KGF 2 Piracy: ಮೊದಲ ದಿನವೇ 'ಕೆಜಿಎಫ್ 2' ಆನ್‌ಲೈನ್‌ನಲ್ಲಿ ಲೀಕ್: ಕಿಡಿಗೇಡಿಗಳ್ಯಾರು?
ಬಿಗ್ ಬಜೆಟ್ ಸಿನಿಮಾಗಳಿಗೆ ಪೈರಸಿ ಅನ್ನೋದು ದೊಡ್ಡ ತಲೆ ನೋವಾಗಿದೆ. ಅದೆಷ್ಟೆ ಮನವಿ ಮಾಡಿಕೊಂಡರೂ, ಅದೆಷ್ಟು ಕಡಿವಾಣ ಹಾಕಿದರೂ ಕಿಡಿಗೇಡಿಗಳು ಸಿನಿಮಾವನ್ನು ಲೀಕ್ ಮಾಡುತ್ತಿದ್ದಾರೆ. ಆನ್‌ಲೈನ್‌ನಲ್ಲಿ ಸಿನಿಮಾ ಸೋರಿಕೆ ಆಗುವುದನ್ನು ತಡೆಯಲು ನೂರೆಂಟು ಪ್ರಯತ್ನ ಮಾಡಿದರೂ, ಏನೂ ಪ್ರಯೋಜನ ಆಗುತ್ತಿಲ್ಲ. ಇಂದು( ಏಪ್ರಿಲ್ 14) ನಿನ್ನೆ( ಏಪ್ರಿಲ್ 13)ರಂದು ರಿಲೀಸ್ ಆಗಿರುವ 'ಕೆಜಿಎಫ್ 2' ಹಾಗೂ 'ಬೀಸ್ಟ್' ಸಿನಿಮಾವನ್ನು ಕಿರಾತಕರು ಲೀಕ್ ಮಾಡಿದ್ದಾರೆ.
Recommended Video

ಕಿಡಿಗೇಡಿಗಳು ಬಿಗ್ ಬಜೆಟ್ ಸಿನಿಮಾವನ್ನೇ ಟಾರ್ಗೆಟ್ ಮಾಡುತ್ತಾರೆ. ಆ ಸಿನಿಮಾ ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ಆನ್‌ಲೈನ್ ಸಿನಿಮಾ ಲಭ್ಯವಿರುತ್ತೆ. ಹೀಗಿದ್ದರೂ, ದೊಡ್ಡ ದೊಡ್ಡ ನಿರ್ಮಾಣ ಸಂಸ್ಥೆಗಳಿಗೆ ಏನು ಮಾಡುವುದಕ್ಕೂ ಸಾಧ್ಯವಾಗುತ್ತಿಲ್ಲ. ವಿಜಯ್ ಸಿನಿಮಾ 'ಬೀಸ್ಟ್' ಹಾಗೂ ಯಶ್ ಸಿನಿಮಾ 'ಕೆಜಿಎಫ್ 2' ಕಿಡಿಗೇಡಿಗಳ ಕೆಂಗಣ್ಣಿಗೆ ಗುರಿಯಾಗಿದೆ.
'ಕೆಜಿಎಫ್ 2' ಸಿನಿಮಾ ಲೀಕ್ ಮಾಡಿದ್ದು ಯಾರು?
ನಿನ್ನೆ( ಏಪ್ರಿಲ್ 13) ದಳಪತಿ ವಿಜಯ್ ಸಿನಿಮಾ 'ಬೀಸ್ಟ್' ಲೀಕ್ ಆಗಿತ್ತು. ಆನ್‌ಲೈನ್‌ನಲ್ಲಿ ಈ ಸಿನಿಮಾವನ್ನು ಡೌನ್‌ಲೋಡ್ ಮಾಡಲು ಲಭ್ಯವಿತ್ತು. ಇಂದು (ಏಪ್ರಿಲ್ 14) ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ 'ಕೆಜಿಎಫ್ 2' ಚಿತ್ರವನ್ನು ತಮಿಳುರಾಕರ್ಸ್ ಹಾಗೂ ಮೂವಿ ರೂಲ್ಜ್ ಸೇರಿದಂತೆ ಹಲವು ಟೊರೆಂಟ್ ಸೈಟ್‌ಗಳು ಪೈರಸಿ ಕಾಪಿಯನ್ನು ರಿಲೀಸ್ ಮಾಡಿವೆ. ಹಲವು ದಿನಗಳಿಂದ ಕಿಡಿಗೇಡಿಗಳು ಇಂತಹ ಕೃತ್ಯಕ್ಕೆ ಕೈ ಹಾಕಿದ್ದರೂ, ನಿರ್ಮಾಪಕ ಮಾತ್ರ ಏನೂ ಮಾಡಲಾಗ ಸ್ಥಿತಿಯಲ್ಲಿದ್ದಾರೆ.

ಕಿಡಿಗೇಡಿಗಳು ಸಿನಿಮಾಗಳನ್ನು ಪೈರಸಿ ಮಾಡುತ್ತಿರುವುದರಿಂದ ನೇರವಾಗಿ ಬಾಕ್ಸಾಫೀಸ್ ಮೇಲೆ ಪರಿಣಾಮ ಬೀರಿದೆ. ಹೀಗಾಗಿ ಸಿನಿಮಾ ಬಿಡುಗಡೆಗೂ ಮುನ್ನವೇ ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ಯಶ್ ಅಭಿಮಾನಿಗಳು ಪೈರಸಿ ಸಿನಿಮಾವನ್ನು ನೋಡಬೇಡಿ ಎಂದು ಮಾನವಿ ಮಾಡಿಕೊಂಡಿದ್ದರು.
ಆಂಟಿ ಪೈರಸಿ ಕಂಟ್ರೋಲ್ ರೂಮ್ ಸಂಪರ್ಕಿಸಲು ಮನವಿ
ನಿರ್ದೇಶಕ ಪ್ರಶಾಂತ್ ನೀಲ್ ಪೈರಸಿ ಸಿನಿಮಾ ನೋಡದೆ, ಆಂಟಿ ಪೈರಸಿ ಕಂಟ್ರೋಲ್ ರೂಮ್‌ಗೆ ಭೇಟಿ ನೀಡುವಂತೆ ಮನವಿ ಮಾಡಿಕೊಂಡಿದ್ದರು. " ನಿಮ್ಮಿಂದಲೇ ಆಂಟಿ ಪೈರಸಿ ವಿರುದ್ಧ ಹೋರಾಟ ಆರಂಭ. ದಯವಿಟ್ಟು, ವಿಡಿಯೋ ಹಾಗೂ ಫೋಟೊಗಳನ್ನು ತೆಗೆದುಕೊಂಡು ಆನ್‌ಲೈನ್ ಶೇರ್ ಮಾಡಬೇಡಿ. ಪೈರಸಿಗೆ ನೋ ಅಂತ ಹೇಳಿ." ಎಂದು ಪ್ರಶಾಂತ್ ನೀಲ್ ಮನವಿ ಮಾಡಿಕೊಂಡಿದ್ದರು.
"ಕೆಜಿಎಫ್ 2 ಸಿನಿಮಾವನ್ನು ನಿಮ್ಮ ಮುಂದೆ ತರಲು 8 ವರ್ಷಗಳ ಕಾಲ ರಕ್ತ, ಬೆವರು, ಕಣ್ಣೀರನ್ನು ಸುರಿಸಿದ್ದೇವೆ. ಈ ಕಾರಣಕ್ಕೆ ಕೆಜಿಎಫ್ ಸಿನಿಮಾ ನೋಡುವಾಗ ವಿಡಿಯೋ ಮಾಡಿ, ಇಂಟರ್‌ನೆಟ್‌ನಲ್ಲಿ ಅಪ್‌ಲೋಡ್ ಮಾಡಬೇಡಿ. 'ಕೆಜಿಎಫ್' ಸಿನಿಮಾ ವೈಭವವನ್ನುಚಿತ್ರಮಂದಿರದಲ್ಲಿಯೇ ನೋಡಿ." ಎಂದು ಮನವಿ ಮಾಡಿಕೊಂಡಿದ್ದರು.
'ಕೆಜಿಎಫ್ 2' ಸಿನಿಮಾ ವಿಶ್ವದಾದ್ಯಂತ ಸುಮಾರು 10 ಸಾವಿರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಹೀಗಾಗಿ ಸಿನಿಮಾದ ಗಳಿಕೆ ಮೊದಲ ದಿನ ಹೊಸ ದಾಖಲೆಯನ್ನು ಸೃಷ್ಟಿಸಲಿದೆ ಎಂದು ಅಂದಾಜಿಸಲಾಗಿದೆ. ಈ ಕಾರಣಕ್ಕೆ 'ಕೆಜಿಎಫ್ 2' ಸಿನಿಮಾದ ಬಾಕ್ಸಾಫೀಸ್ ಮೇಲೆ ವಿಶ್ವದಾದ್ಯಂತ ಕೌತಕ ಹೆಚ್ಚಿಸಿದೆ.


Click it and Unblock the Notifications











