"2 ಚಿತ್ರ ಮಾಡ್ತಿದ್ದಂತೆ 200 ಸಿನಿಮಾ ಮಾಡಿದವ್ರನ್ನು ಮರೆಯೋ ಕಾಲವಿದು"; ಕಿಚ್ಚ ಸುದೀಪ್
ಸ್ಯಾಂಡಲ್‌ವುಡ್‌ನಲ್ಲಿ ತಮ್ಮ ಸಿನಿಮಾಗಳ ಮೂಲಕ ಹೊಸ ಹೊಸ ಟ್ರೆಂಡ್‌ಗಳನ್ನು ಹುಟ್ಟಾಕಿದ ನಿರ್ದೇಶಕ ಎಸ್.ವಿ.ರಾಜೇಂದ್ರ ಸಿಂಗ್ ಬಾಬು. ಇವರ ನಿರ್ದೇಶಿಸಿದ ಸಿನಿಮಾಗಳು ಕನ್ನಡ ಚಿತ್ರರಂಗದಲ್ಲಿ ಹೊಸ ಮೈಲಿಗಲ್ಲುಗಳನ್ನು ಸೃಷ್ಟಿಸಿವೆ. ಕನ್ನಡ ಚಿತ್ರರಂಗದ ದಿಗ್ಗಜರೊಂದಿಗೆ ಕೆಲಸ ಮಾಡಿರುವ ರಾಜೇಂದ್ರ ಸಿಂಗ್ ಬಾಬು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ 50 ವರ್ಷಗಳನ್ನು ಪೂರೈಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಕನ್ನಡ ಚಿತ್ರರಂಗ ಗೌರವಿಸಿ ಸನ್ಮಾನಿಸಲಾಗಿದೆ.
ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಅಂದ ಕೂಡಲೇ ತಟ್ಟನೆ ನೆನಪಾಗೋದು 'ಅಂತ', 'ನಾಗರಹೊಳೆ', 'ಮುತ್ತಿನ ಹಾರ', 'ಬಂಧನ' ಸೇರಿದಂತೆ ಹಲವು ಸಿನಿಮಾಗಳ ಮೂಲಕ ತಮ್ಮದೇ ಟ್ರೇಂಡ್ ಅನ್ನು ಹುಟ್ಟಾಕಿದ್ದಾರೆ. ಇವರ ಸುದೀರ್ಘ ಸಿನಿಮಾ ಪಯಣವನ್ನು ಹಿಂತಿರುಗಿ ನೋಡುವುದೇ ಅದ್ಭುತ. ಹೀಗಾಗಿ ಕನ್ನಡ ಚಿತ್ರರಂಗದ ದಿಗ್ಗಜರೆಲ್ಲರೂ ಸೇರಿ ಇವರಿಗೆ ಸನ್ಮಾನಿಸಿದ್ದಾರೆ.

ಈ ಸಂದರ್ಭದಲ್ಲಿ ಚಿತ್ರರಂಗದ ಗಣ್ಯರು ಸೇರಿದಂತೆ ಎಚ್‌ಡಿ ಕುಮಾರಸ್ವಾಮಿ, ಮಾಜಿ ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ್, ಗಿರೀಶ್ ಕಾಸರವಳ್ಳಿ, ಮುನಿರತ್ನ ಸೇರಿದಂತೆ ಕಿಚ್ಚ ಸುದೀಪ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಈ ವೇಳೆ ಹಿರಿಯ ನಿರ್ದೇಶಕ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಅವರ ಬಗ್ಗೆ ಮಾತಾಡುತ್ತಾ? " 2 ಸಿನಿಮಾ ಮಾಡಿರುವವರೂ 200 ಸಿನಿಮಾ ಮಾಡಿದವರನ್ನು ಸುಲಭವಾಗಿ ಮರೆಯುವ ಕಾಲವಿದು" ಎಂದು ಹೇಳಿದ್ದಾರೆ. ಇವರ ಈ ಹೇಳಿಕೆ ಈಗ ವೈರಲ್ ಆಗುತ್ತಿದೆ. ಅಷ್ಟಕ್ಕೂ ಈ ವೇದಿಕೆಯಲ್ಲಿ ಏನು ಹೇಳಿದ್ದಾರೆಂದು ನೋಡುವುದಾರೇ,
'ಅಂತ' ನೋಡಿದಾಗ ನನಗೆ 9 ವರ್ಷ
ಕಿಚ್ಚ ಸುದೀಪ್ ವೇದಿಕೆ ಮೇಲೆ ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಸಿನಿಮಾಗಳು ಅವರ ಮೇಲೆ ಹೇಗೆ ಪರಿಣಾಮ ಬೀರಿದವು ಅನ್ನೋದನ್ನು ಹೇಳಿಕೊಂಡಿದ್ದಾರೆ. "ನನಗೆ ಸಿನಿಮಾ ಪರಿಚಯ ಆಗಿದ್ದು ಶಿವಮೊಗ್ಗದಲ್ಲಿ. ಆಗ ಅಲ್ಲಿ ಎರಡೇ ಥಿಯೇಟರ್ ಇದ್ದಿದ್ದು ಮಲ್ಲಿಕಾರ್ಜುನಾ ಹಾಗೂ ಎಚ್‌ಬಿಸಿ. ನೀವು ನಿರ್ದೇಶಿಸಿದ ನಾಗರಹೊಳೆ ನಾನು ನೋಡಿದ ಮೊದಲ ಸಿನಿಮಾ. ನನಗೆ ಆ ದಿನ ಅಲ್ಪ ಸ್ವಲ್ಪ ನೆನಪಿದೆ. 'ಅಂತ' ಸಿನಿಮಾ ನೋಡಿದಾಗ ನನಗೆ 9 ವರ್ಷ. ಆಗಲೇ ನನಗೆ ಮೊದಲು ಸಿನಿಮಾದ ಪರಿಚಯ ಆಗಿದ್ದು.. ಅದಕ್ಕೊಬ್ಬ ನಿರ್ದೇಶಕ ಅಂತ ಇರುತ್ತಾರೆ. ಸಿನಿಮಾ ತೆಗೆಯೋದು ಹೀಗೆ ಅಂತ ಗೊತ್ತಾಗಿದ್ದು, ಅಂಬರೀಶ್ ಮಾಮನಿಂದ. ಅಂಬರೀಶ್ ತುಂಬಾ ಸಾರಿ ಮನೆಗೆ ಬರುತ್ತಿದ್ದರು. ಆದರೆ, ಅವರನ್ನು ಇಷ್ಟ ಪಡುವುದಕ್ಕೆ ಶುರು ಮಾಡಿದ್ದು ನಿಮ್ಮ ಸಿನಿಮಾ ಅಂತ ಬಂದ್ಮೇಲೆ." ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.
ಎಲ್ಲದನ್ನೂ ಸುಲಭಕ್ಕೆ ಮರೆಯೋ ಕಾಲವಿದು
ಇದೇ ವೇದಿಕೆ ಮೇಲೆ ಹಿರಿಯ ನಿರ್ದೇಶಕರ ಸಾಧನೆ ಬಗ್ಗೆನೂ ಮಾತಾಡಿದ್ದಾರೆ. "ಎಲ್ಲದನ್ನೂ ಸುಲಭವಾಗಿ ಮರೆಯುವಂತಹ ಕಾಲವಿದು. ಎರಡು ಸಿನಿಮಾ ಮಾಡುತ್ತಿದ್ದಂತೆ 200 ಸಿನಿಮಾ ಮಾಡಿದಂತಹವರನ್ನು ಮರೆಯುವಂತಹ ಕಾಲವಿದು. ಒಂದು ಕಾರು ತೆಗೆದುಕೊಳ್ಳುತ್ತಿದ್ದ ಹಾಗೇನೆ, ಅದು ನಿಮಗೆ ಬರುವಂತೆ ಮಾಡಿದ ಚಿತ್ರರಂಗವನ್ನು ಮರೆಯುವಂತಹ ಕಾಲವಿದು. ಅಂತಹದ್ದರಲ್ಲಿ ಈ ವೇದಿಕೆ ಮೇಲೆ ಕೂತುಕೊಳ್ಳುವುದಕ್ಕೆ ಬಹಳ ಹೆಮ್ಮೆಯಾಗುತ್ತೆ. ಯಾಕಂದ್ರೆ, ವೇದಿಕೆಯಲ್ಲಿ ಕೂತಿರುವವರು. ಎದುರುಗಡೆ ಕೂತಿರುವವರು ಯಾರೂ ಕಮ್ಮಿ ಸಾಧಕರಲ್ಲ. ಇಂತಹ ಕಾರ್ಯಕ್ರಮಗಳು ನಡೆದಾಗ ಎಷ್ಟೋ ಸಾವಿರ ಪ್ರಶಸ್ತಿ ಸಮಾರಂಭಗಳಿಗಿಂತ ಇದೇ ಉತ್ತಮ ಅಂತ ಅನಿಸುತ್ತೆ." ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.

ಹಂಸಲೇಖ ಹೊಗಳಿದ ಕಿಚ್ಚ ಸುದೀಪ್
"ಹಂಸಲೇಖ ಸರ್ ಬಾಬು ಅವರಿಗಾಗಿ ತುಂಬಾ ಒಳ್ಳೆಯ ಸಾಂಗ್ ಮಾಡಿದ್ದೀರ. ನಿಮ್ಮ ಸಾಧನೆಗೆ ಇಂತಹದ್ದೊಂದು ಸಾಂಗ್ ಮಾಡುತ್ತೀರ ಅಂದರೆ ಕಲ್ಪನೆ ಮಾಡಿಕೊಳ್ಳಿ. ಒಬ್ಬ ವ್ಯಕ್ತಿ 50 ವರ್ಷ ಸಾಧನೆ ಮಾಡಬೇಕು. ಅಂತಹದಕ್ಕೆ ಒಬ್ಬ ಹಂಸಲೇಖ ಸಂಗೀತ ನೀಡಬೇಕು ಅಂದರೆ, ಇವತ್ತಿಗೆ ಅದು ಸಾಧ್ಯನೇ ಆಗದಿರೋ ಒಂದು ಕೆಲಸ. ಎಲ್ಲಕ್ಕಿಂತ ಹೆಚ್ಚಾಗಿ 50 ವರ್ಷ ಈ ಚಿತ್ರರಂಗದಲ್ಲಿ ಇರುವುದಕ್ಕೆ ಆಗೋದು ಇದೆಯಲ್ಲಿ ಅದೇ ಸ್ಪೇಷಲ್. ಇದು ನೀವು ಎಸ್‌ವಿ ರಾಜೇಂದ್ರ ಸಿಂಗ್ ಅವರಿಗೆ ಕೊಟ್ಟಿರುವಂತಹ ಗಿಫ್ಟ್ ಅಂತ ಹೇಳಬಲ್ಲೆ." ಎಂದಿದ್ದಾರೆ.
ನಿಮ್ಮೊಂದಿಗೆ ಕೆಲಸ ಮಾಡಲು ಆಗಲಿಲ್ಲ
ಎಸ್.ವಿ ರಾಜೇಂದ್ರ ಸಿಂಗ್ ಬಾಬು ನಿರ್ದೇಶಿಸಿದ ಸಿನಿಮಾಗಳು ಚಿತ್ರರಂಗಕ್ಕೆ ಹೆಮ್ಮೆಯಿದ್ದಂತೆ. ಒಂದೊಂದು ಸಿನಿಮಾವೂ ಒಂದೊಂದು ಟ್ರೆಂಡ್ ಹುಟ್ಟಾಕಿದೆ. ಕಿಚ್ಚ ಸುದೀಪ್ ಕೂಡ ವೇದಿಕೆಯಲ್ಲಿ ಬಾಬು ಅವರ ಸಾಧನೆಯನ್ನು ಹೊಗಳಿದ್ದಾರೆ. ಹಾಗೇ ನಿಮ್ಮೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿಲ್ಲವೆಂದು ಸುದೀಪ್ ಹೇಳಿದ್ದಾರೆ. "ಬಾಬು ಸರ್.. ನನಗೆ ನಿಮ್ಮೊಂದಿಗೆ ಕೆಲಸ ಮಾಡುವುದಕ್ಕೆ ಅವಕಾಶ ಸಿಕ್ಕಿಲ್ಲ. ಆದರೆ, ನಿಮ್ಮೊಂದಿಗೆ ಸೆಲೆಬ್ರೆಟ್ ಮಾಡುವುದಕ್ಕೆ ಅವಕಾಶ ಸಿಕ್ಕಿದೆ. ಅದಕ್ಕೆ ಧನ್ಯವಾದಗಳು" ಎಂದು ಸುದೀಪ್ ಹೇಳಿದ್ದಾರೆ.


Click it and Unblock the Notifications











