ಮೈಸೂರಲ್ಲಿ ರಾಜ್ಯ ಚಲನಚಿತ್ರ ಪ್ರಶಸ್ತಿ ಸಮಾರಂಭ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ 2012 ಮತ್ತು 2013ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ನಡೆಸಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ.
ಫೆಬ್ರವರಿ 28 ರಂದು ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ವರ್ಣರಂಜಿತ ಸಮಾರಂಭ ನಡೆಯಲಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಸಿ.ಶಿಖಾ ಹೇಳಿದ್ದಾರೆ.
ರಾಜ್ಯ ಚಲನಚಿತ್ರ ಪ್ರಶಸ್ತಿ ಸಮಾರಂಭವು ಬೃಹತ್ ಕಾರ್ಯಕ್ರಮವಾಗಿದ್ದು, ಯಾವುದೇ ಲೋಪದೋಷಗಳಿಗೆ ಅವಕಾಶ ಮಾಡಿಕೊಡದೆ ವ್ಯವಸ್ಥಿತವಾಗಿ ನಡೆಯಲು ಎಲ್ಲಾ ಇಲಾಖೆಗಳ ಸಹಕಾರ ಮುಖ್ಯವಾಗಿದೆ.

ಸಮಾರಂಭಕ್ಕೆ ಹೆಚ್ಚಿನ ಕನ್ನಡ ಚಲನಚಿತ್ರ ಕಲಾವಿದರು ಬರುವುದರಿಂದ ನಿರೀಕ್ಷೆಗೆ ಮೀರಿ ಜನರು ಸೇರುವ ಸಂಭವವಿದೆ. ಪೊಲೀಸ್ ಇಲಾಖೆ ವತಿಯಿಂದ ಕಾರ್ಯಕ್ರಮಕ್ಕೆ ಆಗಮಿಸುವ ಗಣ್ಯರ ಹಾಗೂ ಸಾರ್ವಜನಿಕ ವಾಹನಗಳಿಗೆ ವ್ಯವಸ್ಥಿತವಾಗಿ ನಿಲುಗಡೆ ಸ್ಥಳ ಅವಕಾಶಕ್ಕೆ ಕ್ರಮವಹಿಸಬೇಕು ಎಂದು ಶಿಖಾ ಅವರು ಹೇಳಿದರು. [2013ನೇ ಸಾಲಿನ ಪ್ರಶಸ್ತಿಗೆ ಭಾಜನರಾದವರ ಪಟ್ಟಿ]
ಪ್ರತಿ ಸಾಲಿನಲ್ಲಿ 25 ವಿಭಾಗಗಳಲ್ಲಿ ಚಲನಚಿತ್ರ ಪ್ರಶಸ್ತಿ ನೀಡಲಾಗುವುದು. ಈ ಬಾರಿ ಎರಡು ಸಾಲಿಗೆ ಸೇರಿದ ಪ್ರಶಸ್ತಿ ಪ್ರದಾನ ಮಾಡುವುದರಿಂದ 50 ಕಲಾವಿದರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಮುಖ್ಯಮಂತ್ರಿಗಳು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ ಎಂದು ವಾರ್ತಾ ಇಲಾಖೆ ನಿರ್ದೇಶಕ ಎನ್ ಆರ್ ವಿಶು ಕುಮಾರ್ ಹೇಳಿದರು.
ಚಲನಚಿತ್ರ ಕಲಾವಿದರಿಂದ ಕನ್ನಡ ಚಲನಚಿತ್ರದ ಜನಪ್ರಿಯ ಹಳೆ ಹಾಗೂ ಹೊಸ ಗೀತೆಗಳ ಆಧಾರಿತ ನೃತ್ಯ ಕಾರ್ಯಕ್ರಮ ಹಾಗೂ ಆಕರ್ಷಿತ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜಿಸಲಾಗುವುದು ಎಂದು ನಿರ್ದೇಶಕರು ಹೇಳಿದರು.

ಬಿಗಿ ಭದ್ರತಾ ವ್ಯವಸ್ಥೆ: ಸಮಾರಂಭ ನಡೆಯುವ ದಿನದಂದು ಮೈಸೂರು ನಗರದಲ್ಲಿ ವಾಹನ ಸಂಚಾರ ಹೆಚ್ಚಾಗಿರುವುದರಿಂದ ಪೊಲೀಸ್ ಇಲಾಖೆಯು ಮುಂಜಾಗ್ರತಾ ಕ್ರಮಕೈಗೊಳ್ಳಬೇಕು ಹಾಗೂ ಸಮಾರಂಭ ಸ್ಥಳದ ಸುತ್ತ ಸೂಕ್ತ ಭದ್ರತೆ ವ್ಯವಸ್ಥೆ ಒದಗಿಸಬೇಕು ಎಂದು ಸೂಚಿಸಿದರು.
ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಸ್ವಚ್ಛತೆ, ಕುಡಿಯುವ ನೀರಿನ ವ್ಯವಸ್ಥೆ ಹಾಗೂ ತಾತ್ಕಾಲಿಕ ಶೌಚಾಲಯಗಳ ನಿರ್ಮಾಣವಾಗಬೇಕು. ಈ ಸಂಬಂಧ ಯಾರಿಂದಲೂ ದೂರು ಕೇಳಿಬರದಂತೆ ಮುಂಚಿತವಾಗಿ ಸಿಬ್ಬಂದಿಗಳನ್ನು ನಿಯೋಜಿಸಿ ಕ್ರಮವಹಿಸಲು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಶಿಖಾ ತಿಳಿಸಿದರು.


Click it and Unblock the Notifications











