ವಕೀಲ್ ಸಾಬ್ ಲುಕ್ ಕೊಟ್ಟ ರಾಕಿ ಭಾಯ್; 'ಟಾಕ್ಸಿಕ್' ಲುಕ್ ಎಂದು ಕುಣಿದಾಡಿದ ಫ್ಯಾನ್ಸ್!
ರಾಕಿ ಭಾಯ್ ಈಗ 'ಟಾಕ್ಸಿಕ್' ಮೂಡ್‌ನಲ್ಲಿ ಇದ್ದಾರೆ. ಕೆಲವು ತಿಂಗಳ ಹಿಂದಷ್ಟೇ ಈ ಸಿನಿಮಾ ಮುಹೂರ್ತ ಕಂಡಿತ್ತು. ಅಲ್ಲಿಂದ ಯಶ್ ಅಭಿಮಾನಿಗಳು ಸಿನಿಮಾ ಅಪ್‌ಡೇಟ್‌ಗಾಗಿ ಎದುರು ನೋಡುತ್ತಲೇ ಇದ್ದಾರೆ. ಈ ಮಧ್ಯೆ ಸೋಶಿಯಲ್ ಮೀಡಿಯಾದಲ್ಲಿ ಯಶ್ ಕರಿ ಕೋಟ್ ಧರಿಸಿ ಶೂಟಿಂಗ್‌ನಲ್ಲಿ ಭಾಗಿಯಾಗಿರುವ ವಿಡಿಯೋ ಹಾಗೂ ಫೋಟೊಗಳು ಹರಿದಾಡುತ್ತಿವೆ.
ಬರೋಬ್ಬರಿ 'ಕೆಜಿಎಫ್ 2' ತೆರೆಕಂಡ ಮೂರು ವರ್ಷಗಳ ಬಳಿಕ 'ಟಾಕ್ಸಿಕ್' ಸಿನಿಮಾ ಆರಂಭ ಆಗಿದೆ. ಯಶ್ ಹೊಸ ಸಿನಿಮಾಗೆ ಕಾದೂ ಕಾದು ಸುಸ್ತಾಗಿದ್ದ ಅಭಿಮಾನಿಗಳಿಗೆ ಸಿಹಿ ಸುದ್ದಿಯೇನೋ ಸಿಕ್ಕಿತ್ತು. ಆದರೆ, ಈ ಸಿನಿಮಾ ರಿಲೀಸ್‌ಗೆ ಇನ್ನೂ ಸಾಕಷ್ಟು ಸಮಯ ಬೇಕು ಅನ್ನೋ ಬೇಸರ ಕೂಡ ಇತ್ತು. ಆದ್ರೀಗ ದಿಢೀರನೇ ವಕೀಲ್ ಸಾಬ್ ಲುಕ್ ಕೊಟ್ಟಿರುವ ಯಶ್ ವಿಡಿಯೋ ಸದ್ದು ಮಾಡುವುದಕ್ಕೆ ಶುರು ಮಾಡಿದೆ.

ಅಸಲಿಗೆ ಇದು 'ಟಾಕ್ಸಿಕ್' ಸಿನಿಮಾದ ಲುಕ್ ಇರುಬಹುದಾ? ಇಲ್ಲ ಜಾಹೀರಾತಿಗೆ ಈ ಅವತಾರ ತಾಳಿದ್ದಾರಾ? ಈ ಪ್ರಶ್ನೆ ಅಂತೂ ಎದ್ದಿತ್ತು. ಆದರೆ, ರಾಕಿ ಭಾಯ್ ಅಡ್ವೊಕೇಟ್ ಗೆಟಪ್ ಅವರ ಫ್ಯಾನ್ಸ್‌ಗೆ ಇಷ್ಟ ಆಗಿದೆ. ಈ ಲುಕ್ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್‌ನಲ್ಲಿದೆ. ಯಶ್ ಈ ಲುಕ್ ಬಗ್ಗೆ ಫ್ಯಾನ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಸಲಿಗೆ ಸೋಶಿಯಲ್ ಮೀಡಿಯಾದಲ್ಲಿ ಏನೆಲ್ಲ ಚರ್ಚೆಯಾಗುತ್ತಿದೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.
ಅಂದು ಗ್ಯಾಂಗ್‌ಸ್ಟರ್.. ಇಂದು ಲಾಯರ್
ಯಶ್ ಕರಿ ಕೋಟು ತೊಟ್ಟಿರುವ ಅತೀ ಚಿಕ್ಕ ವಿಡಿಯೋ ತುಣುಕೊಂದನ್ನು ಶೇರ್ ಮಾಡುತ್ತಿದ್ದಾರೆ. ಇಲ್ಲಿ ನೆಟ್ಟಿಗರೊಬ್ಬರು ಈ ವಿಡಿಯೋವನ್ನು ಶೇರ್ ಮಾಡಿದ್ದು, ಅಂದು (ಕೆಜಿಎಫ್ 2) ಗ್ಯಾಂಗ್‌ಸ್ಟರ್, ಇಂದು ಲಾಯರ್ ಎಂದು ಬರೆದು ವಿಡಿಯೋ ತುಣುಕನ್ನು ಹಂಚಿಕೊಳ್ಳುತ್ತದ್ದಾರೆ. ಇದು ಯಶ್ ನಟನೆಯ 'ಟಾಕ್ಸಿಕ್' ಸಿನಿಮಾದ ಲುಕ್ ಎಂದೇ ಕೆಲವರು ಭಾವಿಸುತ್ತಿರುವುದು ವಿಶೇಷ.
ಜಾಹೀರಾತಿಗಾಗಿ ಈ ಲುಕ್
ರಾಕಿಂಗ್ ಸ್ಟಾರ್ ಯಶ್ ಈ ವಕೀಲ್ ಸಾಬ್ ಲುಕ್ ಕೊಟ್ಟಿದ್ದು 'ಟಾಕ್ಸಿಕ್' ಸಿನಿಮಾಗಾಗಿ ಅಲ್ಲ. ಹೊಸದೊಂದು ಜಾಹೀರಾತಿನ ಚಿತ್ರೀಕರಣದಲ್ಲಿ ಯಶ್ ಭಾಗವಹಿಸುತ್ತಿದ್ದಾರೆ. ಅದರ ಸೆಟ್ಟಿನಲ್ಲಿ ತೆಗೆದ ಕೆಲವು ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡಲಾಗಿದೆ. ಆದರೆ, ಯಾವ ಪ್ರಾಡಕ್ಟ್‌ನ ಜಾಹೀರಾತು ಅನ್ನೋ ಮಾಹಿತಿ ಇನ್ನೂ ಹೊರಬಿದ್ದಿಲ್ಲ. ಸದ್ಯ ಕೇವಲ ಫೋಟೊಗಳು ಮಾತ್ರ ಶೇರ್ ಆಗುತ್ತಿವೆ.
ಯಶ್ ಜೊತೆ ರಾಧಿಕಾ ಪಂಡಿತ್
ಇತ್ತೀಚೆಗೆ ಯಶ್ ಮುಂಬೈಗೆ ಪಯಣ ಬೆಳೆಸಿದ್ದು ಸುದ್ದಿಯಾಗಿತ್ತು. ಪತ್ನಿ ರಾಧಿಕಾ ಪಂಡಿತ್ ಜೊತೆ ಯಶ್ ಕೂಡ ಮುಂಬೈನಲ್ಲಿ ಕಾಣಿಸಿಕೊಂಡಿದ್ದರು. 'ಟಾಕ್ಸಿಕ್' ಸಿನಿಮಾಗಾಗಿ ಮುಂಬೈನಲ್ಲಿ ಬೀಡು ಬಿಟ್ಟಿದ್ದಾರೆ ಅಂತಾನೂ ಸುದ್ದಿಯಾಗಿತ್ತು. ಆದ್ರೀಗ ಯಶ್ 'ಟಾಕ್ಸಿಕ್' ಸಿನಿಮಾದ ಶೂಟಿಂಗ್‌ಗೆ ಬ್ರೇಕ್ ಕೊಟ್ಟು ಜಾಹೀರಾತಿನ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಈ ವೇಳೆ ರಾಧಿಕಾ ಪಂಡಿತ್ ಕೂಡ ಕಾಣಿಸಿಕೊಂಡಿದ್ದು ಅಭಿಮಾನಿಗಳಿಗೆ ಕಿಕ್ ಕೊಟ್ಟಿದೆ.
'ಟಾಕ್ಸಿಕ್' ಸಿನಿಮಾ ಕಥೆಯೇನು?
ಯಶ್ 'ಟಾಕ್ಸಿಕ್' ಸಿನಿಮಾವನ್ನು ಮಲಯಾಳಂ ನಿರ್ದೇಶಕಿ ಗೀತು ಮೋಹನ್‌ದಾಸ್ ನಿರ್ದೇಶನ ಮಾಡುತ್ತಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಜೊತೆ ಯಶ್ ಕೂಡ ಈ ಸಿನಿಮಾಗೆ ಹಣ ಹೂಡಿಕೆ ಮಾಡಿದ್ದು, ಬೆಂಗಳೂರಿನಲ್ಲಿ ದೊಡ್ಡ ಸೆಟ್ ಹಾಕಿ ಶೂಟಿಂಗ್ ಮಾಡಲಾಗಿದೆ. ನಯನತಾರಾ, ಕಿಯಾರಾ ಅಡ್ವಾಣಿ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಅನ್ನೋದ ಮಾತು ಕೂಡ ಕೇಳಿ ಬರುತ್ತಿದೆ. ಸದ್ಯ ಸಿನಿಮಾ ಬ್ರೇಕ್ ಕೊಟ್ಟಿದ್ದು 2025ರಲ್ಲಿ ಈ ಸಿನಿಮಾ ಬಿಡುಗಡೆ ಆಗಬಹುದೆಂಬ ನಿರೀಕ್ಷೆಯಿದೆ.


Click it and Unblock the Notifications











