"ಧ್ರುವ 130 ದಿನ..ನಾನು ಮೂರೇ ದಿನ..ಬರ್ತಾ ಇರ್ಬೇಕು, ಮಾಡ್ತಾ ಇರ್ಬೇಕು, ಹೋಗ್ತಾ ಇರ್ಬೇಕು.. ಹೀರೋ ಅವರೇ"- ಕಿಚ್ಚ ಸುದೀಪ್
ಧ್ರುವ ಸರ್ಜಾ ಹಾಗೂ ಜೋಗಿ ಪ್ರೇಮ್ ಕಾಂಬಿನೇಷನ್ ಸಿನಿಮಾ 'ಕೆಡಿ ದಿ ವಿಲನ್' ಬಿಡುಗಡೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಏಪ್ರಿಲ್ 30ರಂದು ಈ ಸಿನಿಮಾ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿವೆ. ಈ ಬೆನ್ನಲ್ಲೇ 'ಕೆಡಿ' ಮತ್ತೊಂದು ಗ್ರೂಪ್ ಸಾಂಗ್ ಅನ್ನು ರಿಲೀಸ್ ಮಾಡಿದೆ. ಇದೇ ವೇಳೆ ಕಿಚ್ಚ ಸುದೀಪ್, ಧ್ರುವ ಸರ್ಜಾ, ಜೋಗಿ ಪ್ರೇಮ್ ಹಾಗೂ ರೀಷ್ಮಾ ನಾಣಯ್ಯ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು.
ಇದೂವರೆಗೂ ಕಿಚ್ಚ ಸುದೀಪ್ ನಟಿಸಿದ ಕಾಲಭೈರವನ ಪಾತ್ರದ ಬಗ್ಗೆ ಜೋಗಿ ಪ್ರೇಮ್ ಎಲ್ಲೂ ರಿವೀಲ್ ಮಾಡಿರಲಿಲ್ಲ. ಸಿನಿಮಾ ಬಿಡುಗಡೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿರುವ ಹಿನ್ನೆಲೆಯಲ್ಲಿ ಕೊನೆಯ ಹಂತದ ಪ್ರಚಾರದಲ್ಲಿ ಸುದೀಪ್ ಭಾಗಿಯಾಗಿದ್ದರು. 'ಕೆಡಿ' ಸಿನಿಮಾ, ಕಾಲಭೈರವನ ಪಾತ್ರ, ಕೆಡಿ ಸೀಕ್ವೆಲ್ ಹಾಗೂ ಧ್ರುವ ಸರ್ಜಾ ಬಗ್ಗೆ ಸುದೀಪ್ ಮನಬಿಚ್ಚಿ ಮಾತಾಡಿದ್ದಾರೆ. ಅದರ ಝಲಕ್ ಇಲ್ಲಿದೆ.

ಕೆಡಿ ಸೀಕ್ವೆಲ್‌ಗೆ ಸುದೀಪ್ ಹೀರೋ?
"ಕೆಡಿ ಸೀಕ್ವೆಲ್‌ನಲ್ಲಿ ಇನ್ನೊಂದು ಹೀರೋನಾ ಕನೆಕ್ಟ್ ಮಾಡುವುದಕ್ಕೆ ಬರಬಹುದಾ? ನನಗೆ ಗೊತ್ತಿಲ್ಲ. ಈ ವ್ಯಕ್ತಿಯನ್ನು ನಂಬಬೇಡಿ. ಇವರದ್ದು ಕಥೆ ಬದಲಾವಣೆ ಆಗುತ್ತಿರುತ್ತೆ. ಇನ್ನೊಂದು ಏನೋ ಬದಲಾವಣೆ ಆಗುತ್ತಿರುತ್ತೆ. ನಾನು ಎಲ್ಲರಿಗೂ ಹೇಳಲೇಬೇಕಾಗಿರೋದು ಇವರು ಫೋನ್ ಮಾಡಿ, ಸೀಕ್ವೆಲ್ ಇದೆ. ನೀವೇ ಹೀರೋ ಅಂದ ಕೂಡಲೇ ಟೆಂಪ್ಟ್ ಆಗಿ ಬಂದಿದ್ದು ನಾನಲ್ಲ. ನನಗೆ ನನ್ನದೇ ಆದ ಸಿನಿಮಾಗಳಿವೆ. ನನ್ನದೇ ಆದ ಕೆಲವು ಜವಾಬ್ದಾರಿಗಳು ಇವೆ. ಈ ಸಿನಿಮಾಗೆ ಅವಶ್ಯಕತೆ ಇದ್ದಾಗ ಮೊದಲು ನಾಯಕ ನಟನಾಗಿ ಬರೋದು ಧ್ರುವ ಸರ್ಜಾ. ಇಂತಹದ್ದೊಂದು ಸೀಕ್ವೆಲ್ ಅಂತ ಬಂದರೆ, ನಾನು ಈಗಲೇ ಹೇಳುತ್ತಿದ್ದೇನೆ. ನನ್ನ ಮೊದಲ ಮೀಟಿಂಗ್ ಧ್ರುವ ಜೊತೆ ಆಗುತ್ತೆ. ಇದು ಸ್ಟೋರಿ, ಹೀಗಿದೆ. ಇದು ನಿಮಗೆ ಓಕೆನಾ ಅಂತ ಕೇಳುತ್ತೇನೆ. ಯಾವಾಗಲೂ ಒಂದು ಫ್ರಾಂಚೈಸಿ ಅಂತ ಬಿಲ್ಡ್ ಆಗೋದೇ ಮೊದಲ ಪಾರ್ಟ್‌ನಿಂದ ಶುರುವಾಗಿ ಈ ಸಿನಿಮಾ ಬಹಳ ದೊಡ್ಡ ಯಶಸ್ಸು ಆದಲ್ಲಿ, ಎರಡನೇ ಪಾರ್ಟ್‌ನಲ್ಲಿ ನಾನೇನೋ ಮಾಡುವುದಕ್ಕೆ ಬಂದಾಗ ತಪ್ಪಾಗುತ್ತೆ. ಈ ಸಿನಿಮಾದ ಯಶಸ್ಸು ಮೊದಲ ಪಾರ್ಟ್ ಮಾಡಿದವರಿಗೆ ಸಲ್ಲಬೇಕು." ಎಂದು ಸುದೀಪ್ ಹೇಳಿದ್ದಾರೆ.
"ಧ್ರುವ ಈ ಸಿನಿಮಾದ ಹೀರೋ"
"ಅಭಿಮಾನಿಗಳಿಗೆ ಮೊದಲೇ ಹೇಳಿದ್ದೇನೆ. ಧ್ರುವ ಸರ್ಜಾ ಅವರು 130 ದಿನ ಕೆಲಸ ಮಾಡಿದ್ದಾರೆ. ನಾನು ಬರೀ ಮೂರೇ ದಿನ ಕೆಲಸ ಮಾಡಿದ್ದು ಅಂತ ಹೇಳಿದ್ದೇನೆ. ಆ ಮೂರು ದಿನದಲ್ಲಿ ಏನು ನಿರೀಕ್ಷೆ ಮಾಡುತ್ತೀರ. ಬರ್ತಾ ಇರ್ಬೇಕು, ಮಾಡ್ತಾ ಇರ್ಬೇಕು, ಹೋಗ್ತಾ ಇರ್ಬೇಕು. ಹೀರೋ ಅವರೇ. ಮುಗೀತು ಅಲ್ಲಿಗೆ." ಎಂದು ಕಿಚ್ಚ ಸುದೀಪ್ ಕ್ಲಿಯರ್ ಮಾಡಿದ್ದಾರೆ.

ಕೆಡಿಯ ಸಹೋದರ ಕಾಲಭೈರವ
'ಕೆಡಿ' ಸಿನಿಮಾದಲ್ಲಿ ಕಾಳಿದಾಸನ ಸಹೋದರ ಕಾಲಭೈರವನಾಗಿ ಬರುತ್ತೀರಾ ಎಂಬ ಪ್ರಶ್ನೆ ಮಾಧ್ಯಮದ ಕಡೆಯಿಂದ ಬಂತು. ಅದಕ್ಕೆ ಕಿಚ್ಚ ಸುದೀಪ್ ಹಾಗೂ ಧ್ರುವ ಸರ್ಜಾ ಇಬ್ಬರೂ ಹೌದು ಎಂದು ಒಪ್ಪಿಕೊಂಡಿದ್ದಾರೆ. ಅಲ್ಲದೆ, ಧ್ರುವ ಬಗ್ಗೆ ಕಿಚ್ಚ ಸುದೀಪ್ ಹೀಗೆ ಪ್ರತಿಕ್ರಿಯಿಸಿದ್ದಾರೆ. "ಧ್ರುವ ಸರ್ಜಾ ಅವರ ಹೆಸರು ತುಂಬಾನೇ ಜನಪ್ರಿಯವಾಗಿದೆ. ಅವರ ಜೀವನದಲ್ಲಿ ತುಂಬಾನೇ ಚೆನ್ನಾಗಿ ಇದ್ದಾರೆ. ಇಂತಹ ಬಜೆಟ್ ಅವರ ಚಿತ್ರರಂಗದಲ್ಲಿರುವ ನಿಲುವು ಗೊತ್ತಾಗುತ್ತೆ. ಅವರು ಚಿತ್ರರಂಗದಲ್ಲಿ ಏನು ಮಾಡುತ್ತಿದ್ದಾರೋ ಆ ಬಗ್ಗೆ ನನಗೆ ಹೆಮ್ಮೆಯಿದೆ. ಆರನೇ ಸಿನಿಮಾಗೆ ಈ ಬಜೆಟ್‌ನ ಸಿನಿಮಾ ತೆಗೀತಾ ಇದ್ದಾರೆ ಅಂದರೆ, ಅದು ದೊಡ್ಡ ಸಾಧನೆ. ಇದನ್ನು ನೋಡಿದಾಗ ಇಂತಹ ಹೀರೊ ಬೇಕು. ಇಂತಹ ಸಿನಿಮಾಗಳು ಚಿತ್ರರಂಗಕ್ಕೆ ಬೇಕು. ದುಡ್ಡು ಹಾಕುವಂತಹ ನಿರ್ಮಾಪಕರು ಬೇಕು. ವೈಯಕ್ತಿಕವಾಗಿ ಹೇಳಬೇಕು ಅಂದರೆ, ಅವರನ್ನು ಚಿಕ್ಕವರಿಂದ ನೋಡಿಕೊಂಡು ಬಂದಿದ್ದೇನೆ. ಅವರು ನಾವು ಮಾತಾಡಿಕೊಳ್ಳುತ್ತಿರುತ್ತೇವೆ. ಏನು ಮಾಡುತ್ತಿದ್ದೀರಾ ಅಂತ, ಅದರ ಅರ್ಥ ನಾವು ಭೇಟಿಯಾಗಿ ಅಲ್ಲಿ ಸೇರೋಣ, ಇಲ್ಲಿ ಸೇರೋಣ ಅಂತ ಎಲ್ಲಾ ಮಾಡೋದಿಲ್ಲ" ಎಂದಿದ್ದಾರೆ
ಸಪೋರ್ಟ್ ಮಾಡೋಕೆ ಬರ್ತೀನಿ
"ನಾನು ಜಾಸ್ತಿ ಪ್ರಶ್ನೆ ಮಾಡುವುದಕ್ಕೆ ಹೋಗ್ಲಿಲ್ಲ. ಪ್ರೇಮ್ ಕರೆದಿದ್ದಾರೆ. ನನಗೆ ಏನು ಆಸಕ್ತಿ ಅಂದರೆ, ಈ ಮೂರು ದಿನಗಳಲ್ಲಿ ಏನಿದೆ? ಕ್ಲಾರಿಟಿ ತೆಗೆದುಕೊಂಡೆ. ಕಾಸ್ಟ್ಯೂಮ್ ಏನು? ಲುಕ್ ಏನು? ಹೀರೋ ಇರುವುದರಿಂದ ನನ್ನ ಪಾತ್ರ ಏನಾಗುತ್ತೆ? ಅಂತ ಕೇಳಿದ್ದೇನೆ. ನನ್ನ ಪ್ರಮುಖ ಆದ್ಯತೆ ಏನಂದರೆ, ಅತಿಥಿ ಪಾತ್ರ ಆ ನಾಯಕನ ಪಾತ್ರವನ್ನು ಡಿಸ್ಟರ್ಬ್ ಮಾಡಬಾರದು. ಕೊನೆಯಲ್ಲಿ ಬಂದು ನಾನೇನು ಅಂತ ತೋರಿಸಿಕೊಳ್ಳುವುದಕ್ಕೆ ಬರುವವನಲ್ಲ. ಈ ಸಿನಿಮಾಗೆ ಸಪೋರ್ಟ್ ಮಾಡುವುದಕ್ಕೆ ಸಾಧ್ಯ ಅಂದರೆ ಬರ್ತೀನಿ. ಅವರು ಈ ಸಿನಿಮಾದ ಹೀರೋ." ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.


Click it and Unblock the Notifications