ದರ್ಶನ್ ಚಪ್ಪಲಿ ಪ್ರಕರಣದ ಬಗ್ಗೆ ಕ್ರಮಕೈಗೊಳ್ಳದಿದ್ರೆ ಚಿತ್ರಮಂದಿರಗಳು ಬಂದ್: ಸೇನೆ ಎಚ್ಚರಿಕೆ!
ಚಾಲೆಂಜಿಂಗ್ ಸ್ಟಾರ್ ದರ್ಶನ್ 'ಕ್ರಾಂತಿ' ಸಿನಿಮಾದ ಎರಡನೇ ಹಾಡು ಬಿಡುಗಡೆಗೆ ಹೊಸಪೇಟೆಗೆ ತೆರಳಿದ್ದರು. ಆ ವೇಳೆ ಕಿಡಿಗೇಡಿಗಳು ದರ್ಶನ್ ಮೇಲೆ ಚಪ್ಪಲಿ ಎಸೆದ ಪ್ರಕರಣ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.
ಕಿಚ್ಚ ಸುದೀಪ್ ಸೇರಿದಂತೆ ಇಡೀ ಸ್ಯಾಂಡಲ್‌ವುಡ್ ನಟ ದರ್ಶನ್ ಬೆಂಬಲಕ್ಕೆ ನಿಂತಿದೆ. ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ನಡೆಯುತ್ತಿರೋ #WeStandWithDboss ಅಭಿಯಾನಕ್ಕೆ ಕೈ ಜೋಡಿಸುತ್ತಿದ್ದಾರೆ.
ಅದೇ ಇನ್ನೊಂದು ಕಡೆ ಕರ್ನಾಟಕ ಹಲವು ಜಿಲ್ಲೆಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿದೆ. ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ ಭಾಗಗಳಲ್ಲಿ ದರ್ಶನ್ ಚಪ್ಪಲಿ ಪ್ರಕರಣದ ವಿರುದ್ಧ ವಿರೋಧ ವ್ಯಕ್ತವಾಗಿದೆ. ಇದೇ ವೇಳೆ ಚಿತ್ರದುರ್ಗದಲ್ಲಿ ಚಿತ್ರಮಂದಿರಗಳನ್ನು ಬಂದ್ ಮಾಡುವ ಎಚ್ಚರಿಕೆಯನ್ನೂ ನೀಡಲಾಗಿದೆ.

ಚಿತ್ರದುರ್ಗದಲ್ಲಿ ಪ್ರತಿಭಟನೆ
ಚಾಲೆಂಜಿಂಗ್ ಸ್ಟಾರ್ ದರ್ಶನ ಮೇಲೆ ಚಪ್ಪಲಿ ಎಸೆದ ಪ್ರಕರಣವನ್ನು ಎಲ್ಲೆಡೆ ಖಂಡಿಸಲಾಗುತ್ತಿದೆ. ಚಿತ್ರದುರ್ಗ ನಗರದಲ್ಲಿ ಕರುನಾಡ ವಿಜಯಸೇನೆ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಭಟನೆ ನಡೆಸಿದೆ. ಹೊಸಪೇಟೆಯಲ್ಲಿ ಕ್ರಾಂತಿ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಕಿಡಿಗೇಡಿಗಳು ಚಪ್ಪಲಿ ಎಸೆದು ಅವಮಾನ ಮಾಡಿರುವುದನ್ನು ಖಂಡಿಸಿ ಕರುನಾಡ ವಿಜಯಸೇನೆಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದೆ. ಹಾಗೇ ಅಪರ ಜಿಲ್ಲಾಧಿಕಾರಿ ಮೂಲಕ ರಾಜ್ಯದ ಮುಖ್ಯಮಂತ್ರಿ ಹಾಗೂ ಗೃಹಸಚಿವರಿಗೆ ಮನವಿ ಕೂಡ ಸಲ್ಲಿಸಲಾಗಿದೆ.

ಚಿತ್ರಮಂದಿರ ಬಂದ್ ಮಾಡುವ ಎಚ್ಚರಿಕೆ
"ಯಾವೊಬ್ಬ ಕನ್ನಡ ನಟನಿಗೂ ಇಂತಹ ಅವಮಾನವಾಗಬಾರದು. ರಾಜ್ಯದ ಮುಖ್ಯಮಂತ್ರಿ ಹಾಗೂ ಗೃಹಮಂತ್ರಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಒಂದು ವಾರದೊಳಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದೆ ಹೋದರೆ, ಚಿತ್ರದುರ್ಗ ನಗರದಲ್ಲಿರುವ ಎಲ್ಲಾ ಚಿತ್ರಮಂದಿರಗಳನ್ನು ಬಂದ್ ಮಾಡುವುದಾಗಿ" ಕರುನಾಡ ವಿಜಯಸೇನೆ ಎಚ್ಚರಿಕೆ ನೀಡಿದೆ.

'ಕನ್ನಡ ಭುವನೇಶ್ವರಿಗೆ ಅವಮಾನ'
"ವಿಜಯನಗರ ಜಿಲ್ಲೆ ಹೊಸಪೇಟೆಯಲ್ಲಿ ಕ್ರಾಂತಿ ಕನ್ನಡ ಚಲನಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭ ನಡೆದಿದೆ. ಈ ಕಾರ್ಯಕ್ರಮಕ್ಕೆ ಹೋಗಿದ್ದ ನಟ ದರ್ಶನ್‍ಗೆ ಕಿಡಿಗೇಡಿಗಳು ಚಪ್ಪಲಿ ಎಸೆದಿದ್ದು ಇದರಿಂದ ಕನ್ನಡ ಭುವನೇಶ್ವರಿಗೆ ಅವಮಾನಿಸಿದಂತಾಗಿದೆ. ಈ ಹೀನ ಕೃತ್ಯ ನಡೆಸಿರುವವರನ್ನು ಕೂಡಲೆ ಬಂಧಿಸಿ ತನಿಖೆಗೆ ಒಳಪಡಿಸಬೇಕು. ಇಲ್ಲದಿದ್ದರೆ ಇಂತಹ ಘಟನೆಗಳು ನಾಡಿನಲ್ಲಿ ಮರುಕಳಿಸುತ್ತಿರುತ್ತವೆ." ಎಂದು ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದ್ದಾರೆ.

ಸ್ಯಾಂಡಲ್‌ವುಡ್ ದರ್ಶನ್ ಬೆಂಬಲ
ದರ್ಶನ್ ಮೇಲೆ ಕಿಡಿಗೇಡಿಗಳು ಚಪ್ಪಲಿ ಎಸೆದಿರುವುದನ್ನು ಸ್ಯಾಂಡಲ್‌ವುಡ್ ಮಂದಿ ಖಂಡಿಸಿದ್ದಾರೆ. ಕಿಚ್ಚ ಸುದೀಪ್, ಶಿವಣ್ಣರಿಂದ ಹಿಡಿದು ಕನ್ನಡದ ಬಹುತೇಕ ನಟರು ಈ ಕೃತ್ಯದ ವಿರುದ್ಧ ಕಿಡಿಕಾರಿದ್ದಾರೆ. ಮೊದಲಿಗೆ ಫ್ಯಾನ್ಸ್ ಅಂದಿದ್ದು, ಈಗ ರಾಜಕೀಯ ಮುಖಂಡರ ಕಡೆಗೆ ಪ್ರಕರಣ ವಾಲುತ್ತಿದೆ. ಅಸಲಿಗೆ ದರ್ಶನ್ ಚಪ್ಪಲಿ ಪ್ರಕರಣ ಎತ್ತ ಸಾಗುತ್ತಿದೆ ಅನ್ನೋದು ಸದ್ಯಕ್ಕೆ ಕುತೂಹಲ ಮೂಡಿಸಿದೆ. ಜೊತೆಗೆ ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ.


Click it and Unblock the Notifications











