"ನನಗೆ ತುಂಬಾ ಜನ ಲವ್ ಲೆಟರ್ ಬರೀತಾನೆ ಇರ್ತಾರೆ": ಬೆದರಿಕೆ ಪತ್ರದ ಬಗ್ಗೆ ಸುದೀಪ್ ಪ್ರತಿಕ್ರಿಯೆ
ರಾಜ್ಯದಲ್ಲಿ ಚುನಾವಣೆ ರಂಗೇರುತ್ತಿದ್ದಂತೆ ಇತ್ತ ಕಿಚ್ಚ ಸುದೀಪ್ ಕೂಡ ಬ್ಯುಸಿಯಾಗುತ್ತಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಸುದೀಪ್ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಮಾಡುವುದಾಗಿ ಹೇಳಿದ್ದರು. ಈ ಬೆನ್ನಲ್ಲೇ ಈಗೆ ರಾಜ್ಯದ ಹಲವೆಡೆ ಪ್ರಚಾರವನ್ನು ಆರಂಭಿಸಿದ್ದಾರೆ.
ಇಂದು (ಏಪ್ರಿಲ್ 26) ಕೂಡ ಸುದೀಪ್ ರಾಜ್ಯದ ಹಲವು ಭಾಗಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪ್ರಚಾರ ಮಾಡುತ್ತಿದ್ದಾರೆ. ಮೊಳಕಾಲ್ಮುರಿನಿಂದ ಬಿಜೆಪಿ ಅಭ್ಯರ್ಥಿ ಪರ ಪ್ರಚಾರವನ್ನು ಆರಂಭ ಮಾಡಿದ್ದಾರೆ. ಬೆಂಗಳೂರಿನಿಂದ ಕ್ಯಾಂಪೇನ್‌ಗೆ ಹೊರಡುವ ಮುನ್ನ ಸುದೀಪ್ ಬೆದರಿಕೆ ಪತ್ರದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಕಿಚ್ಚ ಸುದೀಪ್ ಬಿಜೆಪಿ ಪ್ರಚಾರ ಮಾಡುತ್ತೇನೆ ಎಂದು ಅನೌನ್ಸ್ ಮಾಡುವುದಕ್ಕೂ ಮುನ್ನ ಬೆದರಿಕೆ ಪತ್ರ ಬಂದಿತ್ತು. ಎರಡು ಬೆದರಿಕೆ ಪತ್ರಗಳನ್ನು ಸ್ವೀಕರಿಸಿದ ಬಳಿಕ ಪೊಲೀಸರಿಗೆ ದೂರನ್ನು ನೀಡಿದ್ದರು. ಈ ಬಗ್ಗೆ ಇಂದು(ಏಪ್ರಿಲ್ 26) ಸುದೀಪ್ ಪ್ರತಿಕ್ರಿಯೆ ನೀಡಿದ್ದಾರೆ.
ಬೆದರಿಕೆ ಪತ್ರದ ಬಗ್ಗೆ ಕಿಚ್ಚ ಹೇಳಿದ್ದೇನು?
ಸುದೀಪ್ ಬೆದರಿಕೆ ಪತ್ರದ ವಿರುದ್ಧ ದೂರು ದಾಖಲಿಸಿ ಹೆಚ್ಚು ಕಡಿಮೆ ಒಂದು ತಿಂಗಳಾಗುತ್ತಾ ಬಂದಿದೆ. ಆದರೂ, ಕಿಡಿಗೇಡಿಗಳು ಯಾರು ಅನ್ನೋದು ಪತ್ತೆಯಾಗಿಲ್ಲ. ಸಿಸಿಬಿ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದರೂ, ಸುಳಿವು ಮಾತ್ರ ಸಿಕ್ಕಿಲ್ಲ. ಈ ಸಂಬಂಧ ಇಂದು(ಏಪ್ರಿಲ್ 26) ಮೊಳಕಾಲ್ಮೂರಿಗೆ ತೆರಳುವುದಕ್ಕೂ ಮುನ್ನ ಪ್ರತಿಕ್ರಿಯೆ ನೀಡಿದ್ದಾರೆ.

ಬೆದರಿಕೆ ಪತ್ರದ ಬಗ್ಗೆ ಹೆಚ್ಚು ಪ್ರತಿಕ್ರಿಯೆ ನೀಡಿದೇ ಹೋದರೂ "ನನಗೆ ತುಂಬಾ ಜನ ಲವ್ ಲೆಟರ್ ಬರೀತಾನೆ ಇರುತ್ತಾರೆ" ಎಂದು ಕಿಚ್ಚ ಸುದೀಪ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಮೂಲಕ ಬೆದರಿಕೆ ಪತ್ರಗಳಿಗೆಲ್ಲ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಪರೋಕ್ಷವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಬೆದರಿಕೆ ಪತ್ರದ ಹಿನ್ನೆಲೆ ಏನು?
ಕಳೆದೆರಡು ತಿಂಗಳಿನಿಂದ ಸುದೀಪ್ ಬಿಜೆಪಿ ಪಕ್ಷ ಸೇರಿತ್ತಾರೆ ಅನ್ನೋ ಸುದ್ದಿ ಹರಿದಾಡಿತ್ತು. ಮಾರ್ಚ್ ತಿಂಗಳ ಆರಂಭದಲ್ಲಿ ಸುದೀಪ್‌ಗೆ ಬೆದರಿಕೆ ಪತ್ರ ಕಳುಹಿಸಲಾಗಿತ್ತು. ಇದನ್ನು ಸುದೀಪ್ ಗಂಭೀರವಾಗಿ ಪರಿಗಣಿಸಿರಲಿಲ್ಲ. ಮಾರ್ಚ್ ತಿಂಗಳಲ್ಲೇ ಎರಡನೇ ಸುದೀಪ್‌ಗೆ ಬೆದರಿಕೆ ಪತ್ರ ಬಂದಾಗ ಪೊಲೀಸರಿಗೆ ದೂರು ನೀಡಿದ್ದರು. ಇನ್ನೇನು ಬಿಜೆಪಿ ಪರ ಪ್ರಚಾರ ಮಾಡುತ್ತಿರುವ ವಿಷಯವನ್ನುಅನೌನ್ಸ್ ಮಾಡಬೇಕು ಅನ್ನೋಕೂ ಕೆಲವೇ ಗಂಟೆಗಳ ಮುನ್ನ ಬೆದರಿಕೆ ಪತ್ರದ ಬಗ್ಗೆ ಸುದ್ದಿ ವೈರಲ್ ಆಗಿತ್ತು.
ಸದ್ಯ ಬೆದರಿಕೆ ಪತ್ರ ಬರೆದ ಪ್ರಕರಣವನ್ನು ಸಿಸಿಬಿ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಆರಂಭದಲ್ಲಿ ತನಿಖೆಯಲ್ಲಿ ಕಿಡಿಗೇಡಿಗಳು ದೊಮ್ಮಲೂರಿನಿಂದ ಬೆದರಿಕೆ ಪತ್ರ ಪೋಸ್ಟ್ ಮಾಡಿದ್ದು, ನಕಲಿ ನಂಬರ್ ಪ್ಲೇಟ್‌ನ ಕಾರನ್ನು ಬಳಸಿದ್ದರು ಎನ್ನಲಾಗಿದೆ. ಈ ಮಧ್ಯೆ ಮಾಜಿ ಕಾರು ಚಾಲಕನ ಬಗ್ಗೆನೂ ಅನುಮಾನ ವ್ಯಕ್ತವಾಗಿತ್ತು.
ಸುದೀಪ್ ಎಲ್ಲೆಲ್ಲಿ ಪ್ರಚಾರ
ಕಿಚ್ಚ ಸುದೀಪ್ ಮೊಳಕಾಲ್ಮೂರಿನ ಬಿಜೆಪಿ ಅಭ್ಯರ್ಥಿ ಎಸ್. ತಿಪ್ಪೇಸ್ವಾಮಿ ಪರ ರೋಡ್ ಶೋ ಮಾಡಲಿದ್ದಾರೆ. ಮೊಳಕಾಲ್ಮೂರಿನ ರೋಡ್ ಶೋ ಬಳಿಕ ಜಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ವಿ. ರಾಮಚಂದ್ರ ಪರ ರೋಡ್ ಶೋನಲ್ಲಿ ಭಾಗಿಯಾಗಲಿದ್ದಾರೆ.
ಇಂದು (ಏಪ್ರಿಲ್ 26) ಇಡೀ ದಿನ ಕಿಚ್ಚ ಸುದೀಪ್ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡಲಿದ್ದು, ಮಾಯಕೊಂಡ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಬಸವರಾಜ ನಾಯ್ಕ ಪರ ಮತಯಾಚಿಸಲಿದ್ದಾರೆ. ಹಾಗೇ ದಾವಣಗೆರೆಯ ದಕ್ಷಿಣ ಮತ್ತು ಉತ್ತರ ಕ್ಷೇತ್ರಗಳ ಅಭ್ಯರ್ಥಿಗಳಾದ ಲೊಕ್ಕಿಕೆರೆ ನಾಗರಾಜ ಹಾಗೂ ಬಿ.ಜಿ. ಅಜಯ್ ಕುಮಾರ್ ಪರ ಪ್ರಚಾರ ಮಾಡಿ, ಸಂಡೂರಿನ ಅಭ್ಯರ್ಥಿ ಶಿಲ್ಪ ನಾಗೇಂದ್ರ ಪರ ಪ್ರಚಾರ ಮಾಡಲಿದ್ದಾರೆ.


Click it and Unblock the Notifications











