"ಅಪ್ಪ ಹೊಟ್ಟೆ ಬಟ್ಟೆಗೆ ಚೆನ್ನಾಗಿ ಮಾಡಿಟ್ಟು ಹೋಗಿದ್ದಾರೆ.. ಆದರೆ, ಸಿನಿಮಾ..?"; ಕಾಶೀನಾಥ್ ಪುತ್ರ ಅಭಿಮನ್ಯು
ಕನ್ನಡ ಚಿತ್ರರಂಗ ಕಂಡ ಕ್ರಿಯೇಟಿವ್ ಡೈರೆಕ್ಟರ್‌ಗಳಲ್ಲಿ ಕಾಶೀನಾಥ್ ಕೂಡ ಒಬ್ಬರು. 80ರ ದಶಕದಲ್ಲಿ ಕಾಶೀನಾಥ್ ಮಾಡಿದ ಸಿನಿಮಾಗಳು ಇಂದಿನ ಪೀಳಿಗೆಗೂ ಮಾಡುವುದಕ್ಕೆ ಸಾಧ್ಯವಿಲ್ಲ. ಅದಕ್ಕೆ ಕಾಶೀನಾಥ್‌ಗೆ ಪ್ರತ್ಯೇಕ ಫ್ಯಾನ್ ಫಾಲೋವಿಂಗ್ ಇತ್ತು. ಅವರ ಸಿನಿಮಾಗಳು ಯಾವಾಗ, ಎಲ್ಲಿ ಪ್ರಸಾರ ಆದರೂ ಅದನ್ನು ನೋಡಿ ಎಂಜಾಯ್ ಮಾಡುತ್ತಿದ್ದ ಒಂದು ವರ್ಗವಿತ್ತು.
ಕಾಶೀನಾಥ್ ಅಗಲಿದ ಬಳಿಕ ಅವರ ಪುತ್ರ ಅಭಿಮನ್ಯು ಅವರ ಸ್ಥಾನವನ್ನು ತುಂಬ ಬಹುದೆಂಬ ನಿರೀಕ್ಷೆಯಿತ್ತು. ಆದರೆ, ಅದು ಸಾಧ್ಯವಾಗಿಲ್ಲ. ಅಭಿಮನ್ಯು ತನ್ನದೇ ಬೇರೆ ಜಾನರ್ ಎಂದು ಅವರದ್ದೇ ದಾರಿಯಲ್ಲಿ ಹೊರಟು ನಿಂತಿದ್ದಾರೆ. ಒಂದಿಷ್ಟು ಪ್ರಯತ್ನಗಳ ಬಳಿಕ ಕಾಶೀನಾಥ್ ಪುತ್ರ ಕೆಲವು ವಿಭಿನ್ನ ಸಿನಿಮಾಗಳಲ್ಲಿ ಕಾಣಿಸಿಕೊಂಡರು. ಆದರೆ, ಅದು ಅಂದುಕೊಂಡಷ್ಟು ಯಶಸ್ಸು ಕಾಣಲಿಲ್ಲ. ಹೀಗಾಗಿ ಈಗ ಅಪ್ಪನ ಹಾದಿಯಲ್ಲೇ ಸಾಗುವುದಕ್ಕೆ ನಿರ್ಧರಿಸಿದ್ದಾರೆ.

ಅದರ ಮೊದಲ ಪ್ರಯತ್ನವೇ 'ಅಭಿಮನ್ಯ ಸನ್ ಆಫ್ ಕಾಶೀನಾಥ್'. ಈ ಸಿನಿಮಾದಲ್ಲಿ ಕಾಶೀನಾಥ್ ಪುತ್ರ ಅಭಿಮನ್ಯು ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಅಭಿಮನ್ಯು ಡೈಲಿ ಮಾಧ್ಯಮ ಯೂಟ್ಯೂಬ್ ಚಾನೆಲ್‌ಗೆ ಸಂದರ್ಶನ ನೀಡಿದ್ದು, ಇದರಲ್ಲಿ ಅವರ ತಂದೆ, ತಂದೆ ದುಡಿಮೆ, ಮುಂದಿನ ಸಿನಿಮಾ ಬಗ್ಗೆ ಓಪನ್ ಆಗಿ ಮಾತಾಡಿದ್ದಾರೆ. ಅದರಲ್ಲಿ "ಅಪ್ಪ ನಮ್ಮ ಹೊಟ್ಟೆ ಬಟ್ಟೆಗೆ ಚೆನ್ನಾಗಿ ಮಾಡಿಟ್ಟು ಹೋಗಿದ್ದಾರೆ" ಎಂಬ ಮಾತು ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿದೆ.
ಸಿನಿಮಾವೇ ಜೀವನ ಎಂದುಕೊಂಡಿರೋ ಅಭಿಮನ್ಯು ತಂದೆಯ ನಿಧನದ ಬಳಿಕ ನಟನೆಯಿಂದ ಗ್ಯಾಪ್ ತೆಗೆದುಕೊಂಡಿದ್ದರು. ಆ ಬಳಿಕ ಮತ್ತೆ ಸಿನಿಮಾ ಮಾಡುತ್ತಿದ್ದು, ಅದರಲ್ಲಿ 'ಅಭಿಮನ್ಯು ಸನ್ ಆಫ್ ಕಾಶೀನಾಥ್' ಕೂಡ ಒಂದು. ಈ ಸಂದರ್ಶನದಲ್ಲಿ ತಂದೆ ಕಾಶೀನಾಥ್ ಅವರಿಗೆ ಹಣ ಕೊರತೆಯನ್ನು ಮಾಡಿಲ್ಲ ಎಂದು ಹೇಳಿಕೊಂಡಿದ್ದಾರೆ.
"ಹಣಕಾಸಿನ ವಿಚಾರದಲ್ಲಿ ಸದೃಢವಾಗುವುದಕ್ಕೆ ನಾನು ಬ್ಯುಸಿನೆಸ್ ಏನೂ ಮಾಡುತ್ತಿಲ್ಲ. ನಾನು ಸಿನಿಮಾ ಬಿಟ್ಟು ಬೇರೆ ಏನೂ ಮಾಡ್ತಿಲ್ಲ. ಅಪ್ಪ ಹೋದ್ಮೇಲೆ ನಾನು ಮೂರು ವರ್ಷ ಗ್ಯಾಪ್ ತೆಗೆದುಕೊಂಡೆ. ಮುಂದೆ ಏನು ಎತ್ತ ಅನ್ನೋದು ನೋಡಿಕೊಳ್ಳಬೇಕಿತ್ತು. ಅಪ್ಪ ನಮ್ಮ ಹೊಟ್ಟೆ ಬಟ್ಟೆಗೆ ಚೆನ್ನಾಗಿ ಮಾಡಿಟ್ಟು ಹೋಗಿದ್ದಾರೆ. ಅದಕ್ಕೇನೂ ತೊಂದರೆ ಇಲ್ಲ. ಸಿನಿಮಾ ಮಾಡುವುದಕ್ಕೆ ಹಿಂದೊಂದು ಪ್ರೊಡಕ್ಷನ್ ಹೌಸ್ ಇತ್ತು. ಅದು ಈಗಿನ ರೇಂಜ್‌ಗೆ ಹಣ ಹಾಕುವಷ್ಟು ಇಲ್ಲ. ತುಂಬಾ ಹಿಂದೇನೆ ಅಪ್ಪ ಪ್ರೊಡಕ್ಷನ್ ಹೌಸ್ ಅನ್ನು ನಿಲ್ಲಿಸಿದ್ದರು. ಅಷ್ಟು ಬಜೆಟ್ ಎಲ್ಲ ಹಾಕಿ ಮಾಡುವಂತೆ ಇರಲಿಲ್ಲ. ಇನ್ನೇನಿದ್ದರೂ ನಾನು ಏನು ಮಾಡುತ್ತೇನೆ ಅನ್ನೋದೇ ಇರೋದು." ಎಂದು ಅಭಿಮನ್ಯು ಹೇಳಿಕೊಂಡಿದ್ದಾರೆ.
ಇನ್ನು ಕಾಶೀನಾಥ್ ಪುತ್ರ ಇರುವ ಮನೆ ಸುಮಾರು 60 ವರ್ಷ ಹಳೆಯ ಮನೆ. ಆ ಮನೆಯಲ್ಲೇ ಕಾಶೀನಾಥ್ ಬಾಳಿ ಬದುಕಿದ್ದರು. ಆ ಮನೆಯ ಹಿನ್ನೆಲೆಯನ್ನು ಹೇಳಿದ್ದಾರೆ. "ನಮ್ಮ ತಾತ ಕುಂದಾಪುರದಿಂದ ಬಂದು ಇಲ್ಲಿ ನೆಲೆಸಿದ್ದರು. ಆಗ ಇಲ್ಲೇ ಪಕ್ಕದ ರಸ್ತೆಯಲ್ಲಿ ಬಾಡಿಗೆಗೆ ಇದ್ದರು. ಅಲ್ಲಿ ಎರಡು ವರ್ಷ ಇದ್ದರು. ಅವರು ಮನೆ ರಿನೋವೆಟ್ ಮಾಡಬೇಕು ಅಂದಾಗ ಈ ಮನೆ ಗೊತ್ತಾಗುತ್ತೆ. ಇಲ್ಲಿಗೆ ಬರುತ್ತಾರೆ. ಆಗ ಈ ಮನೆಯ ಮಾಲೀಕರು ಬೇರೆ ಹೋಗಬೇಕು ಅಂದಾಗ, ನಮ್ಮ ತಾತ ಈ ಮನೆಯನ್ನು ಖರೀದಿ ಮಾಡುತ್ತಾರೆ. ಇದು 60 ವರ್ಷದ ಹಿಂದಿನ ಮನೆ" ಎನ್ನುತ್ತಾರೆ.
ಇದೇ ಸಂದರ್ಶನದಲ್ಲಿ ಅಭಿಮನ್ಯು ಸನ್ ಆಫ್ ಕಾಶೀನಾಥ್ ಸಿಕ್ಕಿದ್ದು ಹೇಗೆ ಅನ್ನೋದನ್ನು ರಿವೀಲ್ ಮಾಡಿದ್ದಾರೆ. "ಅಭಿಮನ್ಯು ಸನ್ ಆಫ್ ಕಾಶೀನಾಥ್ ಸಿನಿಮಾ ಮಾಡುವಾಗ ಡೈರೆಕ್ಟರ್ ಯಾವ ರೀತಿ ಸಿನಿಮಾ ಮಾಡಬೇಕು ಅಂತ ಗೊಂದಲಕ್ಕೆ ಬಿದ್ದಿದ್ದರು. ಆಗ ಅಪ್ಪನ ತರ ಜಾನರ್ ಈಗ ಕಡಿಮೆ ಬರುತ್ತಿದೆ. ಅಂತಹ ಸಿನಿಮಾ ಮಾಡಬೇಕು ಅಂತ ಒಂದು ಆಲೋಚನೆ ಬರುತ್ತೆ. ಅಪ್ಪನ ಪ್ರೇರಣೆಯಾಗಿಟ್ಟುಕೊಂಡಿದ್ದರಿಂದ ಕಥೆಯಲ್ಲಿ ಅಲ್ಲಲ್ಲಿ ಅಪ್ಪ ಬರುತ್ತಿದ್ದರು. ಅಪ್ಪನನ್ನು ಪ್ರೇರಣೆಯಾಗಿ ಇಟ್ಟುಕೊಂಡು ಕಥೆ ಮಾಡುತ್ತಿರುವಾಗ ಅವರ ಮಗನನ್ನು ಯಾಕೆ ಕೇಳಬಾರದು ಅಂತ ಅಂದುಕೊಂಡರು. ಅಪ್ಪ ಅಂದು ಮಾಡಿದ ಸಿನಿಮಾದ ಶೈಲಿಯಲ್ಲಿದ್ದು, ಇಂದಿನ ಯುವಕರಿಗೆ ಮಾಡಿದರೆ ಹೇಗಿರುತ್ತೆ? ಅನ್ನೋದನ್ನು ಇಟ್ಟುಕೊಂಡು ಮಾಡಿದ್ದರು. ಅದು ನನಗೂ ಥ್ರಿಲ್ ಅಂತ ಅನಿಸ್ತು." ಎಂದು ಅಭಿಮನ್ಯು ಕಾಶೀನಾಥ್ ಹೇಳಿದ್ದಾರೆ.


Click it and Unblock the Notifications











