'ರಂಗ SSLC'ಗೆ ರಾಜ್ಯ ಪ್ರಶಸ್ತಿ; ಕಿಚ್ಚನಿಗೆ ಪತ್ರ ಬರೆದು ಬೇರೆಯವರಿಗೆ ಅವಾರ್ಡ್ ಕೊಟ್ಟಿತೇ ಕಾಂಗ್ರೆಸ್ ಸರ್ಕಾರ?
ಡಿಕೆ ಶಿವಕುಮಾರ್ ಕೊಟ್ಟಿರುವ ಹೇಳಿಕೆ ಬೇರೆ ಬೇರೆ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಸ್ಯಾಂಡಲ್‌ವುಡ್ ಮಂದಿ ತೀವ್ರವಾಗಿ ಖಂಡಿಸಿದರೇ. ಡಿಕೆಶಿ ಆಪ್ತರು ಮೆಚ್ಚಿಕೊಂಡಿದ್ದಾರೆ. ಇತ್ತ ಡಿಕೆಶಿ ಆಪ್ತ ಮಂಡ್ಯ ಕ್ಷೇತ್ರ ಶಾಸಕ ರವಿ ಗಣಿಗ ಕೊಟ್ಟ ಹೇಳಿಕೆಗೆ ಕಿಚ್ಚ ಸುದೀಪ್ ಆಪ್ತ, ಪತ್ರಕರ್ತ ಹಾಗೂ ಲೇಖಕ ತೀವ್ರವಾಗಿ ಖಂಡಿಸಿದ್ದಾರೆ. ಡಿಕೆಶಿ ನಟ್ಟು ಬೋಲ್ಟ್ ಟೈಟ್ ಮಾಡುವುದು ಗೊತ್ತಿದೆ ಎನ್ನುವ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ರವಿ ಗಣಿಗ ಬಾದ್‌ಷಾ ಕಿಚ್ಚ ಸುದೀಪ್‌ಗೆ ಪರೋಕ್ಷ ಟಾಂಗ್ ಕೊಟ್ಟಿದ್ದರು.
ನಟರೊಬ್ಬರು ಟ್ವೀಟ್ ಮಾಡಿ ರಾಜ್ಯ ಪ್ರಶಸ್ತಿಯನ್ನು ತಿರಸ್ಕರಿಸಿದ್ದಾರೆ. ಹಿಂದಿಯವರು ಕೊಟ್ಟರೆ ಓಡಿ ಹೋಗಿ ತೆಗೆದುಕೊಳ್ಳುತ್ತಾರೆ ಎಂದು ಹೇಳಿಕೆ ಕೊಟ್ಟಿದ್ದರು. ಈ ಹೇಳಿಕೆಗೆ ಕಿಚ್ಚ ಸುದೀಪ್ ಆಪ್ತ ಚಕ್ರವರ್ತಿ ಚಂದ್ರಚೂಡ್ ತಿರುಗೇಟು ಕೊಟ್ಟಿದ್ದಾರೆ. 2004ರಿಂದ ಸುದೀಪ್ ಕನ್ನಡ, ಹಿಂದಿ ಅಷ್ಟೇ ಯಾವುದೇ ಭಾಷೆಯ ಅವಾರ್ಡ್ ಅನ್ನೂ ಸ್ವೀಕರಿಸಿಲ್ಲ. ಇತ್ತೀಚೆಗೆ ಬಂದ ಪ್ರಶಸ್ತಿಯನ್ನು ನಿರಾಕರಿಸಿದ್ದು ಬಿಟ್ಟರೆ, ತಿರಸ್ಕರಿಸಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

ಹಾಗೇ 2004ರಲ್ಲಿ 'ರಂಗ ಎಸ್‌ಎಸ್‌ಎಲ್‌ಸಿ' ಸಿನಿಮಾ ಬಿಡುಗಡೆಯಾದ ವರ್ಷ ಕಿಚ್ಚ ಸುದೀಪ್ ರಾಜ್ಯ ಪ್ರಶಸ್ತಿ ನೀಡಲಾಗುವುದೆಂದು ಹಿಂದಿನ ದಿನ ಹೇಳಲಾಗಿತ್ತು. ಆದರೆ, ಮಾರನೇ ದಿನ ಈ ಪ್ರಶಸ್ತಿ ಬೇರೆ ನಟರ ಪಾಲಾಗಿತ್ತು. ಅಲ್ಲಿಂದ ಪ್ರಶಸ್ತಿಯನ್ನು ಸ್ವೀಕರಿಸುವುದನ್ನೇ ನಿಲ್ಲಿಸಿದ್ದಾರೆಂದು ಚಕ್ರವರ್ತಿ ಚಂದ್ರಚೂಡ ಹೇಳಿದ್ದಾರೆ. ಈ ಹೇಳಿಕೆ ಬಳಿಕ 2004ರಲ್ಲಿ ಯಾವ ನಟನಿಗೆ ರಾಜ್ಯ ಪ್ರಶಸ್ತಿ ಬಂದಿತ್ತು ಅಂತ ಹುಡುಕಾಡುವುದಕ್ಕೆ ಶುರು ಮಾಡಿದ್ದಾರೆ. ಅದ್ಯಾರು ಅಂತ ನೋಡುವುದಕ್ಕೆ ಮುನ್ನ ರವಿ ಗಣಿಗ ಹೇಳಿಕೆ ಚಂದ್ರಚೂಡ ಕೊಟ್ಟ ತಿರುಗೇಟು ಏನು ಅನ್ನೋದನ್ನು ನೋಡೋಣ.
"ರವಿ ಗಣಿಗ ಅವರೇ ಬ್ಯಾನ್ ಅನ್ನೋ ಪದವನ್ನು ನೀವು ವಾಪಾಸ್ ತೆಗೆದುಕೊಳ್ಳಬೇಕು. ಹಾಗೂ ಕ್ಷಮೆ ಕೇಳಬೇಕು. ಕಿಚ್ಚ ಸುದೀಪ್ ಅವರು 21 ವರ್ಷಗಳಲ್ಲಿ ಇದೂವರೆಗೂ ಯಾವುದೇ ಅವಾರ್ಡ್‌ಗಳನ್ನು ಹಿಂದಿ, ಕನ್ನಡ ಯಾವುದೇ ಅವಾರ್ಡ್‌ಗಳನ್ನು ತೆಗೆದುಕೊಂಡಿಲ್ಲ ಯಾಕೆ? ಈ ರಾಜ್ಯ ಸರ್ಕಾರ ಕೊಡುತ್ತಿರುವ ಪ್ರಶಸ್ತಿ ಇದೆಯಲ್ಲ ಅದು ಅಸಹ್ಯ ಹುಟ್ಟಿಸುವಷ್ಟು ಲಾಭಿಗಳಿಂದ ಕೂಡಿದೆ. ನೀವು ಡಿಕೆ ಶಿವಕುಮಾರ್ ಪಕ್ಷದಲ್ಲಿ ಇದ್ದೀರಿ. ಆದರೆ, ನೀವು ಡಿಕೆ ಶಿವಕುಮಾರ್ ಅಲ್ಲ. ಅಂಬರೀಶ್ ಅವರ ಜಿಲ್ಲೆಯಿಂದ ಗೆದ್ದು ಬಂದಿದ್ದೀರಿ. ಆದರೆ, ಅಂಬರೀಶ್ ಅಲ್ಲ. ಬುರ್ಜ್ ಖಲೀಫಗೆ ಹೋಗಿ ಕನ್ನಡ ಬಾವುಟ ಹಾರಿಸಿ ಬರುತ್ತೀರಾ? ನೀವು ಯಾರ ಬಗ್ಗೆ ಮಾತಾಡಿದ್ದೀರೋ ಅವರನ್ನು ರಾಕಿಂಗ್ ಸ್ಟಾರ್ ಯಶ್ ಅಂತಾರೆ, ಬಾದ್‌ಷಾ ಕಿಚ್ಚ ಸುದೀಪ ಅಂತಾರೆ, ರಿಯಲ್‌ಸ್ಟಾರ್ ಉಪೇಂದ್ರ ಅಂತಾರೆ, ಶಿವಣ್ಣ ಅಂತಾರೆ, ಡಾ.ಶಿವರಾಜ್‌ಕುಮಾರ್ ಸರ್ ಅಂತಾರೆ, ಅವರ ಬಗ್ಗೆ ನೀವು ಒಂದಿಷ್ಟು ಮಾತುಗಳನ್ನು ಆಡಿದ್ದೀರಿ. ಸಿನಿಮಾವನ್ನು ಬ್ಯಾನ್ ಮಾಡುತ್ತೇನೆ ಅಂತ ಹೇಳಿದ್ದೀರಿ. ಮಾಡುವುದಕ್ಕೆ ಆಗುತ್ತಾ ನಿಮಗೆ?" ಎಂದು ಚಂದ್ರಚೂಡ್ ಕಿಡಿಕರಿದ್ದಾರೆ.
ಕಿಚ್ಚ ಸುದೀಪ್ ಹೆಸರನ್ನೂ ನೇರವಾಗಿ ತೆಗೆದುಕೊಳ್ಳದೆ ಮಾತಾಡಿದ್ದೀರಿ. ಅವರು ಪ್ರಶಸ್ತಿಯನ್ನು ನಿರಾಕರಿಸಿದ್ದು ಬಿಟ್ಟರೆ, ತಿರಸ್ಕರಿಸಿಲ್ಲ ಎಂದಿದ್ದಾರೆ. "ಯಾರೋ ಒಬ್ಬ ನಟ ಟ್ವೀಟ್ ಮಾಡಿದ್ದರು. ಹಿಂದಿಯವರು ಕೊಟ್ಟರೆ ಓಡಿ ಹೋಗಿ ತೆಗೆದುಕೊಳ್ಳುತ್ತಾರೆ. ಅವಾರ್ಡ್ ಅನ್ನು ತಿರಸ್ಕಾರ ಮಾಡಿದರು ಅಂತ ಮಾತಾಡಿದ್ರಿ. ನಿಮಗೆ ನಾನೊಂದು ಮಾತು ಹೇಳುತ್ತೇನೆ. ನೀವು ಮಾಡಿದ್ದು ಕಿಚ್ಚ ಸುದೀಪ್ ಬಗ್ಗೆ. ಅವರ ಹೆಸರನ್ನಾದರೂ ತೆಗೆದುಕೊಳ್ಳಬೇಕಿತ್ತು. 2004ರಿಂದ 21 ವರ್ಷಗಳ ಬರೆಗೂ ಕಿಚ್ಚ ಸುದೀಪ್ ಹಿಂದಿ, ಕನ್ನಡ ಯಾವುದೇ ಅವಾರ್ಡ್‌ಗಳನ್ನು ತೆಗೆದುಕೊಂಡಿಲ್ಲ. ಇತ್ತೀಚೆಗೆ ಪ್ರಶಸ್ತಿಯನ್ನು ನಿರಾಕರಿಸಿದ್ದು, ಬಿಟ್ಟರೆ, ತಿರಸ್ಕರಿಸಿದ್ದು ಅಲ್ಲ. ಇದರ ಹಿಂದೆ ಒಂದಿಷ್ಟು ಯೋಚನೆಗಳಿತ್ತು, ಅವಮಾನಗಳಿತ್ತು" ಎಂದಿದ್ದಾರೆ.
ಅಷ್ಟೇ ಅಲ್ಲದೆ ರಂಗ ಎಸ್‌ಎಸ್‌ಎಲ್‌ಸಿ ಸಿನಿಮಾಗೆ ರಾಜ್ಯ ಪ್ರಶಸ್ತಿ ಅನೌನ್ಸ್ ಆಗಿತ್ತು. ರಾತ್ರೋ ರಾತ್ರಿ ಆ ಪ್ರಶಸ್ತಿ ಬೇರೆಯವರ ಪಾಲಾಗಿತ್ತು. ಆ ವೇಳೆ ನಿಮ್ಮದೆ ಕಾಂಗ್ರೆಸ್ ಸರ್ಕಾರವಿತ್ತು ಎಂದಿದ್ದಾರೆ. "ರಂಗ ಎಸ್‌ಎಸ್‌ಎಲ್‌ಸಿ ಸಿನಿಮಾಗೆ ರಾಜ್ಯ ಪ್ರಶಸ್ತಿ ಬರಬೇಕಾಗಿರುತ್ತೆ. ಹಿಂದಿನ ದಿನ ಸರ್ಕಾರದ ಕಡೆಯಿಂದ ಒಂದು ಪತ್ರ ಬರುತ್ತೆ. ನಿಮಗೆ ರಾಜ್ಯ ಪ್ರಶಸ್ತಿ ಬಂದಿದೆ ಅಂತ ಹೇಳುತ್ತಾರೆ. ಮರುದಿನ ಬೇರೆಯವರಿಗೆ ಅವಾರ್ಡ್ ಹೋಗಿರುತ್ತೆ. ಎರಡನೇಯದು ಜಸ್ಟ್ ಜಸ್ಟ್ ಮಾತ್ ಮಾತಲ್ಲಿ ಸಿನಿಮಾ ಕಮಿಟಿಯಲ್ಲಿ ಇದ್ದವರೇ ಫೋನ್ ಮಾಡುತ್ತಾರೆ. ನಿಮಗೆ ಅವಾರ್ಡ್ ಕೊಡುತ್ತಿದ್ದೇನೆ ಅಂತ. ಆಗಲೂ ಮರುದಿನ ಬೇರೆಯವರಿಗೆ ಅವಾರ್ಡ್ ಹೋಗುತ್ತೆ. ಈ ರಾಜ್ಯ ಸರ್ಕಾರ ಕೊಡುತ್ತಿರುವ ಪ್ರಶಸ್ತಿ ಇದೆಯಲ್ಲ ಅದು ಅಸಹ್ಯ ಹುಟ್ಟಿಸುವಷ್ಟು ಲಾಭಿಗಳಿಂದ ಕೂಡಿದೆ." ಎಂದು ಸುದೀಪ್ ಆಪ್ತ ಚಕ್ರವರ್ತಿ ಚಂದ್ರಚೂಡ್ ಹೇಳಿಕೊಂಡಿದ್ದಾರೆ.
ಇನ್ನು 2004ರಲ್ಲಿ ಅತ್ಯುತ್ತಮ ನಟ ರಾಜ್ಯ ಪ್ರಶಸ್ತಿಯನ್ನು 'ಕಂಠಿ' ಸಿನಿಮಾದಲ್ಲಿನ ಅಭಿನಯಕ್ಕಾಗಿ ಶ್ರೀಮುರಳಿಗೆ ನೀಡಲಾಗಿತ್ತು. ಹಾಗೇ 'ಜಸ್ಟ್ ಮಾತ್ ಮಾತಲ್ಲಿ' ಸಿನಿಮಾ 2007ರಲ್ಲಿ ರಿಲೀಸ್ ಆಗಿತ್ತು. 2007-08ನೇ ಸಾಲಿನ ಪ್ರಶಸ್ತಿ 'ಮಿಲನ' ಸಿನಿಮಾಗಾಗಿ ಪುನೀತ್ ರಾಜ್‌ಕುಮಾರ್ ಅವರಿಗೆ ನೀಡಲಾಗಿತ್ತು. ಚಕ್ರವರ್ತಿ ಚಂದ್ರಚೂಡ್ ಈ ವರ್ಷಗಳ ಪ್ರಶಸ್ತಿ ಬಗ್ಗೆನೇ ಮಾತಾಡಿದ್ದಾರಾ? ಹಿಂದೆ ಮುಂದೆ ಏನಾದರೂ ಆಗಿದೆಯೇ? ಎಂದು ನೋಡಬೇಕಿದೆ.


Click it and Unblock the Notifications











