"ಸಾವಿರ ಮಾತಾಡಲಿ, ಸಾವಿರ ದೂರುಗಳನ್ನೇ ಕೊಡಲಿ ಚಿತ್ರರಂಗದ ಬಗ್ಗೆ ಹೆಮ್ಮೆ ಇರುತ್ತೆ"; ಕಿಚ್ಚ ಸುದೀಪ್
ಕನ್ನಡ ಚಿತ್ರರಂಗ ಕಳೆದ ಕೆಲವು ವರ್ಷಗಳಿಂದ ತೀವ್ರ ನಷ್ಟದಲ್ಲಿದೆ. 'ಕೆಜಿಎಫ್ 2', 'ಕಾಂತಾರ' ಬಳಿಕ ಅಷ್ಟೊಂದು ಸದ್ದು ಮಾಡುವ ಮತ್ತೊಂದು ಸಿನಿಮಾ ಬಂದೇ ಇಲ್ಲ. ಹೀಗಿರುವಾಗ ಕನ್ನಡ ಚಿತ್ರರಂಗ ಕೆಟ್ಟ ಘಟನೆಗಳಿಗೆ ಸಾಕ್ಷಿಯಾಗಿದೆ. ಇದು ಬೇರೆ ಚಿತ್ರರಂಗದ ಕೆಟ್ಟ ಸಂದೇಶವನ್ನು ಕೊಟ್ಟಂತಾಗಿದೆ ಎಂದು ಕಿಚ್ಚ ಸುದೀಪ್ ಕಳವಳ ವ್ಯಕ್ತಪಡಿಸಿದ್ದಾರೆ.
ಒಂದ್ಕಡೆ ದರ್ಶನ್ ಕೇಸ್ ದೇಶಾದ್ಯಂತ ಸದ್ದು ಮಾಡಿದೆ. ಕನ್ನಡದ ಸೂಪರ್‌ಸ್ಟಾರ್ ದರ್ಶನ್ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಜೈಲು ಸೇರಿದ್ದು ನ್ಯಾಷನಲ್ ನ್ಯೂಸ್ ಆಗಿತ್ತು. ಇದೇ ಸಂದರ್ಭದಲ್ಲಿ ಚಿತ್ರರಂಗದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯವನ್ನು ತಡೆಯಲು ಹೇಮಾ ಕಮಿಟಿಯಂತಹ ಸಮಿತಿ ಇಲ್ಲೂ ಬೇಕು ಅಂತ ಪಟ್ಟು ಹಿಡಿದಿದ್ದಾರೆ.

ಸಮಿತಿ ರಚನೆ ಬಗ್ಗೆ ಕನ್ನಡ ಚಿತ್ರರಂಗದಲ್ಲಿ ಪರ ಹಾಗೂ ವಿರೋಧದ ಚರ್ಚೆ ನಡೆಯುತ್ತಿದೆ. ಇದರ ಮಧ್ಯೆ ಕನ್ನಡ ಸಿನಿಮಾಗಳು ಸೋತು ಸುಣ್ಣವಾಗುತ್ತಿವೆ. ಮೊದಲೇ ಜನರು ಥಿಯೇಟರ್‌ಗೆ ಬರುತ್ತಿಲ್ಲ. ಈ ಮಧ್ಯೆ ವಿವಾದಗಳು ಮತ್ತಷ್ಟು ಸಂಕಷ್ಟಕ್ಕೆ ತಳ್ಳುತ್ತವೆ ಅನ್ನೋ ಆತಂಕ ಅನೇಕರದ್ದು. ಇದೇ ಸಂದರ್ಭದಲ್ಲಿ ಕಿಚ್ಚ ಸುದೀಪ್ ಕೂಡ ಕೆಟ್ಟ ವಿಚಾರಗಳಿಗೆ ಸ್ಯಾಂಡಲ್‌ವುಡ್ ಸದ್ದು ಮಾಡುತ್ತಿದೆ ಎಂದಿದ್ದಾರೆ.
ಸ್ಯಾಂಡಲ್‌ವುಡ್ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನ ಜೆರ್ಸಿ ಅನಾವರಣ ಕಾರ್ಯಕ್ರಮದಲ್ಲಿ ಇಂದು (ಸೆಪ್ಟೆಂಬರ್ 20) ಕಿಚ್ಚ ಸುದೀಪ್ ಅತಿಥಿಯಾಗಿ ಬಂದಿದ್ದರು. ಈ ಟೂರ್ನಿಯಲ್ಲಿ ಸ್ಯಾಂಡಲ್‌ವುಡ್ ತಾರೆಯರು, ಕಿರುತೆರೆ ಕಲಾವಿದರು, ಮಾಧ್ಯಮದವರು ಹಾಗೂ ಟೆಕ್ನಿಷಿಯನ್‌ಗಳು ಆಡುತ್ತಿದ್ದಾರೆ. ಸೆಪ್ಟೆಂಬರ್ 28-29ರಂದು ಈ ಪಂದ್ಯಾವಳಿಗಳು ನಡೆಯುತ್ತಿವೆ.
ಈ ವೇಳೆ ಕಿಚ್ಚ ಸುದೀಪ್ ತನ್ನ ಕನ್ನಡದ ಚಿತ್ರರಂಗದ ಸದ್ಯದ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಸ್ಯಾಂಡಲ್‌ವುಡ್‌ಗೆ ತುಂಬಾನೇ ದೊಡ್ಡ ಇತಿಹಾಸವಿದೆ. ಸದ್ಯದ ಪರಿಸ್ಥಿತಿಯಲ್ಲಿಯೂ ಕನ್ನಡ ಚಿತ್ರರಂಗದ ಕಲಾವಿದರು ಒಟ್ಟಿಗೆ ಸೇರಿದ್ದೇವೆ. ನಾವೆಲ್ಲರೂ ಒಗ್ಗಟ್ಟಾಗಿ ಇದ್ದೇವೆ ಎಂಬ ಸಂದೇಶ ಕೊಟ್ಟಿದ್ದೇವೆ ಎಂದಿದ್ದಾರೆ.
"ನನ್ನ ಚಿತ್ರರಂಗ ಇವತ್ತು ಬೇಡದ ವಿಷಯಗಳಿಗೆ ಹೆಚ್ಚು ಸದ್ದು ಮಾಡುತ್ತಿದೆ. ಓಳ್ಳೆ ಸುದ್ದಿಗಳಿಂದ ಸದ್ದು ಮಾಡುತ್ತಿಲ್ಲ. ಬರೀ ಕೆಟ್ಟ ಸುದ್ದಿಯಿಂದಲೇ ಸದ್ದು ಮಾಡುತ್ತಿದೆ. ಅಂತಹದ್ರಲ್ಲಿ ಒಂದು ಬ್ಯೂಟಿಫುಲ್ ಮೂವ್ಮೆಂಟ್ ಇದು. ಇಲ್ಲಿ ಎಲ್ಲರೂ ಒಟ್ಟಿಗೆ ಸೇರಿದ್ದೀವಿ ಅಂದರೆ, ನಮ್ಮ ಚಿತ್ರರಂಗದ ಬಗ್ಗೆ ತಪ್ಪು ತಿಳಿದುಕೊಂಡವರಿಗೆ ಒಳ್ಳೆಯ ಸಂದೇಶವನ್ನು ಕಳುಹಿಸಿದ್ದೇವೆ." ಎಂದಿದ್ದಾರೆ.
ಇದೇ ವೇದಿಕೆ ಮೇಲೆ "ನಾವೆಲ್ಲರೂ ಒಂದೇ. ನನ್ನ ಪ್ರಕಾರ ನಮ್ಮ ಕನ್ನಡ ಚಿತ್ರರಂಗದ ಎಲ್ಲರಿಗೂ ಹೆಮ್ಮೆ ಇದೆ. ಹೆಮ್ಮೆ ಇರುತ್ತೆ. ಯಾರು ಬೇಕಾದರೂ ಸಾವಿರ ಮಾತಾಡಲಿ, ಸಾವಿರ ದೂರುಗಳನ್ನೇ ಸಲ್ಲಿಸಲಿ. ನಮ್ಮ ಚಿತ್ರರಂಗ 78 ವರ್ಷಗಳ ಕಾಲ ಇಲ್ಲಿವರೆಗೂ ಬಂದಿದೆ ಅಂದರೆ, ಅದಕ್ಕೆ ಎಲ್ಲರೂ ಹಾರ್ಡ್ ವರ್ಕ್, ನಂಬಿಕೆ ಎಲ್ಲವೂ ಕೂಡ ಸೇರುತ್ತೆ" ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.


Click it and Unblock the Notifications











