'ಕೆಜಿಎಫ್ 2' ಅಪ್‌ಡೇಟ್ಸ್ ಬೇಕೆ? ಬೇಗ ಮತ ಚಲಾಯಿಸಿ
'ಕೆಜಿಎಫ್ 2' ಕನ್ನಡ ಸಿನಿಮಾ ಭಾರತದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದು. ಸಿನಿಮಾವು ಏಪ್ರಿಲ್ 14 ಕ್ಕೆ ತೆರೆಗೆ ಬರಲು ತಯಾರಾಗಿದ್ದು, ಸಿನಿಮಾದ ಪ್ರಚಾರ ಕಾರ್ಯ ಇನ್ನಷ್ಟೆ ಪ್ರಾರಂಭವಾಗಬೇಕಿದೆ.
ಸಿನಿಮಾದ ಟೀಸರ್ ಬಿಡುಗಡೆ ಆಗಿ ಬಹು ತಿಂಗಳುಗಳೇ ಆಗಿದ್ದು, ಸಿನಿಮಾದ ಅಪ್‌ಡೇಟ್‌ಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಕಳೆದ ಬಾರಿ ಯಶ್ ಹುಟ್ಟುಹಬ್ಬಕ್ಕೆ 'ಕೆಜಿಎಫ್ 2' ಅಪ್‌ಡೇಟ್ ಸಿಗುತ್ತದೆ ಎಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದರು. ಆದರೆ ನಿರೀಕ್ಷೆ ಹುಸಿಯಾಯಿತು.
ರಾಕಿಂಗ್ ಸ್ಟಾರ್ ಯಶ್ ಟೆಂಪಲ್ ರನ್ ಹಿಂದಿನ ರಹಸ್ಯ ಬಯಲು!
ಸಿನಿಮಾದ ಬಿಡುಗಡೆ ದಿನಾಂಕ ಸನಿಹವಾಗುತ್ತಿದ್ದಂತೆ ಸಿನಿಮಾದ ಅಪ್‌ಡೇಟ್ಸ್‌ಗಾಗಿ ಅಭಿಮಾನಿಗಳ ಕಾತರತೆ ಇನ್ನಷ್ಟು ಹೆಚ್ಚಿದೆ. ಇದೀಗ ಸಿನಿಮಾದ ನಿರ್ಮಾಣ ಸಂಸ್ಥೆಯಾಗಿರುವ ಹೊಂಬಾಳೆ ಫಿಲಮ್ಸ್ ಅಭಿಮಾನಿಗಳಿಗೆ ಆಯ್ಕೆಯನ್ನು ಬಿಟ್ಟಿದೆ. ಅಭಿಮಾನಿಗಳು ಯಾವುದಕ್ಕೆ ಎಸ್ ಅನ್ನುತ್ತಾರೊ ಆ ಅಪ್‌ಡೇಟ್ ಅನ್ನು ಚಿತ್ರತಂಡ ನೀಡಲಿದೆ.

ಯಾವ ಅಪ್‌ಡೇಟ್ ಬೇಕೋ ನೀವೇ ಆರಿಸಿ
ಹೊಂಬಾಳೆ ಫಿಲಮ್ಸ್ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪೋಲ್ ಒಂದನ್ನು ಹಂಚಿಕೊಳ್ಳಲಾಗಿದೆ. 'ಕೆಜಿಎಫ್ 2' ಸಿನಿಮಾದ ಯಾವ ಅಪ್‌ಡೇಟ್ ಬೇಕೋ ನೀವು ಮತ ಚಲಾಯಿಸಿ ಅದೇ ಅಪ್‌ಡೇಟ್ ಅನ್ನು ನಾವು ನೀಡುತ್ತೇವೆ ಎಂದು ಹೊಂಬಾಳೆ ಫಿಲಮ್ಸ್ ಹೇಳಿದೆ. ಜೊತೆಗೆ ಹಾಡು, ಟ್ರೇಲರ್ ಹಾಗೂ ಸರ್ಪ್ರೈಸ್ ಕೊಡಿ ಎಂಬ ಮೂರು ಆಯ್ಕೆಯನ್ನು ನೀಡಿ ಮತ ಚಲಾಯಿಸಲು ಕೋರಲಾಗಿದೆ.

ಹೆಚ್ಚು ಮತ ಸಿಕ್ಕಿರುವುದು ಟ್ರೇಲರ್‌ಗೆ
ಅಭಿಮಾನಿಗಳು ಅತಿ ಹೆಚ್ಚು ಮತವನ್ನು 'ಟ್ರೇಲರ್'ಗೆ ನೀಡಿದ್ದಾರೆ. ಇಂದು ಸಂಜೆ 4 ಗಂಟೆ ವೇಳೆಗೆ ಟ್ರೇಲರ್ ಆಯ್ಕೆಗೆ 73.7% ಮತಗಳು ಬಿದ್ದಿವೆ. ಹಾಡಿನ ಆಯ್ಕೆಗೆ 11.1% ಹಾಗೂ ಸರ್ಪ್ರೈಸ್ ಮಾಡಿ ಆಯ್ಕೆಗೆ 15.5% ಮತ ಬಿದ್ದಿವೆ. ಇನ್ನೂ ಎರಡು ದಿನ ಪೋಲ್ ತೆರೆದಿರಲಿದ್ದು, ಅಭಿಮಾನಿಗಳು ತಮಗೆ 'ಕೆಜಿಎಫ್ 2' ಸಿನಿಮಾದ ಯಾವ ಅಪ್‌ಡೇಟ್ ಬೇಕೋ ಆ ಅಪ್‌ಡೇಟ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು. ಈವರೆಗೆ ಸುಮಾರು 75 ಸಾವಿರಕ್ಕೂ ಹೆಚ್ಚು ಮಂದಿ ಮತ ಚಲಾಯಿಸಿದ್ದಾರೆ.

ಕರಾವಳಿ ದೇವಾಲಯಗಳ ಸುತ್ತಾಡಿದ ಚಿತ್ರತಂಡ
'ಕೆಜಿಎಫ್ 2' ಚಿತ್ರತಂಡವು ಕೆಲವು ದಿನಗಳ ಹಿಂದಷ್ಟೆ ಕರಾವಳಿ ಭಾಗದ ದೇವಾಲಯಗಳಿಗೆ ತೆರಳಿ ದೇವರ ಆಶೀರ್ವಾದ ಪಡೆದುಕೊಂಡಿದೆ. ಸಿನಿಮಾದ ಪ್ರಚಾರ ಕಾರ್ಯ ಪ್ರಾರಂಭ ಮಾಡುವ ಮುನ್ನ ಯಶ್, ನಿರ್ದೇಶಕ ಪ್ರಕಾಶ್ ನೀಲ್, ನಿರ್ಮಾಪಕ ವಿಜಯ್ ಕಿರಗಂದೂರು ಹಾಗೂ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಇನ್ನಿತರರು ಅವರುಗಳು ಟೆಂಪಲ್ ರನ್ ಮಾಡಿದ್ದು ಸಿನಿಮಾ ಕುರಿತಾಗಿ ಕರ್ನಾಟಕ, ಆಂಧ್ರ, ತೆಲಂಗಾಣ, ತಮಿಳುನಾಡು, ಕೇರಳ ಹಾಗೂ ಮುಂಬೈಗಳಲ್ಲಿ ಪ್ರಚಾರ ಮಾಡಲಾಗುತ್ತಿದೆ. ವಿದೇಶಗಳಲ್ಲಿಯೂ ಸಿನಿಮಾದ ಪ್ರಚಾರ ಮಾಡುವ ಯೋಜನೆ ಚಿತ್ರತಂಡಕ್ಕೆ ಇದೆ.

ಸಂಜಯ್ ದತ್, ರವೀನಾ ಟಂಡನ್ ಪಾತ್ರಗಳ ಬಗ್ಗೆ ಕುತೂಹಲ
'ಕೆಜಿಎಫ್ 2' ಸಿನಿಮಾವು ಏಪ್ರಿಲ್ 14 ರಂದು ಬಿಡುಗಡೆ ಆಗಲಿದೆ. ಸಿನಿಮಾದ ಡಬ್ಬಿಂಗ್ ಕಾರ್ಯ ಇನ್ನಿತರೆ ಕಾರ್ಯಗಳು ಬಹುತೇಕ ಪೂರ್ಣಗೊಂಡಿವೆ. 'ಕೆಜಿಎಫ್' ನಲ್ಲಿನ ಪಾತ್ರಧಾರಿಗಳ ಹೊರತಾಗಿ ಈ ಸಿನಿಮಾದಲ್ಲಿ ಸಂಜಯ್ ದತ್, ರವೀನಾ ಟಂಡನ್, ಪ್ರಕಾಶ್ ರೈ, ರಾವ್ ರಮೇಶ್ ಇನ್ನಿತರೆ ನಟರುಗಳು ಇದ್ದು ಸಿನಿಮಾದ ಬಗ್ಗೆ ಕುತೂಹಲ ಇನ್ನಷ್ಟು ಹೆಚ್ಚಾಗಿದೆ. ಭಾರತದ ಬಹುನಿರೀಕ್ಷಿತ ಸಿನಿಮಾ ಇದಾಗಿದ್ದು, ಈ ಬಾರಿ ಸಿನಿಮಾವನ್ನು ವಿದೇಶಗಳಲ್ಲಿಯೂ ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿದೆ.


Click it and Unblock the Notifications











