ಚೊಚ್ಚಲ ಸಿನಿಮಾಗೆ ಹೀರೋನೂ ಹೌದು, ನಿರ್ದೇಶಕನೂ ಹೌದು; ಕಿಚ್ಚ ಸುದೀಪ್ ಶಿಷ್ಯನ ಖದರ್ ಹೇಗಿದೆ?
ಕನ್ನಡ ಚಿತ್ರರಂಗಕ್ಕೆ ಹೊಸ ಪ್ರತಿಭೆಗಳು ಬರುತ್ತಿರಬೇಕು. ಆಗಲೇ ಚಿತ್ರರಂಗ ಬೆಳೆಯುವುದಕ್ಕೆ ಸಾಧ್ಯ. ಈ ಪ್ರಯತ್ನ ಕಳೆದ ಹಲವು ವರ್ಷಗಳಿಂದ ನಡಯುತ್ತಲೇ ಇದೆ. ಆದರೂ, ಯಾಕೋ ಹೊಸ ಪ್ರತಿಭೆ ಸ್ಟಾರ್ ಆಗುವುದಕ್ಕೆ ಸಾಕಷ್ಟು ಸಮಯ ಹಿಡಿಯುತ್ತಿದೆ. ಇದೀಗ ಮತ್ತೊಂದು ಹೊಸ ಪ್ರತಿಭೆ ಹೀರೋ ಕಮ್ ನಿರ್ದೇಶಕನಾಗಿ ಎಂಟ್ರಿ ಕೊಡುವುದಕ್ಕೆ ರೆಡಿಯಾಗಿದೆ. ಹಾಗಂತ ಸಿನಿಮಾ ಮಾಡ್ಬೇಕು ಅನ್ನುವ ಗೀಳಿನಲ್ಲಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿಲ್ಲ. ಇದರ ಹಿಂದೊಂದು ಪರಿಶ್ರಮವಿದೆ.
ಸ್ಯಾಂಡಲ್‌ವುಡ್‌ಗೆ ಎರಡೆರಡು ಜವಾಬ್ದಾರಿಗಳನ್ನು ಹೊತ್ತು ಎಂಟ್ರಿ ಕೊಡುತ್ತಿರುವ ಆ ಹೊಸ ಪ್ರತಿಭೆ ಆಶು. ಚೊಚ್ಚಲ ಸಿನಿಮಾದಲ್ಲೇ ಹೀರೋ ಆಗಿಯೂ, ನಿರ್ದೇಶಕನಾಗಿಯೂ ಮಿಂಚಲು ರೆಡಿಯಾಗಿರುವ ಸಿನಿಮಾದ 'ಟಾಮಿ'. ಸಿನಿಮಾದ ಟೈಟಲ್ ಹೇಳಿದ ಕೂಡಲೇ ಇದು ಶ್ವಾನ ಪ್ರಿಯರ ಸಿನಿಮಾ ಇರಬಹುದಾ? ಅನ್ನೋ ಅನುಮಾನ ಮೂಡುತ್ತೆ. ಊಹೆಗೆ ತಕ್ಕಂತೆ ಸಿನಿಮಾ ಪೋಸ್ಟರ್‌ನಲ್ಲಿ ಶ್ವಾನ ಕೂಡ ಕಾಣಿಸಿಕೊಳ್ಳುತ್ತೆ.

'ಟಾಮಿ' ಸಿನಿಮಾದ ಪೋಸ್ಟರ್ ಇಂಟ್ರೆಸ್ಟಿಂಗ್ ಆಗಿದೆ. ಆಶುನೂ ಕನ್ನಡ ಚಿತ್ರರಂಗಕ್ಕೊಬ್ಬ ಭರವಸೆಯ ಹೀರೋ ಆಗಬಹುದು ಅನ್ನೋ ಸೂಚನೆ ಕೊಟ್ಟಿದೆ. ಪೋಸ್ಟರ್‌ನಲ್ಲಿ ಶ್ವಾನ ಹಾಗೂ ಆರ್‌ಎಕ್ಸ್ ಬೈಕ್ ಹೈಲೆಟ್ ಅನಿಸಿವೆ. ಯಾಕಂದ್ರೆ ಇಂದಿನ ಯುವಕರಿಗೆ ಈ ಆರ್‌ಎಕ್ಸ್ ಬೈಕ್ ಮೇಲೆ ಎಲ್ಲಿಲ್ಲ ಕ್ರೇಜ್. ಹಾಗಾಗಿ ಈ ಬೈಕ್ ಪೋಸ್ಟರ್‌ನ ಹೈಲೈಟ್. ಇನ್ನೊಂದು ಪ್ರಾಣಿ ಪ್ರಿಯರ ಫೇವರಿಟ್ ಶ್ವಾನವಿದೆ. ಹೀಗಾಗಿ ಯುವಕರನ್ನು ಈ ಸಿನಿಮಾ ಪೋಸ್ಟ್ ಮೂಲಕವೇ ಸೆಳೆಯುತ್ತಿದೆ.
ಟಾಮಿ ಹೀರೋ ಆಶು ಬಗ್ಗೆ ಯಾಕಿಷ್ಟು ಟಿಪ್ಪಣಿ? ಅನ್ನೋ ಪ್ರಶ್ನೆಗೆ ಉತ್ತರ ಇಲ್ಲಿದೆ. ಚೊಚ್ಚಲ ಸಿನಿಮಾಗೆ ಹೀರೋ ಕಮ್ ನಿರ್ದೇಶಕ ಸುಮ್ಮನೆ ಆಗೋಕೆ ಆಗಲ್ಲ. ಇವರಿಗೆ ಚಿತ್ರರಂಗನೂ ಹೊಸತೇನೂ ಅಲ್ಲ. ಕಳೆದ ಏಳೆಂಟು ವರ್ಷಗಳಿಂದ ಸ್ಯಾಂಡಲ್‌ವುಡ್‌ನ ಹಲವು ಸಿನಿಮಾಗಳಿಗೆ ಕೆಲಸ ಮಾಡಿದ್ದಾರೆ. ಕಿಚ್ಚ ಸುದೀಪ್ ನಟಿಸಿದ ಸಿನಿಮಾಗಳಿಗೆ ಸಹಾಯಕ ನಿರ್ದೇಶಕರಾಗಿ ಕಳೆದ ಏಳೆಂಟು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ.

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ 'ಮುಕುಂದ ಮುರಾರಿ' ಸಿನಿಮಾ ಸಹಾಯಕ ನಿರ್ದೇಶಕರಾಗಿದ್ದರು. ಹಾಗೇ ಸುದೀಪ್ ನಿರ್ಮಾಣದ ರೆಬಲ್ ಸ್ಟಾರ್ ಅಂಬರೀಶ್ ಹಾಗೂ ಸುದೀಪ್ ನಟನೆಯ 'ಅಂಬಿ ನಿಂಗೆ ವಯಸ್ಸಾಯ್ತೊ' ಸಿನಿಮಾಗೂ ಸಹಾಯಕರಾಗಿದ್ದರು. ಇದರೊಂದಿಗೆ ಕಿಚ್ಚನ ಕೋಟಿಗೊಬ್ಬ-3 ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಕೆಲಸ ಮಾಡಿದ ಅನುಭವ 'ಟಾಮಿ' ಹೀರೋ ಕಮ್ ನಿರ್ದೇಶಕ ಆಶು ಅವರಿಗಿದೆ.
ಇನ್ನು 'ಟಾಮಿ' ಸಿನಿಮಾದಲ್ಲಿ ಹೀರೋ ಶ್ವಾನ ಹಾಗೂ ಆರ್‌ಎಕ್ಸ್ ಬೈಕ್ ಪ್ರೇಮಿ ಅನ್ನೋದನ್ನು ಗೆಸ್ ಮಾಡಬಹುದು. ಸದ್ಯ ಗಣೇಶ ಚತುರ್ಥಿಯ ಪ್ರಯುಕ್ತ ಪೋಸ್ಟರ್ ರಿಲೀಸ್ ಮಾಡಿದ್ದು, ಸಿನಿಪ್ರೇಮಿಗಳ ಗಮನ ಸೆಳೆಯುತ್ತಿದೆ. 'ಟಾಮಿ' ಸಿನಿಮಾದಲ್ಲಿ ಬಹುತೇಕ ಹೊಸಬರು ಕಾಣಿಸಿಕೊಳ್ಳಲಿದ್ದಾರೆ. ಎಲಿಪಾಸ್ ಇಂಡಿಯಾ ಎಂಟರ್ಟೈನ್ಮೆಂಟ್ ಈ ಸಿನಿಮಾವನ್ನು ನಿರ್ಮಾಣವಾಗುತ್ತಿದೆ. ಈ ಸಿನಿಮಾಗೆ ಸಚಿನ್ ಶ್ಯಾಮ್ ಸುಂದರ್ ಹಾಗೂ ಸ್ನೇಹಿತರು ಸೇರಿ ನಿರ್ಮಾಣ ಮಾಡುತ್ತಿದ್ದಾರೆ.
ದೇಶಾದ್ಯಂತ ಗೌರಿ-ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದೆ. ಹಾಗೇ ಸಿನಿಮಾ ಮಂದಿಗೂ ಈ ಹಬ್ಬ ಸಖತ್ ವಿಶೇಷ. ಹಬ್ಬದ ಜೊತೆಗೆ ಹೊಸ ಸಿನಿಮಾಗಳು ಕೂಡ ಘೋಷಣೆಯಾಗುತ್ತಿದೆ. ಕೆಲವು ಸಿನಿಮಾಗಳು ಅಪ್ಡೇಟ್ ಕೊಟ್ಟಿವೆ. ಇದೇ ಗೌರಿ-ಗಣೇಶ ಹಬ್ಬಕ್ಕೆ 'ಟಾಮಿ' ಸಿನಿಮಾ ಕೂಡ ಅನೌನ್ಸ್ ಆಗಿದ್ದು, ಮುಂದಿನ ದಿನಗಳಲ್ಲಿ ಸಿನಿಮಾ ಬಗ್ಗೆ ಮತ್ತಷ್ಟು ಮಾಹಿತಿ ಸಿಗಲಿದೆ.


Click it and Unblock the Notifications











