Breaking:ರಾಜ್ಯ ಪ್ರಶಸ್ತಿಯನ್ನು ತಿರಸ್ಕರಿಸಿ ಕಿಚ್ಚ ಸುದೀಪ್ ಪೋಸ್ಟ್; ಯಾಕೀ ನಿರ್ಧಾರ?
ಸ್ಯಾಂಡಲ್‌ವುಡ್ ಸೂಪರ್‌ಸ್ಟಾರ್ ಕಿಚ್ಚ ಸುದೀಪ್‌ಗೆ ಕರ್ನಾಟಕ ಸರ್ಕಾರ 2019ನೇ ಸಾಲಿನ ರಾಜ್ಯ ಪ್ರಶಸ್ತಿಯನ್ನು ಘೋಷಿಸಿತ್ತು. 'ಪೈಲ್ವಾನ್' ಚಿತ್ರದಲ್ಲಿನ ನಟನೆಗಾಗಿ ರಾಜ್ಯ ಪ್ರಶಸ್ತಿಯ ತೀರ್ಪುಗಾರರು ಸುದೀಪ್‌ಗೆ ಪ್ರಶಸ್ತಿಯನ್ನು ಘೋಷಣೆ ಮಾಡಿದ್ದರು. ಇದಾದ ಕೆಲವೇ ದಿನಗಳಲ್ಲಿ ಕಿಚ್ಚ ಸುದೀಪ್ ರಾಜ್ಯ ಪ್ರಶಸ್ತಿಯನ್ನು ತಿರಸ್ಕರಿಸಿದ್ದಾರೆ. ಈ ಕುರಿತು ತನ್ನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.
'ಪೈಲ್ವಾನ್' ಸಿನಿಮಾದ ನಟನೆಗಾಗಿ ಸುದೀಪ್ ಎರಡನೇ ಬಾರಿ ರಾಜ್ಯ ಪ್ರಶಸ್ತಿಯನ್ನು ಸ್ವೀಕರಿಸಬೇಕಿತ್ತು. ಇದನ್ನು ಕಣ್ತುಂಬಿ ಕೊಳ್ಳುವುದಕ್ಕೆ ಸುದೀಪ್ ಅಭಿಮಾನಿಗಳು ಕೂಡ ತುದಿಗಾಲಲ್ಲಿ ನಿಂತಿದ್ದರು. ಆದರೆ, ಸುದೀಪ್ ಮಾತ್ರ ಈ ಪ್ರಶಸ್ತಿ ತನಗೆ ಬೇಡ ಎಂದು ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ಕಿಚ್ಚ ಸುದೀಪ್ ಯಾಕೀ ನಿರ್ಧಾರಕ್ಕೆ ಬಂದಿದ್ದಾರೆ ಅನ್ನೋದನ್ನು ಎಕ್ಸ್ ಪೋಸ್ಟ್‌ನಲ್ಲಿ ಹೇಳಿಕೊಂಡಿದ್ದಾರೆ.

ಕರ್ನಾಟಕ ಸರ್ಕಾರ ಕೊಡುವ ರಾಜ್ಯ ಪ್ರಶಸ್ತಿಗೆ ಭಾಜನರಾಗಿರುವುದಕ್ಕೆ ಅಭಾರಿಯಾಗಿದ್ದು, ಈ ಪ್ರಶಸ್ತಿಗೆ ಆಯ್ಕೆ ಮಾಡಿದ್ದಕ್ಕೆ ಖುಷಿಯನ್ನು ವ್ಯಕ್ತಪಡಿಸಿದ್ದಾರೆ. ಆದರೆ, ಕಳೆದ ಕೆಲವು ದಿನಗಳಿಂದ ಪ್ರಶಸ್ತಿಯನ್ನು ವೈಯಕ್ತಿಕ ಕಾರಣಗಳಿಗಾಗಿ ಸ್ವೀಕರಿಸುವುದನ್ನು ನಿಲ್ಲಿಸಿದ್ದೇನೆ. ಈ ಕಾರಣಕ್ಕೆ ರಾಜ್ಯ ಪ್ರಶಸ್ತಿ ಬೇಡ ಎಂದು ಕಿಚ್ಚ ಸುದೀಪ್ ತಮ್ಮ ಪೋಸ್ಟ್‌ನಲ್ಲಿ ರಿವೀಲ್ ಮಾಡಿದ್ದಾರೆ.
ಗೌರವಾನ್ವಿತ ಕರ್ನಾಟಕ ಸರ್ಕಾರ ಹಾಗೂ ಜ್ಯೂರಿಯ ಸದಸ್ಯರುಗಳಿಗೆ,
ಅತ್ಯುತ್ತಮ ನಟ ಕ್ಯಾಟಗರಿಯಲ್ಲಿ ರಾಜ್ಯ ಪ್ರಶಸ್ತಿಯನ್ನು ಪಡೆಯುವುದು ಹೆಮ್ಮೆ ಎನಿಸುತ್ತಿದೆ. ಈ ಗೌರವ ನೀಡಿದ್ದಕ್ಕೆ ಗೌರವಾನ್ವಿತ ಜ್ಯೂರಿ ಸದಸ್ಯರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಈ ಮೂಲಕ ನಾನು ಹೇಳುವುದಕ್ಕೆ ಬಯಸುವುದು ಏನೆಂದರೆ, ನಾನು ಕಳೆದ ಕೆಲವು ವರ್ಷಗಳಿಂದ ಪ್ರಶಸ್ತಿಯನ್ನು ಸ್ವೀಕರಿಸುವುದನ್ನು ನಿಲ್ಲಿಸಿದ್ದೇನೆ. ಕೆಲವು ವೈಯಕ್ತಿಕ ಕಾರಣಗಳಿಂದ ಈ ನಿರ್ಧಾರಕ್ಕೆ ಬಂದಿದ್ದೇನೆ. ಚಿತ್ರರಂಗದಲ್ಲಿ ಈ ಗೌರವಕ್ಕೆ ಪಾತ್ರರಾಗುವಂತಹ ಹಲವು ಕಲಾವಿದರು ಇದ್ದಾರೆ. ನನಗಿಂತ ಅವರಿಗೆ ಈ ಗೌರವ ಸಿಗಬೇಕು ಎನ್ನುವುದು ನನ್ನ ಅನಿಸಿಕೆ. ಅವರಲ್ಲಿ ಒಬ್ಬರು ಈ ಪ್ರಶಸ್ತಿಯನ್ನು ಪಡೆಯುವುದನ್ನು ನೋಡುವುದು ನನಗೆ ಖುಷಿ ಕೊಡುತ್ತದೆ.
ಜನರನ್ನು ಮನರಂಜಿಸುವುದಕ್ಕಾಗಿ ನನ್ನ ಶ್ರದ್ಧೆ ಪ್ರಶಸ್ತಿಯನ್ನು ನಿರೀಕ್ಷಿಸುವುದಕ್ಕಿಂತಲೂ ಹೊರತಾಗಿದೆ. ಜ್ಯೂರಿಗಳಿಂದ ತೀರ್ಪುಗಾರರು ಆಯ್ಕೆ ಮಾಡಿದ ಈ ಪ್ರಶಸ್ತಿಯೇ ನನಗೆ ಶ್ರೇಷ್ಠ. ನಾನು ಮತ್ತಷ್ಟು ಕೆಲಸ ಮಾಡುವುದಕ್ಕೆ ನನಗೆ ಉತ್ತೇಜನವನ್ನು ನೀಡುತ್ತದೆ.
ಪ್ರತಿಯೊಬ್ಬ ಜ್ಯೂರಿಯ ಸದಸ್ಯರಿಗೂ ನನ್ನನ್ನು ಆಯ್ಕೆ ಮಾಡಿದ್ದಕ್ಕೆ ನಾನು ಆಬಾರಿಯಾಗಿದ್ದೇನೆ. ನೀವು ನನ್ನ ಗುರುತಿಸಿದ್ದೇ ನನಗೆ ಬಹುಮಾನ. ಈ ನನ್ನ ನಿರ್ಧಾರ ಜ್ಯೂರಿ ಸದಸ್ಯರು ಹಾಗೂ ರಾಜ್ಯ ಸರ್ಕಾರಕ್ಕೆ ಯಾವುದೇ ಸದಸ್ಯರಿಗೆ ನಿರಾಸೆಯನ್ನು ಉಂಟು ಮಾಡಿದ್ದರೆ ಹೃದಯ ಪೂರ್ವಕವಾಗಿ ಕ್ಷಮೆಯನ್ನು ಕೇಳುತ್ತೇನೆ. ಹಾಗೇ ನೀವು ನಾನು ಇಲ್ಲಿವರೆಗೂ ನಡೆದು ಕೊಂಡು ಹಾದಿನ್ನು ಹಾಗೂ ಆಯ್ಕೆಯನ್ನು ಗೌರವಿಸುತ್ತೀರೆಂದು ಮತ್ತು ಬೆಂಬಲವನ್ನು ನೀಡುತ್ತೀರೆಂದು ನಂಬಿದ್ದೇನೆ. ಮತ್ತೊಮ್ಮೆ ನನ್ನ ಕೆಲಸವನ್ನು ಗಮನಿಸಿ ಪ್ರಶಸ್ತಿಗೆ ಆಯ್ಕೆ ಮಾಡಿದ್ದಕ್ಕೆ ಗೌರವಾನ್ವಿತ ಜ್ಯೂರಿ ಸದಸ್ಯರು ಹಾಗೂ ರಾಜ್ಯ ಸರ್ಕಾರಕ್ಕೆ ನಾನು ಧನ್ಯವಾದಗಳನ್ನು ಹೇಳುತ್ತೇನೆ. " ಎಂದು ಕಿಚ್ಚ ಸುದೀಪ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಕಿಚ್ಚ ಸುದೀಪ್ ಇತ್ತೀಚೆಗಷ್ಟೇ ನಟಿಸಿದ 'ಮ್ಯಾಕ್ಸ್' ಸಿನಿಮಾ ರಿಲೀಸ್ ಆಗಿ ಯಶಸ್ವಿ ಪ್ರದರ್ಶನ ಕಂಡಿದೆ. ಅಲ್ಲದೆ ಬಾಕ್ಸಾಫೀಸ್‌ನಲ್ಲಿ ಅದ್ಭುತ ಕಲೆಕ್ಷನ್ ಮಾಡಿದೆ. 2024ರ ಕೊನೆಯಲ್ಲಿ ಈ ಸಿನಿಮಾ ಸ್ಯಾಂಡಲ್‌ವುಡ್‌ಗೆ ಹೊಸ ಹುರುಷು ನೀಡಿತ್ತು. ಇದೇ ಯಶಸ್ಸಿನಲ್ಲಿ ಕಿಚ್ಚ ಸುದೀಪ್ ತೇಲಾಡುತ್ತಿದ್ದು, ಅನುಪ್ ಭಂಡಾರಿ ನಿರ್ದೇಶಿಸುತ್ತಿರುವ 'ಬಿಲ್ಲ ರಂಗ ಭಾಷಾ' ಸಿನಿಮಾದ ಶೂಟಿಂಗ್ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದಾರೆ.


Click it and Unblock the Notifications











