'ಕೆಜಿಎಫ್ 2' ಒಂದು ವಾರದಲ್ಲಿ ಸೃಷ್ಟಿಸಿದ ದಾಖಲೆಗಳ ಪಟ್ಟಿಯಲ್ಲಿ ಏನೇನಿದೆ?
ಕೊರೊನಾ ಬಳಿಕ ದಕ್ಷಿಣ ಭಾರತದ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದೆ. ಒಂದರ ಹಿಂದೊಂದು ಸಿನಿಮಾ ಬಾಕ್ಸಾಫೀಸ್‌ನಲ್ಲಿ ದಾಖಲೆಗಳನ್ನು ಬರೆಯುತ್ತಿವೆ. ಅಲ್ಲು ಅರ್ಜುನ್ 'ಪುಷ್ಪ' ಬಳಿಕ ರಾಜಮೌಳಿ ನಿರ್ದೇಶಿಸಿದ RRR ದಾಖಲೆ ಬರೆದಿತ್ತು. ಈಗ ಯಶ್ ಸಿನಿಮಾ 'ಕೆಜಿಎಫ್ 2' ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದೆ.
ಕಳೆದೊಂದು ವಾರದಿಂದ ವಿಶ್ವದಾದ್ಯಂತ ಕೆಜಿಎಫ್ ಮೇನಿಯಾ ಶುರುವಾಗಿದೆ. ಎಲ್ಲಿ ನೋಡಿದರೂ 'ಕೆಜಿಎಫ್ 2' ಸಿನಿಮಾ ಬಗ್ಗೆನೇ ಟಾಕ್ ಆಗುತ್ತಿದೆ. ಈ ಸಿನಿಮಾ ಮೂಲಕ ರಾಕಿ ಭಾಯ್ ಖದರ್ ವರ್ಲ್ಡ್‌ವೈಡ್ ವ್ಯಾಪಿಸಿದೆ. ನರಾಚಿ ಕೋಟೆಯ 'ಕೆಜಿಎಫ್' ಕಹಾನಿ ಕೇವಲ ಕರ್ನಾಟಕಕ್ಕಷ್ಟೆ ಸೀಮಿತವಾಗಿರದೆ, ಇಡೀ ವಿಶ್ವದಲ್ಲಿ ಸದ್ದು ಮಾಡುತ್ತಿದೆ. ಹಾಗಿದ್ದರೆ, ಇಷ್ಟೆಲ್ಲಾ ಸದ್ದು ಮಾಡುತ್ತಿರುವ 'ಕೆಜಿಎಫ್ 2' ಒಂದು ವಾರದಲ್ಲಿ ಏನೆಲ್ಲಾ ಸಾಧನೆ ಮಾಡಿದೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.

ದಕ್ಷಿಣ ಭಾರತದಲ್ಲಿ ಸಿನಿಮಾ ವೀಕ್ಷಿಸಿದವರೆಷ್ಟು?
'ಕೆಜಿಎಫ್ 2' ಏಕಕಾಲಕ್ಕೆ ಐದು ಭಾಷೆಗಳಲ್ಲಿ ಬಿಡುಗಡೆಯಾಗಿತ್ತು. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಸಿನಿಮಾ ರಿಲೀಸ್ ಆಗಿತ್ತು. ದಕ್ಷಿಣ ಭಾರತದಲ್ಲಿ 'ಕೆಜಿಎಫ್ 2' ಸಿನಿಮಾಗೆ ಒಂದು ವಾರ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ಈ ಒಂದು ವಾರದಲ್ಲಿ ಸುಮಾರು 1.5ಕೋಟಿ ಮಂದಿ ಸಿನಿಮಾವನ್ನು ವೀಕ್ಷಣೆ ಮಾಡಿದ್ದಾರೆ. ಯಾವ ರಾಜ್ಯದಲ್ಲಿ ಎಷ್ಟು ಮಂದಿ ಸಿನಿಮಾ ನೋಡಿದ್ದಾರೆ ಅನ್ನುವ ಪಟ್ಟಿ ಇಲ್ಲಿದೆ.
ಒಂದು ವಾರದಲ್ಲಿ ವಿವಿಧ ರಾಜ್ಯದಲ್ಲಿ 'ಕೆಜಿಎಫ್ 2' ನೋಡಿದವರ ಸಂಖ್ಯೆ
ಕರ್ನಾಟಕ 40 ಲಕ್ಷ ಮಂದಿ ವೀಕ್ಷಣೆ
ತಮಿಳುನಾಡು 30 ಲಕ್ಷ ಮಂದಿ ವೀಕ್ಷಣೆ
ಕೇರಳ 25 ಲಕ್ಷ ಮಂದಿ ವೀಕ್ಷಣೆ
ಆಂಧ್ರ- ತೆಲಂಗಾಣ 50 ಲಕ್ಷ ಮಂದಿ ವೀಕ್ಷಣೆ
ಉತ್ತರ ಭಾರತ 1.7 ಕೋಟಿ ಮಂದಿ ವೀಕ್ಷಣೆ
ಒಟ್ಟು 3.15 ಕೋಟಿ ಮಂದಿ ವೀಕ್ಷಣೆ

ಓವರ್‌ಸೀಸ್‌ನಲ್ಲಿ ಗಳಿಸಿದ್ದೆಷ್ಟು?
ಓವರ್‌ಸೀಸ್ ಬಾಕ್ಸಾಫೀಸ್‌ನಲ್ಲಿ 'ಕೆಜಿಎಫ್ 2' ಕಲೆಕ್ಷನ್ ಜೋರಾಗಿದೆ. ಇಲ್ಲಿ ಯಶ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್ ಪ್ರೇಕ್ಷಕರಿಗೆ ಇಷ್ಟ ಆಗಿದ್ದು, ಸಿನಿಮಾ ನೋಡಿ ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಚಿತ್ರತಂಡದ ಪ್ರಕಾರ, ಓವರ್‌ಸೀಸ್‌ನಲ್ಲಿ 'ಕೆಜಿಎಫ್ 2' ಸುಮಾರು 135 ಕೋಟಿ ಗಳಿಸಿದೆ. ರಂಜಾನ್ ವೇಳೆ ಸಿನಿಮಾ ಗಳಿಕೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ನಿರೀಕ್ಷೆ ಮಾಡಲಾಗಿದೆ.

ಹಿಂದಿಯಲ್ಲಿ 'ಕೆಜಿಎಫ್ 2' ದಾಖಲೆ ಗಳಿಕೆ
ಒಂದು ವಾರದ ಅಂತರದಲ್ಲಿ ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ ಹಲವು ಸಾಧನೆಗಳನ್ನು ಮಾಡಿದೆ. ಅದರಲ್ಲೊಂದು ಬಾಲಿವುಡ್ ದಾಖಲೆಗಳನ್ನು ಉಡೀಸ್ ಮಾಡಿದ್ದು ವಿಶೇಷ. ಭಾರತದ ಅತೀ ದೊಡ್ಡ ಮಾರ್ಕೆಟ್‌ನಲ್ಲಿ 'ಕೆಜಿಎಫ್ 2' ತನ್ನದೇ ರೆಕಾರ್ಡ್‌ಗಳನ್ನು ಸೃಷ್ಟಿಸಿದೆ. ಸಿನಿಮಾ ಬಿಡುಗಡೆಯಾದ ಒಂದು ವಾರದಲ್ಲಿ 'ಕೆಜಿಎಫ್ 2' ಸಿನಿಮಾ 270 ಕೋಟಿ ಗಳಿಕೆ ಮಾಡಿದೆ. ಇಷ್ಟು ವೇಗವಾಗಿ ಹಿಂದಿ ಸಿನಿಮಾನೇ ಗಳಿಕೆ ಮಾಡಿಲ್ಲ ಅನ್ನೋದು 'ಕೆಜಿಎಫ್ 2' ಸಿನಿಮಾದ ಸಾಧನೆಗಳಲ್ಲೊಂದು.

ವಿದೇಶದಲ್ಲೂ 'ಕೆಜಿಎಫ್ 2' ಟಾಪ್‌ನಲ್ಲಿತ್ತು
ಭಾರತದ ಆಚೆಗೂ 'ಕೆಜಿಎಫ್ 2' ಸಿನಿಮಾ ಹಲವು ದಾಖಲೆಗಳನ್ನು ಬರೆದಿದೆ. ಯುಎಇಯಲ್ಲಿ ಸಿನಿಮಾ ಗಳಿಕೆ ಜೋರಾಗಿದೆ. 'ಕೆಜಿಎಫ್ 2' ಈ ವಾರ ವಿಶ್ವದ ಟಾಪ್ 2 ಸ್ಥಾನದಲ್ಲಿದೆ. ಮಲೇಶಿಯಾದಲ್ಲಿ 'ಕೆಜಿಎಫ್ 2' ಟಾಪ್‌ನಲ್ಲಿದ್ದ ಸಿನಿಮಾ. ಅಮೆರಿಕ ಸೇರಿದಂತೆ ಹಲವೆಡೆ ಸಿನಿಮಾದ ಗಳಿಕೆ ಚೆನ್ನಾಗಿದೆ. ಅಲ್ಲದೆ ಸಿನಿಮಾದ ಗಳಿಕೆ ಮೊದಲ ವಾರ 800 ಕೋಟಿ ಆಸು-ಪಾಸಿನಲ್ಲಿದೆ ಎಂದು ಚಿತ್ರತಂಡದ ಮೂಲಗಳು ಹೇಳಿಕೊಂಡಿವೆ.


Click it and Unblock the Notifications











