"ಎಲ್ಲವನ್ನೂ ನಡೆಸಿಕೊಡುತ್ತೇನೆಂದು ದೈವ ಮಾತು ಕೊಟ್ಟಿತ್ತು"; ಅಪ್ಪನ ಕೊನೆ ಆಸೆ ನೆನೆದು ಪುತ್ರ ಕಣ್ಣೀರು
ಕನ್ನಡ ಚಿತ್ರರಂಗ ಕಂಡ ಅತ್ಯಂತ ಸ್ಟೈಲಿಶ್ ಖಳನಾಯಕ ಹರೀಶ್ ರಾಯ್ ಇಂದು (ನವೆಂಬರ್ 6) ಕೊನೆಯುಸಿರೆಳೆದಿದ್ದಾರೆ. ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಥೈರಾಯ್ಡ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಹರೀಶ್ ರಾಯ್ ಚಿಕಿತ್ಸೆ ಪಡೆಯುತ್ತಿದ್ದರು. ಇತ್ತೀಚೆಗೆ ಗುಣಮುಖರಾಗಿದ್ದರೂ, ಬೇರೆ ಬೇರೆ ಸಮಸ್ಯೆ ಎದುರಾಗಿದ್ದು ಎನ್ನಲಾಗಿದೆ. ಹರೀಶ್ ರಾಯ್ ನಿಧನ ಅವರ ಕುಟುಂಬಕ್ಕೆ ಆಘಾತವನ್ನುಂಟು ಮಾಡಿದೆ.
ಹರೀಶ್ ರಾಯ್ ಥೈರಾಯ್ಡ್ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯಲು ಹಣಕಾಸಿನ ನೆರವು ಕೋರಿದ್ದರು. ರಾಕಿಂಗ್ ಸ್ಟಾರ್ ಯಶ್ ಸೇರಿದಂತೆ ಕನ್ನಡ ಚಿತ್ರರಂಗದ ಕೆಲವು ಗಣ್ಯರು ಸಹಾಯ ಹಸ್ತ ಚಾಚಿದ್ದರು. ಹಾಗೇ ಅವರ ಆತ್ಮೀಯರು ಕೂಡ ನೆರವಾಗಿದ್ದರು. ಕಳೆದ ಕೆಲವು ವರ್ಷಗಳಿಂದ ಅನಾರೋಗ್ಯದಿಂದಲೇ ಬಳಲುತ್ತಿದ್ದ ನಟ ತಮ್ಮ 55ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ.

ಈ ವೇಳೆ ಹರೀಶ್ ರಾಯ್ ಅವರ ಪುತ್ರ ಅಪ್ಪನ ಕೊನೆಯ ಆಸೆಯನ್ನು ನೆನೆದು ಕಣ್ಣೀರು ಹಾಕಿದ್ದಾರೆ. ಅಲ್ಲದೇ ತಂದೆ ಅನಾರೋಗ್ಯಕ್ಕೀಡಾದಾಗ ದೈವ ಹಾಗೂ ದೇವರ ಬಳಿ ಹೋಗಿ ಪ್ರಶ್ನೆ ಕೇಳಿದ್ದು, ಎಲ್ಲವೂ ಸರಿ ಮಾಡಿಕೊಡುತ್ತೇನೆ ಎಂದು ಮಾತು ಕೊಟ್ಟಿತ್ತು. ಅದು ನಡೆಸಿಕೊಡಲಿಲ್ಲ. ದೇವರು ದೈವವೇ ಮಾತು ತಪ್ಪಿದರೇ ಹೇಗೆ ಎಂದು ಅಪ್ಪನನ್ನು ನೆನೆದು ಕಣ್ಣೀರು ಹಾಕಿದ್ದಾರೆ.
ಹರೀಶ್ ರಾಯ್ ಕೊನೆಯ ಕನಸು
ಹರೀಶ್ ರಾಯ್ ಹಲವು ವರ್ಷಗಳಿಂದ ಕನ್ನಡ ಚಿತ್ರಗಳಲ್ಲಿ ಕೆಲಸ ಮಾಡುತ್ತಿದ್ದರು. ಆದರೂ, 'ಕೆಜಿಎಫ್' ಸಿನಿಮಾ ಬಂದ ಬಳಿಕ 'ಕೆಜಿಎಫ್ ಚಾಚಾ' ಎಂದೇ ಜನಪ್ರಿಯರಾಗಿದ್ದರು. ಇನ್ನಷ್ಟು ಅವಕಾಶಗಳು ಅವರನ್ನು ಹುಡುಕಿಕೊಂಡು ಬರುತ್ತಿರುವಾಗಲೇ ಅವರು ಅನಾರೋಗ್ಯಕ್ಕೆ ಒಳಗಾದರು. ಇದರಿಂದ ಅವರ ಕನಸುಗಳು ನುಚ್ಚು ನೂರಾಗಿದ್ದವು. ಆದರೂ ಮಗನಿಗಾಗಿ ಬಹು ದೊಡ್ಡ ಕನಸನ್ನೇ ಕಂಡಿದ್ದರು. ಅದನ್ನು ನೆನೆಸಿಕೊಂಡು ಪುತ್ರ ಕಣ್ಣೀರು ಹಾಕಿದ್ದಾರೆ.
"ಒಂದು ತಿಂಗಳ ಹಿಂದಷ್ಟೇ ದೇಶಕ್ಕೋಸ್ಕರ ಆಡು ಮಗನೆ ಅಂತ ಹೇಳಿದರು. ನಮ್ಮ ಅಪ್ಪನಿಗೋಸ್ಕರ ಏನು ಬೇಕಾದರೂ ಮಾಡುತ್ತೇನೆ. ನಮ್ಮ ಮನೆಯಲ್ಲಿ ನಮ್ಮ ಅಮ್ಮ ಹಾಗೂ ಅಣ್ಣನಿಗಿಂತ ಜಾಸ್ತಿ ನನ್ನನ್ನು ಪ್ರೀತಿಸಿದವರು ನಮ್ಮ ಅಪ್ಪ. ಅವರು ಇಲ್ಲದೆ ಒಂದು ತಿಂಗಳಿಂದ ನರಳಾಡಿಬಿಟ್ಟೆ. ಮನೆ ಬಿಕೋ ಅನ್ನೋದು. ಇಲ್ಲಿಗೆ ಬರುತ್ತಿದ್ದೆ. ಆಗ ಹೇಳೋರು, ಇನ್ನೇನು ಬಂದು ಬಿಡುತ್ತೇನೆ ಮಗನೆ ಅನ್ನೋರು." ಎಂದು ಹರೀಶ್ ರಾಯ್ ಪುತ್ರ ಕಣ್ಣೀರಾಗಿದ್ದಾರೆ.

ಅಪ್ಪನಿಗಾಗಿ ಏನು ಬೇಕಾದ್ರೂ ಮಾಡ್ತೀನಿ
"ನಿನ್ನೆ ಹೇಳಿದ್ರು.. ಏನೇ ಆದರೂ ಉಡುಪಿಗೆ ಕರೆದುಕೊಂಡು ಹೋಗಬೇಕು ಅಂತ. ಅವರು ಹುಟ್ಟಿ ಬೆಳೆದಿದ್ದು ಅಲ್ಲೇ. ಅವರ ಅಮ್ಮನೂ ಅಲ್ಲೇ ಇದ್ದಾರೆ. ಅವರು ಕೊನೆಯದಾಗಿ ಮಾತಾಡಿದ್ದು ನನ್ನ ಹತ್ತಿರನೇ. ಒಂದೇ ಮಾತು ದೇಶಕ್ಕೆ ಆಡು ಮಗನೆ ಅಂದಿದ್ದರು. ನಾನು ಇದ್ದರೂ ಆಡು. ಇಲ್ಲದೆ ಇದ್ದರೂ ನೋಡುತ್ತಿರುತ್ತೇನೆ. ಆಡು ಮಗನೆ ಅಂದರು. ಅಪ್ಪನಿಗಾಗಿ ಏನು ಬೇಕಾದರೂ ಮಾಡುತ್ತೇನೆ." ಎಂದು ಭಾವುಕರಾಗಿದ್ದಾರೆ.
ದೈವ ಮಾತು ತಪ್ಪಿದರೆ ಹೇಗೆ?
ಹರೀಶ್ ರಾಯ್ ಆನಾರೋಗ್ಯಕ್ಕೀಡಾದಾಗ ಅವರು ನಂಬಿದ ದೈವರ ಮೊರೆ ಹೋಗಿದ್ದರು. ಹರೀಶ್ ರಾಯ್ ಪುತ್ರ ದೈವದ ಬಳಿ ಪ್ರಶ್ನೆ ಮಾಡಿದ್ದರು. ಎಲ್ಲವನೂ ನಡೆಸಿಕೊಡುತ್ತೇನೆಂದು ಹೇಳಿತ್ತು. ಆದರೆ, ದೈವವೇ ಮಾತು ತಪ್ಪಿದರೆ ಹೇಗೆ ಎಂದು ಹತಾಷಾರಾಗಿದ್ದಾರೆ. "ನಮ್ಮದು ಉಡುಪಿ ಅಲ್ವಾ. ಸೇಮ್ ಕಾಂತಾರ ತರ ಆಗುತ್ತೆ. ಅಲ್ಲಿ ಪ್ರಶ್ನೆ ಕೇಳಿದ್ದೆ. ಏನು ಆಗಲ್ಲ. ಎಲ್ಲವನ್ನೂ ನಡೆಸಿಕೊಡುತ್ತೇನೆ ಎಂದು ದೇವರು-ದೈವ ಎರಡೂ ಮಾತು ಕೊಟ್ಟಿತ್ತು. ದೇವರು-ದೈವನೇ ಮಾತು ತಪ್ಪಿಬಿಟ್ಟರೆ ಹೆಂಗೆ.. ಈಗ ಎಲ್ಲಿ ದೇವರು? ಎಲ್ಲಿ ಆ ದೈವ?" ಎಂದು ಕಣ್ಣೀರು ಹಾಕಿದ್ದಾರೆ.


Click it and Unblock the Notifications











