Kichcha Sudeep Max 2: ಏನಿವಾಗ 'ಮ್ಯಾಕ್ಸ್ 2' ಮಾಡ್ತಾರೋ ಇಲ್ವೋ? ಏನ್ ಡಿಸೈಡ್ ಆಯ್ತು?
ಎರಡೂವರೆ ವರ್ಷಗಳ ಬಳಿಕ ಕಿಚ್ಚ ಸುದೀಪ್ ಸಿನಿಮಾ ಥಿಯೇಟರ್‌ಗೆ ಲಗ್ಗೆ ಇಟ್ಟಿದೆ. 'ವಿಕ್ರಾಂತ್ ರೋಣ' ಪ್ಯಾನ್ ಇಂಡಿಯಾ ರಿಲೀಸ್ ಆಗಿತ್ತು. ಅಲ್ಲಿಂದ ಸುದೀಪ್ ಮತ್ತೊಂದು ಸಿನಿಮಾ ಮಾಡುವುದಕ್ಕೆ ಎರಡೂವರೆ ವರ್ಷ ತೆಗೆದುಕೊಂಡಿದ್ದರು. ಕೊನೆಗೂ ನುಡಿದಂತೆ ಲೇಟ್ ಆಗಿ ಬಂದರೂ ಲೇಟೆಸ್ಟ್ ಆಗಿ ಬಂದಿದ್ದಾರೆ. ಬಾಕ್ಸಾಫೀಸ್‌ನಲ್ಲಿ ಮೋಡಿ ಸದ್ದು ಮಾಡುತ್ತಿದ್ದಾರೆ.
ಹೊಸ ನಿರ್ದೇಶಕನ ನಂಬಿ ಸಿನಿಮಾ ಮಾಡಿದಕ್ಕೂ ಕಿಚ್ಚನಿಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ತಮಿಳು ನಿರ್ದೇಶಕ ವಿಜಯ್ ಕಾರ್ತಿಕೇಯ ಅವರಿಗೂ ಇದು ಮೊದಲ ಸಿನಿಮಾ. ಇಂಡಿಪೆಂಡೆಂಟ್ ಡೈರೆಕ್ಟರ್ ಆಗಿ ಚೊಚ್ಚಲ ನಿರ್ದೇಶನದಲ್ಲೇ ಕಿಚ್ಚ ಸುದೀಪ್‌ಗೆ ಆಕ್ಷನ್ ಕಟ್ ಹೇಳಿ ಗೆದ್ದಿದ್ದಾರೆ. ಕಿಚ್ಚ ಆಟಿಟ್ಯೂಡ್ ಅನ್ನು ಪರ್ಫೆಕ್ಟ್ ಆಗಿ ತೆರೆಮೇಲೆ ತಂದಿರುವ ವಿಜಯ್ ಕಾರ್ತಿಕೇಯಗೂ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಈಗ 'ಮ್ಯಾಕ್ಸ್' ಸಕ್ಸಸ್ ಕಾಣುತ್ತಿದ್ದಂತೆ ಅಭಿಮಾನಿಗಳಿಗೆ ಪಾರ್ಟ್ 2 ಬಗ್ಗೆ ಚಿಂತೆ ಶುರುವಾಗಿದೆ. ಕಿಚ್ಚ ಸುದೀಪ್ ಮತ್ತೆ ಇದೇ ನಿರ್ದೇಶಕರೊಂದಿಗೆ ಕೆಲಸ ಮಾಡುತ್ತಾರಾ? 'ಮ್ಯಾಕ್ಸ್ 2' ಆಗುತ್ತಾ? ಈ ಎಲ್ಲಾ ಪ್ರಶ್ನೆಗಳಿಗೆ ಬೆಂಗಳೂರಿನ ನರ್ತಕಿ ಚಿತ್ರಮಂದಿರದಲ್ಲಿ ಕಿಚ್ಚ ಸುದೀಪ್ ಉತ್ತರ ಕೊಟ್ಟಿದ್ದಾರೆ. ಏನಿವಾಗ 'ಮ್ಯಾಕ್ಸ್ 2' ಬರುತ್ತಾ? ಇಲ್ವಾ? ತಿಳಿಯಲು ಮುಂದೆ ಓದಿ.
ವಿಜಯ್ ಕಾರ್ತಿಕೇಯ 'ಮ್ಯಾಕ್ಸ್' ಸಿನಿಮಾದ ಕಥೆ ಹೇಳಿದಾಗ ಕಿಚ್ಚ ಸುದೀಪ್ ಥ್ರಿಲ್ ಆಗಿದ್ದರು. ಕಥೆ ಹೇಳುವುದಕ್ಕೆ ಬಂದವರನ್ನು ಒಂದು ವಾರ ಇಲ್ಲೇ ರೂಮ್ ಹಾಕಿ ಇರಿಸಿಕೊಂಡಿದ್ದರು. ಒಂದು ವಾರ ನಿರ್ದೇಶಕರ ಜೊತೆ ಸಿನಿಮಾ ಚರ್ಚೆಗೆ ಇಳಿದಾಗ ಇನ್ನೂ ಇಷ್ಟ ಆಗಿತ್ತು. ಅದಕ್ಕೆ 'ಮ್ಯಾಕ್ಸ್' ಸೆಟ್ಟೇರಿತ್ತು. ಹೀಗಾಗಿ ಮತ್ತೊಂದು ಸಿನಿಮಾ ಅವರೊಂದಿಗೆ ಮಾಡೋದು ಕನ್ಫರ್ಮ್.

"ನಿರ್ದೇಶಕರು ಮ್ಯಾಕ್ಸ್ ಮಾಡುವುದಕ್ಕಿಂತ ಮುನ್ನ ಅವರನ್ನು ಇಷ್ಟ ಪಟ್ಟು ಸಿನಿಮಾ ಮಾಡುವುದಕ್ಕೆ ಹೋದವನು ನಾನು. ಆಗಲೇ ನಂಬಿದ್ದೀನಿ. ಈಗ ಮಾಡದೇ ಇರುತ್ತೇವಾ ಹೇಳಿ. ಪ್ರೀಕ್ವೆಲ್ ಅಥವಾ ಸೀಕ್ವೆಲ್ ಬಗ್ಗೆ ನಂಬಿಕೆ ಇಟ್ಟಿಕೊಳ್ಳುವ ಪ್ರಶ್ನೆನೇ ಬರೋದಿಲ್ಲ" ಎಂದು ನಿರ್ದೇಶಕ ವಿಜಯ್ ಕಾರ್ತಿಕೇಯ ಜೊತೆ ಇನ್ನೊಂದು ಸಿನಿಮಾ ಮಾಡುವ ಸುಳಿವನ್ನು ಕಿಚ್ಚ ಸುದೀಪ್ ಕೊಟ್ಟಿದ್ದಾರೆ.
ಇನ್ನು 'ಮ್ಯಾಕ್ಸ್' ಸೂಪರ್ ಸಕ್ಸಸ್ ಕಂಡ ಬಳಿಕ 'ಮ್ಯಾಕ್ಸ್ 2' ಮಾಡುತ್ತೀರಾ ಅನ್ನೋ ಪ್ರಶ್ನೆಯನ್ನು ಕಿಚ್ಚ ಹೋದಲ್ಲಿ ಬಂದಲ್ಲೆಲ್ಲ ಕೇಳುತ್ತಿದ್ದಾರೆ. ಅದಕ್ಕೂ ಸುದೀಪ್ ಒಂದು ಸುಳಿವು ಕೊಟ್ಟಿದ್ದಾರೆ. "ಪಾರ್ಟ್ 2 ಮಾಡುವ ಪ್ರಯತ್ನದಲ್ಲಿ ನಿರ್ದೇಶಕರು ಇರುತ್ತಾರೆ. ಅವರು ಸುಮ್ಮನೆ ಅಂತೂ ಕೂತಿರುವುದಿಲ್ಲ. ಮ್ಯಾಕ್ಸ್ 2 ಬರೆಯುತ್ತಾರೆ ಅಂತ ಅಂದುಕೊಳ್ಳೋಣ." ಎಂದಿದ್ದಾರೆ.
ಇದೇ ವೇಳೆ ಪುತ್ರಿ ಸಾನ್ವಿ ಸುದೀಪ್ ಬಗ್ಗೆನೂ ಕಿಚ್ಚ ಸುದೀಪ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಿನಿಮಾ ಚೆನ್ನಾಗಿಲ್ಲ ಅಂದರೆ ಮುಖದ ಮೇಲೆ ಹೊಡೆದಂತೆ ಹೇಳುತ್ತಾರೆ. ಇದರಲ್ಲೊಂದು ಹಾಡು ಹಾಡಿದ್ದು, ಅದು ಸಿನಿಮಾದಲ್ಲಿ ಇರುತ್ತೆ ಅಂತ ಹೇಳಿರಲಿಲ್ಲ ಅಂತ ಸುದೀಪ್ ಹೇಳಿದ್ದಾರೆ. "ಅಪ್ಪನ ಸಿನಿಮಾ ಅಂದ್ಕೊಂಡು ಏನೂ ಮಾತಾಡಲ್ಲ ಅವರು. ಚೆನ್ನಾಗಿಲ್ಲ ಅಂದರೆ ಮುಖದ ಮೇಲೆ ಹೇಳ್ತಾರೆ. ಈ ಸಿನಿಮಾವನ್ನು ಈಗಾಗಲೇ ಮೂರು ಬಾರಿ ನೋಡಿದ್ದಾರೆ. ಅದನ್ನು ಅವರು ಇಷ್ಟ ಪಟ್ಟಿದ್ದಾರೆ. ಅವರು ಹಾಡಿದನ್ನು ಸರ್ಪ್ರೈಸ್ ಆಗಿ ಇಟ್ಟಿದ್ದೆ ನಾನು" ಎಂದು ಸುದೀಪ್ ಹೇಳಿದ್ದಾರೆ.


Click it and Unblock the Notifications











