'ಕಾಟೇರ' ನಿರ್ದೇಶಕ ತರುಣ್ ಸುಧೀರ್ ನಿರ್ಮಾಣದ 'ಏಳುಮಲೆ'ಗೆ ಸೆನ್ಸಾರ್; ಯಾವ ಸರ್ಟಿಫಿಕೇಟ್?
'ಕಾಟೇರ'ದಂತಹ ಮೆಗಾ ಬ್ಲಾಕ್‌ಬಸ್ಟರ್ ಸಿನಿಮಾ ನೀಡಿದ ತರುಣ್ ಸುಧೀರ್ ನಿರ್ಮಾಣಕ್ಕೆ ಇಳಿದಿದ್ದಾರೆ. ದರ್ಶನ್‌ಗೆ ನಿರ್ದೇಶಿಸಬೇಕಿರುವ ಸಿನಿಮಾ ಒಂದು ಕಡೆ ನಡೆಯುತ್ತಿದ್ದರೆ, ಇನ್ನೊಂದು ಕಡೆ ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇವೆರಡರ ಮಧ್ಯೆ ಸಿನಿಮಾ ನಿರ್ಮಾಣಕ್ಕೂ ಕೈ ಹಾಕಿದ್ದಾರೆ. ಅದುವೇ 'ಏಳುಮಲೆ' ಸಿನಿಮಾ.
ತರುಣ್ ಸುಧೀರ್ ಕರ್ನಾಟಕ ಹಾಗೂ ತಮಿಳುನಾಡು ಗಡಿಭಾಗದ ಪ್ರೇಮಕಥೆಯನ್ನು 'ಏಳುಮಲೆ' ಸಿನಿಮಾದ ಮೂಲಕ ಹೇಳುವುದಕ್ಕೆ ಹೊರಟಿದ್ದಾರೆ. ತನ್ನ ಕಂಟೆಂಟ್‌ನಿಂದಲೇ ಈ ಸಿನಿಮಾ ಗಮನ ಸೆಳೆಯುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ಹಾಡು ಹಾಗೂ ಸಿನಿಮಾದ ತುಣುಕುಗಳು ಸಿನಿಪ್ರಿಯರನ್ನು ಸೆಳೆಯುತ್ತಿವೆ. ತರುಣ್ ಸುಧೀರ್ ನಿರ್ಮಾಪಕನಾಗಿದ್ದರೂ, ಕಥೆ ಸೆಲೆಕ್ಷನ್ ಚೆನ್ನಾಗಿರುತ್ತೆ ಅನ್ನೋದು ಎಲ್ಲರ ನಂಬಿಕೆ. ಈ ಕಾರಣಕ್ಕೆ ಎಲ್ಲರೂ ಈ ಸಿನಿಮಾವನ್ನು ಎದುರು ನೋಡುತ್ತಿದ್ದಾರೆ.

ಇನ್ನೇನು ಸಿನಿಮಾ ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಉಳಿದಿರುವಾಗಲೇ ಮತ್ತೊಂದು ಹಂತದಲ್ಲಿ ಪಾಸ್ ಆಗಿದೆ. 'ಏಳುಮಲೆ' ಸಿನಿಮಾ ಇದೀಗ ಸೆನ್ಸಾರ್ ಮಂಡಳಿಯಿಂದ ಕ್ಲೀನ್ ಚೀಟ್ ಪಡೆದುಕೊಂಡಿದೆ. ಸಿನಿಮಾ ನೋಡಿದ ಅಧಿಕಾರಿಗಳು ಯಾವುದೇ ಕಟ್ ಮತ್ತು ಯಾವುದೇ ದೃಶ್ಯಕ್ಕೆ ಮ್ಯೂಟ್ ಇಲ್ಲದೇ ಯು/ಎ ಸರ್ಟಿಫಿಕೇಟ್ ಅನ್ನು ಕೊಟ್ಟಿದ್ದಾರೆ. ಈ ಮೂಲಕ ಸಿನಿಮಾ ಬಿಡುಗಡೆಗೆ ಲೈಸೆನ್ಸ್ ಸಿಕ್ಕಂತೆ ಆಗಿದೆ.
ತರುಣ್ ಸುಧೀರ್ ಸಿನಿಮಾದಲ್ಲಿ ನಿರ್ಮಾಣದ ಜೊತೆಗೆ ಕ್ರಿಯೇಟಿವ್ ಡೈರೆಕ್ಟರ್ ಆಗಿಯೂ ಕೆಲಸ ಮಾಡಿದ್ದಾರೆ. ಸ್ಯಾಂಡಲ್‌ವುಡ್‌ನ ಈ ಬಹುನಿರೀಕ್ಷಿತ ಸಿನಿಮಾ 'ಏಳುಮಲೆ' ಮುಂದಿನ ತಿಂಗಳು ಅಂದರೆ, ಸೆಪ್ಟಂಬರ್ 5ರಂದು ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ. ಈಗಾಗಲೇ ಈ ಸಿನಿಮಾದ ಹಾಡುಗಳು ಹಾಗೂ ಟೀಸರ್ ಸಿನಿಮಾ ಪ್ರೇಮಿಗಳಲ್ಲಿ ಬಹು ನಿರೀಕ್ಷೆಯನ್ನು ಹುಟ್ಟಾಕಿದೆ. ಈ ಸಿನಿಮಾವನ್ನು ಪುನೀತ್ ರಂಗಸ್ವಾಮಿ ಆ್ಯಕ್ಷನ್ ಕಟ್ ಹೇಳಿದ್ದಾರೆ.
ಸ್ಯಾಂಡಲ್‌ವುಡ್ ನಟಿ ರಕ್ಷಿತಾ ಪ್ರೇಮ್ ಅವರ ಸಹೋದರ ರಾಣಾ 'ಏಳುಮಲೆ' ಸಿನಿಮಾದ ಹೀರೋ. ಚೊಚ್ಚಲ ಸಿನಿಮಾ 'ಏಕ್ ಲವ್ ಯಾ' ಬಳಿಕ ನಟಿಸುತ್ತಿರುವ ಸಿನಿಮಾವಿದು. ಮೊದಲ ಸಿನಿಮಾದಲ್ಲೇ ಗಮನ ಸೆಳೆದಿದ್ದ ರಾಣಾ ಎರಡನೇ ಸಿನಿಮಾದಲ್ಲಿ ಗಂಭೀರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ರಾಣಾಗೆ ನಾಯಕಿಯಾಗಿ ಮಹಾನಟಿ ಖ್ಯಾತಿಯ ಪ್ರಿಯಾಂಕಾ ಆಚಾರ್ ನಟಿಸಿದ್ದಾರೆ. ಇವರೊಂದಿಗೆ ಜಗಪತಿ ಬಾಬು, ನಾಗಾಭರಣ, ಕಿಶೋರ್ ಕುಮಾರ್, ಸರ್ದಾರ್ ಸತ್ಯ, ಜಗಪ್ಪ ಏಳುಮಲೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಕರ್ನಾಟಕ ಹಾಗೂ ತಮಿಳುನಾಡು ನಡುವಿನ ಗಡಿಭಾಗದ ನೈಜ ಪ್ರೇಮ ಕಥೆಯನ್ನು ತೆರೆಮೇಲೆ ತರುವುದಕ್ಕೆ ತರುಣ್ ಕಿಶೋರ್ ಸುಧೀರ್ ನಿರ್ಧರಿಸಿದ್ದರು. ಇವರೇ ನಿರ್ಮಾಣಕ್ಕೆ ಇಳಿದಾಗ ಅಟ್ಲಾಂಟಾ ನಾಗೇಂದ್ರ ಸಹ ನಿರ್ಮಾಪಕರಾಗಿ ಕೈ ಜೋಡಿಸಿದ್ದಾರೆ. ಇನ್ನು ಟೆಕ್ನಿಕಲ್ ಟೀಮ್‌ನಲ್ಲಿ ಅದ್ವಿತ್ ಗುರುಮೂರ್ತಿ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ನಾಗಾರ್ಜುನ ಶರ್ಮಾ ಹಾಗೂ ಪುನೀತ್ ರಂಗಸ್ವಾಮಿ ಸಂಭಾಷಣೆ ಜೊತೆಗೆ ಡಿ.ಇಮ್ಮಾನ್ ಸಂಗೀತವಿದೆ.
'ಏಳುಮಲೆ' ಸಿನಿಮಾದ ಟೈಟಲ್ ಟ್ರ್ಯಾಕ್‌ಗೆ ಈಗಾಗಲೇ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ಏಳುಮಲೆ ಸಿನಿಮಾದ ಟೈಟಲ್ ಟ್ರ್ಯಾಕ್ ಈಗಾಗಲೇ ಬಿಡುಗಡೆಯಾಗಿದ್ದು, ಸಖತ್ ರೆಸ್ಪಾನ್ಸ್ ಸಿಗುತ್ತಿದೆ. ಆನುಮಲೆ, ಜೇನುಮಲೆ, ಕಾಡುಮಲೆ, ಕಾಣುಮಲೆ ಎಂದು ಶುರುವಾಗುವ ಹಾಡಿಗೆ ನಿರ್ದೇಶಕ ಪುನೀತ್ ರಂಗಸ್ವಾಮಿಯವರೇ ಸಾಹಿತ್ಯ ಬರೆದಿದ್ದಾರೆ. ವಿಎಂ ಮಹಾಲಿಂಗಂ ಗೀತೆಗೆ ಧ್ವನಿಯಾಗಿದ್ದು, ಡಿ ಇಮ್ಮಾನ್ ಮ್ಯೂಸಿಕ್ ಹಾಡಿಗೊಂದು ತೂಕ ಕೊಟ್ಟಿದೆ.


Click it and Unblock the Notifications











