State Award 2020: ಪ್ರಜ್ವಲ್ ದೇವರಾಜ್, ಅಕ್ಷತಾ ಅತ್ಯುತ್ತಮ ನಟ-ನಟಿ ಪ್ರಶಸ್ತಿ; ಅವಾರ್ಡ್ ಗೆದ್ದವರು ಲಿಸ್ಟ್ ಇಲ್ಲಿದೆ
2020ನೇ ವರ್ಷ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಘೋಷಣೆಯಾಗಿದೆ. ಇತ್ತೀಚೆಗೆ 2019ನೇ ಸಾಲಿನ ರಾಜ್ಯ ಪ್ರಶಸ್ತಿ ಘೋಷಣೆಯಾಗಿತ್ತು. ಅತ್ಯುತ್ತಮ ನಟ ಪ್ರಶಸ್ತಿಯನ್ನು ಕಿಚ್ಚ ಸುದೀಪ್‌ಗೆ ನೀಡಲಾಗಿತ್ತು. ಆದರೆ, ಈ ಪ್ರಶಸ್ತಿಯನ್ನು ಕಿಚ್ಚ ಸುದೀಪ್ ಒಲ್ಲೆ ಎಂದಿದ್ದರು. ಈ ಬಗ್ಗೆ ವಾದ-ವಿವಾದಗಳು ನಡೆಯುತ್ತಿರುವಾಗಲೇ 2020ನೇ ಸಾಲಿನ ಪ್ರಶಸ್ತಿಯನ್ನು ಘೋಷಣೆಯಾಗಿದೆ.
2020ನೇ ಸಾಲಿನಲ್ಲಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪ್ರಜ್ವಲ್ ದೇವರಾಜ್ ಪಾಲಾಗಿದೆ. ಹಾಗೇ ಅತ್ಯುತ್ತಮ ನಟಿ ಪ್ರಶಸ್ತಿಗೆ ಅಕ್ಷತಾ ಪಾಂಡವಪುರ ಆಯ್ಕೆಯಾಗಿದ್ದಾರೆ. 'ಜಂಟಲ್‌ಮ್ಯಾನ್' ಸಿನಿಮಾದ ಅದ್ಭುತ ನಟನೆಗೆ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್‌ಗೆ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದೆ. ಹಾಗೇ 'ಪಿಂಕಿ ಎಲ್ಲಿ?' ಸಿನಿಮಾ ಅಭಿನಯಕ್ಕಾಗಿ ಅಕ್ಷತಾ ಪಾಂಡವಪುರ ಅವರನ್ನು ಆಯ್ಕೆ ಮಾಡಲಾಗಿದೆ.

ಅಂದ್ಹಾಗೆ 2020ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಲಹಾ ಸಮಿತಿಯ ಮುಂದಾಳತ್ವವನ್ನು ಬಿ.ಎಸ್. ಲಿಂಗದೇವರು ವಹಿಸಿಕೊಂಡಿದ್ದರು. ಈ ಆಯ್ಕೆ ಸಮಿತಿ ಸುಮಾರು 66 ಸಿನಿಮಾಗಳನ್ನು ವೀಕ್ಷಣೆ ಮಾಡಿ ಹಲವು ವಿಭಾಗಗಳಿಗೆ ಸಿನಿಮಾಗಳನ್ನು ಆಯ್ಕೆ ಮಾಡಿದ್ದಾರೆ. ಇದರಲ್ಲಿ 'ಪಿಂಕಿ ಎಲ್ಲಿ?', 'ವರ್ಣಪಟಲ', 'ಹರಿವ ನದಿಗೆ ಮೈಯೆಲ್ಲಾ ಕಾಲು' ಸಿನಿಮಾಗಳಿಗೆ ಮೂರು ಅತ್ಯುತ್ತಮ ಪ್ರಶಸ್ತಿಗಳನ್ನು ನೀಡಲಾಗಿದೆ.
ಈ ಪ್ರಮುಖ ಪ್ರಶಸ್ತಿಗಳ ಹೊರತಾಗಿ ಬೇರೆ ಬೇರೆ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಆಯ್ಕೆ ಮಾಡಲಾಗಿದೆ. ಒಟ್ಟು 28 ವಿಭಾಗಗಳಲ್ಲಿ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಆ ಎಲ್ಲಾ ಪ್ರಶಸ್ತಿಗಳ ಸಂಪೂರ್ಣ ಪಟ್ಟಿ ಇಲ್ಲಿದೆ.
ಮೊದಲ ಅತ್ಯುತ್ತಮ ಚಿತ್ರ: ಪಿಂಕಿ ಎಲ್ಲಿ ?
ಎರಡನೇ ಅತ್ಯುತ್ತಮ ಚಿತ್ರ: ವರ್ಣ ಪಟಲ
ಮೂರನೇ ಅತ್ಯುತ್ತಮ ಚಿತ್ರ: ಹರಿವ ನದಿಗೆ ಮೈಯೆಲ್ಲ ಕಾಲು
ವಿಶೇಷ ಸಾಮಾಜಿಕ ಕಳಕಳಿ ಚಿತ್ರ: ಗಿಳಿಯು ಪಂಜರದೊಳಿಲ್ಲ ಮತ್ತು ಈ ಮಣ್ಣು
ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ: ಫೋರ್ ವಾಲ್ಸ್
ಅತ್ಯುತ್ತಮ ಮಕ್ಕಳ ಚಿತ್ರ: ಪದಕ
ಪ್ರಥಮ ನಿರ್ದೇಶನದ ಅತ್ಯುತ್ತಮ ಚಿತ್ರ: ನೀಲಿ ಹಕ್ಕಿ( ಗಣೇಶ್ ಹೆಗ್ಡೆ)
ಅತ್ಯುತ್ತಮ ಕರ್ನಾಟಕ ಪ್ರಾದೇಶಿಕ ಭಾಷಾ ಚಿತ್ರ; ಜೇಟಿಗೆ (ತುಳು)
ಅತ್ಯುತ್ತಮ ನಟ: ಪ್ರಜ್ವಲ್ ದೇವರಾಜ್
ಅತ್ಯುತ್ತಮ ನಟಿ: ಅಕ್ಷತಾ ಪಾಂಡವಪುರ
ಅತ್ಯುತ್ತಮ ಪೋಷಕ ನಟ: ರಮೇಶ್ ಪಂಡಿತ್ (ತಲೆದಂಡ)
ಅತ್ಯುತ್ತಮ ಪೋಷಕ ನಟಿ: ಮಂಜುಳಮ್ಮ (ದಂತಪುರಾಣ)
ಅತ್ಯುತ್ತಮ ಕಥೆ: ಶಶಿಕಾಂತ್ ಗಟ್ಟಿ (ರಾಂಚಿ)
ಅತ್ಯುತ್ತಮ ಚಿತ್ರಕಥೆ: ರಾಘವೇಂದ್ರ ಕುಮಾರ(ಚಾಂದಿನಿ ಬಾರ್)
ಅತ್ಯುತ್ತಮ ಸಂಭಾಷಣೆ: ವೀರಪ್ಪ ಮರಳವಾಡಿ (ಹೂವಿನ ಹಾರ)
ಅತ್ಯುತ್ತಮ ಛಾಯಾಗ್ರಹಣ: ಅಶೋಕ್ ಕಶ್ಯಪ್(ತಲೆದಂಡ)
ಅತ್ಯುತ್ತಮ ಸಂಗೀತ ನಿರ್ದೇಶನ: ಗಗನ್ ಬಡೇರಿಯಾ (ಮಾಲ್ಗುಡಿ ಡೇಸ್)
ಅತ್ಯುತ್ತಮ ಸಂಕಲನ: ನಾಗೇಂದ್ರ ಕೆ. ಉಜ್ಜನಿ ( ಆಕ್ಟ್ 1978)
ಅತ್ಯುತ್ತಮ ಬಾಲ ನಟ: ಅಹಿಲ್ ಅನ್ಸಾರಿ (ದಂತ ಪುರಾಣ)
ಅತ್ಯುತ್ತಮ ಬಾಲ ನಟಿ: ಬೇಬಿ ಹಿತೈಶಿ ಪೂಜಾರ (ಪಾರು)
ಅತ್ಯುತ್ತಮ ಕಲಾ ನಿರ್ದೇಶನ: ಗುಣಶೇಖರ (ಬಿಚ್ಚುಗತ್ತಿ)
ಅತ್ಯುತ್ತಮ ಗೀತ ರಚನೆ: ಗಾರ್ಗಿ ಕಾರೆಹಕ್ಲು (ಪರ್ಜನ್ಯ ಚಿತ್ರದ 'ಮೌನವು ಮಾತಾಗಿದೆ) ಮತ್ತು ಸಚಿನ್ ಶೆಟ್ಟಿ ಕುಂಬ್ಳೆ (ಈ ಮಣ್ಣು ಚಿತ್ರದ 'ದಾರಿಯೊಂದು ಹುಡುಕುತಿದೆ')
ಅತ್ಯುತ್ತಮ ಹಿನ್ನೆಲೆ ಗಾಯಕ: ಅನಿರುದ್ಧ್ ಶಾಸ್ತ್ರಿ (ಆಚಾರ್ಯ ಶ್ರೀಶಂಕರ)
ಅತ್ಯುತ್ತಮ ಹಿನ್ನೆಲೆ ಗಾಯಕಿ: ಅರುಂಧತಿ ವಸಿಷ್ಠ (ದಂತ ಪುರಾಣ)
ತೀರ್ಪುಗಾರರ ವಿಶೇಷ ಪ್ರಶಸ್ತಿ: ಸಂಚಾರಿ ವಿಜಯ್ (ಮರಣೋತ್ತರ ಪ್ರಶಸ್ತಿ)
ಶ್ರೀವಲ್ಲಿ (ವಸ್ತ್ರ ವಿನ್ಯಾಸ 'ಸಾರವಜ್ರ'), ವಿ.ಜಿ ರಾಜನ್ (ಶಬ್ಧ ಗ್ರಹಣ 'ಅಮೃತ್ ಅಪಾರ್ಟ್‌ಮೆಂಟ್'),
ತೀರ್ಪುಗಾರರ ವಿಶೇಷ ಪ್ರಶಸ್ತಿ (ಪ್ರಮಾಣ ಪತ್ರ); ವಿಶ್ವಾಸ್ ಕೆ.ಎಸ್. (ವಿಶೇಷ ಚೇತನ ನಟ 'ಅರಬ್ಬೀ')
ಅತ್ಯುತ್ತಮ ನಿರ್ಮಾಣ ನಿರ್ವಾಹಕ: ಚಂಪಕಧಾಮ ಬಾಬು (ಕನ್ನಡಿಗ)


Click it and Unblock the Notifications











