ತೆಲುಗು-ತಮಿಳಿನಲ್ಲಿ 'ಮ್ಯಾಕ್ಸ್' ಬಾಕ್ಸಾಫೀಸ್ ಕಲೆಕ್ಷನ್ ಹೇಗಿದೆ? ಎಲ್ಲೆಲ್ಲಿ ಎಷ್ಟೆಷ್ಟು?
ಸುದೀಪ್ ಸಿನಿಮಾ 'ಮ್ಯಾಕ್ಸ್' ಕಲೆಕ್ಷನ್ ಕರ್ನಾಟಕದಲ್ಲಿ ಜೋರಾಗಿದೆ. ಸಿನಿಮಾ ಬಿಡುಗಡೆಯಾದ ದಿನದಿಂದಲೂ ಗಳಿಕೆಯಲ್ಲಿ ಚಿತ್ರತಂಡಕ್ಕೆ ಮೋಸ ಆಗಿಲ್ಲ. ಸಿನಿಮಾ ನೋಡಿದವರು ಪಾಸಿಟಿವ್ ರೆಸ್ಪಾನ್ಸ್ ಕೊಟ್ಟಿದ್ದರಿಂದ ಥಿಯೇಟರ್‌ಗಳಿಗೆ ಬಂದು ಸಿನಿಮಾ ನೋಡುವವರ ಸಂಖ್ಯೆ ಹೆಚ್ಚಾಗಿದೆ. ಚಿತ್ರಮಂದಿರಕ್ಕೆ ಜನರು ಬರೋದಿಲ್ಲ ಅನ್ನೋ ಆತಂಕ ನಿವಾರಣೆಯಾಗಿದೆ.
'ಮ್ಯಾಕ್ಸ್' ಸಿನಿಮಾ ಶುರು ಮಾಡಿದಾಗ ಐದು ಭಾಷೆಗಳಲ್ಲಿ ಬಿಡುಗಡೆ ಮಾಡುವುದಾಗಿ ಟೀಮ್ ಹೇಳಿತ್ತು. ಆದರೆ, ರಿಲೀಸ್ ವೇಳೆಗೆ ಮೊದಲು ಕನ್ನಡದಲ್ಲಷ್ಟೇ ಬಿಡುಗಡೆ ಮಾಡಲಾಗಿತ್ತು. ಬಳಿಕ ತೆಲುಗು ಹಾಗೂ ತಮಿಳು ಭಾಷೆಯಲ್ಲಿ ಸಿನಿಮಾವನ್ನು ರಿಲೀಸ್ ಮಾಡಲಾಗಿದೆ. ಕಿಚ್ಚ ಸುದೀಪ್ ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲೂ ಈಗಾಗಲೇ ನಟಿಸಿದ್ದರಿಂದ ಅಲ್ಲಿನ ಜನರಿಗೆ ಪರಿಚಯವಿದೆ.

ಈ ಕಾರಣಕ್ಕೆ ಈ ಎರಡೂ ಭಾಷೆಗಳಲ್ಲಿ ಸಿನಿಮಾದ ರೆಸ್ಪಾನ್ಸ್ ಹೇಗಿರುತ್ತೆ ಅನ್ನೋದನ್ನು ಟ್ರೇಡ್ ಎಕ್ಸ್‌ಪರ್ಟ್‌ಗಳು ಕುತೂಹಲದಿಂದ ನೋಡಿದ್ದರು. ನಿರ್ಮಾಪಕ ಹಾಗೂ ನಿರ್ದೇಶಕರು ತಮಿಳಿನವರೇ ಆಗಿದ್ದರಿಂದ ತಮಿಳುನಾಡಿನಲ್ಲಿ ದಿನದಿಂದ ದಿನಕ್ಕೆ ಸಿನಿಮಾ ನೋಡುವವರ ಸಂಖ್ಯೆ ಹೆಚ್ಚಾಗಿದೆ ಎನ್ನಲಾಗಿದೆ. ಇನ್ನು ತೆಲುಗಿನಲ್ಲಿ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕರೂ, ಕಲೆಕ್ಷನ್ ಡ್ರಾಪ್ ಆಗಿದೆ ಅನ್ನೋದು ಸಂಗತಿ.
ಆಂಧ್ರ-ತೆಲಂಗಾಣದಲ್ಲಿ ಹೇಗಿದೆ 'ಮ್ಯಾಕ್ಸ್'?
ಕರ್ನಾಟಕದಲ್ಲಿ ರಿಲೀಸ್ ಆದ ಬಳಿಕ 'ಮ್ಯಾಕ್ಸ್' ಅನ್ನು ಆಂಧ್ರ ಪ್ರದೇಶ ಹಾಗೂ ತೆಲಂಗಾಣದಲ್ಲಿ ಬಿಡುಗಡೆ ಮಾಡಲಾಗಿದೆ. ರಿಲೀಸ್ ಆದ ದಿನದಿಂದಲೂ ಈ ಎರಡೂ ತೆಲುಗು ರಾಜ್ಯಗಳಲ್ಲೂ ಕಿಚ್ಚನ ಸಿನಿಮಾಗೆ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದೆ. ಆದರೆ, ಕಿಚ್ಚ ಸುದೀಪ್ ಹೇಳಿಕೊಂಡಂತೆ ತೆಲುಗಿನಲ್ಲಿ ಕಲೆಕ್ಷನ್ ನಿರೀಕ್ಷೆ ಮಾಡಿದಷ್ಟು ಆಗಿಲ್ಲ. ಆದ್ರೂ ನಾಲ್ಕು ದಿನಗಳ ಕಲೆಕ್ಷನ್ ಕೋಟಿ ದಾಟಿದೆ ಅನ್ನೋ ಸುದ್ದಿ ಓಡಾಡುತ್ತಿದೆ. ನಾಲ್ಕನೇ ದಿನ ಈ ಎರಡು ರಾಜ್ಯಗಳಲ್ಲಿ 1.20 ಕೋಟಿ ಕಲೆಕ್ಷನ್ ಆಗಿದೆ ಎನ್ನಲಾಗಿದೆ. ಒಟ್ಟು ನಾಲ್ಕು ದಿನಗಳಲ್ಲಿ 4 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಅನ್ನೋದು ಟ್ರೇಡ್ ಎಕ್ಸ್‌ಪರ್ಟ್‌ಗಳ ಲೆಕ್ಕ.

ತಮಿಳುನಾಡಿನಲ್ಲಿ ಹೇಗಿದೆ?
ನಿರ್ಮಾಪಕ ಕಲೈಪುಲಿ ತಾನು ಹಾಗೂ ನಿರ್ದೇಶಕ ವಿಜಯ್ ಕಾರ್ತಿಕೇಯ ಇಬ್ಬರೂ ತಮಿಳುನಾಡಿನವರೇ. ಹೀಗಾಗಿ ಅಲ್ಲೂ ದಿನದಿಂದ ದಿನಕ್ಕೆ ಸಿನಿಮಾ ನೋಡುಗರ ಸಂಖ್ಯೆ ಹೆಚ್ಚಾಗುತ್ತಿದೆ. ನಾಲ್ಕನೇ ದಿನ ತಮಿಳುನಾಡಿನಲ್ಲಿ 90 ಲಕ್ಷ ರೂಪಾಯಿ ಕಲೆಕ್ಷನ್ ಆಗಿದೆ ಎನ್ನಲಾಗಿದೆ. ಒಟ್ಟು ನಾಲ್ಕು ದಿನಗಳಿಗೆ ಸುಮಾರು ಇಲ್ಲೂ 4 ಕೋಟಿ ರೂಪಾಯಿ ಕಲೆಕ್ಷನ್ ಎನ್ನುತ್ತಿವೆ ವಿತರಕರ ವಲಯ.
ಉತ್ತರ ಭಾರತದಲ್ಲಿ 'ಮ್ಯಾಕ್ಸ್'
ಇನ್ನು 'ಮ್ಯಾಕ್ಸ್' ಕನ್ನಡ, ತೆಲುಗು ಹಾಗೂ ತಮಿಳು ವರ್ಷನ್ ಉತ್ತರ ಭಾರತದಲ್ಲೂ ಪ್ರದರ್ಶನ ಕಾಣುತ್ತಿದೆ. ಇನ್ನೂ ಹಿಂದಿ ವರ್ಷನ್ ರಿಲೀಸ್ ಮಾಡದೇ ಇರುವುದರಿಂದ ಈ ಮೂರು ಭಾಷೆಗಳಲ್ಲಿ ಬಿಡುಗಡೆ ಮಾಡಲಾಗಿದೆ. ಕಳೆದ ನಾಲ್ಕು ದಿನ ಹಿಂದಿ ಬೆಲ್ಟ್‌ನಲ್ಲಿ 70 ಲಕ್ಷ ರೂ. ಕಲೆಕ್ಷನ್ ಆಗಿದೆ ಎನ್ನಲಾಗಿದ್ದು, ನಾಲ್ಕು ದಿನಗಳಲ್ಲಿ 3.4 ಕೋಟಿ ರೂಪಾಯಿ ಅಂತಿದ್ದಾರೆ ಟ್ರೇಡ್ ಎಕ್ಸ್‌ಪರ್ಟ್ಸ್.
ಮಲಯಾಳಂನಲ್ಲೂ 'ಮ್ಯಾಕ್ಸ್' ರಿಲೀಸ್
ಇನ್ನೂ ಹಿಂದಿಗಿಂತಲೂ ಮುನ್ನ 'ಮ್ಯಾಕ್ಸ್' ಸಿನಿಮಾ ಮಲಯಾಳಂನಲ್ಲಿ ಬಿಡುಗಡೆಯಾಗುತ್ತಿದೆ. ಈ ವಾರ ಕೇರಳದಲ್ಲಿ ಸಿನಿಮಾ ರಿಲೀಸ್ ಮಾಡುವುದಾಗಿ ಕಿಚ್ಚ ಸುದೀಪ್ ರಿವೀಲ್ ಮಾಡಿದ್ದಾರೆ. ಆದರೆ, ಹಿಂದಿ ವರ್ಷನ್ ಯಾವಾಗ ರಿಲೀಸ್ ಆಗುತ್ತೆ ಅನ್ನೋದು ಇನ್ನೂ ಚಿತ್ರತಂಡ ನಿರ್ಧಾರ ಮಾಡಿದಂತೆ ಇಲ್ಲ.
Disclaimer: ಈ ಸಿನಿಮಾದ ಅಂಕಿ ಅಂಶಗಳನ್ನು ಬೇರೆ ಬೇರೆ ಮೂಲಗಳಿಂದ ಸಂಗ್ರಹಿಸಲಾಗಿದೆ. ಸಿನಿಮಾ ತಂಡ ತೆಲುಗು, ತಮಿಳು ಹಾಗೂ ಉತ್ತರ ಭಾರತದ ಕಲೆಕ್ಷನ್ ಅಂಕಿ ಅಂಶಗಳನ್ನು ಬಿಟ್ಟು ಕೊಟ್ಟಿಲ್ಲ.


Click it and Unblock the Notifications











