"ರಾಜ್ಯ ಪ್ರಶಸ್ತಿ CCL ಕಪ್ ಅಲ್ವಲ್ಲ": ಕಿಚ್ಚ ಸುದೀಪ್
ಈಗಷ್ಟೇ ಕಿಚ್ಚ ಸುದೀಪ್ ಬಿಗ್ ಬಾಸ್ ಕನ್ನಡ ಸೀಸನ್ 11 ಮುಗಿಸಿ ಸಿಸಿಎಲ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಫೆಬ್ರವರಿ 8ರಿಂದ ಅದ್ಧೂರಿಯಾಗಿ ಸಿಸಿಎಲ್ ಪಂದ್ಯಾವಳಿಗಳು ಬೆಂಗಳೂರಿನಲ್ಲಿ ಆರಂಭ ಆಗಲಿವೆ. ಈಗಾಗಲೇ ಕಿಚ್ಚ ಸುದೀಪ್ ನೇತೃತ್ವದ ಕರ್ನಾಟಕ ಬುಲ್ಡೋಜರ್ ತಂಡ ಅಭ್ಯಾಸ ಪಂದ್ಯವನ್ನು ಆರಂಭಿಸಿದೆ. ಬಿಡುವಿಲ್ಲದೆ ಪ್ರಾಕ್ಟೀಸ್ ಅನ್ನು ಶುರು ಮಾಡುತ್ತಿದೆ. ಇದೇ ಗ್ಯಾಪ್‌ನಲ್ಲಿ ಈ ಬಾರಿ ಆಡುತ್ತಿರುವ ತಂಡದ ಪರಿಚಯವನ್ನೂ ಮಾಡಿಕೊಡಲಾಗಿದೆ.
ಸಿಸಿಎಲ್ ಆರಂಭ ಆಗುವುದಕ್ಕೂ ಮುನ್ನ ಕಿಚ್ಚ ಸುದೀಪ್ ತಮ್ಮ ತಂಡವನ್ನು ಪರಿಚಯಿಸಿಕೊಡಲು ಪತ್ರಿಕಾಗೋಷ್ಠಿಯನ್ನು ಕರೆದಿದ್ದರು. ಈ ವೇಳೆ ಪತ್ರಕರ್ತರು ಸಿಸಿಎಲ್‌ಗೆ ಸಂಬಂಧಿಸಿದ ಪ್ರಶ್ನೆಗಳ ಜೊತೆಗೆ ರಾಜ್ಯ ಪ್ರಶಸ್ತಿಯನ್ನು ನಿರಾಕರಿಸಿದ್ದೇಕೆ ಅನ್ನುವ ಪ್ರಶ್ನೆಯನ್ನು ಹಾಕಿದ್ದರು. ಇದು ಕಿಚ್ಚ ಸುದೀಪ್ ಕೋಪಕ್ಕೆ ಕಾರಣವಾಗಿತ್ತು. ರಾಜ್ಯ ಪ್ರಶಸ್ತಿಯ ಬಗ್ಗೆ ಪ್ರಶ್ನೆಯನ್ನು ಕೇಳಿದ್ದಕ್ಕೆ ದಿಢೀರನೇ ಗರಂ ಆಗಿದ್ದರು.

ಕಿಚ್ಚ ಸುದೀಪ್‌ಗೆ ಕೆಲವು ದಿನಗಳ ಹಿಂದಷ್ಟೇ ರಾಜ್ಯ ಸರ್ಕಾರ ರಾಜ್ಯ ಪ್ರಶಸ್ತಿಯನ್ನು ಘೋಷಿಸಿತ್ತು. ಅವರ 'ಪೈಲ್ವಾನ್' ಸಿನಿಮಾದ ನಟನೆಗಾಗಿ ರಾಜ್ಯ ಪ್ರಶಸ್ತಿಯನ್ನು ಘೋಷಿಸಲಾಗಿತ್ತು. ಇದನ್ನು ಕಿಚ್ಚ ಸುದೀಪ್ ನಿರಾಕರಿಸಿದ್ದರು. ಇದಕ್ಕೆ ವೈಯಕ್ತಿಕ ಕಾರಣಗಳನ್ನು ನೀಡಿ ಬಹಿರಂಗ ಪತ್ರವನ್ನು ಬರೆದಿದ್ದರು. ಆ ವಿಚಾರವಾಗಿ ಪ್ರಶ್ನೆಯನ್ನು ಕೇಳಿದಾಗ ಸುದೀಪ್ ಗರಂ ಆಗಿದ್ದಾರೆ.
ಪತ್ರಕರ್ತರು ರಾಜ್ಯ ಪ್ರಶಸ್ತಿಯನ್ನು ನಿರಾಕರಿಸಿದ್ದಕ್ಕೆ ಕಾರಣವೇನು ಪ್ರಶ್ನೆ ಮಾಡಿದ್ದರು. ಅದಕ್ಕೆ ಕಿಚ್ಚ ಸುದೀಪ್ ಅದು ಸಿಸಿಎಲ್ ಕಪ್ ಎಂದು ಉತ್ತರ ಕೊಟ್ಟಿದ್ದರು. ಆಗ ರಾಜ್ಯ ಪ್ರಶಸ್ತಿಯನ್ನು ಕಲಾವಿದರಿಗೆ ಕೊಡುವ ಗೌರವ ಅಲ್ಲವೇ ಎಂದು ಮರು ಪ್ರಶ್ನೆ ಮಾಡಲಾಗಿತ್ತು. ಆಗ ಕಿಚ್ಚ ಸುದೀಪ್ ಮೂಡು ಕೋಪಕ್ಕೆ ತಿರುಗಿತ್ತು. ಸ್ವಲ್ಪ ಖಾರವಾಗಿ ಪ್ರತಿಕ್ರಿಯೆ ನೀಡುವುದಕ್ಕೆ ಶುರು ಮಾಡಿದ್ದರು.

"ಅದು ಸಿಸಿಎಲ್ ಕಪ್ ಅಲ್ವಲ್ಲ. ರಾಜ್ಯ ಪ್ರಶಸ್ತಿ ಸಿಸಿಎಲ್ ಕಪ್ ಅಲ್ಲ ಅಂತ ಅಂದೆ ಅಷ್ಟೇ. ಇಲ್ಲಿ ರಾಜ್ಯ ಪ್ರಶಸ್ತಿ ಸಂದರ್ಶನ ಅಂತ ಏನಾದರೂ ಇದೆಯಾ? ಎಲ್ಲಿ ಏನು ಮಾತಾಡಬೇಕೋ ಅದನ್ನು ಮಾತಾಡಬೇಕು. ಅಲ್ಲಿ ಒಂದು ಪತ್ರ ಬರೆದಿದ್ದೇನೆ. ಆ ಪತ್ರವನ್ನು ಇನ್ನೊಂದು ಸಾರಿ ಕನ್ನಡದಲ್ಲಿ ತರ್ಜುಮೆ ಮಾಡಿ ಹೇಳುತ್ತೇನೆ. ಅದರ ಮೇಲೆ ಪ್ರಶ್ನೆಗಳೇ ಬರಬಾರದು. ಅದು ನನ್ನ ವೈಯಕ್ತಿಕ. ಆ ಪ್ರಶ್ನೆ ಕೇಳುವ ವೇದಿಕೆ ಇದಲ್ಲ." ಎಂದು ಕೋಪದಿಂದ ಪ್ರತಿಕ್ರಿಯಿಸಿದ್ದಾರೆ.
ಇನ್ನು ಸಿಸಿಎಲ್ 2025 ಕಡೆಗೆ ಬರುವುದಾದರೇ, ಮತ್ತೊಂದು ಸೀಸನ್ ಅದ್ಧೂರಿಯಾಗಿ ಆರಂಭ ಆಗುತ್ತಿದೆ. ಈ ಬಾರಿ ಕಿಚ್ಚ ಸುದೀಪ್ ಮತ್ತೆ ಕ್ಯಾಪ್ಟನ್ ಆಗಿ ಅಖಾಡಕ್ಕೆ ಇಳಿಯುತ್ತಿದ್ದಾರೆ. ವಿಶೇಷ ಅಂದ್ರೆ ಇವರೊಂದಿಗೆ ಗೋಲ್ಡನ್ ಸ್ಟಾರ್ ಗಣೇಶ್, ಡಾರ್ಲಿಂಗ್ ಕೃಷ್ಣ ತಾರಾ ಮೆರುಗು ನೀಡಿದ್ದಾರೆ. ಈ ಬಾರಿಯ ಬಿಗ್ ಬಾಸ್ ರನ್ನರ್ ಅಪ್ ತ್ರಿವಿಕ್ರಮ್ ಕೂಡ ಆಡಲಿದ್ದಾರೆ. ಪ್ರದೀಪ್ ವೈಯಕ್ತಿಕ ಕಾರಣಗಳಿಂದ ಈ ಪಂದ್ಯದಿಂದ ಹಿಂದೆ ಸರಿದಿದ್ದರಿಂದ ಆ ಸ್ಥಾನಕ್ಕೆ ತ್ರಿವಿಕ್ರಮ್ ಎಂಟ್ರಿ ಕೊಟ್ಟಿದ್ದಾರೆ.
ಸಿಸಿಎಲ್ 2025 ಪಂದ್ಯಗಳು ಫೆಬ್ರವರಿ 8ರಿಂದ ಬೆಂಗಳೂರಿನಿಂದ ಆರಂಭ ಆಗುತ್ತಿದೆ. ಪ್ರತಿ ವೀಕೆಂಡ್‌ನಲ್ಲೂ ಪಂದ್ಯಗಳನ್ನು ನಡೆಯಲಿವೆ. ಕರ್ನಾಟಕ ಬುಲ್ಡೋಜರ್ಸ್, ತೆಲುಗು ವಾರಿಯರ್ಸ್, ಚೆನ್ನೈ ರೈನೋಸ್, ಬೆಂಗಾಲ್ ಟೈಗರ್ಸ್, ಮುಂಬೈ ಹೀರೋಸ್ ಈ ಬಾರಿಯ ಫೇವರಿಟ್ ಟೀಮ್‌ಗಳಾಗಿವೆ. ಹಾಗೇ ಕಿಚ್ಚ ಸುದೀಪ್ ನಾಯಕನಾಗಿ ಮತ್ತೆ ಅಖಾಡಕ್ಕೆ ಇಳಿಯುತ್ತಿರುವುದರಿಂದ ಕರ್ನಾಟಕ ಬುಲ್ಡೋಜರ್ಸ್ ಪಂದ್ಯಗಳನ್ನು ಗೆಲ್ಲುವ ಸಾಧ್ಯತೆಗಳು ಇವೆ.


Click it and Unblock the Notifications











