ಕೆರೆಬೇಟೆಗೆ ಹೊರಟ ಗೌರಿಶಂಕರ್; ಮೀನು ಬೇಟೆಗೆ ಸಾಥ್ ಕೊಟ್ಟ ಡಾಲಿ, ದಿನಕರ್
ಸ್ಯಾಂಡಲ್‌ವುಡ್‌ನಲ್ಲಿ ವಿಭಿನ್ನ ಸಿನಿಮಾ ಅಂದಕೂಡಲೇ ಕನ್ನಡ ಸಿನಿಮಾ ಪ್ರೇಮಿಗಳ ಕಣ್ಣುಗಳು ಅರಳುತ್ತವೆ. ಸದ್ಯಕ್ಕೀಗ ಅಪ್ಪಟ ಮಲೆನಾಡಿನ ಕನ್ನಡ ಸಿನಿಮಾವೊಂದು ಸಿನಿಮಾ ಪ್ರೇಮಿಗಳ ಮನ ಸೆಳೆಯುತ್ತಿವೆ. ಈಗಾಗಲೇ ಈ ಸಿನಿಮಾದ ಫಸ್ಟ್ ಲುಕ್ ಹಾಗೂ ಮೋಷನ್ ಪೋಸ್ಟರ್ ಪ್ರೇಕ್ಷಕರ ಗಮನ ಸೆಳೆದಿದೆ. ಈಗ ಟೀಸರ್ ಮೂಲಕ ಪ್ರೇಕ್ಷಕರ ಗಮನ ಸೆಳೆಯುವುದಕ್ಕೆ ಹೊರಟಿದೆ.
'ಕೆರೆಬೇಟೆ' ಸಿನಿಮಾ ಇದೊಂದು ಅಪ್ಪಟ ಮಲೆನಾಡಿನ ಸಿನಿಮಾ. 'ಜೋಕಾಲಿ' ಹಾಗೂ 'ರಾಜಹಂಸ' ಸಿನಿಮಾಗಳ ಮೂಲಕ ಹೀರೊ ಆಗಿ ಮಿಂಚಿದ್ದ ಗೌರಿ ಶಂಕರ್ ಮತ್ತೆ ಈ ಸಿನಿಮಾ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ಈ ಸಿನಿಮಾವನ್ನು ಪವನ್ ಒಡೆಯರ್ ಜೊತೆ ಸಹಾಯಕರಾಗಿ ಕೆಲಸ ಮಾಡಿರುವ ರಾಜ್‌ಗುರು ಆಕ್ಷನ್ ಕಟ್ ಹೇಳಿದ್ದಾರೆ.

ಅಂದ್ಹಾಗೆ 'ಕೆರೆಬೇಟೆ' ತಂಡ ಇತ್ತೀಚೆಗೆ ವಿನೂತನವಾಗಿ ಟೀಸರ್ ಅನ್ನು ರಿಲೀಸ್ ಮಾಡಿದೆ. ಮಲೆನಾಡಿನ ಈ ಕೆರೆಬೇಟೆಯನ್ನು ಬೆಂಗಳೂರಿನಲ್ಲಿ ಸೃಷ್ಟಿ ಮಾಡಲಾಗಿತ್ತು. ಬೆಂಗಳೂರಿನ ಮಲ್ಲತಹಳ್ಳಿ ಕೆರೆದಂಡೆಯಲ್ಲಿ ಟೀಸರ್ ರಿಲೀಸ್ ಈವೆಂಟ್ ಗಮನ ಸೆಳೆಯಿತು. ಟೀಸರ್ ರಿಲೀಸ್ ಈವೆಂಟ್‌ನಲ್ಲಿ ವಿಶೇಷ ಅತಿಥಿಗಳಾಗಿ ಡಾಲಿ ಧನಂಜಯ ಮತ್ತು ದಿನಕರ್ ತೂಗುದೀಪ್ ಟೀಸರ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಈ ಕಾರ್ಯಕ್ರಮಕ್ಕೆ ನಿರ್ದೇಶಕರಾದ ಪವನ್ ಒಡೆಯರ್, ಗುರು ದೇಶಪಾಂಡೆ, ಜಡೇಶ್ ಸೇರಿದಂತೆ ಚಿತ್ರರಂಗದ ಗಣ್ಯರಯ ಆಗಮಿಸಿ ಶುಭ ಹಾರೈಸಿದರು.
"ನಮ್ಮ ನೆಲದ ಸಿನಿಮಾಗಳು ಯಾವಾಗಲು ಸೋಲಲ್ಲ. ಕೆರೆಬೇಟೆ ಕೂಡ ನಮ್ಮ ನೆಲದ ಸಿನಿಮಾ. ಎಷ್ಟೋ ಜನರಿಗೆ ಕೆರೆಬೇಟೆಯ ಬಗ್ಗೆ ಗೊತ್ತಿಲ್ಲ. ಈ ಸಿನಿಮಾ ಮೂಲಕ ಎಲ್ಲರಿಗೂ ಗೊತ್ತಾಗಿದೆ. ನಮ್ಮ ಸಂಸ್ಕೃತಿಯ ಸಿನಿಮಾವಿದು" ಎಂದು ಧನಂಜಯ್ ಟೀಸರ್ ರಿಲೀಸ್ ಮಾಡಿ ಹೇಳಿದ್ದಾರೆ. ಹಾಗೇ "ನಾಯಕ ಗೌರಿಶಂಕರ್ ನನಗೆ ತುಂಬಾ ಸಮಯದಿಂದ ಗೊತ್ತಿದೆ. ಈ ಸಿನಿಮಾ ಈಗಾಗಲೇ ನಾನು ನೋಡಿದ್ದೇನೆ. ತುಂಬಾ ಚೆನ್ನಾಗಿದೆ. ಈ ಸಿನಿಮಾ ಗೆದ್ದೇ ಗೆಲ್ಲುತ್ತೆ" ಎಂದು ದಿನಕರ್ ತೂಗುದೀಪ ಹೇಳಿದ್ದಾರೆ.

ಇನ್ನು "ನಾನು ಮಲೆನಾಡಿನ ಹುಡುಗ. ಚಿಕ್ಕ ವಯಸ್ಸಿನಿಂದ ಕೆರೆಬೇಟೆ ನೋಡಿಕೊಂಡು ಬೆಳೆದವನು. ಈ ಸಿನಿಮಾ ಮಾಡಬೇಕು ಎನ್ನುವುದು ನನ್ನ ಕನಸಾಗಿತ್ತು. ಇದೀಗ ನನಸಾಗಿದೆ" ಎಂದು 'ಕೆರೆಬೇಟೆ ಸಿನಿಮಾ ನಿರ್ದೇಶಕ ರಾಜ್ ಗುರು ಹೇಳಿದ್ದಾರೆ.
ಹಾಗೇ ಸಿನಿಮಾದ ನಾಯಕ ಗೌರಿಶಂಕರ್ "ಶ್ರದ್ದೆಯಿಂದ ಸಿನಿಮಾ ಮಾಡಿದ್ದೇವೆ. ಎಲ್ಲರೂ ಸಿನಿಮಾ ನೋಡಿ. ಸಿನಿಮಾಗೆ ಕೇವಲ ಮೌತ್ ಪಬ್ಲಿಸಿಟಿ ಮಾತ್ರ ಅಲ್ಲ, ಪ್ರಮೋಷನ್ ಬೇಕು" ಎಂದು ಹೇಳಿದ್ದಾರೆ. ಇನ್ನು ಈ ಸಿನಿಮಾದಲ್ಲಿ ನಾಯಕಿಯಾಗಿ ಬಿಂದು ಕಾಣಿಸಿಕೊಂಡಿದ್ದಾರೆ. ಬಿಂದು ಅವರಿಗೆ ಇದು ಮೊದಲ ಸಿನಿಮಾ. ಉಳಿದಂತೆ, ನಟ ಸಂಪತ್, ಗೋಪಾಲ್ ದೇಶಪಾಂಡೆ, ನಟಿ ಹರಿಣಿ ಸೇರಿದಂತೆ ಅನೇಕರು ಕಾಣಿಕೊಂಡಿದ್ದಾರೆ.
'ಕೆರೆಬೇಟೆ' ಎಂದರೆ ಮಲೆನಾಡು ಭಾಗದಲ್ಲಿ ಮೀನು ಬೇಟೆಯಾಡುವ ಒಂದು ಪದ್ಧತಿ. ಮಲೆನಾಡಿನಲ್ಲಿ ವರ್ಷಕೊಮ್ಮೆ ಕೆರೆಬೇಟೆಯಾಡುತ್ತಾರೆ. ಇದು ದೊಡ್ಡ ದೊಡ್ಡ ಕೆರೆಗಳಲ್ಲಿ ನಡೆಯುತ್ತದೆ. ಇದೇ ಈ ಸಿನಿಮಾದ ಮುಖ್ಯ ಎಳೆಯಾಗಿದೆ. ಕೆರೆಬೇಟೆ ಚಿತ್ರಕ್ಕೆ ಗಗನ್ ಬಡೇರಿಯಾ ಸಂಗೀತ ಸಂಯೋಜನೆ ಮಾಡಿದ್ದಾರೆ.


Click it and Unblock the Notifications











