'ಕೆಜಿಎಫ್' ಚಾಚ ಹರೀಶ್ ರಾಯ್ ನಟಿಸಿದ ಕೊನೆಯ ಸಿನಿಮಾ 'ಸೂರಿ ಅಣ್ಣ'; ರಿಲೀಸ್ ಯಾವಾಗ?
ಸ್ಯಾಂಡಲ್‌ವುಡ್‌ನ ಸ್ಟೈಲಿಶ್ ವಿಲನ್ ಹರೀಶ್ ರಾಯ್. ಕನ್ನಡದ ಹಲವು ಸಿನಿಮಾಗಳಲ್ಲಿ ವಿಲನ್ ಆಗಿ ನಟಿಸಿದ್ದರು. ಆದರೆ, ಯಶ್ ಜೊತೆ 'ಕೆಜಿಎಫ್' ಸಿನಿಮಾದಲ್ಲಿ ನಟಿಸಿದ್ದು ಹೈಲೈಟ್ ಆಗಿತ್ತು. ಹರೀಶ್ ರಾಯ್ ಇಷ್ಟು ವರ್ಷಗಳ ವೃತ್ತಿ ಬದುಕು ಒಂದಾಗಿದ್ದರೆ, 'ಕೆಜಿಎಫ್' ಸಿನಿಮಾನೇ ಒಂದಾಗಿತ್ತು. ಆ ಮಟ್ಟಿಗೆ ಹರೀಶ್ ರಾಯ್‌ಗೆ ಹೆಸರು ತಂದು ಕೊಟ್ಟಿತ್ತು.
ತಮ್ಮ ವೃತ್ತಿ ಬದುಕಿನಲ್ಲಿ ಒಳ್ಳೆಯ ಹೆಸರು ಬಂದಾಗಲೇ ಹರೀಶ್ ರಾಯ್ ಅನಾರೋಗ್ಯಕ್ಕೆ ತುತ್ತಾಗಿದ್ದರು. ಕ್ಯಾನ್ಸರ್ ರೋಗದಿಂದ ಬಳಸಿದ ಅವರು ಇತ್ತೀಚೆಗಷ್ಟೇ ಅವರ ಅಭಿಮಾನಿಗಳು ಹಾಗೂ ಕುಟುಂಬವನ್ನು ಅಗಲಿದ್ದಾರೆ. ಆರೋಗ್ಯ ಅವರಿಗೆ ಸಾಥ್ ಕೊಟ್ಟಿದ್ದರೆ, ಇನ್ನೂ ನೂರೆಂಟು ಸಿನಿಮಾಗಳಲ್ಲಿ ನಟಿಸಬಹುದಿತ್ತು. ಈಗ ಅವರ ನಿಧನದ ಬಳಿಕ ಕೊನೆಯ ಸಿನಿಮಾ ಬಿಡುಗಡೆ ಸಜ್ಜಾಗಿದೆ. ಅದುವೇ 'ಸೂರಿ ಅಣ್ಣ'.

ಇತ್ತೀಚೆಗಷ್ಟೇ 'ಸೂರಿ ಅಣ್ಣ' ಸಿನಿಮಾದ ಟ್ರೈಲರ್ ಬಿಡುಗಡೆಯಾಗಿತ್ತು. ಆ ವೇಳೆ ಇಡೀ ಚಿತ್ರತಂಡ ದಿವಂಗತ ನಟ ಹರೀಶ್ ರಾಯ್ ಅವರನ್ನು ನೆನಪಿಸಿಕೊಂಡಿದೆ. ಇದು ಅವರು ನಟಿಸಿದ ಕೊನೆಯ ಸಿನಿಮಾ ಆಗಿದ್ದರಿಂದ ಅವರ ಕೈಯಲ್ಲೇ ಟ್ರೈಲರ್ ಲಾಂಚ್ ಮಾಡಿಸಲಾಗಿತ್ತು. ಈ ಮೂಲಕ ಹರೀಶ್ ರಾಯ್ ಚಿತ್ರಕ್ಕೆ ನೀಡಿದ ಕೊಡುಗೆಯನ್ನು ನೆನಪಿಸಿಕೊಳ್ಳಲಾಗಿದೆ.
'ಸೂರಿ ಅಣ್ಣ' ಸಿನಿಮಾದ ಟ್ರೈಲರ್ ರಿಲೀಸ್ ಮಾಡಿದ ಬಳಿಕ ಹರೀಶ್ ರಾಯ್ ಪತ್ನಿ ಮಾತಾಡಿ, "ಇದು ನಮ್ಮ ಯಜಮಾನರ ಕಡೇ ಸಿನಿಮಾ ಅಂತ ನನಗೂ ಗೊತ್ತಿರಲಿಲ್ಲ. ಈ ಸಿನಿಮಾಗೆ ಖಂಡಿತ ಒಳ್ಳೆಯದಾಗುತ್ತೆ. ಕಷ್ಟದ ಸಮಯದಲ್ಲಿ ಸಹಾಯ ಮಾಡಿದ ಚಿತ್ರರಂಗದ ಎಲ್ಲರಿಗೂ ಧನ್ಯವಾದ. ನನ್ನಪತಿ ಕೊನೆಯವರೆಗೂ ಸಿನಿಮಾ ಬಗ್ಗೆಯೇ ಧ್ಯಾನಿಸುತ್ತಿದ್ದರು. ನನ್ನ ಮಗನೂ ಬೆಳೆದಿದ್ದಾನೆ. ಈತನಿಗೆ ನಿಮ್ಮ ಸಪೋರ್ಟ್ ಬೇಕು. ನಮ್ಮನ್ನು ಮರೆಯಬೇಡಿ" ಎಂದು ಕೇಳಿಕೊಂಡರು.
ಇನ್ನು 'ಸೂರಿ ಅಣ್ಣ' ಸಿನಿಮಾ ಮುಂದಿನ ತಿಂಗಳು ಫೆಬ್ರವರಿ 20ಕ್ಕೆ ರಾಜ್ಯಾದ್ಯಂತ ರಿಲೀಸ್ ಆಗುತ್ತಿದೆ. ಈ ಸಿನಿಮಾದ ಹೀರೋ ಹಾಗೂ ಡೈರೆಕ್ಟರ್ ಸೂರಿ ಅಣ್ಣ ತಮ್ಮ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. "ನಮ್ಮ ಸಿನಿಮಾ ಸೂರಿ ಅಣ್ಣ ಫೆಬ್ರವರಿ 20ಕ್ಕೆ ರಿಲೀಸ್ ಆಗುತ್ತಿದೆ. ಈ ಸಿನಿಮಾಗಾಗಿ ಕಳೆದ ಆರು ವರ್ಷದಿಂದ ಕಷ್ಟಪಟ್ಟಿದ್ದೇನೆ. ಸಮಾಜಕ್ಕೆ ಒಳ್ಳೆ ಮೆಸೇಜ್ ಈ ಚಿತ್ರದಲ್ಲಿ ಇರಲಿದೆ. ಮಾಜಿ ರೌಡಿಗಳ ಕೈಲಿ ಯುವಕರಿಗೆ ಮೆಸೇಜ್ ಹೇಳಿಸಿದ್ದೇನೆ. ಯಾರೂ ಸಹ ಈ ರೌಡಿಸಂಗೆ ಬರಬೇಡಿ ಅಂತ ಈ ಚಿತ್ರದಲ್ಲಿ ತೋರಿಸಿದ್ದೇನೆ. ಸಪೋರ್ಟ್ ಮಾಡಿ" ಎಂದು ಮನವಿ ಮಾಡಿಕೊಂಡಿದ್ದಾರೆ.
ನಟಿ ಚಿತ್ರಾಲ "ಸೂರಿ ಈ ಸಿನಿಮಾಗೆ ತುಂಬಾ ಕಷ್ಟಪಟ್ಟಿದ್ದಾರೆ. ನನಗೆ ರಾ ಆಗಿದ್ದು, ತುಂಬಾ ಇಷ್ಟ. ಓಂ ಸಿನಿಮಾ ಬಳಿಕ ರಿಯಲ್ ರೌಡಿಗಳು ಆಕ್ಟ್ ಮಾಡಿದ ಸಿನಿಮಾ. ಒಂದು ಅದ್ಭುತವಾದ ಮೆಸೇಜ್ ಇರೋ ಸಿನಿಮಾ." ಎಂದರೆ, ನಾಯಕಿ ಸಂಭ್ರಮ "ಸೂರಿ ಅಣ್ಣ ಈ ಸಿನಿಮಾಗಾಗಿ ಮನೆ, ಜಾಗವನ್ನು ಮಾರಿದ್ದಾರೆ. ಡಾನ್‌ಗಳಿಂದ ಯುವಜನರಿಗೆ ಒಳ್ಳೆಯ ಮೆಸೇಜ್ ಹೇಳಲಾಗಿದೆ" ಎಂದಿದ್ದಾರೆ.
ಈ ಸಿನಿಮಾದಲ್ಲಿ ಸೂರಿ ಅಣ್ಣ, ಸಂಭ್ರಮ ಶ್ರೀ, ಬೇಬಿ ಮಾರೀಶ, ಹರೀಶ್ ರಾಯ್, ರವಿಕಾಳೆ, ಕಾಮ್ ರಾಜ್, SK ಉಮೇಶ್, ಹೊನ್ನವಳ್ಳಿ ಕೃಷ್ಣ, ಪ್ರಕಾಶ್ ತುಮ್ಮಿನಾಡ್, ರೇಖಾದಾಸ್, ಕಾಕ್ರೋಚ್ ಸುಧಿ, ವಿನಯ್ ಗೌಡ, ಜಾಲಿ ಜಾಕ್, ಪ್ರಸಾದ್ ಕುಮಾರ್ ನಟಿಸಿದ್ದರೆ, ಒಂದು ಕಾಲದಲ್ಲಿ ಗ್ಯಾಂಗ್ ಸ್ಟಾರ್‌ಗಳಾಗಿದ್ದ ಮೊಟ್ಟ ಕಣ್ಣ, ಜೇಡರಳ್ಳಿ ಕೃಷ್ಣಪ್ಪ, ಜೀಬ್ರಾ, ಲೋಕೇಶ್, ಕಾಳ ಪತಾರ್, ಯಶಸ್ವಿನಿ ಗೌಡ, ವೇಡಿ ಅಣ್ಣ, ಗಡ್ಡ ನಾಗ ಕೂಡ ನಟಿಸಿದ್ದಾರೆ.


Click it and Unblock the Notifications











