ಅಳಿಯನ ಚೊಚ್ಚಲ ಸಿನಿಮಾ 'ಮ್ಯಾಂಗೋ ಪಚ್ಚ' ಟೀಸರ್ ರಿಲೀಸ್ ಮಾಡಿದ ಕಿಚ್ಚ; ಏನ್ ವಾಯ್ಸ್, ಹೈಟ್ ಬ್ರೋ
ಕಿಚ್ಚ ಸುದೀಪ್ ಅಕ್ಕನ ಮಗ ಸಂಚಿತ್ ಸಂಜೀವ್ ಸ್ಯಾಂಡಲ್‌ವುಡ್ ಅಖಾಡಕ್ಕೆ ಇಳಿದಾಗಿದೆ. 'ಮ್ಯಾಂಗೋ ಪಚ್ಚ' ಆರಂಭದಲ್ಲಿ ಒಂದು ಲುಕ್ ಕೊಟ್ಟಿದ್ದ ಸಂಚಿತ್ ದಸರಾ ಹಬ್ಬದ ಈ ಶುಭ ಸಂದರ್ಭದಲ್ಲಿ ಮತ್ತೆ ಕಾಣಿಸಿಕೊಂಡಿದ್ದಾರೆ. ಅಳಿಯನಿಗೆ ಕಿಚ್ಚ ಸುದೀಪ್ ಸಾಥ್ ಕೊಟ್ಟಿದ್ದು, ಅಭಿಮಾನಿಗಳಿಗೆ ತಮ್ಮ ಮನೆಯ ಕುಡಿಯ ಖದರ್ ಏನು ಅನ್ನೋದನ್ನು ಪರಿಚಯಿಸಿದ್ದಾರೆ.
ಆಯುಧ ಪೂಜೆಯಲ್ಲಿ ಸಂಭ್ರಮದಲ್ಲಿರೋ ಕನ್ನಡಿಗರಿಗೆ ಮೈಸೂರಿನ ಕಥೆಯನ್ನು ಒಂದು ಝಲಕ್ ನೀಡಲಾಗಿದೆ. 'ಮ್ಯಾಂಗೋ ಪಚ್ಚ' ಸಿನಿಮಾದ ಟೀಸರ್‌ನಲ್ಲೂ ಹೈಲೈಟ್ ಆಗಿರೋದು ಇದೇನೆ. ಖುದ್ದಾಗಿ ಕಿಚ್ಚ ಸುದೀಪ್ 'ಮ್ಯಾಂಗೋ ಪಚ್ಚ' ಸಿನಿಮಾದ ಟೀಸರ್ ರಿಲೀಸ್ ಮಾಡಿದ್ದಾರೆ. ಹೀಗಾಗಿ ಕನ್ನಡ ಚಿತ್ರರಂಗಕ್ಕೆ ಆಯುಧ ಪೂಜೆಯ ದಿನವೇ ಸಂಚಿತ್ ಚೊಚ್ಚಲ ಸಿನಿಮಾದ ಟೀಸರ್ ರಿಲೀಸ್ ಆಗಿರುವುದು ಹೊಸ ಆಯುಧ ಸಿಕ್ಕಂತೆ ಆಗಿದೆ.

'ಮ್ಯಾಂಗೋ ಪಚ್ಚ' ಮೈಸೂರು ಭಾಗದ ಕಥೆ. ಇನ್ನು ದಸರಾ ಅಂದರೆ ಮೈಸೂರು. ಮೈಸೂರು ಅಂದರೆ ದಸರಾ. ಇದೇ ಸಂಭ್ರಮದಲ್ಲಿ ಮೈಸೂರು ಭಾಗದ ಕಥೆಯ ಒಂದು ಝಲಕ್ ಅನ್ನು ತೋರಿಸಿರುವುದು ಕುತೂಹಲ ಕೆರಳಿಸಿದೆ. ಸಿನಿಮಾ ಆರಂಭ ಆದ ಹೊಸ್ತಿಲಲ್ಲಿ 'ಮ್ಯಾಂಗೋ ಮಚ್ಚ' ಸಿನಿಮಾದ ಝಲಕ್ ತೋರಿಸಲಾಗಿತ್ತು. ಅದರಲ್ಲಿ ರೆಟ್ರೋ ಲುಕ್‌ನಲ್ಲಿ ಸಂಚಿತ್ ಸಂಜೀವ್ ಕಾಣಿಸಿಕೊಂಡಿದ್ದರು. ಈಗ ಮತ್ತೊಂದು ಟೀಸರ್ ರಿಲೀಸ್ ಮಾಡಿದ್ದು, ದಸರಾ ಹಬ್ಬದಂದು ಕಿಚ್ಚು ಹಚ್ಚಿದ್ದಾರೆ.
'ಮ್ಯಾಂಗೋ ಪಚ್ಚ' ಸಿನಿಮಾದ ಬಹುತೇಕ ಚಿತ್ರೀಕರಣವನ್ನು ಮೈಸೂರಿನಲ್ಲೇ ಮಾಡಲಾಗಿದೆ. ಈಗ ರಿಲೀಸ್ ಮಾಡಿರುವ ಟೀಸರ್‌ನಲ್ಲಿ ಸಂಚಿತ್ ಹೂವಿನ ಮಾರ್ಕೆಟ್‌ನಲ್ಲಿ ಸಿಗರೇಟ್ ಎಳೆಯುತ್ತಾ ಎಂಟ್ರಿ ಕೊಡುವ ಸೀನ್ ಸಿನಿಪ್ರಿಯರಿಗೆ ಇಷ್ಟ ಆಗಿದೆ. 'ಮ್ಯಾಂಗೋ ಪಚ್ಚ' ಇದೊಂದು ಪಕ್ಕ ಮಾಸ್ ಎಂಟರ್‌ಟೈನರ್. ಆಯುಧ ಪೂಜೆಗೆ ಬಿಡುಗಡೆ ಮಾಡಿದ ಟೀಸರ್‌ನಲ್ಲಿಯೇ ಸಂಚಿತ್ ಗಮನ ಸೆಳೆದಿದ್ದಾರೆ. ಹೀಗಾಗಿ ನಿರೀಕ್ಷೆಗಳು ದುಪ್ಪಟಾಗಿದ್ದು, ಚಿತ್ರರಂಗದಲ್ಲಿ ಯಶಸ್ಸು ಗಳಿಸುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ.
ಕಿಚ್ಚ ಸುದೀಪ್ ಅಂತಯೇ ಹೈಟ್, ವಾಯ್ಸ್ ಇರೋದನ್ನು ಕಂಡ ಅವರ ಅಭಿಮಾನಿಗಳು ಕೂಡ ಥ್ರಿಲ್ ಆಗಿದ್ದಾರೆ. ಕಿಚ್ಚ ಕೂಡ ತಮ್ಮ ಆರಂಭದ ದಿನಗಳಲ್ಲಿ ನಟನೆ ಜೊತೆಗೆ ಧ್ವನಿ ಹಾಗೂ ಹೈಟ್‌ನಿಂದಲೇ ಸ್ಯಾಂಡಲ್‌ವುಡ್ ಮಂದಿಯ ಗಮನ ಸೆಳೆದಿದ್ದರು. ಈಗ ಅವರ ಹಾದಿಯಲ್ಲಿಯೇ ಅಕ್ಕನ ಮಗ ಕೂಡ ಸಾಗುತ್ತಿರೋದು ಸುದೀಪ್ ಅಭಿಮಾನಿಗಳಿಗೆ ಕಿಕ್ ಕೊಟ್ಟಿದೆ. ಇನ್ನು ಸಿನಿಮಾ ಟ್ರೈಲರ್, ಸಾಂಗ್‌ಗಳಿಗೆ ಸಿನಿಪ್ರಿಯರು ಎದುರು ನೋಡುತ್ತಿದ್ದಾರೆ.

'ಮ್ಯಾಂಗೋ ಪಚ್ಚ' ಟೀಸರ್ ರಿಲೀಸ್ ಆಗುತ್ತಿದ್ದಂತೆ ಯುವ ರಾಜ್‌ಕುಮಾರ್ ಟೀಸರ್ ಅನ್ನು ಶೇರ್ ಮಾಡಿದ್ದಾರೆ. ಕನ್ನಡ ಚಿತ್ರರಂಗ ಸ್ಟಾರ್‌ಗಳು ಈ ಸಿನಿಮಾದ ಟೀಸರ್ ಅನ್ನು ಹಂಚಿಕೊಳ್ಳುತ್ತಿದ್ದಾರೆ. ಅಂದಹಾಗೆ ಈ ಸಿನಿಮಾವನ್ನು ವಿವೇಕ ನಿರ್ದೇಶನ ಮಾಡಿದ್ದಾರೆ. ಇದು ಅವರ ಚೊಚ್ಚಲ ಸಿನಿಮಾ. 2001 ರಿಂದ 2011ರ ಅವಧಿಯಲ್ಲಿ ಮೈಸೂರಿನಲ್ಲಿ ನಡೆದ ಪ್ರಮುಖ ಘಟನೆಗಳು ಈ ಸಿನಿಮಾದ ಜೀವಾಳ. 'ಮ್ಯಾಂಗೋ ಪಚ್ಚ' ಚಿತ್ರಕ್ಕೆ ಕೆಆರ್‌ಜಿ ಹಾಗೂ ಕಿಚ್ಚ ಸುದೀಪ್ ಅವರ ಸುಪ್ರಿಯಾನ್ವಿ ಪ್ರೊಡಕ್ಷನ್ಸ್ ಜಂಟಿಯಾಗಿ ನಿರ್ಮಾಣ ಮಾಡುತ್ತಿದೆ.
ಇನ್ನು ಸಂಚಿತ್ ಮೊದಲ ಸಿನಿಮಾಗೆ ನಾಯಕಿಯಾಗಿ ನಟಿ ಕಾಜಲ್ ಕುಂದರ್ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟ ಮಯೂರ್ ಪಟೇಲ್, ವಿಜಯ್ ರಾಘವೇಂದ್ರ ಅವರ ಅಕ್ಕನ ಮಗ ಜೇಯ್, ಬಿಗ್ ಬಾಸ್ ಖ್ಯಾತಿಯ ನಟಿ ಹಂಸಾ, ಮಾಲಾಶ್ರೀ ಸೇರಿದಂತೆ ದೊಡ್ಡ ತಾರಾಬಳಗವೇ ಇದೆ. ಈ ಸಿನಿಮಾದ ಮತ್ತೊಂದು ಅಟ್ರ್ಯಾಕ್ಷನ್ ಅಂದರೆ, ಚರಣ್ ರಾಜ್ ಸಂಗೀತ ಹಾಗೂ ಶೇಖರ್ ಚಂದ್ರ ಅವರ ಕ್ಯಾಮರಾವರ್ಕ್. ವಿಶ್ವಾಸ್ ಈ ಚಿತ್ರಕ್ಕೆ ಆರ್ಟ್ ವರ್ಕ್ ಮಾಡಿದ್ದಾರೆ.


Click it and Unblock the Notifications











