ಕಮಲ್ ಹಾಸನ್ ಹುಟ್ಟುಹಬ್ಬಕ್ಕೆ ಶುಭಕೋರಿದ ಕಿಚ್ಚ ಸುದೀಪ್
ಲೆಜೆಂಡರಿ ನಟ ಕಮಲ್ ಹಾಸನ್ ಗೆ ಇಂದು (ನ.7) ಹುಟ್ಟುಹ್ಬಬದ ಸಂಭ್ರಮ. 66ನೇ ವಸಂತಕ್ಕೆ ಕಾಲಿಟ್ಟಿರುವ ನಟ ಕಮಲ್ ಹಾಸನ್ ಗೆ ಅಭಿಮಾನಿಗಳು, ಸ್ನೇಹಿತರು ಮತ್ತು ಚಿತ್ರರಂಗದ ಗಣ್ಯರಿಂದ ಶುಭಾಶಯಗಳ ಸುರಿಮಳೆಯೇ ಹರಿದು ಬರುತ್ತಿದೆ. ಭಾರತೀಯ ಸಿನಿಮಾರಂಗದ ಪ್ರತಿಭಾವಂತ ನಟ, ಸಕಲಕಲಾವಲ್ಲಭ ಕಮಲ್ ಹಾಸನ್ ತಮಿಳು ಸಿನಿಮಾರಂಗಲ್ಲಿ ಮಾತ್ರವಲ್ಲದೆ, ತೆಲುಗು, ಮಲಯಾಳಂ, ಕನ್ನಡ ಮತ್ತು ಹಿಂದಿ ಸಿನಿಮಾರಂಗದಲ್ಲೂ ಮಿಂಚಿದ್ದಾರೆ. ಎಲ್ಲಾ ಭಾಷೆಯ ಅಭಿಮಾನಿಗಳು, ಗಣ್ಯರು ಕಮಲ್ ಹಾಸನ್ ಗೆ ವಿಶ್ ಮಾಡುತ್ತಿದ್ದಾರೆ.
ಕಿಚ್ಚ ಸುದೀಪ್ ಗೆ ಕಮಲ್ ಹಾಸನ್ ಅಂದರೆ ತುಂಬಾ ಇಷ್ಟ. ನೆಚ್ಚಿನ ನಟರಲ್ಲಿ ಕಮಲ್ ಕೂಡ ಒಬ್ಬರು. ಪ್ರೀತಿಯ ನಟನಿಗೆ ಸುದೀಪ್ ಸಾಮಾಜಿಕ ಜಾಲತಾಣದ ಮೂಲಕ ಹುಟ್ಟುಹಬ್ಬದ ಸಂದೇಶ ರವಾನಿಸಿದ್ದಾರೆ. 'ಹುಟ್ಟುಹಬ್ಬದ ಶುಭಾಶಯಗಳು ಕಮಲ್ ಹಾಸನ್ ಸರ್' ಎಂದು ವಿಶ್ ಮಾಡುವ ಜೊತೆಗೆ ಕಮಲ್ ಹಾಸನ್ ಫೋಟೋವನ್ನು ಶೇರ್ ಮಾಡಿದ್ದಾರೆ. ರಾಯಲ್ ಲುಕ್ ನಲ್ಲಿ ಕುಳಿತಿರುವ ಕಮಲ್ ಫೋಟೋ ಹಂಚಿಕೊಂಡಿದ್ದಾರೆ.
ಈ ಹಿಂದೆ ಸುದೀಪ್ ಸಂದರ್ಶನವೊಂದರಲ್ಲಿ ಕಮಲ್ ಹಾಸನ್ ಬಗ್ಗೆ ಅವರೊಬ್ಬ 'ಚಿಂತಕ' ಎಂದು ಹೇಳಿದ್ದರು. ಸಂದರ್ಶನದ ಈ ವಿಡಿಯೋ ಕ್ಲಿಪಿಂಗ್ ವೈರಲ್ ಆಗಿತ್ತು. ಸುದೀಪ್ ವಿಶ್ ಮಾಡುತ್ತಿದಂತೆ ಕಿಚ್ಚನ ಅಭಿಮಾನಿಗಳು ಸಹ ಪ್ರೀತಿಯ ಕಮಲ್ ಹಾಸನ್ ಗೆ ಪ್ರೀತಿಯ ವಿಶ್ ತಿಳಿಸುತ್ತಿದ್ದಾರೆ.

ಕಮಲ್ ಹಾಸನ್ ಸದ್ಯ ಸಿನಿಮಾಗಳ ಜೊತೆಗೆ ರಾಜಕೀಯದಲ್ಲೂ ಬ್ಯುಸಿಯಾಗಿದ್ದಾರೆ. ಕಮಲ್ ಹಾಸನ್ ಮಕ್ಕಳ್ ನೀಧಿ ಮೈಯಂ ಪಕ್ಷವನ್ನು ಹುಟ್ಟುಹಾಕಿರುವ ಕಮಲ್ ಮುಂಬರುವ ತಮಿಳುನಾಡು ಲೋಕಸಭೆ ಚುನಾವಣೆಗೆ ಸಿದ್ಧತೆ ನಡೆಸುತ್ತಿದ್ದಾರೆ. ಹಾಗಾಗಿ ಇತ್ತೀಚಿಗೆ ಸಿನಿಮಾಗಿಂತ ಹೆಚ್ಚಾಗಿ ಕಮಲ್ ರಾಜಕೀಯರಂಗದಲ್ಲಿ ಸಕ್ರೀಯರಾಗಿದ್ದಾರೆ.
ಸದ್ಯ ತಮಿಳು ಬಿಗ್ ಬಾಸ್ ನಡೆಸಿಕೊಡುತ್ತಿದ್ದಾರೆ. ಜೊತೆಗೆ ಇಂಡಿಯನ್-2 ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಲಾಕ್ ಡೌನ್ ಬಳಿಕ ಕಮಲ್ ಇನ್ನೂ ಸಿನಿಮಾ ಚಿತ್ರೀಕರಣ ಪ್ರಾರಂಭ ಮಾಡಿಲ್ಲ. ಕಮಲ್ ಹಾಸನ್ ಕೊನೆಯದಾಗಿ 2018ರಲ್ಲಿ ವಿಶ್ವರೂಪಂ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಇದೀಗ ಇಂಡಿಯನ್-2 ಯಾವಾಗ ರಿಲೀಸ್ ಆಗುತ್ತೆ ಎಂದು ಕಾತರದಿಂದ ಕಾಯುತ್ತಿದ್ದಾರೆ.


Click it and Unblock the Notifications











