Max Box Office Day 8: ಹೊಸ ವರ್ಷದ ಮೊದಲ ದಿನ ಮತ್ತೆ ಬಾಕ್ಸಾಫೀಸ್ ಅಲ್ಲಾಡಿಸಿದ 'ಮ್ಯಾಕ್ಸ್'; ಭರ್ಜರಿ ಕಲೆಕ್ಷನ್!
2025 ಹೊಸ ವರ್ಷ ಎಲ್ಲರಲ್ಲೂ ಸಂಭ್ರಮ ಮನೆ ಮಾಡಿತ್ತು. ಇತ್ತ ಸ್ಯಾಂಡಲ್‌ವುಡ್ ಕೂಡ ಮೊದಲ ದಿನವೇ ಶುಭಾರಂಭ ಮಾಡಿದೆ. ಕಿಚ್ಚ ಸುದೀಪ್ ನಟನೆಯ 'ಮ್ಯಾಕ್ಸ್' ರಿಲೀಸ್ ಆಗಿ ಎಂಟನೇ ದಿನಕ್ಕೆ ಕಾಲಿಟ್ಟಿತ್ತು. ನ್ಯೂ ಇಯರ್ ಮೂಡ್‌ನಲ್ಲಿ ಜನರು ಕಿಚ್ಚ ಸುದೀಪ್ ಸಿನಿಮಾ ನೋಡುವುದಕ್ಕೆ ಥಿಯೇಟರ್‌ಗೆ ಲಗ್ಗೆ ಇಟ್ಟಿದ್ದಾರೆ. 'ಮ್ಯಾಕ್ಸ್' ಮತ್ತೆ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದೆ.
ಏಳನೇ ದಿನ 'ಮ್ಯಾಕ್ಸ್' ಕಲೆಕ್ಷನ್‌ನಲ್ಲಿ ಇಳಿಕೆ ಕಂಡಿತ್ತು. ಹೀಗಾಗಿ ಕಿಚ್ಚನ ಫ್ಯಾನ್ಸ್ ಕೊಂಚ ಮಟ್ಟಿಗೆ ಗೊಂದಲಕ್ಕೆ ಒಳಗಾಗಿದ್ದು ಇತ್ತು. ಆದರೆ, ಹೊಸ ವರ್ಷದ ಮೊದಲ ದಿನ ಶೇ. 100ರಷ್ಟು ಏರಿಕೆಯಾಗಿದೆ. ಈ ಮೂಲಕ 'ಮ್ಯಾಕ್ಸ್' ಆಟ ಇನ್ನೂ ಮುಗಿದಿಲ್ಲ ಅಂತ ಹೇಳುತ್ತಿದೆ. ಇನ್ನು ಬಾಕ್ಸಾಫೀಸ್‌ನಲ್ಲಿ ಸಿಕ್ಕಿರೋ ಭರ್ಜರಿ ರೆಸ್ಪಾನ್ಸ್ ಬಳಿಕ ಸುದೀಪ್ ವಿಜಯಯಾತ್ರೆಗೂ ಪ್ಲಾನ್ ಮಾಡಿಕೊಂಡಿದ್ದಾರೆ.

'ಮ್ಯಾಕ್ಸ್' ಏಳನೇ ದಿನ ಡ್ರಾಪ್ ಆಗಿದ್ದು ಯಾಕೆ? ಎಂಟನೇ ದಿನ ಮತ್ತೆ ಚೇತರಿಕೆ ಕಂಡಿದ್ದು ಹೇಗೆ? ಈ ಪ್ರಶ್ನೆ ಹುಟ್ಟಿಕೊಳ್ಳುವುದು ಸಹಜ. ಆದರೆ, ಅದಕ್ಕೊಂದು ಪ್ರಮುಖ ಕಾರಣವಿದೆ. ಅದೇನು? ಮ್ಯಾಕ್ಸ್ ಎಂಟನೇ ದಿನ ಗಳಿಸಿದ್ದು ಎಷ್ಟು? ಎಂಟು ದಿನಗಳಲ್ಲಿ ಎಷ್ಟು ಕಲೆಕ್ಷನ್ ಆಗಿದೆ? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.
'ಮ್ಯಾಕ್ಸ್' 8ನೇ ದಿನದ ಕಲೆಕ್ಷನ್
ಔಟ್ ಅಂಡ್ ಔಟ್ ಮಾಸ್ ಸಿನಿಮಾದಲ್ಲಿ ಕಿಚ್ಚ ಸುದೀಪ್ ಎಂಟ್ರಿ ಸಿನಿ ಪ್ರಿಯರಿಗೆ ಕಿಕ್ ಕೊಟ್ಟಿದೆ. ಇಂತಹ ಅವತಾರದಲ್ಲಿ ಸುದೀಪ್ ಕಾಣಿಸಿಕೊಳ್ಳದೆ ಬಹಳಷ್ಟು ದಿನಗಳು ಆಗಿತ್ತು. ಇಂತಹ ಸಿನಿಮಾದಲ್ಲಿ, ಇಂತಹ ಅವತಾರದಲ್ಲಿ ಕಿಚ್ಚ ಸುದೀಪ್ ನೋಡುವುದಕ್ಕೆ ಆಸೆ ಪಟ್ಟಿದ್ದರು. ಅದು ಈಗ ಈಡೇರಿದೆ. ಇನ್ನು ಹೊಸ ವರ್ಷದ ಮೊದಲ ದಿನ ಅಂದರೆ, ಎಂಟನೇ ದಿನ 'ಮ್ಯಾಕ್ಸ್' ಬರೋಬ್ಬರಿ 4.15 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ಬಾಕ್ಸಾಫೀಸ್ ಟ್ರ್ಯಾಕರ್ ಸ್ಯಾಕ್ನಿಲ್ಕ್.ಕಾಮ್ ವರದಿ ಮಾಡಿದೆ. ಏಳನೇ ದಿನಕ್ಕೆ ಹೋಲಿಕೆ ಮಾಡಿದರೆ, ಶೇ.100ರಷ್ಟು ಏರಿಕೆಯಾಗಿದೆ.

ದಿಢೀರನೇ ಏರಿಕೆಗೆ ಕಾರಣವೇನು?
ಏಳನೇ ದಿನವೂ ಬಾಕ್ಸಾಫೀಸ್ ಕಲೆಕ್ಷನ್ ಚೆನ್ನಾಗಿಯೇ ಆಗುತ್ತಿತ್ತು. ಆದರೆ, ಹೊಸ ವರ್ಷದ ಸಂಭ್ರಮಾಚರಣೆಯಲ್ಲಿದ್ದ ಜನರು ಥಿಯೇಟರ್ ಕಡೆಗೆ ಹೆಚ್ಚಿನ ಸಂಖ್ಯೆಯಲ್ಲಿ ಮುಖ ಮಾಡಿರಲಿಲ್ಲ. ಹೀಗಾಗಿ ಕಲೆಕ್ಷನ್ ಡ್ರಾಪ್ ಆಗಿತ್ತು. ಆದರೆ, ಹೊಸ ವರ್ಷದಲ್ಲಿ ನಿರೀಕ್ಷೆ ಮಾಡಿದಂತೆ 'ಮ್ಯಾಕ್ಸ್' ನೋಡುವುದಕ್ಕೆ ಜನರು ಥಿಯೇಟರ್‌ಗೆ ನುಗ್ಗಿದ್ದಾರೆ. ಹೀಗಾಗಿ ಏಳನೇ ದಿನ ಇದ್ದ ಕಲೆಕ್ಷನ್‌ನ ಎರಡರಷ್ಟು ಎಂಟನೇ ದಿನಕ್ಕೆ ಮಾಡಲು ಸಾಧ್ಯವಾಗಿದೆ.
ಶಿವಮೊಗ್ಗದಲ್ಲಿ ಅತೀ ಹೆಚ್ಚು ಆಕ್ಯುಪೆನ್ಸಿ
ಹೊಸ ವರ್ಷದ ಮೊದಲು ದಿನ ಶಿವಮೊಗ್ಗದ ಚಿತ್ರಮಂದಿರಗಳು ಅತೀ ಹೆಚ್ಚು ಅಂದರೆ ಶೇ. 81ರಷ್ಟು ತುಂಬಿವೆ ಎಂದು ಸ್ಯಾಕ್ನಿಲ್ಕ್.ಕಾಮ್ ತನ್ನ ವರದಿಯಲ್ಲಿ ಹೇಳಿದೆ. ಹಾಗೇ ಬೇರೆ ಬೇರೆ ಜಿಲ್ಲೆಗಳಲ್ಲೂ ಈ ಸಿನಿಮಾಗೆ ಪ್ರತಿಕ್ರಿಯೆ ಚೆನ್ನಾಗಿ ಸಿಕ್ಕಿದೆ. ಹುಬ್ಬಳಿಯಲ್ಲಿ ಶೇ.54ರಷ್ಟು ಕಲೆಕ್ಷನ್ ಆಗಿದೆ. ಕಲಬುರ್ಗಿ ಶೇ.68.25, ಮೈಸೂರು ಶೇ.47.25, ತುಮಕೂರು ಶೇ.77, ರಾಯಚೂರಿನಲ್ಲಿ ಶೇ.57ರಲ್ಲಿ ಆಕ್ಯೂಪೆನ್ಸಿ ಆಗಿದೆ. ಇನ್ನು ಬೆಂಗಳೂರಿನಲ್ಲಿ ಶೇ. 49ರಷ್ಟು ಆಕ್ಯೂಪೆನ್ಸಿ ಆಗಿದೆ ಎಂದು ಹೇಳಲಾಗಿದೆ.
8 ದಿನಗಳ ಕಲೆಕ್ಷನ್ ಹೀಗಿದೆ.
| ಮೊದಲ ದಿನ | 8.70 ಕೋಟಿ ರೂ. |
| ಎರಡನೇ ದಿನ | 3.85 ಕೋಟಿ ರೂ. |
| ಮೂರನೇ ದಿನ | 4.70 ಕೋಟಿ ರೂ. |
| ನಾಲ್ಕುನೇ ದಿನ | 5.00 ಕೋಟಿ ರೂ. |
| ಐದನೇ ದಿನ | 5.90 ಕೋಟಿ ರೂ. |
| ಆರನೇ ದಿನ | 2.45 ಕೋಟಿ ರೂ. |
| ಏಳನೇ ದಿನ | 1.90 ಕೊಟಿ ರೂ. |
| ಎಂಟನೇ ದಿನ | 4.15 ಕೋಟಿ ರೂ. |
| ಒಟ್ಟು | 36.55 ಕೋಟಿ ರೂ. |
Disclaimer: ಈ ಸಿನಿಮಾದ ಅಂಕಿ ಅಂಶಗಳನ್ನು ಬೇರೆ ಬೇರೆ ಮೂಲಗಳಿಂದ ಸಂಗ್ರಹಿಸಲಾಗಿದೆ. 'ಮ್ಯಾಕ್ಸ್' ತಂಡ ಇನ್ನೂ ಅಧಿಕೃತವಾಗಿ ಬಾಕ್ಸಾಫೀಸ್ ಕಲೆಕ್ಷನ್ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳಬೇಕಿದೆ.


Click it and Unblock the Notifications











