Kichcha 50: "ದೇವರು ಕ್ಷಮಿಸುತ್ತಾನೆ ಆದ್ರೆ ನಾನು ಕ್ಷಮಿಸುವುದಿಲ್ಲ".. ಡೈರೆಕ್ಟರ್ ಕ್ಯಾಪ್ ತೊಟ್ಟು ಕಿಚ್ಚ ವಾರ್ನಿಂಗ್
ಕಿಚ್ಚ ಸುದೀಪ್ ವೃತ್ತಿ ಬದುಕಿಗೆ ಈ ಹುಟ್ಟುಹಬ್ಬ ತುಂಬಾನೇ ಸ್ಪೆಷಲ್. ನಾಳೆ (ಸೆಪ್ಟೆಂಬರ್ 2) 50ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಕಿಚ್ಚ ಸುದೀಪ್‌ಗೆ ಇಂದಿನಿಂದಲೇ (ಸೆಪ್ಟೆಂಬರ್ 1) ಉಡುಗೊರೆಗಳ ಮಹಾಪೂರವೇ ಹರಿದು ಬರುತ್ತಿದೆ. ಹೊಚ್ಚ ಹೊಸ ಸಿನಿಮಾಗಳು ಅನೌನ್ಸ್ ಆಗುತ್ತಿವೆ.
ಕಿಚ್ಚ ಸುದೀಪ್ ದಕ್ಷಿಣ ಭಾರತದ ಉತ್ತಮ ನಟ ಅನ್ನೋದರಲ್ಲಿ ಅನುಮಾನವೇ ಇಲ್ಲ. ಹಾಗೇ ಅಷ್ಟೇ ಓಳ್ಳೆ ತಂತ್ರಜ್ಞ ಕೂಡ ಹೌದು. ಈ ಕಾರಣಕ್ಕೆ ಹಿಂದೆ ಚಿತ್ರರಂಗದಲ್ಲಿ 25 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ನಿರ್ದೇಶನ ಯಾವಾಗ? ಅನ್ನೋ ಬಗ್ಗೆ ಪ್ರಶ್ನೆ ಮಾಡಲಾಗಿತ್ತು. ಆ ವೇಳೆ ಅದಕ್ಕಿನ್ನೂ ಸಮಯವಿದೆ ಎಂದು ಹೇಳಿ ಸುದೀಪ್ ನುಣುಚಿಕೊಂಡಿದ್ದರು.

ಆ ಸಮಯ ಈಗ ಬಂದೇ ಬಿಟ್ಟಿದೆ. ಕಿಚ್ಚ ಸುದೀಪ್ ಮತ್ತೆ ನಿರ್ದೇಶನಕ್ಕೆ ಮರಳಿದ್ದಾರೆ. 50ನೇ ವರ್ಷದ ಹುಟ್ಟುಹಬ್ಬದ ಸಂದರ್ಭದಲ್ಲಿಯೇ ಕಿಚ್ಚ ಡೈರೆಕ್ಷನ್ ಕ್ಯಾಪ್ ತೊಡುವುದಕ್ಕೆ ರೆಡಿಯಾಗಿದ್ದಾರೆ. ತಮ್ಮ ಅಭಿಮಾನಿಗಳಿಗೆ ಬಿಗ್ ಸರ್ಪ್ರೈಸ್ ಕೊಟ್ಟಿದ್ದಾರೆ.
9 ವರ್ಷಗಳ ಬಳಿಕ ಸುದೀಪ್ ಡೈರೆಕ್ಷನ್
ಉಪೇಂದ್ರ, ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿಯಂತೆ ಕಿಚ್ಚ ಸುದೀಪ್ ಕೂಡ ಉತ್ತಮ ನಿರ್ದೇಶಕ ಕಮ್ ನಟ. ಆದರೆ, ಕೆಲವು ವರ್ಷಗಳಿಂದ ನಿರ್ದೇಶನದ ಗೋಜಿಗೆ ಹೋಗಿರಲಿಲ್ಲ. ಸಿನಿಮಾದಲ್ಲಿ ನಟಿಸುವುದರಲ್ಲಿಯೇ ಬ್ಯುಸಿಯಾಗಿದ್ದರು. ಈಗ ತಮ್ಮ ಅಭಿಮಾನಿಗಳ ಒತ್ತಾಯಕ್ಕೆ ಮಣಿದ ಸುದೀಪ್ 50ನೇ ವರ್ಷದ ಹುಟ್ಟುಹಬ್ಬದ ಈ ಸಂದರ್ಭದಲ್ಲಿ ಮತ್ತೆ ನಿರ್ದೇಶನಕ್ಕೆ ಇಳಿದಿದ್ದಾರೆ. ಕಿಚ್ಚನಿಗೆ ನಿರ್ದೇಶನ ಹೊಸತೇನಲ್ಲ. ಡೈರೆಕ್ಷನ್ ಕ್ಯಾಪ್ ತೊಟ್ಟಾಗ ಗೆಲುವು ಹಾಗೂ ಸೋಲು ಎರಡನ್ನೂ ಕಂಡಿದ್ದಾರೆ.

ಕೊನೆಯದಾಗಿ ನಿರ್ದೇಶಿಸಿದ ಸಿನಿಮಾ ಯಾವುದು?
ಕಿಚ್ಚ ಸುದೀಪ್ 2014ರಲ್ಲಿ 'ಮಾಣಿಕ್ಯ' ಸಿನಿಮಾವನ್ನು ನಿರ್ದೇಶಿಸಿದ್ದರು. ಇದು ಬಾಕ್ಸಾಫೀಸ್‌ನಲ್ಲಿ ಹಿಟ್ ಆಗಿತ್ತು. 'ಮಾಣಿಕ್ಯ' ತೆಲುಗಿನ ಮಿರ್ಚಿ ಸಿನಿಮಾದ ರಿಮೇಕ್ ಆಗಿತ್ತು. ಈ ಸಿನಿಮಾ ಗೆದ್ದರೂ ಮತ್ತೆ ಆಕ್ಷನ್ ಕಟ್ ಹೇಳುವ ಸಾಹಸಕ್ಕೆ ಸುದೀಪ್ ಕೈ ಹಾಕಿರಲಿಲ್ಲ. ಈಗ ಕೆಆರ್‌ಜಿ ಸ್ಟುಡಿಯೋ ನಿರ್ಮಿಸುತ್ತಿರುವ ಸಿನಿಮಾಗೆ ಕಿಚ್ಚ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಕುತೂಹಲ ಕೆರಳಿಸಲು ಈಗಾಗಲೇ ಪೋಸ್ಟರ್ ರಿಲೀಸ್ ಮಾಡಲಾಗಿದೆ.
ರಕ್ತ ಚರಿತ್ರೆ ಹೇಳುವ ಪೋಸ್ಟರ್
ಕೆಆರ್‌ಜಿ ಸ್ಡುಡಿಯೋ ಈಗಾಗಲೇ ಸುದೀಪ್ ನಿರ್ದೇಶನದ ಪೋಸ್ಟರ್ ಅನ್ನು ರಿಲೀಸ್ ಮಾಡಿದೆ. ಇದರಲ್ಲಿ ರಕ್ತ ಛಾಯೆ ಇದೆ. ಈ ಮೂಲಕ ಕಿಚ್ಚ ಸುದೀಪ್ ಈ ಬಾರಿ ರಕ್ತ ಚರಿತ್ರೆಯನ್ನು ಹೇಳುವುದಕ್ಕೆ ಹೊರಟಿದ್ದಾರೆ ಅನ್ನೋದನ್ನು ಈ ಪೋಸ್ಟರ್ ಸಾಬೀತು ಮಾಡುತ್ತಿದೆ. ಒಂದು ಕಡೆ ನ್ಯೂಸ್ ಪೇಪರ್‌ನಲ್ಲಿ ರಕ್ತ ಹರಿದಿದೆ. ಮತ್ತೊಂದು ಕಡೆ ಶವಗಳ ರಾಶಿ. ಹಾಗೇ ಸುದೀಪ್ ನೆರಳನ್ನೂ ನೋಡಬಹುದು. ಹೀಗಾಗಿ ಇದೊಂದು ಪಕ್ಕಾ ರಗಡ್ ಸಿನಿಮಾ ಆಗಿರಲಿದೆ.
ವಾರ್ನಿಂಗ್ ಕೊಟ್ರಾ ಕಿಚ್ಚ?
ಕಿಚ್ಚ ಸುದೀಪ್ ನಿರ್ದೇಶನ ಮಾಡುತ್ತಿರೋ ವಿಷಯ ಎಷ್ಟು ಕುತೂಹಲ ಕೆರಳಿಸಿತ್ತೋ.. ಅಷ್ಟೇ ಕುತೂಹಲ ಕೆರಳಿಸಿದ್ದು ಟ್ಯಾಗ್ ಲೈನ್. 'God Forgives, I don't - King Kichcha' (ದೇವರು ಕ್ಷಮಿಸುತ್ತಾನೆ ಆದರೆ ನಾನು ಕ್ಷಮಿಸುವುದಿಲ್ಲ) ಅನ್ನೋ ಸಾಲು ಕಿಚ್ಚ ಸುದೀಪ್ ಯಾರಿಗೋ ವಾರ್ನಿಂಗ್ ಕೊಟ್ಟಂತಿದೆ. ಅಂದ್ಹಾಗೆ ಇದು ಸುದೀಪ್ ನಿರ್ದೇಶನದ 7ನೇ ಸಿನಿಮಾ. ಇದೂ ಕೂಡ ಪ್ಯಾನ್ ಇಂಡಿಯಾ ರಿಲೀಸ್ ಆಗಲಿದೆ.


Click it and Unblock the Notifications











