Max Box Office Day 4: 4ನೇ ದಿನ ಬಾಕ್ಸಾಫೀಸ್ ಅನ್ನೇ ಅಲ್ಲಾಡಿಸಿದ 'ಮ್ಯಾಕ್ಸ್'.. ತೆಲುಗು-ತಮಿಳಿನಲ್ಲೂ ಸೂಪರ್ ರೆಸ್ಪಾನ್ಸ್!
ಕಳೆದ ವರ್ಷ ಡಿಸೆಂಬರ್ ತಿಂಗಳು ದರ್ಶನ್‌ಗೆ ಕೈ ಹಿಡಿದಿತ್ತು. ಈ ವರ್ಷ ಕಿಚ್ಚ ಸುದೀಪ್‌ಗೆ ಲಕ್ಕಿ ಅಂತ ಸಾಬೀತಾಗಿದೆ. ಕರ್ನಾಟಕದ ಥಿಯೇಟರ್‌ಗಳು 'ಮ್ಯಾಕ್ಸ್' ಎಂಟ್ರಿಗೆ ತುಂಬಿ ತುಳುಕುತ್ತಿವೆ. ಮೊದಲ ವಾರ ಕಿಚ್ಚನ ಸಿನಿಮಾ ಬಾಕ್ಸಾಫೀಸ್ ಅನ್ನೇ ಅಲ್ಲಾಡಿಸಿ ಬಿಟ್ಟಿದೆ. ವರ್ಷದ ಕೊನೆಯಲ್ಲಿ ಸೋಲಿನ ಸುಳಿಯಲ್ಲಿದ್ದ ಸ್ಯಾಂಡಲ್‌ವುಡ್‌ಗೆ ಮತ್ತೊಂದು ಸೂಪರ್ ಹಿಟ್ ಸಿನಿಮಾ ಸಿಕ್ಕಂತೆ ಆಗಿದೆ.
'ವಿಕ್ರಾಂತ್ ರೋಣ' ಬಳಿಕ ಕಿಚ್ಚ ಸುದೀಪ್ ಮತ್ತೆ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಒಂದು ರಾತ್ರಿಯಲ್ಲಿ ನಡೆಯುವ ಕಥೆಯನ್ನು ಕನ್ನಡದ ಪ್ರೇಕ್ಷಕರು ಇಷ್ಟ ಪಟ್ಟಿದ್ದಾರೆ. ಹೀಗಾಗಿ ಬಿಡುಗಡೆಯಾದ ನಾಲ್ಕನೇ ದಿನವೂ ಸಿನಿಮಾ ಕಲೆಕ್ಷನ್ ಏರಿಕೆಯಾಗಿದೆ. ಕರ್ನಾಟಕದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲೂ 'ಮ್ಯಾಕ್ಸ್' ಮ್ಯಾಕ್ಸಿಮಂ ಕಲೆಕ್ಷನ್ ಮಾಡಿದೆ.

'ಮ್ಯಾಕ್ಸ್'ಗೆ ಮೊದಲನೇ ವೀಕೆಂಡ್ ಪಾಸಿಟಿವ್ ಅಂತ ಸಾಬೀತಾಗಿದೆ. ನಿನ್ನೆ (ಡಿಸೆಂಬರ್ 28) ಕೂಡ ಕರ್ನಾಟಕದಲ್ಲಿ ಸಖತ್ ಕಲೆಕ್ಷನ್ ಆಗಿದೆ. ಹಾಗೇ ತಮಿಳು, ತೆಲುಗು ಹಾಗೂ ಹಿಂದಿ ಭಾಷೆಯಲ್ಲಿ ರಿಲೀಸ್ ಆಗಿದ್ದು, ಅಲ್ಲಿ ಕೂಡ ಸಖತ್ ರೆಸ್ಪಾನ್ಸ್ ಸಿಕ್ಕಿದೆ ಅನ್ನೋ ಮಾಹಿತಿ ಹೊರಬಿದ್ದಿದೆ. ಹಾಗಿದ್ದರೆ, 'ಮ್ಯಾಕ್ಸ್' ಕರ್ನಾಟಕದಲ್ಲಿ ನಾಲ್ಕನೇ ದಿನದ ಕಲೆಕ್ಷನ್ ಎಷ್ಟು? ಬೇರೆ ಭಾಷೆಗಳಲ್ಲಿ ಗಳಿಕೆ ಎಷ್ಟಾಗಿದೆ ಅನ್ನೋದನ್ನು ತಿಳಿಯಲು ಮುಂದೆ ಓದಿ.
'ಮ್ಯಾಕ್ಸ್' 4ನೇ ದಿನದ ಕಲೆಕ್ಷನ್
ಕಿಚ್ಚ ಸುದೀಪ್ ಸಿನಿಮಾ 'ಮ್ಯಾಕ್ಸ್' ಅನ್ನು ಪ್ರೇಕ್ಷಕರು ಇಷ್ಟಪಟ್ಟಿದ್ದಾರೆ. ದಿನದಿಂದ ದಿನಕ್ಕೆ ಸಿನಿಮಾ ಕಲೆಕ್ಷನ್‌ನಲ್ಲಿ ಏರಿಕೆಯಾಗಿದೆ. ಮೂರನೇ ದಿನಕ್ಕೆ ಹೋಲಿಕೆ ಮಾಡಿದರೆ, ನಾಲ್ಕನೇ ದಿನ ಥಿಯೇಟರ್‌ನಲ್ಲಿ ಸಿನಿಮಾ ನೋಡುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ನಾಲ್ಕನೇ ದಿನ ಕರ್ನಾಟಕದಲ್ಲಿ 5 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ಸ್ಯಾಕ್ನಿಲ್ಕ್.ಕಾಮ್ ವರದಿ ಮಾಡಿದೆ. ಸ್ಯಾಂಡಲ್‌ವುಡ್‌ನ ವಿತರಕರ ವಲಯ ಕೂಡ 5 ರಿಂದ 5.50 ಕೋಟಿ ರೂಪಾಯಿ ಕಲೆಕ್ಷನ್ ಲೆಕ್ಕ ಕೊಟ್ಟಿದೆ.
ಶಿವಮೊಗ್ಗದಲ್ಲಿ ಅತೀ ಹೆಚ್ಚು ಆಕ್ಯುಪೆನ್ಸಿ
ಕರ್ನಾಟಕದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿಯೂ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಥಿಯೇಟರ್‌ಗೆ ಬಂದು ಜನರು ಸಿನಿಮಾವನ್ನು ನೋಡುತ್ತಿದ್ದಾರೆ. ಶಿವಮೊಗ್ಗ ಏರಿಯಾದಲ್ಲಿ ಅತೀ ಹೆಚ್ಚು ಅಂದರೆ, ಶೇ.78ರಷ್ಟು ಆಕ್ಯೂಪೆನ್ಸಿ ಇದೆ. ತುಮಕೂರಿನಲ್ಲಿ ಶೇ.74, ಕುಂದಾಪುರ ಶೇ.67, ಕಲಬುರ್ಗಿ ಶೇ.73, ರಾಯಚೂರು ಶೇ.53, ಮೈಸೂರು ಶೇ.46ರಷ್ಟು ಕಲೆಕ್ಷನ್ ಆಗಿದೆ. ಹಾಗೇ ಬೆಂಗಳೂರಿನಲ್ಲಿ ಶೇ.42ರಷ್ಟು ಚಿತ್ರಮಂದಿರಗಳು ತುಂಬಿವೆ.

ತೆಲುಗು-ತಮಿಳು ರೆಸ್ಪಾನ್ಸ್ ಹೇಗಿದೆ?
ಕರ್ನಾಟಕದಲ್ಲಿ ತೆರೆಕಂಡ ಬಳಿಕ ಬೇರೆ ಭಾಷೆಗಳಲ್ಲಿ ಸಿನಿಮಾವನ್ನು ರಿಲೀಸ್ ಮಾಡಲಾಗಿತ್ತು. ತಮಿಳು, ತೆಲುಗು (ಡಿಸೆಂಬರ್ 27) ಎರಡೂ ಭಾಷೆಯಲ್ಲೂ ಶುಕ್ರವಾರ ಸಿನಿಮಾ ಬಿಡುಗಡೆಯಾಗಿತ್ತು. ಎರಡು ದಿನಗಳಲ್ಲಿ ತೆಲುಗಿನಲ್ಲಿ ಹೆಚ್ಚು ಕಡಿಮೆ ಒಂದು ಕೋಟಿ ರೂಪಾಯಿಗೂ ಅಧಿಕ ಗಳಿಕೆ ಕಂಡಿದೆ. ಹಾಗೇ ತಮಿಳಿನಲ್ಲಿ 50 ಲಕ್ಷಕ್ಕೂ ಅಧಿಕ ಕಲೆಕ್ಷನ್ ಆಗಿದೆ ಎನ್ನುತ್ತಿದ್ದಾರೆ ಟ್ರೇಡ್ ಎಕ್ಸ್‌ಪರ್ಟ್‌ಗಳು. ಮೌತ್ ಪಬ್ಲಿಸಿಟಿ ಹೆಚ್ಚಾದರೆ, 'ಮ್ಯಾಕ್ಸ್' ಈ ಎರಡು ರಾಜ್ಯಗಳಲ್ಲಿ ಮಸ್ತ್ ಕಲೆಕ್ಷನ್ ಆಗುವುದರಲ್ಲಿ ಅನುಮಾನವಿಲ್ಲ.
4 ದಿನಗಳ ಒಟ್ಟು ಕಲೆಕ್ಷನ್ ಎಷ್ಟು?
'ಮ್ಯಾಕ್ಸ್' ನಾಲ್ಕು ದಿನಗಳ ಕಲೆಕ್ಷನ್ ಸ್ಯಾಂಡಲ್‌ವುಡ್ ಮಂದಿ ನಿಟ್ಟುಸಿರು ಬಿಡುವಂತೆ ಮಾಡಿದೆ. ಮೊದಲ ದಿನ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದ್ದು ಸಿನಿಮಾಗೆ ವರವಾಗಿದೆ. ಕೇವಲ ಕರ್ನಾಟಕದಿಂದಲೇ 22 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಇನ್ನು ತೆಲುಗು, ತಮಿಳು ಭಾಷೆಯಲ್ಲಿ ಕಲೆಕ್ಷನ್ ಚೆನ್ನಾಗಿ ಆದರೆ, ಕಿಚ್ಚನ ಸಿನಿಮಾ ಆರಾಮಾಗಿ 50 ಕೋಟಿ ರೂಪಾಯಿ ಕಲೆಕ್ಷನ್ ಮಾಡುತ್ತೆ.
4 ದಿನಗಳ ಕಲೆಕ್ಷನ್ ಹೀಗಿದೆ.
ಮೊದಲ ದಿನ 8.70 ಕೋಟಿ ರೂ.
ಎರಡನೇ ದಿನ 3.85 ಕೋಟಿ ರೂ.
ಮೂರನೇ ದಿನ 4.70 ಕೋಟಿ ರೂ.
ನಾಲ್ಕನೇ ದಿನ 5.00 ಕೋಟಿ ರೂ.
ಒಟ್ಟು 22.25 ಕೋಟಿ ರೂ.


Click it and Unblock the Notifications











