೇಳೆ ಮಾತಾಡುವಾಗ ಉಪೇಂದ್ರ ಪಕ್ಷದ ಕೆಲವು ವಿಷಯಗಳನ್ನು ಪ್ರಸ್ತಾಪ ಮಾಡಿದ್ದರು. ಈ ವೇಳೆ ಬಳಸಿದ ಒಂದು ಗಾದೆ ಮಾತು ಹಲವರ ಕೆಂಗಣ್ಣಿಗೆ ಗುರಿಯಾಗುವಂತೆ ಮಾಡಿದೆ.

ಜಾತಿ ನಿಂದನೆ ಮಾಡಿದ ಆರೋಪವನ್ನು ಉಪೇಂದ್ರ ಎದುರಿಸುತ್ತಿದ್ದಾರೆ. ಲೈವ್‌ಗೆ ಬಂದಿದ್ದ ಉಪ್ಪಿ "ಊರು ಎಂದ ಮೇಲೆ ಹೊಲಗೇರಿ ಇರುತ್ತೆ" ಎಂಬ ಗಾದೆ ಮಾತನ್ನು ಉಪಯೋಗಿಸಿದ್ದರು. ಇದರ ವಿರುದ್ಧ ಕೆಲವು ಸಂಘಟನೆಗಳು ಕಿಡಿಕಾರುತ್ತಿವೆ. ಹಾಗೇ ಉಪ್ಪಿಯನ್ನು ಬ್ಯಾನ್ ಮಾಡಬೇಕು ಅಂತ ಸಂಘಟನೆಯೊಂದು ಫಿಲ್ಮ್ ಚೇಂಬರ್‌ಗೆ ದೂರನ್ನು ನೀಡಿದೆ.
ಕರ್ನಾಟಕ ರಣಧೀರ ಪಡೆ ಎಂಬ ಸಂಘಟನೆಯ ಕಾರ್ಯಕರ್ತರು ಉಪ್ಪಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಈ ಸಂಬಂಧ ಕರ್ನಾಟಕ ಚಲನ ಚಿತ್ರ ವಾಣಿಜ್ಯ ಮಂಡಳಿಗೆ ದೂರನ್ನು ನೀಡಿದ್ದು ಉಪೇಂದ್ರ ಅವರನ್ನು 5 ವರ್ಷ ಚಿತ್ರರಂಗದಿಂದ ಬ್ಯಾನ್ ಮಾಡುವಂತೆ ದೂರನ್ನು ಸಲ್ಲಿಸಿದ್ದಾರೆ.
ಕರ್ನಾಟಕ ರಣಧೀರ ಪಡೆಯ ಭೈರಪ್ಪ ಹರೀಶ್ ಕುಮಾರ್ ಎಂಬುವವರು ಉಪೇಂದ್ರ ವಿರುದ್ಧ ಫಿಲ್ಮ್ ಚೇಂಬರ್‌ಗೆ ದೂರನ್ನು ಕೊಟ್ಟಿದ್ದಾರೆ. ಉಪ್ರೇಂದ್ರ ಹೇಳಿಕೆಯನ್ನು ಖಂಡಿಸಿ, 5 ವರ್ಷ ಬ್ಯಾನ್ ಮಾಡಲೇ ಬೇಕು ಅಂತ ಪಟ್ಟು ಹಿಡಿದು ಕೂತಿದ್ದಾರೆ. ಇದೇ ವೇಳೆ " ಉಪೇಂದ್ರ ಸಿನಿಮಾದಲ್ಲಿ ಮಾತ್ರ ನಾಯಕ. ರಿಯಲ್ ಹೀರೊ ಯಾವತ್ತೂ ಓಡಿ ಹೋಗಲ್ಲ. ಜಾತಿ ಕೇರಿ ಬಗ್ಗೆ ಮಾತಾನಾಡುವವರನ್ನು ಬ್ಯಾನ್ ಮಾಡಬೇಕು. ದಲಿತ ಕೇರಿ ಹಾಗೂ ಊರನಲ್ಲಿ ಯಾರು ಯಾರು ಇರಬೇಕು ಅಂತ ಉಪೇಂದ್ರ ಅವರು ಸ್ಪಷ್ಟಪಡಿಸಬೇಕು." ಎಂದು ಕರ್ನಾಟಕ ರಣಧೀರ ಪಡೆಯ ಭೈರಪ್ಪ ಹರೀಶ್ ಕುಮಾರ್ ಒತ್ತಾಯಿಸಿದ್ದಾರೆ.

ಕರ್ನಾಟಕ ಫಿಲ್ಮ್ ಚೇಂಬರ್ ಪರವಾಗಿ ಗೌರವ ಕಾರ್ಯದರ್ಶಿ ಸುಂದರ್ ರಾಜ್ ದೂರನ್ನು ಸ್ವೀಕರಿಸಿದ್ದಾರೆ. ಇದೇ ವೇಳೆ ಸಂಘಟನೆಯ ಕಾರ್ಯಕರ್ತರಿಗೆ ಉಪೇಂದ್ರ ಅವರನ್ನು ಕರೆ ಮಾತಾಡುವುದಾಗಿ ಭರವಸೆಯನ್ನು ನೀಡಿದ್ದಾರೆ.
ಉಪೇಂದ್ರ ಉದ್ದೇಶ ಪೂರ್ವಕವಾಗಿ ಹೀಗೆ ಮಾತಾಡಿದ್ದಾರೆ ಅಂತ ಅನಿಸುತ್ತಿಲ್ಲ. ಅಲ್ಲದೆ ಫಿಲ್ಮ್ ಚೇಂಬರ್‌ಗೆ ಉಪೇಂದ್ರ ಅವರನ್ನು ಬ್ಯಾನ್ ಮಾಡುವ ಅಧಿಕಾರವಿಲ್ಲ. ಫಿಲ್ಮ್ ಚೇಂಬರ್‌ನ ಕಾರ್ಯದರ್ಶಿಯಾಗಿ ಬ್ಯಾನ್ ಮಾಡಬೇಕೆಂಬ ಮನವಿಯನ್ನು ಸ್ವೀಕರಿಸಿದ್ದೇನೆ. ಉಪೇಂದ್ರ ಅವರನ್ನು ಕರೆಸಿ ಮಾತಾಡುತ್ತೇವೆ. ಕಾನೂನು ಪ್ರಕಾರ ಬ್ಯಾನ್ ಮಾಡಲು ಬರುವುದಿಲ್ಲ" ಎಂದು ಸುಂದರ್ ರಾಜ್ ಹೇಳಿದ್ದಾರೆ.


Click it and Unblock the Notifications











